ಸ್ಪೀಕರ್ ಅಧಿಕಾರವ್ಯಾಪ್ತಿ, ಸಾರ್ವಜನಿಕರ ಪ್ರತಿಭಟನೆಯ ಹಕ್ಕು, ಕೇರಳದ ಪದ್ಮನಾಭ ಸ್ವಾಮಿ ದೇಗುಲದ ಹಕ್ಕು ಮುಂತಾದ ಮಹತ್ವದ ವಿಷಯಗಳ ಕುರಿತು ಸುಪ್ರೀಂಕೋರ್ಟ್ ಈ ವರ್ಷ ತೀರ್ಪಗಳನ್ನು ಪ್ರಕಟಿಸಿತು. ಕರೊನಾದಿಂದಾಗಿ ವರ್ಚುವಲ್ ಕಲಾಪ ಈ ಸಲದ ವಿಶೇಷ.
ಅನರ್ಹತೆ ಮತ್ತು ಸ್ಪೀಕರ್ ಅಧಿಕಾರ
ಸಂವಿಧಾನದ ಹತ್ತನೇ ಶೆಡ್ಯೂಲ್ ಅಡಿಯಲ್ಲಿ ಶಾಸಕರ ಅನರ್ಹತೆಗೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ವಿಧಾನಸಭೆ ಸ್ಪೀಕರ್ ತೀರ್ವನಿಸಬೇಕೇ ಬೇಡವೇ ಎಂಬ ಬಗ್ಗೆ ಸಂಸತ್ತು ಮರುಪರಿಶೀಲನೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ 2020ರ ಮಧ್ಯಭಾಗದಲ್ಲಿ ನೀಡಿದ್ದ ತೀರ್ಪನ್ನು ದೇಶದ ರಾಜಕೀಯ ವರ್ಗ ಎಷ್ಟರಮಟ್ಟಿಗೆ ಗಂಭೀರವಾಗಿ ತೆಗೆದುಕೊಂಡಿದೆ ಎಂಬುದು ಗೊತ್ತಿಲ್ಲ. ಆದರೆ, ಒಂದು ರಾಜಕೀಯ ಪಕ್ಷಕ್ಕೆ ಸೇರಿರುವ ಸ್ಪೀಕರ್, ತನ್ನ ಪಕ್ಷದ ಹಿತಾಸಕ್ತಿ ಕಾಪಾಡುವ ಸಲುವಾಗಿ ಅನೇಕ ಸಂದರ್ಭಗಳಲ್ಲಿ ಪಕ್ಷಪಾತಿಯಾಗಿ ನಡೆದುಕೊಂಡಿರುವ ನಿದರ್ಶನಗಳಿರುವುದರಿಂದ ನ್ಯಾ. ರೋಹಿಂಟನ್ ನಾರಿಮನ್, ನ್ಯಾ. ಅನಿರುದ್ಧ ಬೋಸ್ ಮತ್ತು ನ್ಯಾ. ರಾಮಸುಬ್ರಹ್ಮಣ್ಯನ್ ಇಂಥದ್ದೊಂದು ಸಲಹೆ ನೀಡಿದ್ದಾರೆ. ಅನರ್ಹತೆ ಕುರಿತ ಅರ್ಜಿಗಳನ್ನು 3 ತಿಂಗಳ ಒಳಗಾಗಿ ಇತ್ಯರ್ಥಪಡಿಸಬೇಕು ಎನ್ನುವುದೂ ಕೋರ್ಟ್ ತೀರ್ಪಿನಲ್ಲಿ ದಾಖಲಾಗಿತ್ತು.
ಖರ್ಚಿಗೆ ಹಣ ಕೇಳುವ ಹಕ್ಕು
ಹಿಂದು ಧರ್ಮಕ್ಕೆ ಸೇರಿದ ಅವಿವಾಹಿತ ಪುತ್ರಿ ಮದುವೆಯಾಗುವ ತನಕ ತಂದೆಯಿಂದ ತನ್ನ ಜೀವನ ನಿರ್ವಹಣೆಯ ಖರ್ಚಿನ ಮೊತ್ತವನ್ನು ಪಡೆಯುವ ಹಕ್ಕು ಹೊಂದಿದ್ದಾಳೆ ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಸೆಪ್ಟೆಂಬರ್​ನಲ್ಲಿ ನೀಡಿತು. 1956ರ ಹಿಂದು ದತ್ತು ಮತ್ತು ನಿರ್ವಹಣೆ ಕಾಯ್ದೆಯ ಸೆಕ್ಷನ್ 20(3)ನ್ನು ಆಧರಿಸಿ ಈ ತೀರ್ಪು ನೀಡಿದ ತ್ರಿಸದಸ್ಯ ಪೀಠ, ಜೀವನ ನಡೆಸಲು ತನ್ನ ಬಳಿ ಅಗತ್ಯ ಹಣ, ಉದ್ಯೋಗವಿಲ್ಲ ಎಂಬುದು ಸಾಬೀತುಪಡಿಸಿದ ಸಂದರ್ಭದಲ್ಲಿ ಯುವತಿ ಈ ಹಕ್ಕನ್ನು ಪ್ರತಿಪಾದಿಸಬಹುದು ಎಂದು ತಿಳಿಸಿತು.
ಪ್ರಶಾಂತ್ ಭೂಷಣ್​ಗೆ 1 ರೂ. ದಂಡ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದರಿಂದ ಹಿರಿಯ ವಕೀಲ ಪ್ರಶಾಂತ್ ಭೂಷಣ್​ರನ್ನು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಪರಾಧಿ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. 2014ರ ಬಳಿಕ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಹೇಗೆ ಹಾನಿಗೊಳಿಸಲಾಗಿದೆ ಎಂಬ ಬಗ್ಗೆ ಇತಿಹಾಸಕಾರರು ದಾಖಲಿಸುವ ವೇಳೆ ಇದರಲ್ಲಿ ಸುಪ್ರೀಂಕೋರ್ಟ್​ನ ಹಿಂದಿನ ನಾಲ್ಕು ಸಿಜೆಐಗಳ ಪಾತ್ರವನ್ನೂ ಅವರು ಉಲ್ಲೇಖಿಸಬಹುದು ಎಂದು ಭೂಷಣ್ ಟ್ವೀಟ್ ಮಾಡಿದ್ದರು. ಹಾಗೇ, ಬೈಕ್​ನಲ್ಲಿ ಕುಳಿತಿದ್ದ ಸಿಜೆಐ ಫೋಟೋವೊಂದನ್ನು ಶೇರ್ ಮಾಡಿ ವ್ಯಂಗ್ಯವಾಡಿದ್ದರು. ನ್ಯಾ. ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ, ಒಂದೋ 1 ರೂ. ದಂಡ ಕಟ್ಟಬೇಕು, ಇಲ್ಲವಾದಲ್ಲಿ ಸುಪ್ರೀಂಕೋರ್ಟ್​ನಲ್ಲಿ ವಕೀಲಿಕೆ ಮಾಡುವುದರಿಂದ ದೂರವಿರಬೇಕು ಎಂಬ ಆಯ್ಕೆಯನ್ನು ನೀಡಿತ್ತು. 1 ರೂ. ದಂಡ ಕಟ್ಟಿದ ಭೂಷಣ್, ಈಗ ಕೋರ್ಟ್ ಕಲಾಪಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಪ್ರತಿಭಟನೆಯ ಹಕ್ಕಿಗೆ ಲಕ್ಷ್ಮಣರೇಖೆ
ಪ್ರಜಾಪ್ರಭುತ್ವ ಮತ್ತು ಭಿನ್ನಾಭಿಪ್ರಾಯಗಳು ಜತೆಗೂಡಿ ಸಾಗಿದರೂ, ಭಿನ್ನಾಭಿಪ್ರಾಯಗಳನ್ನು ಹೊರಹಾಕುವ ವೇದಿಕೆ ನಿರ್ದಿಷ್ಟ ಸ್ಥಳಗಳಿಗೆ ಸೀಮಿತವಾಗಿರಬೇಕು. ಪ್ರತಿಭಟನಾಕಾರರು ಎಲ್ಲೆಂದರಲ್ಲಿ ಪ್ರತಿಭಟನೆಗೆ ಕುಳಿತು ಸಾರ್ವಜನಿಕ ಜನಜೀವನ ಅಸ್ತವ್ಯಸ್ತಗೊಳಿಸಬಾರದು ಎಂದು ಪೌರತ್ವ ತಿದ್ದುಪಡಿ ಕಾನೂನು ವಿರೋಧಿ ಪ್ರತಿಭಟನೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿತು. ದೆಹಲಿಯ ಶಾಹಿನ್​ಭಾಗ್​ನ ಪ್ರತಿಭಟನೆಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆಗೆ ತುತ್ತಾಗಿದ್ದರು. ಹಾಗಂತ, ಇದನ್ನು ರಾಜಕೀಯ ಹಾಗೂ ಸಾರ್ವಜನಿಕ ವರ್ಗ ಗಂಭೀರವಾಗಿ ತೆಗೆದುಕೊಂಡಂತಿಲ್ಲ. ದಿಲ್ಲಿ ಗಡಿಯಲ್ಲಿ ರೈತ ಸಮುದಾಯ ನಡೆಸುತ್ತಿರುವ ಪ್ರತಿಭಟನೆಯೇ ಇದಕ್ಕೆ ತಾಜಾ ನಿದರ್ಶನ.
ಜಗನ್ ರೆಡ್ಡಿ vs ನ್ಯಾ.ಎನ್.ವಿ.ರಮಣ
ಆಂಧ್ರಪ್ರದೇಶ ಹೈಕೋರ್ಟ್ ಕಾರ್ಯನಿರ್ವಹಣೆಯಲ್ಲಿ ಸುಪ್ರೀಂಕೋರ್ಟ್​ನ 2ನೇ ಹಿರಿಯ ನ್ಯಾಯಮೂರ್ತಿ ಎನ್ ವಿ ರಮಣ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಆರೋಪ ಹೊರಿಸಿ ಸಿಎಂ ಜಗನ್ ಮೋಹನ್ ರೆಡ್ಡಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದ ಘಟನೆ ಸಂಚಲನ ಮೂಡಿಸಿದೆ. ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮತ್ತು ತೆಲುಗು ದೇಶಂ ಪಕ್ಷದ ಕೆಲವು ಮುಖಂಡರನ್ನು ರಕ್ಷಿಸುವ ಸಲುವಾಗಿ ಅವರ ಮೇಲಿನ ವಂಚನೆ ಮತ್ತು ಅಪರಾಧ ಪ್ರಕರಣಗಳ ತನಿಖೆಗೆ ಆಂಧ್ರ ಹೈಕೋರ್ಟ್​ನಲ್ಲಿ ತಡೆ ನೀಡಲಾಗುತ್ತಿದೆ. ಇದು ನ್ಯಾ.ರಮಣ ಹಸ್ತಕ್ಷೇಪದಿಂದಲೇ ನಡೆದಿದೆ ಎಂಬುದು ಜಗನ್ ರೆಡ್ಡಿ ಆಪಾದನೆ. ಒಟ್ಟಿನಲ್ಲಿ, ಸುಪ್ರೀಂಕೋರ್ಟ್ ಈವರೆಗೆ ಬಗ್ಗೆ ತನಿಖೆಗೆ ಮುಂದಾಗಿಲ್ಲ. ಕೇಂದ್ರ ಸರ್ಕಾರವೂ ಸುಮ್ಮನಿದೆ.
ದೇಗುಲದ ಹಕ್ಕು ಕುಟುಂಬಕ್ಕೆ
ಕೇರಳದ ಪದ್ಮನಾಭಸ್ವಾಮಿ ದೇಗುಲದ ನಿರ್ವಹಣೆ ಹಾಗೂ ನಿಯಂತ್ರಣದ ವಿಷಯದಲ್ಲಿ ತಿರುವಾಂಕೂರು ರಾಜಮನೆತನದ ಹಕ್ಕನ್ನು ಸುಪ್ರೀಂಕೋರ್ಟ್ ಎತ್ತಿಹಿ ಡಿದಿದೆ. ರಾಜನ ಮರಣದಿಂದ ದೇಗು ಲದ ಮೇಲೆ ಕುಟುಂಬಕ್ಕಿದ್ದ ಹಕ್ಕು ದಮನ ಮಾಡಲು ಸಾಧ್ಯವಿಲ್ಲ. ತಿರುವಾಂಕೂರು-ಕೊಚ್ಚಿ ಹಿಂದು ಧಾರ್ವಿುಕ ಸಂಸ್ಥೆಗಳ ಕಾಯ್ದೆ, 1950 ರನ್ವಯ ಕುಟುಂಬದ ಹಕ್ಕು ಉಳಿದುಕೊಳ್ಳಲಿದೆ ಎಂದು ಕೋರ್ಟ್ ಸಾರಿತು.
ಎಸ್ಸಿ/ಎಸ್ಟಿ ಕಾಯ್ದೆ ಸ್ಪಷ್ಟನೆ
ಪರಿಶಿಷ್ಟ ಜಾತಿ/ಪಂಗಡಕ್ಕೆ (ಎಸ್​ಸಿ/ಎಸ್ಟಿ) ಸೇರಿದ ವ್ಯಕ್ತಿಯನ್ನು ಅವಮಾನಿಸುವುದು ಅಥವಾ ಬೆದರಿಸುವ ಎಲ್ಲಾ ಪ್ರಕರಣಗಳನ್ನು ಪರಿಶಿಷ್ಟ ಜಾತಿ/ಪಂಗಡಗಳ ಮೇಲಿನ ದೌರ್ಜನ್ಯ ಕಾಯ್ದೆ ವ್ಯಾಪ್ತಿಯಲ್ಲಿ ನೋಡಲಾಗುವುದಿಲ್ಲ. ವ್ಯಕ್ತಿಯೊಬ್ಬ ಆ ಸಮುದಾಯಕ್ಕೆ ಸೇರಿದ್ದಾನೆ ಎಂಬ ಕಾರಣಕ್ಕಾಗಿ ಜಾತಿ ಹೆಸರಲ್ಲಿ ಎಸಗಲಾಗುವ ಕೃತ್ಯಗಳು ಮಾತ್ರ ಈ ಕಾಯ್ದೆಯ ವ್ಯಾಪ್ತಿಗೆ ಬರಬೇಕು ಎಂದು ಸುಪ್ರೀಂಕೋರ್ಟ್​ನ ನ್ಯಾ. ನಾಗೇಶ್ವರ ರಾವ್ ನೇತೃತ್ವದ ತ್ರಿಸದಸ್ಯ ಪೀಠ ಸ್ಪಷ್ಟ ಪಡಿಸಿತು. ಈ ಕಾಯ್ದೆಯು ಅನುಕೂಲ ಮಾಡಿದ್ದರೂ, ಕೆಲವರು ದುರುದ್ದೇಶಕ್ಕಾಗಿ ದುರ್ಬಳಕೆ ಮಾಡಿದ್ದರಿಂದ ಕೋರ್ಟ್ ಈ ಸ್ಪಷ್ಟನೆ ನೀಡಬೇಕಾಯಿತು.
ಕರೊನಾ ಸೋಂಕು ಪರಿಣಾಮ 2020ರಲ್ಲಿ ಪೂರ್ಣಪ್ರಮಾಣದ ಕೋರ್ಟ್ ಕಲಾಪಗಳು ನಡೆಯಲಿಲ್ಲ. ಹೈಕೋರ್ಟ್ ತುರ್ತು ಅರ್ಜಿಗಳನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಿತ್ತು. ಜತೆಗೇ ವಿಶೇಷ ಎಸ್​ಒಪಿಗಳನ್ನು ರೂಪಿಸಿ ಭೌತಿಕ ಕಲಾಪಗಳಿಗೂ ಅವಕಾಶ ಕಲ್ಪಿಸಲಾಗಿತ್ತು.
ಕೋವಿಡ್ ನಿರ್ವಹಣೆಯಲ್ಲಿ ಪಾತ್ರ
ದೇಶದಲ್ಲಿ ಲಾಕ್​ಡೌನ್ ಘೋಷಣೆಯಾಗುತ್ತಿದ್ದಂತೆಯೇ ವರ್ಚುವಲ್ ಕಲಾಪಗಳನ್ನು ನಡೆಸಿದ ಹೈಕೋರ್ಟ್, ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಪಿಐಎಲ್​ಗಳನ್ನು ಆದ್ಯತೆ ಮೇರೆಗೆ ವಿಚಾರಣೆ ನಡೆಸಿ, ಸರ್ಕಾರಕ್ಕೆ ಅಗತ್ಯ ಸಲಹೆ ಹಾಗೂ ನಿರ್ದೇಶನ ನೀಡುವ ಜತೆಗೆ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಇಲಾಖೆಗಳಿಗೆ ಬಿಸಿ ಮುಟ್ಟಿಸಿತ್ತು. ಜತೆಗೆ, ಲಾಕ್​ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ನಿರ್ಗತಿಕರು, ವಲಸೆ ಕಾರ್ವಿುಕರು ಸೇರಿ ದುರ್ಬಲ ವರ್ಗದವರಿಗೆ ಆಹಾರ, ವಸತಿ, ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.
ಚುನಾವಣಾ ವಿವಾದ
ವಾರ್ಡ್​ಗಳ ಸಂಖ್ಯೆ ಹೆಚ್ಚಳ ನೆಪದಲ್ಲಿ ಬಿಬಿಎಂಪಿ ಚುನಾವಣೆ ಮುಂದೂಡುವ ಸರ್ಕಾರದ ಯತ್ನ ವಿಫಲಗೊಳಿಸಿದ್ದ ಹೈಕೋರ್ಟ್, ಹಾಲಿ ಇರುವ 198 ವಾರ್ಡ್​ಗಳಿಗೆ ಶೀಘ್ರ ಚುನಾವಣೆ ನಡೆಸುವಂತೆ ತಾಕೀತು ಮಾಡಿತ್ತು. ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸರ್ಕಾರ, ಸದ್ಯಕ್ಕೆ ತಡೆಯಾಜ್ಞೆ ತರುವಲ್ಲಿ ಸಫಲವಾಗಿದೆ. ಕೋವಿಡ್ ಕಾರಣ ಮುಂದಿಟ್ಟುಕೊಂಡು ಗ್ರಾಮ ಪಂಚಾಯಿತಿಗಳ ಚುನಾವಣೆಗಳನ್ನೂ ಮುಂದೂಡಲು ಹೊರಟಾಗ, ಚುನಾವಣೆ ನಡೆಸುವ ವಿಚಾರದಲ್ಲಿ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ, ಗ್ರಾ.ಪಂ.ಗಳ ಚುನಾವಣೆ ನಡೆಸಲೇಬೇಕು ಎಂದು ಆದೇಶಿಸಿತ್ತು.
ಮಾಜಿ, ಹಾಲಿ ಸಿಎಂ ಅರ್ಜಿಗಳ ವಜಾ
ಐಟಿ ಕಾರಿಡಾರ್ ಯೋಜನೆಗಾಗಿ ಕೆಐಎಡಿಬಿ ವಶಪಡಿಸಿಕೊಂಡಿದ್ದ ಜಮೀನನ್ನು ಅಕ್ರಮವಾಗಿ ಡಿ-ನೋಟಿಫೈ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಲೋಕಾಯುಕ್ತ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿತು.
ಹಲಗೆವಡೇರಹಳ್ಳಿ ಡಿ-ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಕೋರಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್ ವಜಾಗೊಳಿಸಿದೆ.
ಸುಪ್ರೀಂ ಮೆಟ್ಟಿಲೇರಿದ ರಾಗಿಣಿ
ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಜೈಲುಪಾಲಾಗಿದ್ದ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಮತ್ತಿತರ ಆರೋಪಿಗಳ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಎರಡನೇ ಬಾರಿ ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆಯಲು ಸಂಜನಾ ಸಫಲರಾಗಿದ್ದರೆ, ರಾಗಿಣಿ ಜಾಮೀನಿಗಾಗಿ ಸುಪ್ರೀಂ ಮೊರೆ ಹೋಗಿದ್ದಾರೆ.
ಕ್ರಿಮಿನಲ್ ಪ್ರಕರಣಗಳತ್ತ ಕಣ್ಣು
ರಾಜ್ಯದ ಮಾಜಿ , ಹಾಲಿ ಜನಪ್ರತಿನಿಧಿಗಳ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಮೇಲ್ವಿಚಾರಣೆಗಾಗಿ ಸುಪ್ರೀಂ ನಿರ್ದೇಶನದ ಅನುಸಾರ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿ ಕೊಂಡಿರುವ ಹೈಕೋರ್ಟ್, ಎಲ್ಲ ಕ್ರಿಮಿನಲ್ ಪ್ರಕರಣಗಳ ವಿವರ ಕೇಳಿದೆ. ಈ ಮಧ್ಯೆ ಹೈಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿ ಮತ್ತೊಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸ್ಥಾಪಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಬರಹ: ರಾಘವ ಶರ್ಮ ನಿಡ್ಲೆ, ಜಗನ್ ರಮೇಶ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 9 =
Remember me
