ಕಳೆದ ಇಪ್ಪತ್ತು ವರ್ಷಗಳಲ್ಲಿ ವಿವಿಧ ತಿರುವುಗಳನ್ನು, ಹಿಂಸೆಯ ಕರಾಳ ಮುಖಗಳನ್ನು ಕಂಡ ಅಫ್ಘಾನಿಸ್ತಾನ ಮತ್ತೆ ತಾಲಿಬಾನ್ ಯುಗಕ್ಕೆ ಮರಳಿತು. ಸೆಪ್ಟೆಂಬರ್ 11ರೊಳಗೆ ಅಮೆರಿಕ ಪಡೆಗಳು ಪೂರ್ಣಪ್ರಮಾಣದಲ್ಲಿ ವಾಪಸ್ ಆಗುವ ಮುನ್ನವೇ ಅಂದರೆ ಜುಲೈ-ಆಗಸ್ಟ್ ತಿಂಗಳಲ್ಲೇ ತಾಲಿಬಾನ್ ಭಯೋತ್ಪಾದಕರು ಆಡಳಿತವನ್ನು ತಮ್ಮ ಕೈಗೆತ್ತಿಕೊಂಡರಲ್ಲದೇ, ಅದೇ ಹಳೆಯ ಸರ್ವಾಧಿಕಾರಿ ಧೋರಣೆ, ಮೂಲಭೂತವಾದಿ ನಿಯಮ ಹೇರಿದರು. ದೇಶ ತೊರೆಯಲು ರಾಜಧಾನಿ ಕಾಬುಲ್ ವಿಮಾನ ನಿಲ್ದಾಣದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಹಲವರು ಪ್ರಾಣ ಕಳೆದುಕೊಂಡರು. ಸರಣಿ ಸ್ಪೋಟಗಳು ಸಂಭವಿಸಿದರೂ, ಜಾಗತಿಕ ಸಮುದಾಯ ಮೂಕಪ್ರೇಕ್ಷಕನಾಗಿ ಈ ವಿಪ್ಲವಕ್ಕೆ ಸಾಕ್ಷಿಯಾಯಿತು. ಅಫ್ಘಾನಿಸ್ತಾನವನ್ನು ನಡುನೀರಿನಲ್ಲಿ ಕೈಬಿಟ್ಟ ಅಮೆರಿಕದ ವೈಫಲ್ಯ ಸ್ಪಷ್ಟವಾಗಿ ಗೋಚರವಾದರೂ, ಅದು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತು. ಮಹಿಳೆಯರಿಗೆ ಕಠಿಣ ನಿಯಮಗಳನ್ನು ತಾಲಿಬಾನಿಗಳು ಹೇರಿದ್ದು, ಅಲ್ಲಿ ಮತ್ತೆ ಪ್ರಜಾಪ್ರಭುತ್ವದ ಅರುಣೋದಯವಾಗುವುದು ಸುಲಭಸಾಧ್ಯವಂತೂ ಅಲ್ಲ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ಈಗ ರಾಜಾರೋಷವಾಗಿ ಅಫ್ಘನ್​ನಲ್ಲಿ ನೆಲೆ ಕಂಡುಕೊಳ್ಳುತ್ತಿದ್ದು, ಭಾರತಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.
ಎರಡನೇ ಅವಧಿಗೆ ಸ್ಪರ್ಧಿಸಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ ಸೋಲನ್ನು ಅರಗಿಸಿಕೊಳ್ಳಲು ಆಗಲಿಲ್ಲ. ಜನವರಿ 20ರಂದು ನೂತನ ಅಧ್ಯಕ್ಷ ಜೋ ಬೈಡೆನ್ ಪ್ರಮಾಣವಚನ ಸಮಾರಂಭಕ್ಕೂ ಹಾಜರಿರದೆ, ಶ್ವೇತಭವನವನ್ನು ಸಿಡಿಮಿಡಿಯಿಂದಲೇ ತೊರೆದರು. ನೂತನ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಆಡಳಿತ ತೀರಾ ಹೊಸತನದಿಂದೇನೂ ಕೂಡಿಲ್ಲ. ಭಾರತವನ್ನು ‘ಆತ್ಮೀಯ ಸ್ನೇಹಿತ’ ಎಂದು ಹೇಳುವ ಅಮೆರಿಕ ಪ್ರಮುಖ ವಿಷಯಗಳಲ್ಲಿ ಮೌನವಹಿಸಿ, ಸ್ನೇಹಿತನ ಜವಾಬ್ದಾರಿ ಮರೆತು ಬಿಡುತ್ತದೆ. ಕರೊನಾ ಸವಾಲನ್ನು ಎದುರಿಸುವಲ್ಲೇ ಬೈಡೆನ್ ಆಡಳಿತ ಹೈರಾಣಾಗಿದೆ. ಅಲ್ಲಿ ಕಾಣಿಸಿಕೊಂಡಿರುವ ‘ಗ್ರೇಟ್ ರೆಸಿಗ್ನೇಶನ್ ವೇವ್’ ಉದ್ಯಮಗಳಿಗೆ ಸಂಕಷ್ಟ ತಂದೊಡ್ಡಿದೆ. ಚೀನಾದೊಂದಿಗೆ ‘ಕಭೀ ದೋಸ್ತಿ, ಕಭೀ ದುಶ್ಮನಿ’ ನೀತಿ ಮುಂದುವರಿಸಿರುವ ಅಮೆರಿಕ, ಕ್ರಮೇಣ ‘ದೊಡ್ಡಣ್ಣ’ನ ವರ್ಚಸ್ಸಂತೂ ಕಳೆದುಕೊಳ್ಳುತ್ತಿದೆ. ಈ ನಡುವೆ ಪ್ಯಾರಿಸ್ ಒಪ್ಪಂದಕ್ಕೆ ಅಮೆರಿಕ ಮತ್ತೆ ಮರಳಿರುವುದು ಮಹತ್ವದ ಬೆಳವಣಿಗೆ.
ದೇಶದಲ್ಲಿ ಭುಗಿಲೆದ್ದ ಭಾರಿ ಪ್ರತಿಭಟನೆಗಳಿಗೆ ತಲೆಕೆಡಿಸಿಕೊಳ್ಳದೆ ವ್ಲಾದಿಮಿರ್ ಪುತಿನ್ ಮತ್ತೊಂದು ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಏರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್​ನಲ್ಲಿ 225 ಸಂಸತ್ ಸ್ಥಾನಗಳಿಗೆ ನಡೆದ ಚುನಾವಣೆಯು 2024 ಅಧ್ಯಕ್ಷೀಯ ಚುನಾವಣೆಗೆ ಅಧ್ಯಕ್ಷ ಪುತಿನ್ ಅವರ ಅಭ್ಯರ್ಥಿತನವನ್ನು ಬಲಪಡಿಸುವ ವೇದಿಕೆಯಂತೆಯೇ ಭಾಸವಾಗಿತ್ತು. ಯುನೈಟೆಡ್ ರಷ್ಯಾ ಪಾರ್ಟಿಗೆ ಮೂರನೇ ಎರಡಂಶದ ಬಹುಮತ ದೊರೆತಿದ್ದು, ಮತ್ತೊಂದು ಅವಧಿಗೆ ಪುತಿನ್ ಸ್ಪರ್ಧಿಸಲಿದ್ದಾರೆ. ಈ ನಡುವೆ, ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಷ್ಯಾದಲ್ಲಿ ಜನವರಿ ತಿಂಗಳಲ್ಲಿ ದೊಡ್ಡ ರ್ಯಾಲಿಗಳು ನಡೆದವು.
ಬಾಂಗ್ಲಾದೇಶದಲ್ಲಿಯೂ ಅಲ್ಪಸಂಖ್ಯಾತರ ವಿರುದ್ಧ ದಾಳಿ, ಹಿಂಸಾಚಾರಗಳು ಕಳವಳ ಮೂಡಿಸಿದವು. ನೌಕಾಲಿ ಎಂಬಲ್ಲಿ ಅಕ್ಟೋಬರ್ 16ರಂದು ಇಸ್ಕಾನ್ ದೇಗುಲದ ಮೇಲೆ 200ಕ್ಕೂ ಹೆಚ್ಚು ಉದ್ರಿಕ್ತರಿದ್ದ ಗುಂಪು ದಾಳಿ ನಡೆಸಿ ಒಬ್ಬ ಭಕ್ತನನ್ನು ಹತ್ಯೆ ಮಾಡಿ, ದೇಗುಲವನ್ನು ಧ್ವಂಸ ಮಾಡಿತು. ಈ ಘಟನೆ ಮಾಸುವ ಮುನ್ನವೇ ಢಾಕಾದಿಂದ 255 ಕಿ.ಮೀ. ದೂರದ ಪೀರ್​ಗಂಜ್ ಉಪಜಿಲ್ಲೆಯ ಗ್ರಾಮದಲ್ಲಿ ಹಿಂದೂಗಳ 66 ಮನೆಗಳನ್ನು ಧ್ವಂಸ ಮಾಡಿ, 20 ಮನೆಗಳಿಗೆ ಬೆಂಕಿ ಹಚ್ಚಲಾಯಿತು. 70 ದೇವಾಲಯ, ಪೂಜಾ ಪೆಂಡಾಲ್​ಗಳು ಧ್ವಂಸಗೊಂಡವು.
ಹಿಂದೂ, ಕ್ರೖೆಸ್ತ, ಸಿಖ್​ರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದಲ್ಲಿ ದಾಳಿಗಳು ನಡೆಯುತ್ತಲೇ ಇವೆ. ಪಂಜಾಬ್ ಪ್ರಾಂತ್ಯದ ರಹಿಮ್ ಯಾರ್ ಖಾನ್ ನಗರದ ಸಮೀಪ ಒಂದೇ ಕುಟುಂಬದ ಐವರು ಹಿಂದೂಗಳನ್ನು ಮಾರ್ಚ್ ತಿಂಗಳಲ್ಲಿ ಬರ್ಬರವಾಗಿ ಹತ್ಯೆಗೈಯಲಾದ ಘಟನೆ ತಲ್ಲಣ ಮೂಡಿಸಿದರೂ, ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಹಿಂದೂ ಹೆಣ್ಣುಮಕ್ಕಳ ಅಪಹರಣ, ಮತಾಂತರ, ಹಿಂದೂ ದೇವಾಲಯಗಳ ಧ್ವಂಸದಂಥ ಕುಕೃತ್ಯಗಳಿಗೂ ಕಡಿವಾಣ ಬಿದ್ದಿಲ್ಲ.
ಬಾಂಗ್ಲಾ ವಿಮೋಚನೆಯ ಸ್ವರ್ಣಮಹೋತ್ಸವ ಮತ್ತು ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮಶತಮಾನೋತ್ಸವ ದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 26-27ರಂದು ಢಾಕಾ ಮತ್ತು ಈಶ್ವರಿಪುರ್​ಗೆ ಭೇಟಿ ನೀಡಿದರು. 2019ರ ನವೆಂಬರ್ ನಂತರ ಮೋದಿಯವರು ಕೈಗೊಂಡ ಮೊದಲ ವಿದೇಶ ಪ್ರವಾಸ ಇದಾಗಿತ್ತು.
ರೋಮ್ಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ಅಕ್ಟೋಬರ್ 29-31ರಂದು ಇಟಲಿ ಪ್ರವಾಸ ಕೈಗೊಂಡರು. ಅ.30ರಂದು ವ್ಯಾಟಿಕನ್ ಸಿಟಿಗೆ ಭೇಟಿ ನೀಡಿದ ಅವರು ಪೋಪ್ ಫ್ರಾನ್ಸಿಸ್​ರನ್ನು ಭೇಟಿಯಾದರು. ಈ ಪ್ರವಾಸದ ಮುಂದುವರಿದ ಭಾಗವಾಗಿ ಬ್ರಿಟನ್ ಗ್ಲಾಸ್ಗೋ ನಗರಕ್ಕೆ ನವೆಂಬರ್ 1ರಿಂದ 3ವರೆಗೆ ಭೇಟಿಕೊಟ್ಟರು. ಇಲ್ಲಿ ಹಮಾಮಾನ ಬದಲಾವಣೆ ಕುರಿತ ಸಮ್ಮೇಳನದಲ್ಲಿ ಭಾಗಿಯಾದರು.
ಸೆಪ್ಟೆಂಬರ್ 22ರಿಂದ 25ರವರೆಗೆ ಅಮೆರಿಕ ಪ್ರವಾಸ ಕೈಗೊಂಡ ಪ್ರಧಾನಿ ಮೋದಿ, ಕಳೆದ ಜನವರಿಯಲ್ಲಿ ಅಧ್ಯಕ್ಷರಾದ ಜೋ ಬೈಡೆನ್​ರನ್ನು ಶ್ವೇತಭವನದಲ್ಲಿ ಮೊದಲ ಬಾರಿಗೆ ಮುಖತಃ ಭೇಟಿಯಾದರು. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜತೆ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಕ್ವಾಡ್ (ಅಮೆರಿಕ, ಭಾರತ, ಜಪಾನ್, ಆಸ್ಪ್ರೇಲಿಯಾ) ರಾಷ್ಟ್ರಗಳ ನಾಯಕರ ಮಧ್ಯೆ ಮೊದಲ ಸಲ ಭೌತಿಕವಾಗಿ ಶೃಂಗಸಭೆ ನಡೆಯಿತು. ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪ್ರಧಾನಿ ಭಾಗಿಯಾದರು.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ದ್ವಿಪಕ್ಷಿಯ ಮಾತುಕತೆಗಾಗಿ ಡಿ.6ರಂದು ಭಾರತಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಭಾರತ-ರಷ್ಯಾ ನಡುವೆ ಮಹತ್ವದ ಭದ್ರತಾ ಒಪ್ಪಂದವೂ ಏರ್ಪಟ್ಟಿತು. ಉಭಯ ದೇಶಗಳ ಮೈತ್ರಿ ಮುಂದುವರಿಸುವ ಕುರಿತು ಪುತಿನ್ ಜತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು. ಭಾರತೀಯ ಸೇನೆಗೆ ಎಕೆ-203 ರೈಫಲ್​ಗಳನ್ನು ರಷ್ಯಾದಿಂದ ಖರೀದಿಸುವ ಒಪ್ಪಂದಕ್ಕೆ ಭಾರತ ಸಹಿಹಾಕಿತು. ಸೇನಾ ಸಹಕಾರವನ್ನು 2031ರ ತನಕ ವಿಸ್ತರಿಸುವುದಾಗಿಯೂ ಉಭಯ ರಾಷ್ಟ್ರಗಳು ಘೋಷಿಸಿದವು.
ಜರ್ಮನಿಯಲ್ಲಿ ಏಂಜೆಲಾ ಮರ್ಕೆಲ್ ಅವರ 16 ವರ್ಷಗಳ ಸುದೀರ್ಘ ಆಡಳಿತಕ್ಕೆ ತೆರೆ ಬಿತ್ತು. ಸೋಷಲ್ ಡೆಮಾಕ್ರಟಿಕ್ ಪಕ್ಷದ ನಾಯಕ ಒಲಾಫ್ ಶೋಲ್ಝ್ (ಮರ್ಕೆಲ್ ಸರ್ಕಾರದಲ್ಲಿ ಉಪ-ಚಾನ್ಸಲರ್ ಆಗಿದ್ದರು) ಜರ್ಮನಿಯ ಹೊಸ ಚಾನ್ಸಲರ್ ಆಗಿ ಡಿ.8ರಂದು ಅಧಿಕಾರ ಸ್ವೀಕರಿಸಿದರು. ಸೆಪ್ಟೆಂಬರ್​ನಲ್ಲಿ ನಡೆದ ಚುನಾವಣೆಗಳಲ್ಲಿ 63 ವರ್ಷದ ಶೋಲ್ಝ್ ಡೆಮಾಕ್ರಾಟ್ ಪಕ್ಷವನ್ನು ಜಯದ ಹಾದಿಯಲ್ಲಿ ಮುನ್ನಡೆಸಿದ್ದರು. ಆದರೆ ಬಹಮತಕ್ಕೆ ಅಗತ್ಯ ಸ್ಥಾನದೊರೆಯದ ಕಾರಣ ಮೈತ್ರಿ ಮಾಡಿಕೊಂಡಿದ್ದಾರೆ.
ಜಪಾನ್ ಪ್ರಧಾನಿಯಾಗಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಅಧ್ಯಕ್ಷ ಮತ್ತು ಮಾಜಿ ವಿದೇಶಾಂಗ ಸಚಿವ ಫ್ಯೂಮಿಯೊ ಕಿಶಿದಾ ಈ ವರ್ಷದ ಸೆಪ್ಟೆಂಬರ್​ನಲ್ಲಿ ಆಯ್ಕೆಯಾಗಿ, ಅಕ್ಟೋಬರ್​ನಲ್ಲಿ ಸಂಸತ್ತಿನಲ್ಲಿ ಬಹುಮತ ಸಾಬೀತುಪಡಿಸಿದರು. ಕೋವಿಡ್-19 ಸಾಂಕ್ರಾಮಿಕ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆಂದು ಸ್ವಪಕ್ಷೀಯರಿಂದಲೇ ವಿರೋಧ ಎದುರಾದ ಕಾರಣ ಪ್ರಧಾನಿ ಯೋಶಿಹಿದಾ ಸುಗಾ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನೂತನ ನಾಯಕನಿಗಾಗಿ ಈ ಚುನಾವಣೆ ನಡೆಯಿತು.
2020ರಲ್ಲಿ ಪೂರ್ವ ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ಘರ್ಷಣೆಯ ನಂತರ ಭಾರತ-ಚೀನಾ ರಾಜ ತಾಂತ್ರಿಕ ಸಂಬಂಧದಲ್ಲಿ ಮಹತ್ವದ ಸಾಧನೆ ಆಗಿಲ್ಲ. ಆದರೆ, ಗಡಿಯಲ್ಲಿ ಜಮಾಯಿಸಿದ್ದ ಉಭಯ ಸೇನೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವಲ್ಲಿ ತುಸು ಪ್ರಗತಿ ಕಂಡುಬಂತು. ಎರಡೂ ದೇಶಗಳ ಸೇನೆಯ ಕಮಾಂಡರ್ ಹಂತದ ಅಧಿಕಾರಿಗಳ ಮಧ್ಯೆ ಫೆಬ್ರವರಿಯಲ್ಲಿ ನಡೆದ ಮಾತುಕತೆ ನಂತರ ಪ್ಯಾಂಗಾಂಗ್ ತ್ಸೋ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಿಂದ ಸೇನೆ ವಾಪಸಾತಿ ಆಗಿತ್ತು. ಆಗಸ್ಟ್ 2ನೇ ವಾರದಲ್ಲಿ ನಡೆದಿದ್ದ 12ನೇ ಸುತ್ತಿನ ಮಾತುಕತೆಯಲ್ಲಿ ಗೋಗ್ರಾದ 17ನೇ ಗಸ್ತು ಪಾಯಿಂಟ್, ಗಲ್ವಾನ್ ಕಣಿವೆಯಿಂದ ಸೇನೆ ವಾಪಸಾತಿಗೆ ಒಪ್ಪಿದವು.
ಬರಹ:ರವೀಂದ್ರ ಎಸ್.ದೇಶಮುಖ್, ಶಶಿಧರ ಗರ್ಗೆಶ್ವರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + fourteen =
Remember me
