ನವದೆಹಲಿ:ಜಗತ್ತನ್ನು ತಲ್ಲಣಗೊಳಿಸಿದ ಕೋವಿಡ್-19 ಮಹಾಮಾರಿ ಇನ್ನೂ ಸಂಪೂರ್ಣ ವಾಗಿ ಕೊನೆಯಾಗದಿರುವ ಹೊತ್ತಿನಲ್ಲಿ ಕರೊನಾದ ಒಮಿಕ್ರಾನ್ ಪ್ರಭೇದಕ್ಕಿಂತಲೂ ಹೆಚ್ಚು ಅಪಾಯಕಾರಿಯಾದ ತಳಿಯೊಂದು ಪತ್ತೆಯಾಗಿರುವುದು ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ. ಮೂರು ವರ್ಷಗಳ ಹಿಂದೆ ದಾಂಗುಡಿಯಿಟ್ಟ ಕರೊನಾ ವೈರಸ್​ನ ಒಮಿಕ್ರಾನ್ ಪ್ರಭೇದ ಮನುಕುಲಕ್ಕೆ ದುಃಸ್ವಪ್ನವಾಗಿ ಕಾಡಿತ್ತು. ಬಹುತೇಕ ವಾರಕ್ಕೊಂದು ಎನ್ನುವಂತೆ ಅದರ ಹೊಸ ಹೊಸ ತಳಿಗಳು ಪತ್ತೆಯಾಗಿ ವಿಜ್ಞಾನ ಹಾಗೂ ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿತ್ತು.
ಇದೀಗ ಅದಕ್ಕಿಂತಲೂ ಅಧಿಕ ಅಪಾಯಕಾರಿಯಾದ ವೈರಸ್ ತಳಿ ಪತ್ತೆಯಾಗಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಪತ್ತೆಯಾಗಿರುವ ಹೊಸ ಪ್ರಭೇದವು ಹಾಲಿ ಒಮಿಕ್ರಾನ್ ತಳಿಗಿಂತ ಭೀಕರವಾದ ಅನಾರೋಗ್ಯಕ್ಕೆ ಕಾರಣವಾಗಲಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಈ ವೈರಾಣು ರೂಪಾಂತರಗೊಂಡು ತುಲನಾತ್ಮಕವಾಗಿ ಮೃದುವಾದ ಒಮಿಕ್ರಾನ್​ಗಿಂತ ಹೆಚ್ಚು ಅನಾರೋಗ್ಯ ಹಾಗೂ ಸಾವುಗಳಿಗೆ ಕಾರಣವಾಗಬಹುದು ಎಂದು ದಕ್ಷಿಣ ಆಫ್ರಿಕಾದ ತಜ್ಞರು ಎಚ್ಚರಿಸಿದ್ದಾರೆ.
ಹೆಚ್ಚು ಅಪಾಯಕಾರಿ:ರೋಗನಿರೋಧಕಶಕ್ತಿ (ಇಮ್ಯುನಿಟಿ) ಕುಂದಿದ ವ್ಯಕ್ತಿಯೊಬ್ಬರಿಂದ ಸಂಗ್ರಹಿಸಲಾದ ಕರೊನಾವೈರಸ್ ಸ್ಯಾಂಪಲ್​ಗಳನ್ನು ಇತ್ತೀಚೆಗೆ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಈ ವೈರಸ್ ಪತ್ತೆಯಾಗಿದೆ. 2021ರಲ್ಲಿ ಎಚ್​ಐವಿ-ಪಾಸಿಟಿವ್ ರೋಗಿಯಿಂದ ಸ್ಯಾಂಪಲ್​ಗಳನ್ನು ಪಡೆದು ಲಸಿಕೆಗಳ ವಿರುದ್ಧ ಒಮಿಕ್ರಾನ್ ಪರೀಕ್ಷೆ ನಡೆಸಿದ್ದ ದಕ್ಷಿಣ ಆಫ್ರಿಕಾದ ಲ್ಯಾಬ್ ತಜ್ಞರೇ ಈ ಪರೀಕ್ಷೆಯನ್ನೂ ನಡೆಸಿದ್ದಾರೆ. ಮೊದಲಿಗೆ ಈ ವೈರಸ್, ಒಮಿಕ್ರಾನ್​ನ ಬಿಎ.1 ಪ್ರಭೇದದಂತೆಯೇ ಸೆಲ್ ಫ್ಯೂಷನ್ ಮತ್ತು ಸಾವಿನ ಪರಿಣಾಮ ತೋರಿತ್ತು. ಆದರೆ, ಅದು ನಂತರದ ಹಂತದಲ್ಲಿ ಚೀನಾದ ವುಹಾನ್​ನಲ್ಲಿ ಪತ್ತೆಯಾದ ಕರೊನಾ ವೈರಸ್​ನ ಮೊದಲ ಆವೃತ್ತಿಯ ರೀತಿಯೇ ವಿಕಾಸಗೊಂಡಿತು ಎಂದು ಸಂಶೋಧಕರು ವಿವರಿಸಿದ್ದಾರೆ.
ಬೆಂಗಳೂರು:ಚೀನಾದಲ್ಲಿ ಕೋವಿಡ್ ಹೆಚ್ಚಳದಿಂದ ರಾಜ್ಯದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಕೆಲ ತಿಂಗಳುಗಳಿಂದ ಕೋವಿಡ್ ಸೋಂಕು ಪ್ರಕರಣಗಳು ಹಾಗೂ ಮರಣ ಪ್ರಮಾಣ ಎರಡೂ ನಿಯಂತ್ರಣದಲ್ಲಿರುವುದರಿಂದ ಸದ್ಯ ಯಾವುದೇ ನಿರ್ಬಂಧದ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.
ಚಳಿಗಾಲ ಆರಂಭವಾಗಿದ್ದು, ಹವಾಮಾನದಲ್ಲಿನ ವ್ಯತ್ಯಾಸದಿಂದಾಗಿ ಶೀತ ಜ್ವರ ಪ್ರಕರಣಗಳು ವರದಿಯಾಗುತ್ತಿವೆ. ಅದೆಲ್ಲವನ್ನೂ ಕೋವಿಡ್ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ, ಶೀತಜ್ವರ (ಐಎಲ್​ಐ), ತೀವ್ರ ಉಸಿರಾಟದ ತೊಂದರೆ (ಸಾರಿ) ಪ್ರಕರಣಗಳ ಮೇಲೆ ನಿಗಾ ವಹಿಸಲಾಗುತ್ತಿದ್ದು, ಆ ಪ್ರಕರಣಗಳು ಹೆಚ್ಚಳವಾಗಿಲ್ಲ ಎಂದು ಹೇಳಿದರು.
ಕೋವಿಡ್ ವಾರ್ಡ್​ಗಳಲ್ಲಿ ಸೋಂಕಿತರ ದಾಖಲಾತಿ ಗಣನೀಯವಾಗಿ ಇಳಿದಿದೆ. ಮರಣ ಪ್ರಮಾಣವೂ ನಿಯಂತ್ರಣದಲ್ಲಿದೆ. ಹೀಗಾಗಿ ಕೋವಿಡ್ ನಿಯಮಗಳನ್ನು ಬಹುತೇಕ ಸಡಿಲಿಸಲಾಗಿದ್ದು, ಪರೀಕ್ಷೆಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಇದಲ್ಲದೆ ಸೋಂಕಿತರ ಚಿಕಿತ್ಸಾ ವಿಧಾನವೂ ಬದಲಾಗಿದೆ ಎಂದು ವಿವರಿಸಿದರು.
ಜನದಟ್ಟಣೆ ಸ್ಥಳಗಳಲ್ಲಿ ಎಚ್ಚರವಿರಲಿ:ರಾಜ್ಯದಲ್ಲಿ ಹೊಸ ತಳಿಯ ವೈರಾಣು ಪತ್ತೆಯಾಗದ ಕಾರಣ ಆತಂಕಪಡಬೇಕಿಲ್ಲ. ಆದರೂ ಜನದಟ್ಟಣೆ ಸ್ಥಳಗಳಲ್ಲಿ ಆರೋಗ್ಯ ಸಮಸ್ಯೆ ಇರುವವರು (ಕೋ-ಮಾರ್ಬೆಡಿಟಿಸ್) ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇತ್ಯಾದಿ ಎಚ್ಚರ ವಹಿಸುವುದು ಸೂಕ್ತ ಎನ್ನುತ್ತಾರೆ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು.
73 ಮಂದಿಗೆ ಸೋಂಕು:ರಾಜ್ಯದಲ್ಲಿ ಮಂಗಳವಾರ 3,524 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, 73 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,627 ತಲುಪಿದೆ. ಕಳೆದ 24 ಗಂಟೆಗಳಲ್ಲಿ 46 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರ ಒಟ್ಟು ಸಂಖ್ಯೆ 40.29 ಲಕ್ಷ ಮೀರಿದೆ. ಈವರೆಗೂ 40,261 ಸೋಂಕಿತರು ಸಾವನ್ನಪ್ಪಿದ್ದು, 40.71 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ. ಬೆಂಗಳೂರು ನಗರದಲ್ಲಿ 63 ಮಂದಿ, ಮೈಸೂರಿನಲ್ಲಿ ಮೂವರು, ಉತ್ತರ ಕನ್ನಡದಲ್ಲಿ ಇಬ್ಬರು ಹಾಗೂ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ದಕ್ಷಿಣಕನ್ನಡ, ಧಾರವಾಡ ಮತ್ತು ಶಿವಮೊಗ್ಗದಲ್ಲಿ ತಲಾ ಒಬ್ಬರಂತೆ 73 ಸೋಂಕು ಪ್ರಕರಣಗಳು ವರದಿಯಾಗಿವೆ.
ಹೆಂಡ್ತಿ ಜತೆ ಜಗಳವಾಡಿ ಬಂದವನ ಕಂಡು ನಾಯಿ ಬೊಗಳಿತು; ಸಿಟ್ಟಾದ ಆತ ಅದರ ಒಡತಿಯನ್ನೇ ಕೊಂದ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + twelve =
Remember me
