|ರಾಘವ ಶರ್ಮ ನಿಡ್ಲೆನವದೆಹಲಿ
ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿ ಈಗ ರಾಷ್ಟ್ರ ರಾಜಧಾನಿಯಲ್ಲೂ ಚರ್ಚೆಯ ಕೇಂದ್ರಬಿಂದುವಾಗಿದೆ. ಮಹಾರಾಷ್ಟ್ರದ ವಿಪಕ್ಷಗಳ ಸಂಸದರು ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಗೃಹ ಸಚಿವ ಅಮಿತ್ ಷಾ ಡಿಸೆಂಬರ್ 14 ಅಥವಾ 15ರಂದು ಸಭೆ ನಡೆಸಲಿದ್ದಾರೆ. ಈ ಬಗ್ಗೆ ಗೃಹ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಕರ್ನಾಟಕದ ಯಾವ ಭಾಗವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲು ಸಾಧ್ಯವಿಲ್ಲ ಎನ್ನುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಮೇಲಾಗಿ, ಸದ್ಯ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿರುವುದರಿಂದ ಈ ವಿಷಯದ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹೇರುವ ಉದ್ದೇಶವನ್ನೂ ಹೊಂದಿಲ್ಲ. ಮಹಾರಾಷ್ಟ್ರ 2004ರಲ್ಲಿ ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ರಾಜ್ಯದ 800 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿರುವ ಜತೆಗೆ ಅಂತಿಮ ತೀರ್ಪು ನೀಡುವವರೆಗೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೊಷಿಸಬೇಕು ಎಂದೂ ವಿನಂತಿಸಿದೆ. ನ್ಯಾ.ಕೆ.ಎಂ. ಜೋಸೆಫ್ ನೇತೃತ್ವದ ನ್ಯಾಯಪೀಠ, ಈ ಅರ್ಜಿಯ ಸಿಂಧುತ್ವದ ಬಗ್ಗೆ ಮಾತ್ರ ನಿರ್ಧರಿಸುವುದರಿಂದ, ಮಹಾರಾಷ್ಟ್ರದ ಅರ್ಜಿ ವಜಾಗೊಳ್ಳುವ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರವಿದೆ. ಇಂಥ ಪರಿಸ್ಥಿತಿಯಲ್ಲಿ ವಿನಾಕಾರಣ ಕೇಂದ್ರ ಸರ್ಕಾರದ ಮುಂದೆ ಹೋಗುವುದು ರಾಜ್ಯಕ್ಕೂ ಬೇಕಿಲ್ಲ. ಬಹುಶಃ ಇದೇ ಕಾರಣಕ್ಕೆ ಮಹಾರಾಷ್ಟ್ರದ ರಾಜಕೀಯ ಪಕ್ಷಗಳು ಕೇಂದ್ರದ ಮೇಲೆ ಒತ್ತಡ ಹಾಕುವ ತಂತ್ರಕ್ಕೆ ಮೊರೆಹೋಗಿವೆ ಎಂದೂ ಹೇಳಲಾಗುತ್ತಿದೆ.
ಗಡಿ ವಿವಾದದಂತಹ ಸೂಕ್ಷ್ಮ ವಿಷಯಗಳಲ್ಲಿ ಕೇಂದ್ರ ಸರ್ಕಾರ ನೇರ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಎರಡೂ ರಾಜ್ಯಗಳ ನಡುವಿನ ಫೆಸಿಲಿಟೇಟರ್ ಆಗಿ ಕೆಲಸ ಮಾಡಬಹುದು. ಹಾಲಿ ಬೆಳಗಾವಿ ಗಡಿ ಬಿಕ್ಕಟ್ಟಿನ ತಾತ್ಕಾಲಿಕ ಶಮನಕ್ಕೋಸ್ಕರ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ, ಗಡಿಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು ನಿರ್ದೇಶನ ನೀಡಬಹುದು. ಬೆಳಗಾವಿ ವಿವಾದ ಸುಪ್ರೀಂಕೋರ್ಟ್ ಅಂಗಳದಲ್ಲಿರುವುದರಿಂದ ಕೇಂದ್ರ ಸರ್ಕಾರ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಕರ್ನಾಟಕ ಮನವಿ ಮಾಡುವ ಸಾಧ್ಯತೆ ಇದೆ. ಗಡಿ ಬಿಕ್ಕಟ್ಟಿನಂತಹ ವಿಷಯಗಳನ್ನು ರಾಜ್ಯಗಳು ಪರಸ್ಪರ ಸಹಕಾರದಿಂದ ಬಗೆಹರಿಸಿಕೊಳ್ಳಬೇಕು ಎನ್ನುವುದು ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯಗಳ ನಿಲುವಾಗಿದೆ. ಆದರೆ, ವಾಸ್ತವದಲ್ಲಿ ಇದು ಜಾರಿಗೆ ಬಂದಿರುವುದು ಕಡಿಮೆ. ಕೆಲ ಈಶಾನ್ಯ ರಾಜ್ಯಗಳ ಗಡಿ ವಿವಾದ ಕೇಂದ್ರದ ಮಧ್ಯಸ್ಥಿಕೆಯಿಂದ ಬಗೆಹರಿದಿದ್ದರೂ, ಭೌಗೋಳಿಕ ಕಾರಣಗಳಿಗಾಗಿ ದೊಡ್ಡ ರಾಜ್ಯಗಳಾದ ಮಹಾರಾಷ್ಟ್ರ-ಕರ್ನಾಟಕ ನಡುವಿನ ಬಿಕ್ಕಟ್ಟು ಸುಲಭದಲ್ಲಿ ಶಮನಗೊಳ್ಳುವಂಥದ್ದಲ್ಲ.
1956ರಲ್ಲಿ ಸಂಸತ್ತು ಫಜಲ್ ಅಲಿ ಆಯೋಗದ ವರದಿ ಆಧಾರದ ಮೇಲೆ ರಾಜ್ಯ ಮರುವಿಂಗಡಣೆ ಕಾಯ್ದೆಯನ್ನು ಜಾರಿ ಮಾಡಿತ್ತು. ಬೆಳಗಾವಿ, ಧಾರವಾಡ, ಬಿಜಾಪುರ, ಉತ್ತರ ಕನ್ನಡ ಜಿಲ್ಲೆಗಳನ್ನು ಬಾಂಬೆ ಸ್ಟೇಟ್​ನಿಂದ ಮೈಸೂರು ರಾಜ್ಯಕ್ಕೆ (1973ರಿಂದ ಕರ್ನಾಟಕ) ವರ್ಗಾವಣೆ ಮಾಡಿತು. ಅಂದರೆ, ಈ ಭಾಗಗಳನ್ನು ಸಂಸತ್ತು ಕರ್ನಾಟಕಕ್ಕೆ ನೀಡಿತು. ಇದನ್ನು ಬದಲಿಸಬೇಕೆಂದರೆ ಸಂಸತ್ತಿನಿಂದ ಮಾತ್ರ ಸಾಧ್ಯ. ಒಂದುವೇಳೆ ನ್ಯಾಯಾಲಯ ಕರ್ನಾಟಕಕ್ಕೆ ಹಂಚಿಕೆ ಮಾಡಿದ್ದ ಭಾಗಗಳು ಅಸಾಂವಿಧಾನಿಕ ಎಂದು ನ್ಯಾಯಾಲಯಗಳಿಗೆ ಅನಿಸಿದರೆ ಮಾತ್ರ ನಿರ್ದಿಷ್ಟ ಭೂಭಾಗಗಳು ವಾಪಸ್ ಹಿಂದಿನ ರಾಜ್ಯಕ್ಕೆ ಹೋಗಬೇಕು ಎಂಬ ತೀರ್ಪು ಬರಬಹುದು. ಆರ್ಟಿಕಲ್ 3ರ ಅಡಿಯಲ್ಲಿ ಗಡಿಯನ್ನು ಬದಲಿಸುವ ಎಲ್ಲಾ ಅಧಿಕಾರ ಸಂಸತ್ತಿಗೆ ಇದೆ. ಆದರೆ, ಕರ್ನಾಟಕಕ್ಕೆ ಮೇಲೆ ಹೇಳಲಾದ ಭೂಭಾಗಗಳನ್ನು ಸೇರಿಸಿದ ಕ್ರಮ ಸಂವಿಧಾನಬದ್ಧವಾಗಿದೆ ಮತ್ತು ಯಾವುದೇ ಬದಲಾವಣೆಗಳ ಅಗತ್ಯವಿಲ್ಲ. ಇದು ಫಜಲ್ ಅಲಿ ಆಯೋಗದ ವರದಿಯನ್ವಯವೇ ಆಗಿದೆ ಮತ್ತು ಮಹಾಜನ್ ಆಯೋಗ ಕೂಡ ಈ ಅಂಶಗಳನ್ನು ಎತ್ತಿಹಿಡಿದಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ. ಹಾಗೆ ನೋಡಿದರೆ, ಗಡಿ ವಿವಾದಗಳನ್ನು ಬಗೆಹರಿಸಿ ತೀರ್ಮಾನ ಮಾಡಿ ತೀರ್ಪು ನೀಡಿರುವ ಹಲವು ಉದಾಹರಣೆಗಳೇನೂ ಸುಪ್ರೀಂಕೋರ್ಟ್​ನಲ್ಲಿಲ್ಲ. ಕೊರಾಪುಟ್ ಜಿಲ್ಲೆಯ ಗ್ರಾಮಗಳ ಕುರಿತು ಒಡಿಶಾ-ಆಂಧ್ರಪ್ರದೇಶದ ನಡುವಿನ ಗಡಿ ವಿವಾದದ ಕುರಿತ ಅರ್ಜಿ ವಜಾಗೊಳಿಸಿದ ಒಂದು ಪ್ರಕರಣದ ಉದಾಹರಣೆಯನ್ನಷ್ಟೇ ಕಾಣಬಹುದು. ಉಳಿದಂತೆ, ಬೇರೆಲ್ಲಾ ಗಡಿ ವಿವಾದದ ಪ್ರಕರಣಗಳು ಈಗಲೂ ನ್ಯಾಯಾಲಯದ ವಿಚಾರಣೆ ಹಂತದಲ್ಲಿವೆ.
ಹೊಸ ವಿಧೇಯಕ ತರುವುದೂ ಅಸಾಧ್ಯ:ಮಹಾರಾಷ್ಟ್ರದ ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿದು ಬೆಳಗಾವಿ ಸೇರಿ ಹತ್ತಾರು ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದರೆ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಈ ಕುರಿತ ಹೊಸ ವಿಧೇಯಕ ಮಂಡಿಸಬೇಕು. ವಾಸ್ತವದಲ್ಲಿ ಅದು ಅಸಾಧ್ಯ. ಏಕೆಂದರೆ, ಕರ್ನಾಟಕ ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂಬ ಮಹಾರಾಷ್ಟ್ರದ ಒತ್ತಾಯವನ್ನೂ ರಾಜ್ಯ ಒಪ್ಪಿಲ್ಲ. ಹೀಗಿರುವಾಗ, ಕೇಂದ್ರ ಏಕಪಕ್ಷೀಯ ತೀರ್ಮಾನ ಕೈಗೊಳ್ಳುವುದೂ ಅಸಾಧ್ಯ.
ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಗಳು (ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ-ಬಿಜೆಪಿ ಮೈತ್ರಿ) ಅಧಿಕಾರದಲ್ಲಿರುವುದರಿಂದ ಉಭಯ ರಾಜ್ಯಗಳ ಸಿಎಂಗಳನ್ನು ದೆಹಲಿಗೆ ಬನ್ನಿ ಎಂದು ಕರೆಯುವುದು ಸುಲಭ. ಕಾಂಗ್ರೆಸ್ ಅಥವಾ ಬೇರೆ ಪಕ್ಷದ ಸರ್ಕಾರಗಳಿದ್ದರೆ ಬಹುಶಃ ಈ ಸಭೆ ಏರ್ಪಡುವುದೇ ಅನುಮಾನ. ಕಾನೂನು-ಸುವ್ಯವಸ್ಥೆ ಪ್ರಶ್ನೆ ಬಂದಾಗ ಕೇಂದ್ರ ಸರ್ಕಾರ ಸಭೆ ನಡೆಸುವುದು ತಪ್ಪೆಂದು ಹೇಳಲಾಗದು. ಆದರೂ, ರಾಜ್ಯದ ಕೆಲ ಸಂಸದರು ಈ ಸಭೆಯ ಔಚಿತ್ಯವನ್ನೇ ಪ್ರಶ್ನೆ ಮಾಡಿದ್ದಾರೆ. ಸುಪ್ರೀಂಕೋರ್ಟ್​ನಲ್ಲಿ ಕೇಸಿರುವಾಗ ಮಹಾರಾಷ್ಟ್ರ-ಕರ್ನಾಟಕ ಸಭೆ ಕರೆಯುವ ಅಗತ್ಯವೇ ಇಲ್ಲ. ಇಂಥದ್ದೇ ಗಡಿ ಸಮಸ್ಯೆ ಗುಜರಾತ್-ಮಧ್ಯಪ್ರದೇಶ, ಆಂಧ್ರ ಪ್ರದೇಶ-ಒಡಿಶಾ, ಹಿಮಾಚಲ ಪ್ರದೇಶ- ಹರ್ಯಾಣ, ಒಡಿಶಾ-ಛತ್ತೀಸ್​ಗಢ, ಪಶ್ಚಿಮ ಬಂಗಾಳ-ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳ ಮಧ್ಯೆಯಿದೆ. ಆ ಎಲ್ಲಾ ರಾಜ್ಯಗಳ ಪ್ರತಿನಿಧಿಗಳನ್ನು ಕರೆಸಿ ಸಭೆ ನಡೆಸುತ್ತಾರಾ? ಮೊದಲು ಕೋರ್ಟಿನಲ್ಲಿ ಏನಾಗುತ್ತದೆ ನೋಡೋಣ. ನಂತರ, ಕೇಂದ್ರ ಸರ್ಕಾರದ ಮಧ್ಯಪ್ರವೇಶದ ಬಗ್ಗೆ ಯೋಚಿಸಬಹುದು ಎಂದು ಬಿಜೆಪಿ ಸಂಸದರೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಸಂದರ್ಭ ಪ್ರತಿಬಾರಿ ಎಂಇಎಸ್ ಸಮಾವೇಶ ಮಾಡಲು ಮುಂದಾಗುತ್ತದೆ. ಈ ಬಾರಿಯೂ ಅವಕಾಶ ನೀಡುವುದಿಲ್ಲ. ಡಿ.14 ಅಥವಾ 15ರಂದು ಕೇಂದ್ರ ಗೃಹಮಂತ್ರಿಗಳು ಎರಡೂ ರಾಜ್ಯದ ಸಿಎಂಗಳ ಸಭೆ ಕರೆದಿದ್ದಾರೆ. ರಾಜ್ಯದ ಸಂಸದರು ಸೋಮವಾರ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಪರಿಸ್ಥಿತಿಯ ವಿವರ ನೀಡಲಿದ್ದಾರೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಈ ಹಂತದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಬೇಕು ಎಂದು ನನಗೆ ಅನಿಸುವುದಿಲ್ಲ. ಬೆಳಗಾವಿ ಗಡಿ ವಿವಾದ ಪ್ರಕರಣ ಸುಪ್ರೀಂ ಕೋರ್ಟ್​ನಲ್ಲಿದ್ದು, ನ್ಯಾಯಾಲಯ ಯೋಗ್ಯ ರೀತಿಯಲ್ಲಿ ತೀರ್ಪು ನೀಡಲಿದೆ ಎಂಬ ವಿಶ್ವಾಸ ನಮ್ಮದು. ಕರ್ನಾಟಕದ ಮಟ್ಟಿಗೆ ಮಹಾಜನ್ ವರದಿಯೇ ಅಂತಿಮ. ಅದನ್ನು ಯಾರೂ ವಿರೋಧಿಸುವಂತಿಲ್ಲ.
|ಪ್ರಲ್ಹಾದ್ ಜೋಶಿಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ
1956ರಲ್ಲಿ ಬಾಂಬೆಯಿಂದ ಕರ್ನಾಟಕಕ್ಕೆ ಈ ಸ್ಥಳಗಳನ್ನು ವರ್ಗಾವಣೆ ಮಾಡುವ ನಿರ್ಧಾರವನ್ನು ಫಜಲ್ ಅಲಿ ಆಯೋಗ ಪ್ರಕಟಿಸಿದ್ದಾಗ, ಅಂದೇ ಬಾಂಬೆ ಅಸೆಂಬ್ಲಿ ತಕರಾರು ತೆಗೆಯಬೇಕಿತ್ತು. ಬಾಂಬೆಯನ್ನು ಕೇಂದ್ರಾಡಳಿತ ಪ್ರದೇಶ ಮಾಡುವ ಉದ್ದೇಶಕ್ಕೆ ಆಕ್ಷೇಪ ತೆಗೆದಿದ್ದ ಬಾಂಬೆ ಅಸೆಂಬ್ಲಿ, ಕರ್ನಾಟಕಕ್ಕೆ ಅದರ ಕೆಲವು ಭೂಭಾಗಳನ್ನು ಸೇರಿಸುವ ಬಗ್ಗೆ ಕಿಂಚಿತ್ತೂ ವಿರೋಧ ವ್ಯಕ್ತಪಡಿಸಿರಲಿಲ್ಲ.
|ಮೋಹನ್ ಕಾತರಕಿಸುಪ್ರೀಂ ಕೋರ್ಟ್ ಹಿರಿಯ ವಕೀಲರು
ಗಡಿ ವಿಚಾರದಲ್ಲಿ ನಮ್ಮ ರಾಜ್ಯದ ನಿಲುವು ನಿಖರವಾಗಿದೆ. ಮಹಾಜನ ವರದಿ ಅಂತಿಮ ಎಂಬುದು ತೀರ್ವನವಾಗಿದೆ. ಅದೇ ನಮ್ಮ ನಿಲುವು ಕೂಡ.
|ನ್ಯಾ.ಶಿವರಾಜ ಪಾಟೀಲ್ರಾಜ್ಯ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ
ಪ್ರಧಾನಿ ನರೇಂದ್ರ ಮೋದಿ ಅವರು ನಾಗ್ಪುರ- ಮುಂಬೈ ಎಕ್ಸ್​ಪ್ರೆಸ್​ವೇ ಉದ್ಘಾಟನೆಗೆ ಬರುತ್ತಿದ್ದಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ. ಈ ಭೇಟಿ ವೇಳೆ ಅವರು ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಬಗ್ಗೆ ನಿಲುವನ್ನು ಸ್ಪಷ್ಟಪಡಿಸಬೇಕು.
|ಉದ್ಧವ್ ಠಾಕ್ರೆಮಾಜಿ ಸಿಎಂ, ಶಿವಸೇನೆ ನಾಯಕ
ಬೆಂಗಳೂರು:ಗಡಿ ವಿವಾದ ಮುಗಿದ ಅಧ್ಯಾಯವಾದರೂ ಮಹಾರಾಷ್ಟ್ರ ಅನಗತ್ಯವಾಗಿ ಕ್ಯಾತೆ ತೆಗೆದಿದ್ದು, ಇದಕ್ಕೆ ಮಹತ್ವ ನೀಡಕೂಡದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮೇಲೆ ಒತ್ತಡ ಹೇರಲು ರಾಜ್ಯ ಸಂಸದರ ನಿಯೋಗ ಸೋಮವಾರ ಅವರನ್ನು ಭೇಟಿಯಾಗಲಿದೆ. ಮಹಾ ತಂಟೆ ಸಮಸ್ಯೆ ತಿರುವು ಪಡೆಯದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆವಹಿಸಿದ್ದು, ರಾಜ್ಯದ ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ಪಡೆಯುವ ಉದ್ದೇಶದಿಂದ ಸರ್ವಪಕ್ಷ ಸಭೆ ಕರೆಯಲು ಯೋಚಿಸಿದ್ದಾರೆ.
ಸಂಸತ್​ನ ಚಳಿಗಾಲದ ಅಧಿವೇಶನವನ್ನು ಬಳಸಿಕೊಂಡು ಗಡಿ ವಿವಾದವಿದೆ ಎಂದು ಬಿಂಬಿಸಲು ಮಹಾರಾಷ್ಟ್ರ ಸಂಸದರು ಪ್ರಯತ್ನಿಸುತ್ತಿದ್ದು, ಅಲ್ಲಿನ ಸಂಸದರ ನಿಯೋಗವು ಅಮಿತ್ ಷಾರನ್ನು ಭೇಟಿಯಾಗಿದೆ. ಇದರ ಬೆನ್ನಲ್ಲೇ ರಾಜ್ಯದ ಸಂಸದರು ಭೇಟಿಗೆ ಕಾಲಾವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಷಾ ಅವರೊಂದಿಗೆ ಸಿಎಂ ಬೊಮ್ಮಾಯಿ ಮಾತನಾಡಿ ನಿಯೋಗದ ಭೇಟಿಗೆ ಒಪ್ಪಿಸಿ, ಸೋಮವಾರ ಗೊತ್ತುಪಡಿಸಿದ್ದಾರೆ. ಸುಪ್ರೀಂ ಕೋರ್ಟ್​ನಲ್ಲಿ ಕಾನೂನು ಹೋರಾಟಕ್ಕೆ ಸರ್ಕಾರ ಮಾಡಿಕೊಂಡಿರುವ ತಯಾರಿ ಕುರಿತು ಸಂಸದರಿಗೆ ಮಾಹಿತಿ ನೀಡಿದ್ದಾರೆ.
ಜಂಟಿ ಸಭೆ:ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಅಮಿತ್ ಷಾ ಅವರು ದೆಹಲಿಯಲ್ಲಿ ಜಂಟಿ ಸಭೆ ಕರೆದು ನನಗೂ ಆಹ್ವಾನಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿಯೂ ಭಾಗವಹಿಸಲಿದ್ದು, ಡಿ.14 ಅಥವಾ 15ರಂದು ನಿಗದಿಯಾಗುವ ಸಾಧ್ಯತೆಗಳಿವೆ’ ಎಂದು ತಿಳಿಸಿದರು. ಜಂಟಿ ಸಭೆಗೆ ಮುನ್ನ ಸರ್ವಪಕ್ಷಗಳ ಸಭೆ ಕರೆಯಲು ಯೋಚಿಸಿರುವೆ. ಈಗಾಗಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜತೆ ಮಾತನಾಡಿದ್ದು, ಶೀಘ್ರವೇ ಸಭೆ ದಿನಾಂಕ ಗೊತ್ತುಪಡಿಸುವೆ ಎಂದರು.
ಬೆಳಗಾವಿ:ಗಡಿ ಭಾಗದ ಮರಾಠಿ ಭಾಷಿಕರಿಗೆ ಕರ್ನಾಟಕ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಮಹಾರಾಷ್ಟ್ರದ ಕೊಲ್ಲಾಪುರ ನಗರದಲ್ಲಿ ಶುಕ್ರವಾರ ಮಹಾವಿಕಾಸ ಅಘಾಡಿ ಸಂಘಟನೆ ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಕೊಲ್ಲಾಪುರ ನಗರದ ಶಾಹು ಮಹಾರಾಜ ಸಮಾಧಿ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಘಾಡಿ ಸಂಘಟನೆಯವರು, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ಛತ್ರಪತಿ ಶಿವಾಜಿ ಮಹಾರಾಜರ ವಿರುದ್ಧ ಬಿಜೆಪಿಯ ಕೆಲ ನಾಯಕರು ಕಾಲಕಾಲಕ್ಕೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆಂದು ಆರೋಪಿಸಿ, ಪ್ರತಿಭಟನೆಗಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಗಡಿ ವಿವಾದ ತಾರಕ್ಕೇರುವ ಸಾಧ್ಯೆತೆಯಿರುವುದರಿಂದಾಗಿ ಕೊಲ್ಲಾಪುರದಲ್ಲಿ 144ನೇ ಕಲಂನನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇತ್ತ ಕರ್ನಾಟಕ ಗಡಿಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬೆಳಗಿನಿಂದಲೇ ಪೊಲೀಸರು ಮಹಾರಾಷ್ಟ್ರ-ಕರ್ನಾಟಕ ಗಡಿ ಪ್ರದೇಶ ಮೇಲೆ ನಿಗಾ ಇಟ್ಟಿದ್ದಾರೆ.
ಬೇಕರಿ ಪ್ರಕರಣದ ಹಿಂದೆ ಸುಪಾರಿ!; ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ಆಗ್ರಹ, ತಪ್ಪಿದರೆ ಮತ್ತೆ ಪ್ರತಿಭಟನೆ ಎಚ್ಚರಿಕೆ

ಇಬ್ಭಾಗವಾಗುತ್ತಾ ಉತ್ತರಕನ್ನಡ ಜಿಲ್ಲೆ?; ಸಚಿವ ಹೆಬ್ಬಾರ್​ ಪ್ರತಿಕ್ರಿಯೆ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − nineteen =
Remember me
