| ರಾಘವ ಶರ್ಮ ನಿಡ್ಲೆ, ನವದೆಹಲಿ
ಹಿಮಾಚಲ ಪ್ರದೇಶದ ಬೆಟ್ಟಸಾಲುಗಳ ಮಧ್ಯೆ ಕಾಣಸಿಗುವ ಮಂಡಿ ಲೋಕಸಭೆ ಕ್ಷೇತ್ರ ಬಾಲಿವುಡ್ ನಟಿ ಕಂಗನಾ ರಣಾವತ್ ಕಾರಣಕ್ಕಾಗಿ ಈ ಬಾರಿ ಇಡೀ ದೇಶದ ಗಮನಸೆಳೆದಿದೆ. ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಕಣಕ್ಕೆ ಧುಮುಕಿರುವ ‘ಮಂಡಿ ಕೀ ಬೇಟಿ’ ಸಂಸತ್ ಪ್ರವೇಶಿಸಿ ದೇಶದ ಮಹಿಳೆಯರ ದನಿಯಾಗಬೇಕು ಎಂಬ ತವಕದಲ್ಲಿದ್ದಾರೆ. ಅವರ ವಾಕ್ಚಾತುರ್ಯ, ಆಕ್ರಮಣಕಾರಿ ಧೋರಣೆ, ರಾಷ್ಟ್ರವಾದಿ ವಿಚಾರಧಾರೆ ಮತ್ತು ಎದುರಾಳಿ ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಆತನನ್ನು ಎದುರಿಸುವ ಕೆಚ್ಚೆದೆ ಕಂಗನಾಗೆ ಬಿಜೆಪಿ ಟಿಕೆಟ್ ಒಲಿಯುವಂತೆ ಮಾಡಿದೆ.
ಮುಂಬೈನಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಸರ್ಕಾರವನ್ನು ಎದುರು ಹಾಕಿಕೊಂಡಿದ್ದ ಕಂಗನಾಗೆ ಬಿಜೆಪಿ ರಾಜಕೀಯ ರಕ್ಷಣೆ ನೀಡಿತ್ತು. ಅಲ್ಲಿಂದ ಅವರು ಬಿಜೆಪಿಗೆ ಮತ್ತಷ್ಟು ಹತ್ತಿರವಾದರು ಮತ್ತು ಲೋಕಸಭೆ ಚುನಾವಣೆಗೆ ಮಂಡಿ ಕ್ಷೇತ್ರಕ್ಕೆ ಬಿಜೆಪಿಯಿಂದ ಕಂಗನಾ ಎಂಬ ಮಾತುಗಳು 2 ವರ್ಷಗಳ ಹಿಂದೆಯೇ ಆರಂಭಗೊಂಡಿದ್ದವು.
ರಾಜಕಾರಣದ ನಂಟು:ಹಾಗೆ ನೋಡಿದರೆ ಕಂಗನಾ ತಮ್ಮ ಕುಟುಂಬದ ಮೊದಲ ರಾಜಕಾರಣಿಯೇನಲ್ಲ. ಮಂಡಿಯ ಸರ್ಕಾಘಾಟ್ ವಿಧಾನಸಭೆ ಕ್ಷೇತ್ರದಿಂದ ಅವರ ಮುತ್ತಜ್ಜ ಠಾಕೂರ್ ಸರ್ಜು ಸಿಂಗ್ ಆಯ್ಕೆಯಾಗಿದ್ದರು. ಸರ್ಜು ಸಿಂಗ್ ಅವರು ಬ್ರಿಟಿಷ್ ಸೈನ್ಯದಲ್ಲಿ ಜೂನಿಯರ್ ಕಮಿಷನ್ಡ್ ಅಧಿಕಾರಿಯಾಗಿದ್ದರು ಮತ್ತು ಆ ಭಾಗದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸ್ವಾತಂತ್ರ್ಯದ ನಂತರ ಆ ದಿನಗಳಲ್ಲಿದ್ದ ಏಕೈಕ ಪ್ರಬಲ ಪಕ್ಷ ಕಾಂಗ್ರೆಸ್​ಗೆ ಸೇರಿದ್ದರು. ಒಟ್ಟು ಎರಡು ಅವಧಿಗೆ ಕಾಂಗ್ರೆಸ್ ಶಾಸಕರಾಗಿ ಅವರು ಕೆಲಸ ಮಾಡಿದ್ದರು.
ಕಂಗನಾ ತಂದೆ ಅಮರ್​ದೀಪ್ ರಣಾವತ್ ಆರಂಭದಲ್ಲಿ ಕೃಷಿಕರಾಗಿ, ನಂತರ ಉದ್ಯಮಿಯಾಗಿ ಬದಲಾಗಿದ್ದರು. ಅಮರ್​ದೀಪ್ ಸಣ್ಣ ಅವಧಿಗೆ ಸ್ಥಳೀಯ ಕಾಂಗ್ರೆಸ್ ಘಟಕದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರೂ, ನಂತರ ತಮ್ಮ ಉದ್ಯಮದಲ್ಲೇ ತೊಡಗಿಕೊಂಡರು.
ಮುಂಬೈನಲ್ಲಿ ಮಹಾ ವಿಕಾಸ್ ಆಘಾಡಿ ಸರ್ಕಾರದೊಂದಿಗೆ ಕಂಗನಾ ರಣಾವತ್ ಸಂಘರ್ಷ ಹೆಚ್ಚಾದ ಬಳಿಕ ಕುಟುಂಬ ಮಾನಸಿಕವಾಗಿ ಕಾಂಗ್ರೆಸ್​ನಿಂದ ದೂರವಾಗಿತ್ತು. 2020ರಲ್ಲಿ ಬಾಲಿವುಡ್ ನಟ, ಸುಶಾಂತ್ ಸಿಂಗ್ ರಜ್​ಪೂತ್ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ತಾವು ಅಸುರಕ್ಷಿತ ಎಂದು ಕಂಗನಾ ಹೇಳಿಕೆ ನೀಡಿದ್ದರು ಮತ್ತು ನಗರವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದರು. ಇದರಿಂದ ಸರ್ಕಾರ ಅವರ ವಿರುದ್ಧ ಎಫ್​ಐಆರ್ ದಾಖಲಿಸಿತ್ತು ಮತ್ತು ಇದು ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧದ ವಾಕ್ಸಮರಕ್ಕೂ ನಾಂದಿ ಹಾಡಿತ್ತು.
ಬಿಜೆಪಿ ಮಂಡಿಯಿಂದ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ವಿಶೇಷ. ಈ ಹಿಂದೆ ಕಾಂಗ್ರೆಸ್​ನಿಂದ ಪ್ರತಿಭಾ ಸಿಂಗ್ ಮತ್ತು ರಾಣಿ ಅಮೃತ್ ಕೌರ್ ಮಂಡಿಯಿಂದ ಆಯ್ಕೆಯಾಗಿದ್ದರೂ, ಬಿಜೆಪಿ ಮಹಿಳಾ ಅಭ್ಯರ್ಥಿ ಬಗ್ಗೆ ಹೆಚ್ಚು ಒಲವು ತೋರಿರಲಿಲ್ಲ. ಆದರೆ, ಕಂಗನಾ ಪ್ರವೇಶದಿಂದ ಬಿಜೆಪಿಗೆ ಬಹುದೊಡ್ಡ ಬಲ ಸಿಕ್ಕಿದೆ ಎಂದು ಅನೇಕರು ಹೇಳುತ್ತಾರೆ. ಬಾಲಿವುಡ್​ನಲ್ಲಿ ‘ಕ್ವೀನ್’ ಎಂದು ಖ್ಯಾತಿಯಾಗಿದ್ದರೂ, ಮಂಡಿಯ ತಾವು ಜನಿಸಿದ ಬಂಬ್ಲಾ ಹಳ್ಳಿಯಲ್ಲಿ ಅವರು ಚೋಟು ಎಂದೇ ಜನಜನಿತರಾಗಿದ್ದಾರೆ. ಸುಮಾರು 1000 ಜನಸಂಖ್ಯೆ ಇರುವ ಬಂಬ್ಲಾ ಕುಗ್ರಾಮದಲ್ಲಿ ಚೋಟು ಯಶಸ್ವೀಗಾಥೆ ಗೊತ್ತಿರದ ಯಾರೂ ಇರಲಿಕ್ಕಿಲ್ಲ. ಹಿಂದು ಧರ್ಮ, ಜೀವನಪದ್ಧತಿ, ಸಂಸ್ಕೃತಿ, ಪರಂಪರೆಗಳನ್ನು ಬಲವಾಗಿ ಪ್ರತಿಪಾದಿಸುವ ಕಂಗನಾ, ತಮ್ಮ ಪೂರ್ವಜರ ಹಳ್ಳಿಯಾಗಿರುವ, ಬಂಬ್ಲಾದಿಂದ 30 ಕಿಮೀ ದೂರದಲ್ಲಿರುವ ದಾಭೋಯ್ ಹಳ್ಳಿಯಲ್ಲಿ ಅಂಬಿಕಾ ಮಾತೆಯ ದೇಗುಲವನ್ನು ಪುನರುಜ್ಜೀವನಗೊಳಿಸಿದ್ದಾರೆ. ವರ್ಷಕ್ಕೆ 2-3 ಬಾರಿ ಕಂಗನಾ ಈ ದೇಗುಲಕ್ಕೆ ಭೇಟಿ ನೀಡುತ್ತಿರುತ್ತಾರೆ.
ರಾಜಕೀಯ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಕಂಗನಾ, ಚುನಾವಣೆ ಗೆದ್ದರೆ ಬಾಲಿವುಡ್​ಗೆ ಗುಡ್​ಬೈ ಹೇಳುವುದಾಗಿಯೂ ಘೊಷಿಸಿದ್ದಾರೆ. ‘ನೀವು ಉತ್ತಮ ನಟಿ, ರಾಜಕಾರಣಕ್ಕೆ ಹೋಗಬೇಡಿ ಎಂದು ಅನೇಕ ನಿರ್ವಪಕರು ಸಲಹೆ ನೀಡಿದ್ದರು’ ಎಂದು ಕಂಗನಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿದ್ದನ್ನು ತಮ್ಮ ಪ್ರಚಾರದುದ್ದಕ್ಕೂ ಹೆಮ್ಮೆಯಿಂದ ಹೇಳಿಕೊಂಡಿರುವ ಕಂಗನಾ, ಮೋದಿ ನಾಯಕತ್ವ ಹಾಗೂ ಪ್ರಬಲ ಸರ್ಕಾರದ ಅಗತ್ಯತೆ ಬಗ್ಗೆ ವಿವರಿಸುತ್ತಾರೆ. ರಾಮ ಮಂದಿರ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದ ಕಂಗನಾ, ತಾವು ಭಕ್ತಿಪರವಶರಾದ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮಂಡಿಯಲ್ಲಿ ಕಂಗನಾ ಪರ ಪ್ರಚಾರ ನಡೆಸಿದ್ದು, ಕಾಂಗ್ರೆಸ್ ನಾಯಕರು ಕಂಗನಾ ಬಗ್ಗೆ ಆಡಿರುವ ಮಾತುಗಳ ವಿರುದ್ಧ ಕಿಡಿಕಾರಿದ್ದರು.
ಪ್ರತಿಭಾ ಪುತ್ರ ಎದುರಾಳಿ:ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಅವರು ಮಂಡಿ ಲೋಕಸಭೆ ಹಾಲಿ ಸಂಸದರು. ಪ್ರತಿಭಾ ಸಿಂಗ್ ಮಾಜಿ ಸಿಎಂ ದಿವಂಗತ ವೀರಭದ್ರ ಸಿಂಗ್ ಪತ್ನಿ. ವೀರಭದ್ರ ಸಿಂಗ್ ಕೂಡ ಈ ಕ್ಷೇತ್ರದಿಂದ 6 ಬಾರಿ ಗೆದ್ದು ಸಂಸದರಾಗಿದ್ದಾರೆ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿಯೂ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿದ್ದಾರೆ. 1952ರಿಂದ ಈವರೆಗೆ ನಡೆದ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 14 ಬಾರಿ ಈ ಸೀಟನ್ನು ಗೆದ್ದಿದೆ. ಬಿಜೆಪಿ ಐದು ಬಾರಿ ಗೆದ್ದಿದ್ದರೆ, ಜನತಾದಳ ಒಂದು ಬಾರಿ ಕ್ಷೇತ್ರವನ್ನು ತನ್ನದಾಗಿಸಿಕೊಂಡಿತ್ತು. ಮಂಡಿ ವ್ಯಾಪ್ತಿಗೆ ಬರುವ 17 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೇವಲ ನಾಲ್ಕನ್ನು ಗೆದ್ದಿದ್ದರೆ, ಉಳಿದವನ್ನು ಬಿಜೆಪಿ ಬಾಚಿಕೊಂಡಿದೆ.

1989ರಲ್ಲಿ ಬಿಜೆಪಿ ಮೊದಲ ಬಾರಿಗೆ ಮಂಡಿ ಗೆದ್ದುಕೊಂಡಿತ್ತು. ಕುಲ್ಲುವಿನ ಹಿಂದಿನ ರಾಜಮನೆತನದ ವಂಶಸ್ಥರಾಗಿದ್ದ, ಬಿಜೆಪಿ ನಾಯಕ ಮಹೇಶ್ವರ್ ಸಿಂಗ್ ಈ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದರು. ಅವರೂ ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ವರಿಷ್ಠರು ಕಂಗನಾ ಪರ ಒಲವು ತೋರಿದರು.

2014 ಮತ್ತು 2019ರಲ್ಲಿ ಮಂಡಿ ಕ್ಷೇತ್ರವನ್ನು ಬಿಜೆಪಿಯ ರಾಮ್್ವರೂಪ್ ಶರ್ಮ ಗೆದ್ದಿದ್ದರು. 2021ರಲ್ಲಿ ಶರ್ಮ ನಿಧನದ ಹಿನ್ನೆಲೆಯಲ್ಲಿ ಸೀಟು ತೆರವಾಗಿ, ನಂತರ ನಡೆದ ಉಪ ಚುನಾವಣೆ ಯಲ್ಲಿ ಪ್ರತಿಭಾ ಸಿಂಗ್ ಗೆದ್ದರು. ಪ್ರತಿಭಾ ಈ ಬಾರಿ ಚುನಾವಣಾ ಕಣದಿಂದ ದೂರವುಳಿದ ಹಿನ್ನೆಲೆ ಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ಅವರ ಪುತ್ರ ವಿಕ್ರಮ್ ಸಿಂಗ್​ಗೆ ಟಿಕೆಟ್ ನೀಡಲಾಗಿದೆ.
ಹಿಂದುತ್ವದ ಮಂತ್ರ:ಶಿಮ್ಲಾ (ಗ್ರಾಮೀಣ) ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ವಿಕ್ರಮಾದಿತ್ಯ ಸಿಂಗ್ ಕೂಡ ತಮ್ಮ ಹಿಂದು ಗುರುತನ್ನು ಪ್ರಸ್ತಾಪಿಸುತ್ತ ಪ್ರಚಾರ ಮಾಡುತ್ತಿದ್ದಾರೆ. ಕಂಗನಾ ರಣಾವತ್​ಗೆ ಪೈಪೋಟಿ ನೀಡಬೇಕೆಂದರೆ ತಾವು ಕೂಡ ಹಿಂದುತ್ವದ ಹಾದಿಯನ್ನೇ ಕಂಡುಕೊಳ್ಳಬೇಕು ಎಂಬುದನ್ನರಿತು ವಿಕ್ರಮಾದಿತ್ಯ ಈ ತಂತ್ರಗಾರಿಕೆ ಹೂಡಿದ್ದಾರೆ. ತಮಗೆ ಭಗವಾನ್ ರಾಮನ ಆಶೀರ್ವಾದವಿದೆ ಎನ್ನುತ್ತಿರುವ ವಿಕ್ರಮಾದಿತ್ಯ, ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದಾರೆ. ಮಂಡಿಯಲ್ಲಿ ಜೂನ್ 1ರಂದು, ಕೊನೆಯ ಹಂತದಲ್ಲಿ ಮತದಾನ ನಡೆಯಲಿದೆ.
ಮುಂಬೈನ ತಾಜ್ ಹೋಟೆಲ್, ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ಭದ್ರತಾ ಪಡೆಯಿಂದ ಶೋಧ ಕಾರ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
