ನವದೆಹಲಿ:ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢದ ಗೆಲುವು ಬಿಜೆಪಿಗೆ ಉತ್ಸಾಹ ತುಂಬಿದ್ದು, ಲೋಕಸಭೆ ಚುನಾವಣೆ ತಯಾರಿಗೆ ಇಂಬು ನೀಡಿದೆ. ಉತ್ತರಪ್ರದೇಶ, ಗುಜರಾತ್, ಹರಿಯಾಣ, ದೆಹಲಿ, ಜಾರ್ಖಂಡ್​ನಲ್ಲಿ ಲೋಕಸಭೆ ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಈ ಮೂರು ರಾಜ್ಯಗಳ ಗೆಲುವು ದೊಡ್ಡಮಟ್ಟದಲ್ಲಿ ಸಹಕಾರಿಯಾಗುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಾರೆ ರಾಜಕೀಯ ಪಂಡಿತರು.
ಗುಜರಾತ್, ಉತ್ತರಪ್ರದೇಶದಲ್ಲಿ ಒಟ್ಟು 106 ಸೀಟುಗಳಿದ್ದು, ಈ ಎರಡು ರಾಜ್ಯಗಳಲ್ಲಿ ಬಿಜೆಪಿ 100ರ ಗಡಿ ದಾಟುವ ಗುರಿ ಹೊಂದಿದೆ. ಮೇಲೆ ಪ್ರಸ್ತಾಪಿಸಲಾದ ಎಲ್ಲ ರಾಜ್ಯಗಳ ಒಟ್ಟು ಸೀಟು 200 ಆಗಲಿದ್ದು, ಚುನಾವಣಾ ಸೋಲುಗಳಿಂದಾಗಿ ಕಾಂಗ್ರೆಸ್ ಸಂಘಟನಾತ್ಮಕವಾಗಿಯೂ ತೀವ್ರ ಹಿನ್ನಡೆ ಅನುಭವಿಸಿರುವುದು ಬಿಜೆಪಿಗೆ ಅನುಕೂಲಕರ. 2019ರ ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢದ 65 ಲೋಕಸಭೆ ಸೀಟುಗಳಲ್ಲಿ ಬಿಜೆಪಿ 62ನ್ನು ಗೆದ್ದುಕೊಂಡಿತ್ತು. ದೆಹಲಿ, ಹರ್ಯಾಣ, ಹಿಮಾಚಲ ಪ್ರದೇಶದಲ್ಲಿ ಎಲ್ಲ ಸೀಟುಗಳನ್ನು ಬಾಚಿಕೊಂಡಿತ್ತು. ಕಳೆದ ಚುನಾವಣೆಯಲ್ಲಿ ತೆಲಂಗಾಣದಲ್ಲಿ 8 ಸೀಟುಗಳನ್ನು ಗೆದ್ದಿದ್ದ ಬಿಜೆಪಿಗೆ ಪಕ್ಷದ ನಾಯಕ ವೆಂಕಟರಮಣ ರೆಡ್ಡಿ ಅವರು ಬಿಆರ್​ಎಸ್ ಮುಖಂಡ ಕೆ.ಚಂದ್ರಶೇಖರ ರಾವ್ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ಕಾಮರೆಡ್ಡಿ ಕ್ಷೇತ್ರದಲ್ಲಿ ಸೋಲಿಸಿರುವುದು ಕಾರ್ಯಕರ್ತರ ನೈತಿಕ ಸ್ಥೆ ೖರ್ಯ ಮತ್ತು ವಿಶ್ವಾಸವನ್ನು ಹೆಚ್ಚಿಸಲಿದೆ.
ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷಗಳಾಗಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ), ರಾಷ್ಟ್ರೀಯ ಜನತಾ ದಳ (ಆರ್​ಜೆಡಿ), ಸಂಯುಕ್ತ ಜನತಾ ದಳ (ಜೆಡಿಯು) ಅಥವಾ ಸಮಾಜವಾದಿಯಂತಹ ಪಕ್ಷಗಳು ಕ್ರಮವಾಗಿ ಪಶ್ಚಿಮ ಬಂಗಾಳ, ಬಿಹಾರ ಅಥವಾ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ಗೆ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಡಲಾರವು. ಹೀಗಾಗಿ, 2024ರ ಚುನಾವಣೆಯಲ್ಲಿ ಕಾಂಗ್ರೆಸ್ ಅನಿವಾರ್ಯವಾಗಿ ಸ್ಪರ್ಧಿಸುವ ಸ್ಥಾನಗಳನ್ನು ಕಡಿಮೆ ಮಾಡಿಕೊಳ್ಳಬೇಕಿದೆ.
ಛತ್ತೀಸ್​ಗಢಕ್ಕೆ ಒಬಿಸಿ ಸಿಎಂ?ಛತ್ತೀಸ್​ಗಢದಲ್ಲಿ ಒಬಿಸಿ ಅಥವಾ ಬುಡಕಟ್ಟು ನಾಯಕನನ್ನು ಹುಡುಕುತ್ತಿರುವ ಬಿಜೆಪಿ, ಮಾಜಿ ಸಿಎಂ ಡಾ.ರಮಣ್ ಸಿಂಗ್ ಅವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಕಡಿಮೆ. ರಮಣ್ ಸಿಂಗ್ ಠಾಕೂರ್ ಸಮುದಾಯದವರು. ರಾಜ್ಯದ ಜನಸಂಖ್ಯೆಯಲ್ಲಿ ಶೇ. 43.5ರಷ್ಟು ಒಬಿಸಿ ಸಮುದಾಯದವರು ಇರುವುದರಿಂದ ಸರ್ಕಾರ ಮುನ್ನಡೆಸಲು ಒಬಿಸಿ ನಾಯಕನನ್ನು ಆಯ್ಕೆ ಮಾಡಲು ಹೈಕಮಾಂಡ್ ಉತ್ಸುಕವಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ರಾಜ್ಯಾಧ್ಯಕ್ಷ ಅರುಣ್ ಸಾವೊ ಮತ್ತು ಬಿಜೆಪಿ ಯುವ ನಾಯಕ ಓಪಿ ಚೌಧರಿ ಹೆಸರನ್ನು ಪಟ್ಟಿ ಮಾಡಲಾಗಿದೆ. ‘ಬಿಜೆಪಿ ಅಧಿಕಾರಕ್ಕೆ ಬಂದರೆ ತಪ್ಪಿತಸ್ಥರ ವಿರುದ್ಧ ಬುಲ್ಡೋಜರ್ ರೀತಿಯಲ್ಲಿ ಕ್ರಮ ಜರುಗಿಸುವೆ’ ಎಂದು ಸಾವೋ ಭರವಸೆ ನೀಡಿದ್ದರು. ಒಂದೊಮ್ಮೆ ಸರ್ಕಾರಿ ಅಧಿಕಾರಿಯಾಗಿದ್ದ ಚೌಧರಿ, ಈಗ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಅಮಿತ್ ಷಾ ಜತೆ ನಿಕಟ ಸಂಪರ್ಕ ಹೊಂದಿರುವ ಚೌಧರಿ 2018ರಿಂದ ಸಿಎಂ ಭೂಪೇಶ್ ಬಘೕಲ್ ವಿರುದ್ಧ ಆಕ್ರಮಣಕಾರಿಯಾಗಿ ಹೋರಾಟ ನಡೆಸುತ್ತ ಬಂದಿದ್ದಾರೆ. ಅಂತಿಮ ವಾಗಿ ಅವರಿಗೆ ಅದೃಷ್ಟ ಖುಲಾಯಿಸಿದರೆ ಅಚ್ಚರಿ ಇಲ್ಲ ಎನ್ನುತ್ತಿವೆ ಮೂಲಗಳು.
ರಾಜಸ್ಥಾನಕ್ಕೆ ರಾಜನೋ ರಾಣಿಯೋ…ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಸರ್ಕಾರ ರಚನೆಗೆ ಸಜ್ಜಾಗುತ್ತಿರುವ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಹಲವರು. ಮಾಜಿ ಸಿಎಂ ವಸುಂಧರಾ ರಾಜೆ ಸಿಂಧಿಯಾ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೂ, ಇನ್ನಿತರ ಪ್ರಮುಖ ಮುಖಂಡರ ಹೆಸರೂ ಕೇಳಿಬರುತ್ತಿದೆ. ಸಿಎಂ ಅಭ್ಯರ್ಥಿ ಘೊಷಣೆ ಮಾಡದೆ ಕುತೂಹಲ ಉಳಿಸಿಕೊಂಡಿದ್ದ ದೆಹಲಿ ವರಿಷ್ಠರ ಲೆಕ್ಕಾಚಾರಗಳೇನು ಎನ್ನುವುದು ಚರ್ಚೆಯ ಕೇಂದ್ರಬಿಂದುವಾಗಿದೆ. ವಸುಂಧರಾ ರಾಜೆ ಜತೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಮೂಲತಃ ಜೈಪುರ ರಾಜಮನೆತನದವರಾಗಿರುವ, ಸಂಸದೆ ದಿಯಾ ಕುಮಾರಿ, ಅಲ್ವಾರ್ ಸಂಸದ ಬಾಬಾ ಬಾಲಕ್​ನಾಥ್, ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್, ಸಂಸದ ಕಿರೋರಿ ಲಾಲ್ ಮೀನಾ, ರಾಜ್ಯ ಬಿಜೆಪಿ ಅಧ್ಯಕ್ಷ ಸಿಪಿ ಜೋಶಿ ಕೂಡ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈ ಪ್ರಮುಖರಲ್ಲಿ ದಿಯಾ ಕುಮಾರಿ 2019ರಲ್ಲಿ ರಾಜ್​ಸಮಂದ್ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ವಿಧಾನಸಭೆ ಚುನಾವಣೆಯಲ್ಲಿ ವಿದ್ಯಾಧರ ನಗರ ಕ್ಷೇತ್ರದಿಂದ ವಿಜಯಿಯಾಗಿದ್ದಾರೆ. ಬಾಬಾ ಬಾಲಕ್​ನಾಥ್ ಅಲ್ವಾರ್ ಕ್ಷೇತ್ರದ ಸಂಸದರಾಗಿದ್ದು, ತಿಜಾರಾ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದಾರೆ. ಕಿರೋಲಿ ಲಾಲ್ ಮೀನಾ ರಾಜ್ಯಸಭೆ ಸದಸ್ಯರಾಗಿದ್ದು, ಸವಾಯ್ ಮಾಧೊಪುರ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೀನಾ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದಾರೆ.
ಶಾಸಕಿಯರ ಸಂಖ್ಯೆ ಹೆಚ್ಚಳತೆಲಂಗಾಣದಲ್ಲಿ ಕಳೆದ ಅವಧಿಯಲ್ಲಿ (2018-2023) ಆರು ಶಾಸಕಿಯರಿದ್ದರು. ಈ ಬಾರಿ ಈ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮಧ್ಯಪ್ರದೇಶದಲ್ಲಿ ಕಳೆದ ಅವಧಿಯಲ್ಲಿ 21 ಶಾಸಕಿಯರಿದ್ದರು. ಈ ಬಾರಿ 27 ಶಾಸಕಿಯರು ವಿಧಾನಸಭೆ ಪ್ರವೇಶಿಸಿದ್ದಾರೆ. ರಾಜಸ್ಥಾನದಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆಯಾಗಿದೆ. ಕಳೆದ ಅವಧಿಯಲ್ಲಿ 24 ಇದ್ದ ಶಾಸಕಿಯರ ಸಂಖ್ಯೆ ಈ ಬಾರಿ 20ಕ್ಕೆ ತಗ್ಗಿದೆ.
90ರಲ್ಲಿ 18 ಶಾಸಕಿಯರು:ಛತ್ತೀಸ್​ಗಢ ಚುನಾವಣಾ ಫಲಿತಾಂಶ ಮಹಿಳಾ ಪ್ರಾತಿನಿಧ್ಯದ ದಾಖಲೆಯನ್ನು ಮತ್ತಷ್ಟು ಉತ್ತಮಗೊಳಿಸಿದೆ. ಈ ರಾಜ್ಯ ಈಗಾಗಲೇ ಅತಿ ಹೆಚ್ಚು ಶಾಸಕಿಯರನ್ನು ಹೊಂದಿದೆ. ಈ ಬಾರಿ 18 ಮಹಿಳೆಯರು ಆಯ್ಕೆಯಾಗಿದ್ದಾರೆ. ಅಂದರೆ, ಸದನದಲ್ಲಿ ಶೇಕಡ 20 ಮಹಿಳಾ ಸದಸ್ಯರು ಇರಲಿದ್ದಾರೆ. ಇದು ದೇಶದ ವಿಧಾನಸಭೆಯೊಂದರಲ್ಲಿ ಇರುವ ಅತ್ಯಧಿಕ ಶೇಕಡವಾರು ಮಹಿಳಾ ಶಾಸಕರ ಸಂಖ್ಯೆ!
ಶಿವರಾಜ್ ಸಿಂಗ್ ಚೌಹಾಣ್​ಗೆ ಪಟ್ಟ?ಬಿಜೆಪಿ ಸಂಸದೀಯ ಮಂಡಳಿ ಅಚ್ಚರಿಯ ನಿರ್ಣಯ ತೆಗೆದುಕೊಳ್ಳದಿದ್ದರೆ ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತೆ ಮುಖ್ಯಮಂತ್ರಿಯಾಗುವುದು ಖಚಿತ. ಆದರೂ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೆಸರೂ ಕೇಳಿಬರುತ್ತಿದೆ. ಗ್ವಾಲಿಯರ್-ಚಂಬಲ್ ಪ್ರದೇಶದಲ್ಲಿ ಬಿಜೆಪಿ ಸಂಖ್ಯೆ ಹೆಚ್ಚಿಸುವಲ್ಲಿ ಸಿಂಧಿಯಾ ಪ್ರಭಾವ ಕೆಲಸ ಮಾಡಿದೆ. 2018ರಲ್ಲಿ ಇಲ್ಲಿನ 26 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಈ ಬಾರಿ 16 ಸ್ಥಾನಕ್ಕಿಳಿದಿದೆ. ಕೇಂದ್ರದ ಜಲಶಕ್ತಿ ಇಲಾಖೆಯ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೆಸರೂ ಚರ್ಚೆಯಲ್ಲಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಡಿ ಶರ್ಮ ಮೇಲ್ವರ್ಗದ ಮತ ಪಕ್ಷದೊಂದಿಗೆ ಉಳಿಸಿಕೊಳ್ಳಲು ಮಹತ್ವದ ಕೊಡುಗೆ ನೀಡಿದ್ದಾರೆ. ಚೌಹಾಣ್ ಬದಲಿಗೆ ಮತ್ತೊಬ್ಬರನ್ನು ಆಯ್ಕೆ ಮಾಡುವುದರಿಂದ ಕಾರ್ಯಕರ್ತರು ಹಾಗೂ ಶಿವರಾಜ್ ಬೆಂಬಲಿಸಿರುವ ಮಹಿಳಾ ಮತದಾರರಿಗೆ ತಪ್ಪುಸಂದೇಶ ರವಾನೆಯಾಗುವ ಆತಂಕವಿದೆ. ಒಂದುವೇಳೆ ಅವರನ್ನು ಬದಲಿಸಿದರೆ, ಮತ್ತೋರ್ವ ಒಬಿಸಿ ಸಮುದಾಯದ ನಾಯಕನನ್ನೇ ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಜಾತಿಗಣತಿ ಚರ್ಚೆಗಳ ಮಧ್ಯೆ ಒಬಿಸಿ ಕಡೆಗಣನೆ ಎಂಬ ಆರೋಪ ಲೋಕಸಭೆಯಲ್ಲಿ ಹಾನಿ ಮಾಡೀತು ಎಂದು ಬಿಜೆಪಿ ಮುಖಂಡರೊಬ್ಬರು ಹೇಳುತ್ತಾರೆ.
ಸಂಘಟನಾತ್ಮಕ ಬದಲಾವಣೆಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯ ಸೋಲನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ಘಟಕಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲು ಚಿಂತನೆ ನಡೆಸಿದೆ. ರಾಜಸ್ಥಾನದಲ್ಲಿ ಹಿನ್ನಡೆ ನಿರೀಕ್ಷಿತವಾಗಿತ್ತಾದರೂ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲಿ ಈ ಬಗೆಯ ಸೋಲನ್ನು ನಿರೀಕ್ಷಿಸಿರಲಿಲ್ಲ ಎಂದಿವೆ ಪಕ್ಷದ ಮೂಲಗಳು. ಮಧ್ಯಪ್ರದೇಶದಲ್ಲಿ ಕಮಲನಾಥ್ ನಾಯಕತ್ವಕ್ಕೆ ಅಪಸ್ವರ ಕೇಳಿಬಂದಿದ್ದು, ಹೊಸ ತಲೆಮಾರಿನ ನಾಯಕರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ‘ದುರಂಹಕಾರ ಮತ್ತು ಅತಿಯಾದ ಆತ್ಮವಿಶ್ವಾಸದಿಂದ ಮಧ್ಯಪ್ರದೇಶದಲ್ಲಿ ಸೋಲು ಅನುಭವಿಸಿದ್ದೇವೆ’ ಎಂದಿದ್ದಾರೆ ಮಧ್ಯಪ್ರದೇಶದಿಂದ ಕಾಂಗ್ರೆಸ್​ನ ರಾಜ್ಯಸಭಾ ಸದಸ್ಯ ರಾಜಮಣಿ ಪಟೇಲ್.
ಜೆಡ್​ಪಿಎಂ ಪಕ್ಷ ಅಧಿಕಾರಕ್ಕೆನವದೆಹಲಿ: ಈಶಾನ್ಯ ಭಾರತದ ಮಿಜೋರಾಂ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ಜೆಡ್​ಪಿಎಂ) ಗೆಲುವು ಸಾಧಿಸಿದೆ. ಒಟ್ಟು 40 ಸ್ಥಾನಗಳಲ್ಲಿ 27 ಸ್ಥಾನಗಳನ್ನು ವಿಪಕ್ಷಗಳ ಮೈತ್ರಿಕೂಟವಾದ ಜೆಡ್​ಪಿಎಂ ಗೆದ್ದು ಅಧಿಕಾರಕ್ಕೇರಲು ಸಿದ್ಧವಾಗಿದೆ. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ ಕೇವಲ 10 ಸ್ಥಾನಗಳಿಗೆ ಕುಸಿದಿದೆ.
ಕಳೆದ ಚುನಾವಣೆಯಲ್ಲಿ ಮಿಜೋ ನ್ಯಾಷನಲ್ ಫ್ರಂಟ್ 27 ಸ್ಥಾನಗಳಲ್ಲಿ ವಿಜಯಿಯಾಗಿತ್ತು. 2018ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮಾತ್ರ ಜಯ ಸಾಧಿಸಿದೆ. ಬಿಜೆಪಿ 2 ಸೀಟುಗಳನ್ನು ಗೆದ್ದುಕೊಂಡಿದೆ. ಒಟ್ಟಿನಲ್ಲಿ ಮಿಜೋರಾಂನಲ್ಲಿ 1989ರಿಂದ ಇದ್ದ ಆಡಳಿತ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ಕೊಡುವ ಸಂಪ್ರದಾಯವನ್ನು ಈ ಬಾರಿ ಮತದಾರರು ಬದಲಾಯಿಸಿದ್ದಾರೆ.
ಹಾಲಿ ಮುಖ್ಯಮಂತ್ರಿ ಝೆೊರಂತಂಗ ಐಜ್ವಾಲ್ ಪೂರ್ವ-1 ಕ್ಷೇತ್ರದಿಂದ ಸೋತಿರುವುದು ಮಹತ್ವದ ಬೆಳವಣಿಗೆ. ಉಪಮುಖ್ಯಮಂತ್ರಿ ತೌನ್ಲುಯಾ ಟುಯಿಚಾಂಗ್ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. 70ರ ದಶಕದಲ್ಲಿ ಗೋವಾದಲ್ಲಿ ವೃತ್ತಿಜೀವನ ಆರಂಭಿಸಿದ್ದ ಜೆಡ್​ಪಿಎಂನ ಲಾಲ್ಡುಹೋಮಾ, ಜೋರಾಂ ಪೀಪಲ್ಸ್ ಮೂವ್​ವೆುಂಟ್ ಫ್ರಂಟ್​ನ ಸ್ಥಾಪಕರು. 70ರ ದಶಕದಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ಭದ್ರತಾ ಉಸ್ತುವಾರಿಯಾಗಿದ್ದ ಅವರು, ನಂತರ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್​ಗೆ ಸೇರ್ಪಡೆಯಾದರು. 1984ರ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್​ನಿಂದ ಸಂಸತ್ ಪ್ರವೇಶಿಸಿದ್ದರು. ಇನ್ನು ಮಿಜೋರಾಂ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ.
ಪಕ್ಷದ ವರಿಷ್ಠರಿಂದ ಸಿಎಂ ಆಯ್ಕೆಹೈದರಾಬಾದ್: ತೆಲಂಗಾಣದ ನೂತನ ಮುಖ್ಯಮಂತ್ರಿ ಆಯ್ಕೆಯ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷರ ತೀರ್ವನಕ್ಕೆ ಬಿಡಲು ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ತೆಲಂಗಾಣದಲ್ಲಿ ಸಿಎಲ್​ಪಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಅವರು ಸಿಎಂ ಆಯ್ಕೆ ತೀರ್ವನವನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಬಿಡುವ ವಿಚಾರವನ್ನು ಪ್ರಸ್ತಾಪಿಸಿದರು. ಇದಕ್ಕೆ ಎಲ್ಲ ಶಾಸಕರು ಒಮ್ಮತದಿಂದ ಒಪ್ಪಿದರು. ಅಲ್ಲದೆ, ಎಲ್ಲ 64 ಶಾಸಕರ ಜೊತೆಗೆ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದರು.
ಡಿಕೆಶಿ ದೆಹಲಿಗೆ:ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಣಿಕ್ ರಾವ್ ಠಾಕೂರ್, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸೋಮವಾರ ರಾತ್ರಿ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು. ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ, ತೆಲಂಗಾಣ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಹಾಗೂ ಶಾಸಕರ ಜತೆಗಿನ ಪ್ರತ್ಯೇಕ ಮಾತುಕತೆ ಬಗ್ಗೆ ವಿವರಗಳನ್ನು ಸಲ್ಲಿಸಲಿದ್ದಾರೆ.
ತೆಲಂಗಾಣಕ್ಕೆ ಯಾರು ಸಿಎಂ?ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್​ಎಸ್ ಸರ್ಕಾರದ 10 ವರ್ಷಗಳ ಆಡಳಿತವನ್ನು ಕೊನೆಗೊಳಿಸಿ ಅಧಿಕಾರದ ಗದ್ದುಗೆಯೇರಿರುವ ಕಾಂಗ್ರೆಸ್​ನಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ, ಶಾಸಕಾಂಗ ಪಕ್ಷದ ನಾಯಕ ಭಟ್ಟಿ ವಿಕ್ರಮಾರ್ಕ ಮಲ್ಲು ಮತ್ತು 2021ರ ತನಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಉತ್ತಮ್ ಕುಮಾರ್ ರೆಡ್ಡಿ ಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಪಕ್ಷ ರೇವಂತ್ ರೆಡ್ಡಿ ನೇತೃತ್ವದಲ್ಲಿ ಚುನಾವಣೆಗೆ ಎದುರಿಸಿ ಗೆದ್ದಿರುವುದರಿಂದ ರೇವಂತ್ ಮುಖ್ಯಮಂತ್ರಿಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಭಟ್ಟಿ ವಿಕ್ರಮಾರ್ಕ ಮಲ್ಲು ಚುನಾವಣೆಗೆ ಮುನ್ನ ರಾಜ್ಯಾದ್ಯಂತ 1,400 ಕಿ.ಮೀ. ಪಾದಯಾತ್ರೆ ನಡೆಸಿ ಜನರನ್ನು ಪಕ್ಷದತ್ತ ಆಕರ್ಷಿಸಿದ್ದರು. ಉತ್ತಮ್ ಕುಮಾರ್ ರೆಡ್ಡಿ ಜುಲೈ, 2021ರವರೆಗೆ ಅಧ್ಯಕ್ಷರಾಗಿದ್ದರು. ನಂತರ ರೇವಂತ್ ರೆಡ್ಡಿ ಈ ಸ್ಥಾನಕ್ಕೆ ಬಂದರು. ಆದರೆ ಪಕ್ಷದ ಕಾರ್ಯಕರ್ತರಲ್ಲಿ ಉತ್ತಮ್ ಕುಮಾರ್ ಈಗಲೂ ಜನಪ್ರಿಯರಾಗಿದ್ದು, ಸಿಎಂ ಸ್ಥಾನಕ್ಕಾಗಿ ಬಲವಾಗಿ ಪ್ರತಿಪಾದಿಸುತ್ತಿದ್ದಾರೆ.
ಇನ್ನೂ ಅಧಿಕೃತವಾಗದ ತೆಲಂಗಾಣ ಸಿಎಂ ಹೆಸರು! ಮುಂಚೂಣಿಯಲ್ಲಿರುವ ರೇವಂತ್​ ರೆಡ್ಡಿಗೆ ಕಾದಿದೆಯಾ ಆಘಾತ?

ನಾನ್​ವೆಜ್​ ಹೋಟೆಲ್​ಗಳನ್ನು ಮುಚ್ಚಿ! ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ BJP ಶಾಸಕರಿಂದ ಖಡಕ್​ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
