| ರಾಜಗುರು ಬಿ.ಎಸ್. ದ್ವಾರಕಾನಾಥಕಾರ್ತಿಕ ಮಾಸ, ಶರದ್ ಋತು, ಶುಕ್ಲ ಪಕ್ಷ ನವೆಂಬರ್ 14ರಂದು ದೀಪಾವಳಿಯ ಆಚರಣೆ ನಡೆಯಲಿದೆ. 2024 ಏಪ್ರಿಲ್ 8ರಂದು ಹೊಸ ಸಂವತ್ಸರ ಕ್ರೋಧಿನಾಮದ ಆಗಮನ ಆಗಲಿದೆ. ದೀಪಾವಳಿಗೆ ಕೆಲ ದಿನಗಳ ಮುನ್ನವೇ ಅಂದರೆ ಅಕ್ಟೋಬರ್ 28ರಂದು ಪಾರ್ಶ್ವ ಚಂದ್ರಗ್ರಹಣ ಸಂಭವಿಸಿದೆ. ಇದರ ಛಾಯೆ 45 ದಿನಗಳವರೆಗೆ ಇರಲಿದೆ. ಈ ಅವಧಿಯಲ್ಲಿ, ಹೊರದೇಶಗಳಲ್ಲಿ ಅಶಾಂತಿಯ ಅಲೆಗಳು ಕಾಣಿಸಿಕೊಳ್ಳಲಿವೆ. ಏಪ್ರಿಲ್​ನಲ್ಲಿ ಸಂವತ್ಸರ ಬದಲಾವಣೆ ಬಳಿಕ ಮತ್ತಷ್ಟು ಬೆಳವಣಿಗೆಗಳು ಸಂಭವಿಸಲಿವೆ.
ಮುಖ್ಯವಾಗಿ, ಅಕ್ಟೋಬರ್ 30ರಂದು ರಾಹು- ಕೇತುಗಳ ಸಂಚಾರ ಬದಲಾಗಿದೆ. ರಾಹು ಮೀನ ರಾಶಿ ಪ್ರವೇಶಿಸಿದ್ದು, ಕೇತು ತುಲಾ ಬಿಟ್ಟು ಕನ್ಯಾ ರಾಶಿ ಪ್ರವೇಶಿಸಿದ್ದಾನೆ. ರಾಹು ಜತೆಗಿದ್ದ ಗುರುವು ಈ ಮೂಲಕ ಸ್ವತಂತ್ರಗೊಂಡಿದ್ದಾನೆ. ಅಲ್ಲದೆ, ಈವರೆಗೆ ಕಾಡುತ್ತಿದ್ದ ಗುರುಚಾಂಡಾಲ ಯೋಗವು ಮುಕ್ತಾಯಗೊಂಡಿದೆ. ಗುರುವಿನ ಬಲ ದೊರೆಯಲಿದ್ದು, ದಿವ್ಯಭಕ್ತಿ, ಶ್ರದ್ಧೆ, ಸತ್ಯಸಂಕಲ್ಪದಿಂದ ಮುಂದುವರಿಯಬೇಕಿದೆ. ಮನುಷ್ಯ ಮಾಡಿದ ಪಾಪಗಳಿಂದ ಕೆಲ ವಿಕಲ್ಪಗಳು ಕಾಡಲಿವೆ. ಆಳುವವರು ದ್ವೇಷಭಾವನೆ ತ್ಯಜಿಸಿ, ಶುದ್ಧ ಮನಸ್ಸಿನಿಂದ ಆಳ್ವಿಕೆ ನಡೆಸಬೇಕು, ಪ್ರಜೆಗಳ ಆಶೋತ್ತರಗಳನ್ನು ಈಡೇರಿಸಬೇಕು.
ಮಿತ್ರಪಕ್ಷಗಳ ನೆರವಿನಿಂದ ಅಧಿಕಾರ:2024ರ ಮೇನಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಎರಡು ಅವಧಿಗಳನ್ನು ಪೂರೈಸಿ, ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಪ್ರಯತ್ನಿಸಲಿದೆ. ಆದರೆ, ಮೂರನೇ ಬಾರಿ ಅಧಿಕಾರಕ್ಕೇರುವುದು ಸುಲಭವಲ್ಲ. ಪ್ರತಿಪಕ್ಷಗಳು ತೀವ್ರ ಸ್ಪರ್ಧೆ ನೀಡಲು ಸಜ್ಜಾಗಿವೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲು ಮಿತ್ರಪಕ್ಷಗಳ ನೆರವು ಬೇಕಾಗುತ್ತದೆ. 2024ರ ಚುನಾವಣೆ ನಂತರ, ಪ್ರಧಾನಿ ಸ್ಥಾನವನ್ನು ಮತ್ತೊಮ್ಮೆ ನರೇಂದ್ರ ಮೋದಿಯವರು ಏರುವ ಸಾಧ್ಯತೆಯಿದ್ದರೂ, ಅದಕ್ಕೆ ಹಲವು ಅಡೆತಡೆಗಳನ್ನು ಅವರು ಎದುರಿಸಬೇಕಾಗುತ್ತದೆ. ಯಾವ ರಾಜ್ಯದಲ್ಲಿಯೂ ಶಾಂತಿ ನೆಲೆಸದೆ, ಪರಸ್ಪರ ದೂಷಣೆಯಲ್ಲಿ ಕಾಲವ್ಯಯ ಮಾಡುತ್ತಾರೆ. ಭ್ರಷ್ಟತನವನ್ನು ತೊಡೆದು ಹಾಕದೆ ಚುನಾವಣೆಗೆ ಅರ್ಥವೇ ಇರುವುದಿಲ್ಲ. ಕೋಟ್ಯಂತರ ರೂಪಾಯಿಯನ್ನು ಚುನಾವಣೆಯಲ್ಲಿ ಹಾಕಿ, ಆ ಹಣವನ್ನು ಗಳಿಸಲು ಭ್ರಷ್ಟಮಾರ್ಗ ಅನುಸರಿಸುವ ಬೇಕಾದಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ.
2024 ಜನವರಿ 15ರಂದು ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಉತ್ತರಾಯಣದ ಅವಧಿಯಲ್ಲೇ ಚುನಾವಣೆ ಪ್ರಕ್ರಿಯೆ ನಡೆಯುತ್ತದೆ. ಜನರ ತೀರ್ಪೆ ರಾಷ್ಟ್ರವನ್ನು ಆಳುವವರಿಗೆ ಅಡಿಪಾಯವಾಗುತ್ತದೆ. ರಾಷ್ಟ್ರವನ್ನು, ರಾಜ್ಯವನ್ನು ಆಳುವವರು ಅಧಿಕಾರ ದುರುಪಯೋಗ ಪಡಿಸಿಕೊಳ್ಳಬಾರದು. ನ್ಯಾಯಾಂಗ, ಆರ್ಥಿಕತೆ ಮತ್ತು ರಕ್ಷಣಾ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಬಾರದು. ವ್ಯಕ್ತಿದ್ವೇಷ ಸಾಧಿಸಬಾರದು. ಶ್ರೀರಾಮನಂತೆ ಹಸನ್ಮುಖ ರಾಜನಾಗಿ ಜನರನ್ನು ಆಕರ್ಷಿಸಬೇಕೆ ವಿನಾ, ಬಲವಂತ ಅಥವಾ ಸುಗ್ರೀವಾಜ್ಞೆಯಿಂದ ಭೀತಿ ಸೃಷ್ಟಿಸಬಾರದು.
ಗುರು ಜನರ ಪಾಪ-ಪುಣ್ಯಗಳನ್ನು ಗಮನಿಸಿ, ತಕ್ಕ ಫಲಗಳನ್ನು ನೀಡುತ್ತಾನೆ. ಹಾಗಾಗಿ, ಕೊಟ್ಟ ಮಾತನ್ನು ಉಳಿಸಬೇಕು. ಇಟ್ಟ ಅನ್ನವನ್ನು ಕಿತ್ತುಕೊಳ್ಳಬಾರದು. ‘ಪ್ರಾಣ್ ಜಾಯೇ ಪರ್ ವಚನ್ ನಾ ಜಾಯೇ’- ರಾಜರು ವಚನವನ್ನು ಕೊಟ್ಟ ಮೇಲೆ ಮುರಿದು ಬೀಳಬಾರದು. ಹೇಳಿದ್ದನ್ನು ಕೊಡಲೇ ಬೇಕು.
ಪಂಚರಾಜ್ಯಗಳಲ್ಲಿ ಏನು ಸ್ಥಿತಿ?:ಪಂಚರಾಜ್ಯಗಳ ಚುನಾವಣೆಗಳ ಪೈಕಿ, ಮೂರು ರಾಜ್ಯಗಳಲ್ಲಿ ವಿರೋಧ ಪಕ್ಷಗಳು ತಮ್ಮ ಬಲವನ್ನು ಪ್ರದರ್ಶಿಸಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಇನ್ನೆರಡು ರಾಜ್ಯಗಳು ಆಳುವವರ ಕೈಸೇರುವ ಸೂಚನೆಯನ್ನು ಗ್ರಹಗಳು ನೀಡುತ್ತಿವೆ. ದಕ್ಷಿಣ ಭಾರತದಲ್ಲಿ ಆಳುವ ಪಕ್ಷವು ವಿಶೇಷವಾದ ಜಯವನ್ನು ಪಡೆಯುವ ಸಾಧ್ಯತೆಗಳು ಕಡಿಮೆ. ಅದನ್ನು ಹೇಗೆ ಭರಿಸಬೇಕು ಎಂಬುದು ಪಕ್ಷವೇ ಯೋಚನೆಯಲ್ಲಿ ಮುಳುಗಬೇಕಾಗುತ್ತದೆ.
ಇತರ ರಾಷ್ಟ್ರಗಳ ಸಹಕಾರ ಸಿಗದು:ರಾಹು-ಕೇತುಗಳ ಸಂಚಾರ ಅಕ್ಟೋಬರ್ 30ರಂದು ಬದಲಾಗಿದ್ದು, ಗುರು ಸ್ವತಂತ್ರವಾಗಿರುವುದರಿಂದ ಮುಂಬರುವ ಸಂವತ್ಸರದಲ್ಲಿ ಸತ್ಯವನ್ನು ಪ್ರತಿಷ್ಠಾಪಿಸಿ ದೇಶ-ವಿದೇಶಗಳಲ್ಲಿ ನಮ್ಮ (ಭಾರತದ) ಖ್ಯಾತಿಯನ್ನು ಹೆಚ್ಚಿಸಿಕೊಳ್ಳಲು ಗಮನ ನೀಡಬೇಕು. ಈಗಾಗಲೇ ಗ್ರಹಗಳ ನಿರ್ಬಂಧತೆಯಿಂದ, ನಮ್ಮ ಪಕ್ಕದ ರಾಷ್ಟ್ರಗಳು ಸಂಕಷ್ಟ ಎದುರಿಸುತ್ತಿವೆ. ಆರ್ಥಿಕವಾಗಿ ತತ್ತರಿಸಿರುವ ಶ್ರೀಲಂಕಾ ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡುತ್ತಿದ್ದೇವೆ. ಬಾಂಗ್ಲಾದೇಶದ ಸ್ಥಿತಿಯೂ ಭಿನ್ನವೇನಿಲ್ಲ. ಪಾಕಿಸ್ತಾನ, ಅಪ್ಘಾನಿಸ್ತಾನ ಹಲವು ಸಂಕಷ್ಟ ಎದುರಿಸುತ್ತಿವೆ. ಇನ್ನು, ಅಮೆರಿಕ ನಾವು ಅವರಿಂದ ಖರೀದಿ ಮಾಡುವವರೆಗೂ (ವಾಣಿಜ್ಯ ಸಂಬಂಧಗಳು) ಭಾರತದೊಂದಿಗೆ ಚೆನ್ನಾಗಿರುತ್ತಾರೆ. ಒಂದು ವೇಳೆ ಖರೀದಿ ನಿಲ್ಲಿಸಿಬಿಟ್ಟರೆ, ಸ್ನೇಹ ವೈರತ್ವಕ್ಕೆ ಬದಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಂತೂ, ಭಾರತಕ್ಕೆ ನೆರೆರಾಷ್ಟ್ರಗಳ ಅಥವಾ ಇತರ ರಾಷ್ಟ್ರಗಳ ಸಹಕಾರ ಸಿಗುವುದಿಲ್ಲ. ಸಮಯವನ್ನು ನೋಡಿ ಅವರು ನಮ್ಮಲ್ಲಿ ದ್ವೇಷವನ್ನು ಉಂಟುಮಾಡಲು ಹಾತೊರೆಯುತ್ತಾರೆ.
ಹಾನಿ ತರಲಿದೆ ಅಕಾಲಿಕ ಮಳೆ:ಗ್ರಹಣದ ಮಿಶ್ರ ಫಲದಿಂದ ಅನೇಕ ರಾಷ್ಟ್ರಗಳು, ಅದರ ಪ್ರಜೆಗಳು ಸುಖದಿಂದ ಇರಲು ಸಾಧ್ಯವಿಲ್ಲ. ಅಮೆರಿಕ, ರಷ್ಯಾ, ಯೂಕ್ರೇನ್, ಅಪ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ- ಇಲ್ಲೆಲ್ಲ ಶಾಂತಿ-ಸುವ್ಯವಸ್ಥೆ ಮತ್ತಷ್ಟು ಹದಗೆಡಲಿದೆ. ಮುಂಬರುವ ದಿನಗಳಲ್ಲಿ ಈ ರಾಷ್ಟ್ರಗಳು ಭಾರತದ ಮೇಲೆ ಅವಲಂಬನೆಯಾಗುವ ಸ್ಥಿತಿ ಸೃಷ್ಟಿಯಾಗಲಿದೆ. ಆರ್ಥಿಕತೆಯಿಂದ ಅಮೆರಿಕ ಬಳಲಿ ಬಳಲಿ ಸುಸ್ತಾಗಿ, ಮಾರ್ಗ ಸಿಕ್ಕರೆ ಭಾರತವನ್ನೇ ಅವಲಂಬಿಸುವ ಕಾಲ ಹತ್ತಿರದಲ್ಲಿದೆ. ಬ್ರಿಟನ್​ನಲ್ಲಿ ಈಗಿನ ಪ್ರಧಾನಿ ರಿಷಿ ಸುನಕ್ ಒಳ್ಳೆಯ ಕೆಲಸ ಮಾಡುವವರಿದ್ದಾರೆ. ಆದರೆ, ಅವರ ಪಕ್ಷದಲ್ಲೇ ವಿರೋಧ ಉಂಟಾಗಿ, ಅವರನ್ನು ಅಧಿಕಾರದಿಂದ ಇಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ.
ಬ್ರಿಟನ್, ಬಾಂಗ್ಲಾದೇಶ, ಚೀನಾ, ದಕ್ಷಿಣ ಅಮೆರಿಕ, ಫ್ರಾನ್ಸ್, ಆಸ್ಟ್ರೇಲಿಯಾ, ಜಪಾನ್, ಜರ್ಮನಿ, ದಕ್ಷಿಣ ಆಫ್ರಿಕಾ- ಈ ರಾಷ್ಟ್ರಗಳಲ್ಲಿ ಜಲಾವೃತವಾಗುವ ಸಮಯ ಹತ್ತಿರವಿದ್ದು, ಅದರಿಂದ ರಕ್ಷಿಸಿಕೊಳ್ಳಲು ಈಗಿನಿಂದಲೇ ಪ್ರಯತ್ನವನ್ನೂ, ಪರ್ಯಾಯ ವ್ಯವಸ್ಥೆಯನ್ನೂ ಮಾಡಿಕೊಳ್ಳಲು ಆರಂಭಿಸಬೇಕು. ವಿಶೇಷವಾಗಿ, ಅಮೆರಿಕದಲ್ಲಿ ಅಧ್ಯಕ್ಷರ ಬದಲಾವಣೆ ಕಾಲ ಬರಲಿದ್ದರೆ, ರಷ್ಯಾದಲ್ಲಿ ಅಸ್ಥಿರತೆ ಮುಂದುವರಿಯಲಿದೆ. ವಿಶ್ವದಲ್ಲಿ ಮಳೆಯು ವಿಫಲವಾಗಿ, ಅಧಿಕ ಬಿಸಿಲ ತಾಪಮಾನ ತನ್ನ ಶಕ್ತಿಯನ್ನು ತೋರಿಸಲಿದೆ. ಇದರಿಂದ ಹಲವು ಕಾಯಿಲೆಗಳು ಉತ್ಪನ್ನವಾಗಿ, ಪ್ರಜೆಗಳಿಗೆ ಕಷ್ಟಕಾಲವೆಂದೇ ಹೇಳಬೇಕು. ಮನುಷ್ಯನು ತನ್ನ ಆಸೆಯನ್ನು ಮೀರಿ, ಜಲಮೂಲಗಳ ದಂಡೆಯಲ್ಲಿ ಆವಾಸಸ್ಥಾನ ನಿರ್ವಿುಸಿಕೊಂಡಿದ್ದಾನೆ. ಇಂಥ ರಾಷ್ಟ್ರಗಳು ಜಲಾವೃತದ ಸ್ಥಿತಿ ನೋಡಬೇಕಾಗುತ್ತದೆ. ಚೀನಾ ದೇಶಕ್ಕೆ ಯಾವೊಂದು ಗುರಿಯಿಲ್ಲದೆ ಸಾಗುವ ಕಾಲ ಬರಲಿದ್ದು, ಆಹಾರಕ್ಕೂ, ಆರ್ಥಿಕತೆಗೂ ಸಂಚಕಾರ ಬರುತ್ತದೆ.
ಪ್ರಧಾನಿಗೆ ಜೀವಭಯ:ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವಭಯ ಇದ್ದು, ಅವರ ರಕ್ಷಣೆಗೆ ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಜಾಗ್ರತೆಯನ್ನು ವಹಿಸಬೇಕಿದೆ. ಪ್ರಜೆಗಳು ಕೂಡ ದೊರೆಯ ರಕ್ಷಣೆಗೆ ಪ್ರಾರ್ಥನೆ ಮಾಡಬೇಕಿದೆ. ಪ್ರಧಾನಿ ಸದೃಢವಾದ ಭಕ್ತಿಯೊಂದಿಗೆ, ತಾವು ನಂಬಿದ ಗುರುಗಳೊಂದಿಗೆ ದೇವಲ ಗಾಣಗಾಪುರದ ಭಗವಾನ್ ದತ್ತಾತ್ರೇಯನ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದರೆ ಜಯದ ಹಾದಿ ಹಿಡಿಯಬಹುದು.
ಮೋದಿಯವರೇ ಅಧಿಕಾರಕ್ಕೆ:ರಾಹು ಮೇಷವನ್ನು ಬಿಟ್ಟಿರುವುದರಿಂದ 2024 ಏಪ್ರಿಲ್ ಸಮಯದಲ್ಲಿ ಈಗಿನ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೆಲವೊಂದು ಸಮಸ್ಯೆಗಳು ಎದುರಾಗುತ್ತವೆ. ಪ್ರಧಾನಿ ಹುದ್ದೆಗೆ ಇನ್ನೂ ಕೆಲವು ವ್ಯಕ್ತಿಗಳ ಹೆಸರು ಮುಂದೆ ಬರಬಹುದು. ಆದರೆ, ರಾಹುವಿನ ಸಂಪರ್ಕ ತೊರೆದ ಗುರುವು ಮೋದಿಯವರಿಗೆ ವೈಯಕ್ತಿಕವಾಗಿ ಯಾವುದೇ ಅಪವಾದ ತರುವುದಿಲ್ಲ. ಹಾಗಾಗಿ, ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಸಾಧ್ಯತೆ ತುಂಬ ಕಡಿಮೆ ಎಂದು ಹೇಳಬಹುದು. ಆದರೆ, ಪ್ರಸಕ್ತ ಆಡಳಿತ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಕಷ್ಟಸಾಧ್ಯವಾಗುತ್ತದೆ. ಅನ್ಯಮಿತ್ರಪಕ್ಷಗಳ ಬೆಂಬಲ ಬೇಕಾಗಿ, ಎಲ್ಲವನ್ನೂ ಒಟ್ಟು ಮಾಡಿದಾಗ, ಸರಳ ಬಹುಮತದೊಂದಿಗೆ ರಾಷ್ಟ್ರವನ್ನು ಕಾಪಾಡಲು ಅನುವಾಗುತ್ತದೆ. ಅಂದರೆ, ಈಗ ಆಳುವವರು ಮಿತ್ರಪಕ್ಷಗಳ ನೆರವಿಲ್ಲದೆ ಸರ್ಕಾರ ರಚಿಸುವುದು ದುಸ್ಸಾಹಸವೇ ಸರಿ.
ದೇಶದ ಚಿಂತನೆ ಮುಖ್ಯ:ರಾಹುವು ಮುಂದೆ ಹೋಗಿರುವುದರಿಂದ ಪ್ರಜೆಗಳೆಲ್ಲ ಆಲಸ್ಯ ಬಿಟ್ಟು, ದೇಶಕ್ಕಾಗಿ ನಾವೇನು ಮಾಡಿದ್ದೇವೆ, ಏನು ಮಾಡಬಹುದು ಎಂಬ ಬಗ್ಗೆ ಚಿಂತನೆ ಮಾಡಿ, ಕಾರ್ಯೋನ್ಮುಖರಾಗಬೇಕು. ಆಗಲೇ ರಾಷ್ಟ್ರವು ಚುರುಕಾಗಲು ಸಾಧ್ಯ. ರಾಹುವು ದೂರವಾಗಿರುವುದರಿಂದ ನೋಟಿನಿಂದ ವೋಟನ್ನು ಖರೀದಿಸುವುದು ಬೇಡ, ಮೌಲ್ಯವನ್ನು ಹಾಳು ಮಾಡಿ, ದರಿದ್ರ ಲಕ್ಷ್ಮೀಯು ನಮ್ಮ ದೇಶವನ್ನು ಆವರಿಸದಿರಲಿ. 2024ರ ಏಪ್ರಿಲ್ ನಂತರ ಜನರಲ್ಲಿ ಕ್ರೋಧ ಹೆಚ್ಚಾಗಿ, ಸತ್ಯ ವಿಚಾರಗಳು ಆಚೆಗೆ ಬರುತ್ತವೆ. ವಿರೋಧಪಕ್ಷಗಳಲ್ಲಿ ಆಂತರಿಕ ಕಲಹ ತಲೆದೋರುತ್ತದೆ.
ಕರ್ನಾಟಕದಲ್ಲಿ 2023ರ ಮೇಯಲ್ಲಿ ಚುನಾವಣೆ ನಡೆದು, ಇದ್ದ ಸರ್ಕಾರ ಹೋಗಿ, ಹೊಸ ಸರ್ಕಾರ ಬಂದಿದೆ. ಗ್ರಹಗಳ ವೈಪರೀತ್ಯದಿಂದ, ಹೋದ ಸರ್ಕಾರದ ಆಡಳಿತಕ್ಕೂ, ಈಗಿನ ಸರ್ಕಾರದ ಆಡಳಿತಕ್ಕೂ ವ್ಯತ್ಯಾಸ ಕಾಣುತ್ತಿಲ್ಲ. ಆಯಾ ಪಕ್ಷದವರು ಟೀಕೆಯಲ್ಲಿ ವ್ಯಸ್ತರಾಗಿ, ಕಾಲಹರಣದಲ್ಲಿ ತೊಡಗಿದ್ದಾರೆ. ಜನರಿಗೆ ಉಪಯೋಗವಿಲ್ಲದ ಕೆಲವೊಂದು ಕಾರ್ಯಕ್ರಮಗಳನ್ನು ಮಾಡಿ, ತಮ್ಮ ಸೋಲನ್ನು ಒಪ್ಪಿಕೊಳ್ಳುವ ಸ್ಥಿತಿಗೆ ಬಂದು ತಲುಪುತ್ತಾರೆ. ಭ್ರಷ್ಟತನ ಮುಂದುವರಿದಿದ್ದು, ಈ ಅಪಕೀರ್ತಿ ಸರ್ಕಾರವನ್ನು ಚಿಂತೆಗೀಡು ಮಾಡಲಿದೆ. ಭ್ರಷ್ಟತೆ ಇಲ್ಲದ ರಾಜ್ಯವನ್ನು ನೀಡಿದರೆ ಮಾತ್ರ ಉಳಿವು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಶಿಸ್ತಿನ ಸಿಪಾಯಿಯಂತೆ ಜನಸೇವೆ ಮಾಡಿ, ಜನರ ವಿಶ್ವಾಸ ಗಳಿಸಬೇಕು. ಸತ್ಯಮಾರ್ಗದಲ್ಲಿ ನಡೆದು, ಸತ್ಯಸಂಕಲ್ಪರಾಗಿ, ಸತ್ಯವನ್ನು ಪ್ರತಿಪಾದಿಸುತ್ತೇವೆ ಎಂದು ಸಂಕಲ್ಪಿಸಿ, ಜನರ ಆಶೋತ್ತರಗಳನ್ನು ಈಡೇರಿಸಬೇಕು. ಮಳೆಯಿಲ್ಲದೆ ಪ್ರಜೆಗಳು, ಪಶುಪಕ್ಷಿಗಳು ತತ್ತರಿಸಬೇಕಾಗುತ್ತದೆ. ಆದರೆ, ಅಕಾಲಿಕ ಮಳೆಯಿಂದಾಗಿ ದಕ್ಷಿಣ ಕರಾವಳಿಯಲ್ಲಿ ನಷ್ಟಕಷ್ಟಗಳು ಸಂಭವಿಸಲಿವೆ. ಹಾಗೂ ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಸಮುದ್ರ ವೈಪರೀತ್ಯದಿಂದ ಜನಕ್ಕೆ ಹಾನಿ, ಸಮುದ್ರದಿಂದ ಕೆಲವು ರೋಗರುಜಿನಗಳು ಬರುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ, ತಮಿಳುನಾಡು ಸರ್ಕಾರವು ಸ್ಥಿರವಾಗಿ ಇರಲು ಶ್ರಮ ಪಡಬೇಕಾಗುತ್ತದೆ.
ಸಿಎಂ ಬದಲಿಲ್ಲ:ಕರ್ನಾಟಕದಲ್ಲಿ ಆಗಾಗ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಚರ್ಚೆ ಮುನ್ನೆಲೆಗೆ ಬರುತ್ತಿದೆ. ಆದರೆ, ಮುಖ್ಯಮಂತ್ರಿ ಬದಲಾವಣೆಯ ಯಾವ ಅಗತ್ಯವೂ ಸದ್ಯದಲ್ಲಿ ಕಾಣುವುದಿಲ್ಲ.
ಹಬ್ಬದ ಸಂದೇಶ:ದೀಪಾವಳಿ ಬಹಳ ದೊಡ್ಡ ಸಂದೇಶವನ್ನೇ ನೀಡುತ್ತದೆ. ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಎಲ್ಲರೂ ಪ್ರೀತಿಯಿಂದ ಇರಬೇಕು ಎಂಬ ಕಾರಣಕ್ಕೆ ಈ ಲೋಕಸೃಷ್ಟಿಯಾಗಿದ್ದು. ಹಿಂಸೆ ಹೆಚ್ಚಾದಾಗಲೆಲ್ಲ ವಿಷ್ಣುವು ಒಂದೊಂದು ಅವತಾರವೆತ್ತಿ, ಅದನ್ನು ಮಟ್ಟ ಹಾಕಿದ್ದಾನೆ. ರಾಕ್ಷಸರನ್ನು ಸಂಹಾರ ಮಾಡಿದ್ದಾನೆ. ಜಗತ್ತು ಕತ್ತಲಲ್ಲಿ ಇದ್ದಾಗಲೆಲ್ಲ ಬೆಳಕು ನೀಡಿದ್ದಾನೆ. ಕತ್ತಲು ಹೋಗಿ ಬೆಳಕು ಬರುವುದೇ ಈ ದೀಪಾವಳಿಯ ಉದ್ದೇಶ. ಕತ್ತಲೆಯನ್ನು ನೀಗುವುದೇ ನರಕಾಸುರನ ಸಂಹಾರದ ಪ್ರತೀಕ.
ಮುಜರಾಯಿ ಇಲಾಖೆಗೆ ಸೇರದ ದೇವಸ್ಥಾನಗಳಿಗೂ ಸರ್ಕಾರದ ವ್ಯವಸ್ಥಾಪನಾ ಸಮಿತಿ?: ಸ್ವಾಮೀಜಿಯ ವಿರೋಧ

ಇಲ್ಲಿ ‘ಯಮದೂತ’ನಿಗೇ ಪೂಜೆ ಮಾಡಿ ದೀಪಾವಳಿ ಹಬ್ಬ ಆಚರಣೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + nine =
Remember me
