ಬೆಂಗಳೂರು: ಕರೊನಾ ಎಂಬ ಮಹಾಮಾರಿಯನ್ನು ಎದುರಿಸಲು ಮಾಧ್ಯಮಗಳ ಪಾತ್ರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ದೇಶದ ಮಾಧ್ಯಮ ಸಂಸ್ಥೆಗಳು ಸಲ್ಲಿಸುತ್ತಿರುವ ಸೇವೆ ಪ್ರಶಂಸನೀಯ, ಮೂಡಿಸುತ್ತಿರುವ ಜಾಗೃತಿ ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಸೇರಿದಂತೆ ದೇಶದ 14 ಮಾಧ್ಯಮ ಪ್ರಮುಖರೊಂದಿಗೆ ಮಂಗಳವಾರ ನಡೆಸಿದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಹನ್ನೊಂದು ವಿಭಿನ್ನ ಭಾಷೆಗಳನ್ನು ಪ್ರತಿನಿಧಿಸುವ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮಗಳ ಪತ್ರಕರ್ತರು ಏಕಕಾಲದಲ್ಲಿ ದೇಶದ ಹದಿನಾಲ್ಕು ಸ್ಥಳಗಳಿಂದ ಸಂವಾದದಲ್ಲಿ ಪಾಲ್ಗೊಂಡರು. ಕರೊನಾ ನಿಯಂತ್ರಣ ಕುರಿತು ಮಾತು ಮುಂದುವರಿಸಿದ ಪ್ರಧಾನಿ, ‘ಈ ವೈರಸ್ ನಮ್ಮನ್ನು ಪರೀಕ್ಷೆ ಮಾಡುತ್ತಿದೆ. ಇದಕ್ಕಾಗಿ ರಾಷ್ಟ್ರವನ್ನು ಮಾನಸಿಕವಾಗಿ ಸಜ್ಜುಗೊಳಿಸಬೇಕಿದೆ. ನಮ್ಮ ಸೀಮಿತ ಸಾಮರ್ಥ್ಯದಲ್ಲಿ ಜನರನ್ನು ತಲುಪಲು ಮಾಧ್ಯಮಗಳ ಮೂಲಕ ಮಾತ್ರ ಸಾಧ್ಯ. ಮಾಧ್ಯಮಗಳ ಜಾಲವು ಭಾರತದ ಉದ್ದಗಲಕ್ಕೆ ನಗರಗಳು ಮತ್ತು ಹಳ್ಳಿಗಳಿಗೆ ವ್ಯಾಪಿಸಿದೆ.
ಪತ್ರಿಕೆಗಳು ಅಪಾರ ವಿಶ್ವಾಸಾರ್ಹತೆಯನ್ನು ಹೊಂದಿವೆ ಮತ್ತು ಒಂದು ಪ್ರದೇಶದ ಸ್ಥಳೀಯ ಪುಟವನ್ನು ಜನರು ವ್ಯಾಪಕವಾಗಿ ಓದುತ್ತಾರೆ. ಈ ಪುಟದಲ್ಲಿ ಲೇಖನಗಳ ಮೂಲಕ ಕರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವುದು ಅತಿ ಮುಖ್ಯ’ ಎಂದರು.
ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಲಾಕ್​ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳು ಲಭ್ಯವಾಗುವ ಸ್ಥಳದಂತಹ ಮಾಹಿತಿಯನ್ನು ಪ್ರಾದೇಶಿಕ ಪುಟಗಳಲ್ಲಿ ಹಂಚಿಕೊಳ್ಳಬಹುದು ಎಂದು ಪ್ರಧಾನಿ ಸಲಹೆ ನೀಡಿದರು.
ಜನರ ಹೋರಾಟದ ಮನೋ ಭಾವವನ್ನು ಉಳಿಸಿ ಕೊಳ್ಳುವುದರ ಜತೆಗೇ ವದಂತಿ ಹರಡುವಿಕೆಯನ್ನು ನಿಭಾಯಿಸುವುದು ಅತಿ ಮುಖ್ಯ. ಜನರನ್ನು ಭಯಗೊಳಿಸಬಾರದು. ಭೀತಿ ಮೂಡಿಸದ ರೀತಿಯಲ್ಲಿ ಹುರಿ ದುಂಬಿಸಲು ಮುಂದಾಗಬೇಕು. ಕರೊನಾ ಪರಿಣಾಮವನ್ನು ನಿಭಾಯಿಸಲು ಸರ್ಕಾರ ಬದ್ಧವಾಗಿದೆ. ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಅಪಾಯದ ಮಟ್ಟವನ್ನು ನಾವಿನ್ನೂ ತಲುಪಿಲ್ಲ.
ಕರೊನಾ ಕುರಿತ ಸುದ್ದಿಗಳನ್ನು ಜನರಿಗೆ ತಲುಪಿಸಲು ಪತ್ರಕರ್ತರು ಭೀತಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆಗಳು ಅವರೆಲ್ಲರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಿರುವುದು ಉತ್ತಮ ವಿಚಾರ. ಎಲ್ಲರೂ ಒಟ್ಟಾಗಿ ೆಲಸ ಮಾಡೋಣ ಸರಕಾರಕ್ಕೆ ಎಲ್ಲರ ಸಲಹೆ ಮುಖ್ಯ ಎಂದರು.
ರಾಷ್ಟ್ರವ್ಯಾಪಿ ಲಾಕ್​ಡೌನ್​ಗೆ ಆನಂದ ಸಂಕೇಶ್ವರ ಸಲಹೆ
ಮಾ.31ಕ್ಕೆ ಲಾಕ್​ಡೌನ್ ಮುಕ್ತಾಯವಾದರೂ ಏ.30ರವರೆಗೂ ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ಕರ್ಫ್ಯೂ ಮುಂದುವರಿಸಿದಲ್ಲಿ ಸೋಂಕು ಹರಡುವ ಪ್ರಕ್ರಿಯೆ ತುಂಡಾಗಲಿದೆ ಎಂದು ಪ್ರಧಾನಿ ಮೋದಿಯವರಿಗೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಸಲಹೆ ನೀಡಿದರು. ಮಂಗಳವಾರ ಮಧ್ಯಾಹ್ನ 12.30ಕ್ಕೆ ನಡೆದ ಸಂವಾದದ ವೇಳೆ ಸಲಹೆಗೆ ಪೂರಕವಾಗಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಮೂರು ವಾರಗಳು ಬಹಳ ಮುಖ್ಯ. ನಾವು ಬೇರೆಯವರನ್ನು ಉಳಿಸುತ್ತೇವೆಯೋ, ನಾವು ಉಳಿಯುತ್ತೇವೆಯೋ ಎಂಬುದು ಈ 21 ದಿನಗಳಲ್ಲಿ ನಿರ್ಧಾರವಾಗುತ್ತದೆ. ಇದನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ಇಷ್ಟು ಸಮಯದಲ್ಲೇ ನಮ್ಮೆಲ್ಲ ಶಕ್ತಿಯನ್ನು ಹಾಕಿ ಕೆಲಸ ಮಾಡಬೇಕು ಎಂದರು.
ರಾತ್ರಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಅವರು ದೇಶವ್ಯಾಪಿ ಲಾಕ್​ಡೌನ್ ಘೊಷಣೆ ಮಾಡಿದ್ದು ವಿಶೇಷ. ಧಾರ್ವಿುಕ ಸ್ಥಳಗಳಲ್ಲಿ ಜನಜಂಗುಳಿ ಆಗುತ್ತಿರುವ ವಿಚಾರ ಪ್ರಸ್ತಾಪಿಸಿದ ಆನಂದ ಸಂಕೇಶ್ವರ, ರಾಜ್ಯದಲ್ಲಿ ದೇವಸ್ಥಾನಗಳು ಬಹುತೇಕ ಬಂದ್ ಆಗಿವೆ. ಆದರೆ ಕೆಲವು ಮಸೀದಿ ಹಾಗೂ ಚರ್ಚ್ ಗಳಲ್ಲಿ ಮುಸ್ಲಿಂ ಸೋದರರು ಹಾಗೂ ಕ್ರೖೆಸ್ತ ಬಾಂಧವರ ಸಾಮೂಹಿಕ ಪ್ರಾರ್ಥನೆಗಳು ಮುಂದುವರಿದಿವೆ. ಈ ಸ್ಥಳಗಳಲ್ಲೂ ನಿಯಮವನ್ನು ಕಠಿಣವಾಗಿ ಪಾಲನೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಕರೊನಾ ಕುರಿತ ಮಾಹಿತಿಗಾಗಿಯೇ ವಿಶೇಷ ಆಪ್ ರೂಪಿಸಿದರೆ ಪರಿಣಾಮಕಾರಿಯಾಗುತ್ತದೆ ಎಂಬ ಆನಂದ ಸಂಕೇಶ್ವರ ಸಲಹೆಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಆಪ್ ಈಗಾಗಲೇ ಇದೆ. ಇದರ ಮೂಲಕ ಜನರಿಗೆ ಅತ್ಯಂತ ತ್ವರಿತವಾಗಿ ಜನರಿಗೆ ಮಾಹಿತಿ ಲಭಿಸುವಂತೆ ಮಾಡುತ್ತೇವೆ ಎಂದು ತಿಳಿಸಿದರು. ವಿಡಿಯೋ ಸಂವಾದದಲ್ಲಿ ವ್ಯಕ್ತವಾದ ಸಲಹೆಗಳನ್ನು ಟಿಪ್ಪಣಿ ಮಾಡಿಕೊಳ್ಳುವ ಮೂಲಕ ಪ್ರಧಾನಿಯವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು.
ಸೆಲೆಬ್ರೆಟಿಗಳ ಸಂದೇಶ ಪರಿಣಾಮಕಾರಿ
ಚಿತ್ರನಟರಾದ ಅಮಿತಾಭ್ ಬಚ್ಚನ್, ರಜನಿಕಾಂತ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಂತಹ ಖ್ಯಾತನಾಮರ ಮಾತನ್ನು ಜನರು ಗಂಭೀರವಾಗಿ ಪರಿಗಣಿಸುತ್ತಾರೆ. ಅವರಿಂದ ಸಣ್ಣ ಸಣ್ಣ ವಿಡಿಯೋ ಸಂದೇಶಗಳನ್ನು ಮುದ್ರಿಸಿ ಪ್ರಸಾರ ಮಾಡಿದರೆ ಕರೊನಾ ತಡೆಗೆ ಪರಿಣಾಮಕಾರಿ ಹೆಜ್ಜೆ ಇಟ್ಟಂತಾಗುತ್ತದೆ ಎಂದು ಪ್ರಧಾನಿ ಅವರಿಗೆ ಆನಂದ ಸಂಕೇಶ್ವರ ಸಲಹೆ ನೀಡಿದರು. ‘ವಿಜಯವಾಣಿ’ ಪತ್ರಿಕೆ ಹಾಗೂ ‘ದಿಗ್ವಿಜಯ 247 ನ್ಯೂಸ್’ ಸುದ್ದಿವಾಹಿನಿಗಳು ಶೇ.80-90 ಸುದ್ದಿಗಳನ್ನು ಕರೊನಾ ಕುರಿತೇ ಪ್ರಸಾರ ಮಾಡುತ್ತಿವೆ. ದೇಶದ ಜನಸಂಖ್ಯೆಯ ಶೇ.65ರಷ್ಟಿರುವ ರೈತರು, ಬಡವರಿಗೆ ಕರೊನಾ ಲಾಕ್​ಡೌನ್​ನಿಂದ ಆಹಾರ ಸಮಸ್ಯೆ ಎದುರಾಗಬಾರದು. ಅವರಿಗೆ ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರಾ ಮಾದರಿಯಲ್ಲಿ ಆಹಾರ ವ್ಯವಸ್ಥೆ ಮಾಡಬೇಕು ಎಂದರು.
ಭಾರತ ಹಳ್ಳಿಗಳ ದೇಶ. ಶೇ. 65 ಜನ ಹಳ್ಳಿಗಳಲ್ಲಿ ವಾಸಿಸುತ್ತಾರೆ. ಹಳ್ಳಿಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಆ ಮೂಲಕ ಕರೊನಾ ವೈರಸ್ ಹಳ್ಳಿಗಳಿಗೆ ಹರಡುವುದನ್ನು ತಡೆಗಟ್ಟಬಹುದು. ದೇಶದಲ್ಲಿ ಔಷಧ ಕ್ಷೇತ್ರ ದೊಡ್ಡದಾಗಿ ಬೆಳೆದಿದೆ, ಔಷಧ ಉತ್ಪಾದನಾ ಕಂಪನಿಗಳ ಮುಖ್ಯಸ್ಥರ ಜತೆ ಮಾತನಾಡಿ, ವೈರಸ್ ನಿಮೂಲನೆಗೆ ಶೀಘ್ರವಾಗಿ ವ್ಯಾಕ್ಸಿನ್ ತಯಾರಿಸಲು ತಿಳಿಸಬೇಕು.
| ರಾಮೋಜಿ ರಾವ್ ಸಂಸ್ಥಾಪಕರು, ಈನಾಡು ಸಮೂಹ
ಕರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ನಾವು ಈಗಾಗಲೇ ವಿಶೇಷ ಪುರವಣಿ ಪ್ರಕಟಿಸುತ್ತಿದ್ದೇವೆ. ಪತ್ರಿಕೆಗಳಿಂದ ವೈರಸ್ ಹರಡುತ್ತದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದರಿಂದ ಪತ್ರಿಕಾ ಸಂಸ್ಥೆಗಳ ಮೇಲೆ ಭಾರಿ ಹೊಡೆತ ಬೀಳುತ್ತಿದೆ. ಪತ್ರಿಕೆಗಳಿಂದ ವೈರಸ್ ಹರಡುವುದಿಲ್ಲ ಎಂಬ ಸಂದೇಶ ನಿಮ್ಮಿಂದ ತಲುಪಬೇಕು.
| ಶೋಭನಾ ಹಿಂದುಸ್ಥಾನ್ ಟೈಮ್ಸ್​
ಕೆಲವರು ಲಾಕ್​ಡೌನ್ ಲಾಭವನ್ನು ಪಡೆಯಲು ಯತ್ನಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸಬೇಕು. ಕರೊನಾ ಪರೀಕ್ಷಾ ಕಿಟ್​ಗಳ ಸಂಖ್ಯೆಯನ್ನು ಹೆಚ್ಚಿಸಬೇಕು.
| ರಿಷಿ ದಾರ್ದಾ ಲೋಕಮತ್
ಕರೊನಾ ವೈರಸ್ ಈಗ ಹಳ್ಳಿಗಳಿಗೆ ಹರಡುತ್ತಿದೆ. ಹಳ್ಳಿಗಳಲ್ಲಿ ಈ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಗ್ರಾಮಗಳಿಗೆ ವಾಟ್ಸ್​ಆಪ್ ಗ್ರೂಪ್ ಮಾಡಿ ಆ ಗ್ರಾಮದ ಮುಖ್ಯಸ್ಥರಿಗೆ ವೈರಸ್ ಬಗ್ಗೆ ಜಾಗೃತಿ, ನೈಜತೆ ಇರುವ ಸುದ್ದಿಗಳನ್ನು ತಲುಪಿಸುವ ಕೆಲಸ ಮಾಡಬೇಕು.
| ವಿಜಯ್ ಜೋಷಿ
ಪತ್ರಿಕೆಗಳಿಂದ ಕರೊನಾ ವೈರಸ್ ಹರಡುತ್ತದೆ ಎಂಬ ವದಂತಿಯಿಂದ ಪತ್ರಿಕೆಗಳ ವಿತರಣೆ ಸವಾಲಾಗಿ ಪರಿಣಮಿಸಿದೆ. ಈ ಬಗ್ಗೆ ನೀವು ಸಂದೇಶ ನೀಡಬೇಕು.
| ಶ್ರೀಂಜಯ್ ಬೋಸ್ ಸಂಗ್ಬಾದ್ ಪ್ರತಿದಿನ್
‘ಕೊರೊನಾ -ಕೋಯಿ ರೋಡ್​ ಪರ್​ ನ ನಿಕಲೆ’ ಎಂದು ವ್ಯಾಖ್ಯಾನಿಸಿದ ಪ್ರಧಾನಿ ಮೋದಿ; ವೈದ್ಯಕೀಯ ಸೌಲಭ್ಯ ಬಲಪಡಿಸಲು 15,000 ಕೋಟಿ ರೂ. ಪ್ಯಾಕೇಜ್​


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 8 =
Remember me
