ರಾಯ್ಪುರ:ಛತ್ತೀಸ್​ಗಢ ವಿಧಾನಸಭೆ ಚುನಾವಣೆ ಫಲಿತಾಶ ಪ್ರಕಟವಾದ ನಂತರ ಹಲವು ದಿನಗಳ ಊಹಾಪೋಹ ಹಾಗೂ ಕುತೂಹಲಕ್ಕೆ ಭಾನುವಾರ ತೆರೆ ಬಿದ್ದಿದ್ದು ಬುಡಕಟ್ಟು ಮುಖಂಡ ವಿಷ್ಣುದೇವ ಸಾಯಿ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. 90 ಸದಸ್ಯರ ಅಸೆಂಬ್ಲಿಯಲ್ಲಿ 54 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಭಾನುವಾರ ನಡೆದಿದ್ದು, ಕುಂಕುರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ವಿಷ್ಣು ದೇವರನ್ನು ನಾಯಕನಾಗಿ ಆರಿಸಲಾಯಿತು.
ನವೆಂಬರ್​ನಲ್ಲಿ ನಡೆದ ಅಸೆಂಬ್ಲಿ ಚುನಾವಣೆಗಳಲ್ಲಿ ಅವರು ಜಶ್​ಪುರ ಜಿಲ್ಲೆಯ ಕುಂಕುರಿ ಪರಿಶಿಷ್ಟ ಪಂಗಡ (ಎಸ್​ಟಿ) ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್​ನ ಹಾಲಿ ಶಾಸಕ ಯು.ಡಿ. ಮಿಂಜ್​ರನ್ನು 25,000ಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. 2018ರ ಚುನಾವಣೆಯಲ್ಲಿ ಬುಡಕಟ್ಟು ದಟ್ಟಣೆಯ ಸ್ಥಾನಗಳಲ್ಲಿ ಭಾರಿ ಹಿನ್ನಡೆ ಕಂಡಿದ್ದ ಬಿಜೆಪಿ ಈ ಬಾರಿ 29 ಎಸ್.ಟಿ. ಮೀಸಲು ಕ್ಷೇತ್ರಗಳ ಪೈಕಿ 17ರಲ್ಲಿ ಗೆಲುವು ಸಾಧಿಸಿತ್ತು.
ಹುಸಿಯಾಗದ ಅಮಿತ್ ಷಾ ಭರವಸೆ:ಸಾಯಿ ಅವರನ್ನು ‘ದೊಡ್ಡ ಮನುಷ್ಯ’ನಾಗಿ ಮಾಡುವುದಾಗಿ ಕಳೆದ ತಿಂಗಳ ಅಸೆಂಬ್ಲಿ ಚುನಾವಣಾ ಪ್ರಚಾರದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಭರವಸೆ ನೀಡಿದ್ದರು. ಭಾನುವಾರ ಸಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದರೊಂದಿಗೆ ಆ ಭರವಸೆ ಈಡೇರಿದಂತಾಗಿದೆ.
ಪಂಚಾಯಿತಿಯಿಂದ ಸಂಸತ್​ವರೆಗೆ:ಸರಳ ವ್ಯಕ್ತಿತ್ವದ ಸಾಯಿ, ಗ್ರಾಮವೊಂದರ ಸರಪಂಚನಾಗಿ ರಾಜಕೀಯ ಜೀವನವನ್ನು ಆರಂಭಿಸಿದ್ದರು. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಪ್ರಧಾನಿ ನರೇಂದ್ರ ಮೋದಿಯವರ ಪ್ರಥಮ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವವರೆಗೆ ಅವರ ರಾಜಕೀಯ ಪಯಣ ಸಾಗಿತ್ತು. ಸಾಯಿ ಅನೇಕ ಬಾರಿ ಸಂಸತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬುಡಕಟ್ಟು ಜನಸಂಖ್ಯೆಯೇ ಹೆಚ್ಚಿರುವ ಜಶ್​ಪುರ ಜಿಲ್ಲೆಯ ಪುಟ್ಟ ಬಗಿಯಾ ಗ್ರಾಮದ ರೈತ ಕುಟುಂಬಕ್ಕೆ ಸೇರಿದ ಸಾಯಿ ಅಪಾರ ರಾಜಕೀಯ ಹಿನ್ನೆಲೆಯನ್ನು ಹೊಂದಿದ್ದಾರೆ. ಅವರ ತಾತ, ದಿವಂಗತ ಬುದ್ಧನಾಥ್ ಸಾಯಿ 1947ರಿಂದ 1952ರ ವರೆಗೆ ನಾಮನಿರ್ದೇಶಿತ ಶಾಸಕರಾಗಿದ್ದರು.
ವಸುಂಧರಾ ರಾಜೇ ಭೇಟಿಯಾದ ಹತ್ತು ಬಿಜೆಪಿ ಶಾಸಕರು:ರಾಜಸ್ಥಾನದ ಹೊಸ ಮುಖ್ಯಮಂತ್ರಿಯಾಗಿ ಪಕ್ಷ ಯಾರನ್ನು ಆರಿಸಲಿದೆ ಎಂಬ ಲೆಕ್ಕಾಚಾರದ ನಡುವೆಯೇ ಬಿಜೆಪಿಯ ಸುಮಾರು 10 ನೂತನ ಶಾಸಕರು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರನ್ನು ಭಾನುವಾರ ಭೇಟಿ ಯಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಆಯ್ಕೆಗೆ ಶಾಸಕಾಂಗ ಪಕ್ಷದ ಸಭೆಯ ದಿನಾಂಕವನ್ನು ಬಿಜೆಪಿ ಇನ್ನೂ ಪ್ರಕಟಿಸಿಲ್ಲ. ಎರಡು ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದ ರಾಜೇ, ಈ ಬಾರಿಯೂ ಸಿಎಂ ಗಾದಿಯ ರೇಸ್​ನ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ, ಅವರನ್ನು ಕೆಲವು ನೂತನ ಶಾಸಕರು ಭೇಟಿಯಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ. ಇದಕ್ಕೂ ಮುನ್ನ, ಕಳೆದ ಸೋಮವಾರ ಮತ್ತು ಮಂಗಳವಾರ ಕೂಡ ಅನೇಕ ಬಿಜೆಪಿ ಶಾಸಕರು ರಾಜೇ ಅವರನ್ನು ಭೇಟಿಯಾಗಿ ರ್ಚಚಿಸಿದ್ದರು.
ಇಂದು ಮಧ್ಯ ಪ್ರದೇಶ ಸಿಎಂ ಆಯ್ಕೆ:ಮಧ್ಯ ಪ್ರದೇಶದ ಬಿಜೆಪಿಯ ನೂತನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಹೊಸ ಶಾಸಕರು ಸೋಮವಾರ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ 230 ಸದಸ್ಯ ಬಲದ ಅಸೆಂಬ್ಲಿಗೆ ನವೆಂಬರ್ 17ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ 163 ಸ್ಥಾನಗಳನ್ನು ಗೆದ್ದು ಅಧಿಕಾರವನ್ನು ಉಳಿಸಿಕೊಂಡಿದೆ. ಕೇವಲ 66 ಸ್ಥಾನಗಳ ಗೆಲುವಿನೊಂದಿಗೆ ಕಾಂಗ್ರೆಸ್ ಬಹಳ ಹಿಂದೆ ಉಳಿದು ಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದ ಬಿಜೆಪಿ, ಪ್ರಚಾರದಲ್ಲಿ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸಿರಲಿಲ್ಲ.
ವೀಕ್ಷಕರು:ಹರಿಯಾಣ ಸಿಎಂ ಮನೋಹರ ಲಾಲ್ ಖಟ್ಟರ್, ಒಬಿಸಿ ಮೋರ್ಚಾ ಮುಖ್ಯಸ್ಥ ಕೆ. ಲಕ್ಷ್ಮಣ್, ಕಾರ್ಯದರ್ಶಿ ಆಶಾ ಲಕ್ರಾ ಸೋಮವಾರ ಭೋಪಾಲ್​ಗೆ ಆಗಮಿಸುವ ನಿರೀಕ್ಷೆಯಿದೆ.
ತೆಲಂಗಾಣ ಕಚೇರಿಯಲ್ಲಿ ದಾಂಧಲೆ:ತೆಲಂಗಾಣದ ಮಾಜಿ ಸಚಿವ ತಲಸಾನಿ ಶ್ರೀನಿವಾಸ ರೆಡ್ಡಿಯ ವಿಶೇಷ ಕರ್ತವ್ಯಾಧಿಕಾರಿ (ಒಎಸ್​ಡಿ) ಕಲ್ಯಾಣ್ ಕುಮಾರ್ ಕಳಿಸಿದ್ದರೆನ್ನಲಾದ ನಾಲ್ಕು ಜನರು ಸರ್ಕಾರಿ ಕಚೇರಿಯೊಂದಕ್ಕೆ ಅಕ್ರಮವಾಗಿ ನುಗ್ಗಿ ಕಡತಗಳು ಮತ್ತು ಸಿಸಿಟಿವಿ ಕ್ಯಾಮರಾಗಳನ್ನು ನಾಶ ಮಾಡಿದ ಘಟನೆ ನಡೆದಿದೆ. ಶುಕ್ರವಾರ ಈ ಪ್ರಕರಣ ನಡೆದಿದ್ದು ಅಧಿಕಾರಿ ಕಲ್ಯಾಣ್ ಕುಮಾರ್ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಕಚೇರಿಗೆ ನುಗ್ಗಿದ್ದ ನಾಲ್ವರನ್ನು ಬಂಧಿಸಲಾಗಿದೆ.
ಸ್ಥಾನ ಹಂಚಿಕೆ ಚರ್ಚೆಗೆ ಈ ತಿಂಗಳು ಇಂಡಿಯಾ ಸಭೆ:ಪ್ರತಿಪಕ್ಷಗಳ ಐಎನ್​ಡಿಐಎ (ಇಂಡಿಯಾ) ಮೈತ್ರಿಕೂಟದ ನಾಯಕರು ಸಭೆ ಸೇರಿ ಮುಂಬರುವ ಲೋಕಸಭೆ ಚುನಾವಣೆಗಳಲ್ಲಿ ಸ್ಥಾನ ಹೊಂದಾಣಿಕೆ ವಿಚಾರವನ್ನು ಪ್ರಮುಖವಾಗಿ ರ್ಚಚಿಸುವ ಸಂಭವವಿದೆ. ಡಿ. 19ರಂದು ದೆಹಲಿಯಲ್ಲಿ ಸಭೆ ನಡೆಯುವ ನಿರೀಕ್ಷೆಯಿದೆ. ಪಂಚರಾಜ್ಯ ಚುನಾವಣೆಗಳಲ್ಲಿ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಸ್ಥಾನ ಹಂಚಿಕೆ ಮಾತುಕತೆ ಕಾಂಗ್ರೆಸಗೆ ತುಂಬಾ ಕಷ್ಟವಾಗಬಹುದು. ರಾಜಸ್ಥಾನ ಮತ್ತು ಛತ್ತೀಸ್​ಗಢದಲ್ಲಿ ಅಧಿಕಾರ ಕಳೆದು ಕೊಂಡಿದ್ದು ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಮರಳುವ ಅದರ ಕನಸು ಭಗ್ನವಾಗಿದೆ. ಈ ನಡುವೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್​ರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಕಾಂಗ್ರೆಸ್ ಬಗೆಹರಿಸಿಕೊಂಡಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 14 =
Remember me
