| ರಾಘವ ಶರ್ಮ ನಿಡ್ಲೆ, ನವದೆಹಲಿ
ದಿಲ್ಲಿ ಗದ್ದುಗೆ ಏರಬೇಕೆಂದರೆ ಉತ್ತರ ಪ್ರದೇಶದ ಹಾದಿಯನ್ನು ಯಶಸ್ವಿಯಾಗಿ ದಾಟಿ ಬರಬೇಕು ಎಂಬ ಮಾತಿದೆ. 2014 ಮತ್ತು 2019ರಲ್ಲಿ ಈ ರಾಜ್ಯದಲ್ಲಿ 60ಕ್ಕಿಂತಲೂ ಹೆಚ್ಚು ಸೀಟುಗಳನ್ನು ಗೆದ್ದು, ಕೇಂದ್ರದಲ್ಲಿ ಅಭೂತಪೂರ್ವ ರೀತಿಯಲ್ಲಿ ಅಧಿಕಾರಕ್ಕೇರಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ, ಈ ಬಾರಿ ಉತ್ತರ ಪ್ರದೇಶವೇ ಬಹುದೊಡ್ಡ ಹಾನಿ ಮಾಡಿದೆ.
ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ಸಾವಿರಾರು ಕೋಟಿ ಹಣ ಹೂಡಿಕೆ ಮಾಡಿ, ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡ ಬಳಿಕವೂ ಲೋಕಸಭೆ ಚುನಾವಣೆಯಲ್ಲಿ ಇಂಡಿ ಮೈತ್ರಿಕೂಟಕ್ಕಿಂತಲೂ (43) ಕಡಿಮೆ ಸೀಟುಗಳು (33) ಬಂದಿರುವುದು ಏಕೆ ಎನ್ನುವುದು ಇನ್ನೂ ಅನೇಕರಿಗೆ ಅರ್ಥವಾಗುತ್ತಿಲ್ಲ. ಉತ್ತರ ಪ್ರದೇಶದ ಹಿನ್ನಡೆ ಪಿಎಂ ಮೋದಿ, ಗೃಹ ಸಚಿವ ಅಮಿತ್ ಷಾ ಸೇರಿ ಅನೇಕರಲ್ಲಿ ಭಾರಿ ಅಸಮಾಧಾನ ಉಂಟುಮಾಡಿದೆ ಎಂದು ಹೇಳಲಾಗುತ್ತಿದೆ.
ಉತ್ತರ ಪ್ರದೇಶದ ಫಲಿತಾಂಶ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ರಾಜ್ಯದಲ್ಲಿ ಬ್ರಾ್ಯಂಡ್ ಮೋದಿ ಮತ್ತು ಬ್ರಾ್ಯಂಡ್ ಯೋಗಿ ಕಡಿಮೆಯಾಗಿದೆಯೇ? ಅಖಿಲೇಶ್ ಯಾದವ್ ನೇತೃತ್ವದಲ್ಲಿ ಸಮಾಜವಾದಿ ಪಕ್ಷ ಸಂಘಟನೆ ಬಲಗೊಂಡಿದೆಯೇ? ಉತ್ತರ ಪ್ರದೇಶದ ಮತದಾರರ ಬಗ್ಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರಲ್ಲಿ ಅತಿಯಾದ ಆತ್ಮವಿಶ್ವಾಸವಿತ್ತೇ? ಕೇಂದ್ರ ನಾಯಕತ್ವ ಮತ್ತು ರಾಜ್ಯ ನಾಯಕತ್ವ ಮಧ್ಯೆ ಸಮನ್ವಯದ ಕೊರತೆ ಇತ್ತೇ…ಹೀಗೆ ಹಲವು ಆಯಾಮಗಳಲ್ಲಿ ಚರ್ಚೆಗಳು ನಡೆಯುತ್ತಿವೆ.
2017ರಲ್ಲಿ ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡುವ ಅಚ್ಚರಿಯ ತೀರ್ಮಾನ ಕೈಗೊಂಡ ಬಳಿಕ ಬಿಜೆಪಿ ರಾಜ್ಯದಲ್ಲಿ ಹಿಂತಿರುಗಿ ನೋಡಿಲ್ಲ. ಮೋದಿ-ಯೋಗಿ ಜೋಡಿ ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಧಾರ್ವಿುಕ ಶ್ರದ್ಧಾಕೇಂದ್ರಗಳ ಪುನರುತ್ಥಾನ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳ ಮೇಲ್ದರ್ಜೆಗೇರಿಸುವಿಕೆ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಪರ ಕ್ರಮಗಳನ್ನು ಕೈಗೊಂಡಿತ್ತು.
ಯೋಗಿ ಆಡಳಿತ ಶುರುವಾದಲ್ಲಿಂದ ರಾಜ್ಯದ ಹಿಂದುತ್ವ ರಾಜಕಾರಣ ಹೊಸ ಎತ್ತರಕ್ಕೆ ಏರಿದ್ದಲ್ಲದೆ, ಕ್ರಿಮಿನಲ್, ಮಾಫಿಯಾ ಡಾನ್​ಗಳನ್ನು ಹತ್ತಿಕ್ಕುವ, ತುಷ್ಟೀಕರಣ ರಾಜಕಾರಣ ಬದಿಗೆ ಸರಿಸುವ, ಅಭಿವೃದ್ಧಿಗೆ ಹೊಸ ವೇಗ ನೀಡುವ ಕೆಲಸ ನಡೆಯುತ್ತಲೇ ಬಂದಿದೆ. ಹೀಗಿದ್ದರೂ, ಫಲಿತಾಂಶ ಬಿಜೆಪಿ ಲೆಕ್ಕಾಚಾರಗಳನ್ನೇ ತಲೆಕೆಳಗೆ ಮಾಡಿದೆ.
ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆಗೆ ಸಂಬಂಧಿಸಿ ಯೋಗಿ ಅಭಿಪ್ರಾಯಗಳಿಗೆ ದಿಲ್ಲಿ ವರಿಷ್ಠರು ಮಾನ್ಯತೆ ನೀಡಲಿಲ್ಲ. ಸುಮಾರು 35 ಅಭ್ಯರ್ಥಿಗಳ ಬದಲಾವಣೆ ಬಗ್ಗೆ ಯೋಗಿ ಶಿಫಾರಸು ಮಾಡಿದ್ದರೂ, ಅದನ್ನು ವರಿಷ್ಠರು ಒಪ್ಪದೆ, ಬಹುಪಾಲು ಹಾಲಿ ಸಂಸದರಿಗೇ ಟಿಕೆಟ್ ನೀಡಿದರು ಎಂದು ಹೇಳಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ, ಹಲವು ವಿಚಾರಗಳಲ್ಲಿ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನ ಮೊದಲಿನಿಂದಲೂ ಯೋಗಿ ಬೆಂಬಲಿಗರಲ್ಲಿ ಇದೆ. ಕೆಲ ನಿರ್ದಿಷ್ಟ ಸಂತರ ವರ್ಗವೂ ಈ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ಬಗ್ಗೆ ಅತೃಪ್ತಿ ಹೊಂದಿದೆ.
ಮುಂದಿನ ವಿಧಾನಸಭೆ ಚುನಾವಣೆಗಳಿಗೆ ಇನ್ನೂ ಎರಡೂವರೆ ವರ್ಷ ಬಾಕಿಯಿದ್ದರೂ, ಯೋಗಿ ಆದಿತ್ಯನಾಥ ಕಾರ್ಯವೈಖರಿಯನ್ನು ದಿಲ್ಲಿ ವರಿಷ್ಠರು ಸೂಕ್ಷ್ಮವಾಗಿ ಗಮನಿಸಲಿದ್ದಾರೆ. ಹಾಲಿ ಲೋಕಸಭೆ ಚುನಾವಣೆಯನ್ನು ಮೋದಿ ನಾಯಕತ್ವದಲ್ಲಿ ಎದುರಿಸಿದ್ದರಿಂದ, ಯೋಗಿ ಅವರನ್ನು ಸ್ಟಾರ್ ಪ್ರಚಾರಕರಾಗಿ ಬಳಸಿಕೊಳ್ಳಲಾಗಿತ್ತು. ಒಟ್ಟು 169 ಸಾರ್ವಜನಿಕ ಸಭೆ, 13 ರೋಡ್​ಶೋಗಳನ್ನು ಯೋಗಿ ನಡೆಸಿದ್ದರು. ಗೋರಖ್​ಪುರ ಪ್ರಾಂತ್ಯದ ವ್ಯಾಪ್ತಿಯಲ್ಲಿರುವ ಗೋರಖ್​ಪುರ, ಮಹಾರಾಜ್​ಗಂಜ್, ದೇವರಿಯಾ, ಖುಷಿನಗರ, ಬನ್ಸ್​ಗಾಂವ್ ಸೇರಿ ಎಲ್ಲ 5 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಖುದ್ದು ಯೋಗಿಯವರೇ ಈ ಕ್ಷೇತ್ರಗಳ ಮೇಲೆ ನಿಗಾ ವಹಿಸಿದ್ದರು. ಸಮಾಜವಾದಿ ಪಕ್ಷ 2022ರ ವಿಧಾನಸಭೆ ಚುನಾವಣೆಯಲ್ಲಿ 2017ಕ್ಕಿಂತ ಉತ್ತಮ, ಸುಧಾರಿತ ನಿರ್ವಹಣೆ ತೋರಿದ್ದರೂ, ಬಹುಮತದೊಂದಿಗೆ ಆನಾಯಾಸವಾಗಿ ಬಿಜೆಪಿಗೆ ಬಹುಮತ ಪ್ರಾಪ್ತಿಯಾಗಿತ್ತು. ಯೋಗಿ ಆದಿತ್ಯನಾಥ ಜನಪ್ರಿಯತೆ ಅಲೆಗೆ ಜನ ತಲೆಬಾಗಿದ್ದರು. ಆದರೆ, ಹಾಲಿ ಲೋಕಸಭೆ ಚುನಾವಣೆಯಲ್ಲಿ ಯೋಗಿ ಅವರ ಪಾತ್ರವನ್ನು ಸೀಮಿತಗೊಳಿಸಿದ್ದರಿಂದ, ಅದು ಪಕ್ಷದ ನಿರ್ವಹಣೆ ಮೇಲೆ ಪರಿಣಾಮ ಬೀರಿರಬಹುದು ಎಂದೂ ಹೇಳಲಾಗುತ್ತಿದೆ. 62 ಹಾಲಿ ಸಂಸದರಲ್ಲಿ ಹಲವರು ಕ್ಷೇತ್ರದಲ್ಲಿ ವಿರೋಧಿ ಅಲೆ ಎದುರಿಸುತ್ತಿದ್ದರೂ, 55 ಮಂದಿ ಸಂಸದರಿಗೆ ಟಿಕೆಟ್ ನೀಡಲು ಹೈಕಮಾಂಡ್ ತೀರ್ವನಿಸಿತ್ತು. ಅಭ್ಯರ್ಥಿಗಳ ಬದಲಾವಣೆಗೆ ಯೋಗಿ ಶಿಫಾರಸು ಮಾಡಿದ್ದನ್ನು ಹೈಕಮಾಂಡ್ ಒಪ್ಪಿರಲಿಲ್ಲ ಎಂಬ ಮಾತುಗಳಿವೆ. ‘ಸಮಾಜವಾದಿ-ಕಾಂಗ್ರೆಸ್ ಗೆಲುವಿಗಾಗಿ ಪರಿಶ್ರಮ ಹಾಕಿದೆ. ಆದರೆ, ನಮ್ಮ ಆಂತರಿಕ ಸಂಘರ್ಷಗಳನ್ನೂ ತಳ್ಳಿಹಾಕಲಾಗದು’ ಎನ್ನುವುದು ಬಿಜೆಪಿ ಮುಖಂಡರೊಬ್ಬರ ಮಾತು.
ಉ.ಪ್ರ.ದಲ್ಲಿ ಕನಿಷ್ಠ 50 ಸೀಟು ಬರುತ್ತಿದ್ದರೂ, ಬಿಜೆಪಿ ಸಂಖ್ಯಾಬಲ 255ರ ಗಡಿ ದಾಟುತ್ತಿತ್ತು ಮತ್ತು ಟಿಡಿಪಿ ಮತ್ತು ಜೆಡಿಯು ಮುಂದೆ ಮಂಡಿಯೂರುವ ಸ್ಥಿತಿಯೂ ಬರುತ್ತಿರಲಿಲ್ಲ. ಎನ್​ಡಿಎಗೆ ಸ್ಪಷ್ಟ ಜನಾದೇಶವಿದ್ದರೂ, ಭವಿಷ್ಯದ ಕುರಿತ ಅಸ್ಪಷ್ಟತೆಯಿಂದಾಗಿ, ಮುಂದಿನ 5 ವರ್ಷಗಳುದ್ದಕ್ಕೂ ಈ 2 ಪಕ್ಷಗಳ ಆಣತಿಯಂತೆಯೇ ಕೆಲಸ ಮಾಡಬೇಕಾದ ಅನಿವಾರ್ಯತೆಯಲ್ಲಿ ಬಿಜೆಪಿ ನಾಯಕತ್ವ ಸಿಲುಕಿದೆ.

ಅಖಿಲೇಶ್ ತಂತ್ರಗಾರಿಕೆ: ಕಳೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಮೈತ್ರಿ ಮೂಲಕ ಸ್ಪರ್ಧಿಸಿದ್ದವು. ಈ ಬಾರಿ ಕಾಂಗ್ರೆಸ್ ಜತೆಗೂಡಿದ ಎಸ್​ಪಿ ನಾಯಕ ಅಖಿಲೇಶ್ ಯಾದವ್, ಮುಸ್ಲಿಂ-ಯಾದವ್ (ಎಂ-ವೈ ಕಾಂಬಿನೇಷನ್) ಮತಬ್ಯಾಂಕ್ ಹೊರತಾಗಿ ಯೋಚಿಸಿದ್ದಲ್ಲದೆ, ಟಿಕೆಟ್ ಹಂಚಿಕೆಯಲ್ಲೂ ಯಾದವೇತರ ಒಬಿಸಿ ವರ್ಗಕ್ಕೆ ಆದ್ಯತೆ ನೀಡಿ ಅಚ್ಚರಿ ಮೂಡಿಸಿದರು. ಈ ಬಾರಿ ಕೇವಲ 5 ಯಾದವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದ ಅಖಿಲೇಶ್, 27 ಯಾದವೇತರ ಒಬಿಸಿ, ನಾಲ್ವರು ಬ್ರಾಹ್ಮಣರು, 2 ಠಾಕೂರ್, 2 ವೈಶ್ಯ, 1 ಖತ್ರಿ ಸೇರಿ 11 ಮೇಲ್ವರ್ಗ, 4 ಮುಸ್ಲಿಮ್ 15 ಮೀಸಲು ಕ್ಷೇತ್ರಗಳಲ್ಲಿ ದಲಿತರಿಗೆ ಟಿಕೆಟ್ ನೀಡಿದ್ದರು. ಉತ್ತರ ಪ್ರದೇಶದಲ್ಲಿ ಎಸ್​ಪಿ ಬೆಂಬಲಿಸುವ ಯಾದವರಿಗೂ ಮತ್ತು ಹಿಂದುಳಿದ ವರ್ಗಕ್ಕೂ ಸಂಘರ್ಷಮಯ ಇತಿಹಾಸವಿದೆ. ಇದೇ ಕಾರಣಕ್ಕೆ ಹಿಂದುಳಿದ, ದಲಿತರು ಬಿಎಸ್​ಪಿ ಹಾಗೂ ನಂತರದಲ್ಲಿ ಬಿಜೆಪಿ ಜತೆ ಗುರುತಿಸಿಕೊಂಡಿದ್ದರು. ಆದರೆ, ಈ ಬಾರಿ ಅಖಿಲೇಶ್ ಮೇಲಿನ ಹೊಸ ಭರವಸೆ, ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬ ರಾಜಕೀಯ ನಿರೂಪಣೆ, ಮೀಸಲಾತಿ ಮಿತಿ ಏರಿಸುವ ಭರವಸೆ ಹಿಂದುಳಿದ ವರ್ಗಗಳಲ್ಲಿ ಹೊಸ ಆಶಾಭಾವ ಸೃಷ್ಟಿಸಿತ್ತು. ಮೇಲಾಗಿ, ರಾಹುಲ್ ಗಾಂಧಿ ಕೂಡ ತಮ್ಮೆಲ್ಲ ಪ್ರಚಾರಗಳಲ್ಲಿ ಬಡ ಕುಟುಂಬದ ಮಹಿಳೆಯರಿಗೆ ವಾರ್ಷಿಕವಾಗಿ 1 ಲಕ್ಷ ರೂ. ನೆರವು ನೀಡುತ್ತೇವೆ ಎಂದು ಘೊಷಿಸಿದ್ದು, ಉತ್ತರ ಪ್ರದೇಶದ ಬಡವರ್ಗವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಡೀ ದೇಶದಲ್ಲಿ ಸಮಾಜವಾದಿ ಪಕ್ಷ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಕಳೆದ ಚುನಾವಣೆಯಲ್ಲಿ ಸಮಾಜವಾದಿ 80ರಲ್ಲಿ 37 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, 10 ಯಾದವರಿಗೆ ಟಿಕೆಟ್ ನೀಡಿತ್ತು. ಕೇವಲ 5 ಸೀಟು ಎಸ್​ಪಿ ಗೆದ್ದರೆ, ಬಿಎಸ್​ಪಿ 10 ಸೀಟು ಗೆದ್ದಿತ್ತು. 2014ರಲ್ಲಿ 78 ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಸಮಾಜವಾದಿ ಪಕ್ಷ, 12ರಲ್ಲಿ ಯಾದವರಿಗೆ ಟಿಕೆಟ್ ನೀಡಿತ್ತು.
ಸಂವಿಧಾನ ಬದಲಾವಣೆಯ ಪ್ರಚಾರ:ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ, ಮೀಸಲಾತಿಗಳನ್ನು ಕೊನೆಗೊಳಿಸುತ್ತಾರೆ, ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆ ಎಂಬ ಇಂಡಿ ಮೈತ್ರಿಕೂಟದ ನಾಯಕರ ರಾಜಕೀಯ ನಿರೂಪಣೆಗಳು ಉತ್ತರ ಪ್ರದೇಶದ ಕೆಳ ಮಧ್ಯಮ, ಬಡ, ಹಿಂದುಳಿದ ವರ್ಗಗಳಲ್ಲಿ ಬಿಜೆಪಿ ಬಗ್ಗೆ ಸಂಶಯಗಳನ್ನು ಮೂಡಿಸಿತ್ತು ಮತ್ತು ಅದು ಫಲಿತಾಂಶದಲ್ಲೂ ಪ್ರಕಟಗೊಂಡಂತಿದೆ. ಗ್ರಾಮೀಣ ಭಾಗಗಳಲ್ಲಿ ಬಿಜೆಪಿ ಮತಗಳಿಕೆ ಪ್ರಮಾಣ ಕಡಿಮೆಯಾಗಿರುವುದು ಇದನ್ನೇ ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ. ಗಮನಾರ್ಹ ಎಂಬಂತೆ, ಉತ್ತರ ಕನ್ನಡ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ 2017ರಲ್ಲಿ ಹಾಗೂ ಕೆಲ ತಿಂಗಳ ಹಿಂದೆ ‘ಸಂವಿಧಾನ ತಿದ್ದುಪಡಿ’ಗಳ ಬಗ್ಗೆ ಮಾತನಾಡಿದ್ದರು. ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ ಕಾಂಗ್ರೆಸ್, ಇದು ಬಿಜೆಪಿ ‘ಷಡ್ಯಂತ್ರ’ ಮತ್ತು ಅವರು ಬಡವರ ವಿರೋಧಿಗಳು ಎಂಬ ವ್ಯವಸ್ಥಿತ ಪ್ರಚಾರ ಮಾಡಿತು. ಹೀಗಾಗಿ, ಬಿಜೆಪಿ ನಾಯಕರು ತಮ್ಮೆಲ್ಲ ಪ್ರಚಾರ ಸಭೆಗಳಲ್ಲಿ ‘ಇಂಥದ್ದೊಂದು ಉದ್ದೇಶ ನಮ್ಮಲ್ಲಿಲ್ಲ’ ಎಂದು ಸ್ಪಷ್ಟೀಕರಣ ನೀಡಬೇಕಾಯಿತು. ಹಿಂದೊಮ್ಮೆ ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೀಸಲಾತಿ ನೀತಿಯ ಮರುಪರಿಶೀಲನೆ ಬಗ್ಗೆ ನೀಡಿದ್ದ ಹೇಳಿಕೆ, ರಾಜ್ಯದ ಚುನಾವಣೆಯಾದ್ಯಂತ ಚರ್ಚೆಯಾಗಿ, ಬಿಜೆಪಿಗೆ ಭಾರಿ ಹಾನಿ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ವಸುಂಧರಾ ಕಡೆಗಣನೆ ಮುಳುವಾಯ್ತೇ?:ರಾಜಸ್ಥಾನದಲ್ಲೂ ಬಿಜೆಪಿ 25ರಲ್ಲಿ 14 ಸೀಟುಗಳಲ್ಲಷ್ಟೇ ಗೆಲುವು ಸಾಧಿಸಿದೆ. ಕಳೆದೆರಡು ಚುನಾವಣೆಗಳಲ್ಲಿ ಬಿಜೆಪಿ ರಾಜಸ್ಥಾನದ ಎಲ್ಲ 25 ಸೀಟುಗಳನ್ನು ಗೆದ್ದುಕೊಂಡಿತ್ತು. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿ, ಆಡಳಿತ ಪಕ್ಷದ ಸ್ಥಾನದಲ್ಲಿದ್ದರೂ, ಬಿಜೆಪಿ 11 ಸೀಟುಗಳನ್ನು ಕಳೆದುಕೊಂಡಿದೆ. ವಿಧಾನಸಭೆ ಚುನಾವಣೆಯಲ್ಲೂ ಮಾಜಿ ಸಿಎಂ ವಸುಂಧರಾ ರಾಜೆ ಅವರನ್ನು ಆರಂಭದಲ್ಲಿ ಕಡೆಗಣಿಸಲಾಗಿತ್ತು. ನಂತರ, ಅವರೊಂದಿಗೆ ಮಾತುಕತೆ ನಡೆಸಿ, ಆಂತರಿಕ ಭಿನ್ನಾಭಿಪ್ರಾಯ ಬದಿಗೆ ಸರಿಸಿ, ಪ್ರಚಾರಕ್ಕೆ ಕರೆಸಿಕೊಳ್ಳಲಾಯಿತು. ಆದರೆ, ಲೋಕಸಭೆ ಚುನಾವಣೆಯಲ್ಲಿ ಮತ್ತೆ ರಾಜೆಯವರನ್ನು ದೂರವಿಟ್ಟ ದಿಲ್ಲಿ ನಾಯಕರು, ಪ್ರಚಾರ ತಂತ್ರ, ಟಿಕೆಟ್ ಹಂಚಿಕೆ, ಪ್ರಚಾರ ಸೇರಿ ಎಲ್ಲ ಚಟುವಟಿಕೆಗಳಿಂದ ದೂರವಿಟ್ಟಿದ್ದರು. ಮೊದಲ ಬಾರಿಗೆ ಶಾಸಕರಾಗಿದ್ದ ಭಜನ್​ಲಾಲ್ ಶರ್ಮರನ್ನು ಮುಖ್ಯಮಂತ್ರಿ ಸ್ಥಾನಕ್ಕೇರಿಸಿದ್ದರೂ, ಲೋಕಸಭೆ ಚುನಾವಣೆಯಲ್ಲಿ ಅದು ಕಿಂಚಿತ್ತೂ ಲಾಭವನ್ನೂ ತಂದುಕೊಟ್ಟಿಲ್ಲ. ಒಟ್ಟಿನಲ್ಲಿ, ಹಿರಿಯರ ಕಡೆಗಣನೆ ರಾಜಸ್ಥಾನದಲ್ಲಿ ಹಲವು ಸೀಟುಗಳನ್ನು ಕಳೆದುಕೊಳ್ಳುವಂತೆ ಮಾಡಿತು ಎಂಬ ಮಾತುಗಳು ಬಿಜೆಪಿ ಅಂಗಳದಲ್ಲೇ ಕೇಳುತ್ತಿವೆ.
ಬಂಗಾಳದಲ್ಲಿ ಅಚ್ಚರಿಯ ಫಲಿತಾಂಶ:ಪಶ್ಚಿಮ ಬಂಗಾಳದಲ್ಲಿ 2019ರಲ್ಲಿ 18 ಸೀಟುಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 12 ಸೀಟುಗಳನ್ನಷ್ಟೇ ಗೆದ್ದಿದೆ. ‘ಈ ಬಾರಿ 20ಕ್ಕಿಂತಲೂ ಹೆಚ್ಚು ಸೀಟುಗಳನ್ನು ಬಂಗಾಳದಲ್ಲಿ ಗೆಲ್ಲುತ್ತೇವೆ’ ಎನ್ನುತ್ತಿದ್ದ ಬಿಜೆಪಿ ನಾಯಕರು ಫಲಿತಾಂಶ ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ. 65 ಶಾಸಕ ಬಲವಿದ್ದರೂ, ಬಿಜೆಪಿ ಸಂಖ್ಯೆ ಕಡಿಮೆಯಾಗಿರುವುದು ಅಚ್ಚರಿ ಮೂಡಿಸಿದೆ.
ಐರ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್‌ಗಳ ರೋಚಕ ಜಯ: ವಿಶ್ವಕಪ್‌ನಲ್ಲಿ ಭಾರತಕ್ಕೆ ಗೆಲುವಿನ ಶುಭಾರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − five =
Remember me
