ತೈಲ ಆಮದು ಹಾಗೂ ಬಳಕೆಯಲ್ಲಿ ಜಾಗತಿಕವಾಗಿ ಭಾರತ ಮೂರನೇ ಸ್ಥಾನದಲ್ಲಿದೆ. ತೈಲದ ಪೈಕಿ ಶೇ. 85ರಷ್ಟನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ನಮ್ಮ ದೇಶದ ವಿದೇಶಿ ವಿನಿಮಯದ ಬಹುಪಾಲು, ಅಂದರೆ ವಾರ್ಷಿಕವಾಗಿ ಅಂದಾಜು 100 ಶತಕೋಟಿ ಡಾಲರ್ (8.25 ಲಕ್ಷ ಕೋಟಿ ರೂಪಾಯಿ) ಇದಕ್ಕಾಗಿಯೇ ಖರ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸಲು ಭಾರತ ಈ ಹಿಂದೆಯೇ ಕ್ರಮ ಕೈಗೊಂಡಿದೆ. ಇದಲ್ಲದೆ, ಕಾರ್ಬನ್ ಮಾಲಿನ್ಯ ಕಡಿತಗೊಳಿಸುವ ಬದ್ಧತೆಯ ಭಾಗವಾಗಿ ಪಳೆಯುಳಿಕೆ ಇಂಧನದ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಜೈವಿಕ ಇಂಧನವಾದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. 2018ರ ಜೂನ್ 4ರಂದು ಜೈವಿಕ ಇಂಧನ ಕುರಿತ ರಾಷ್ಟ್ರೀಯ ನೀತಿಯನ್ನು ಕೇಂದ್ರ ಸರ್ಕಾರ ಘೋಷಿಸಿತು. ಇದರನುಸಾರವಾಗಿ, 2030ನೇ ಇಸ್ವಿಯ ಹೊತ್ತಿಗೆ ಶೇ. 20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯ ಗುರಿ ಹಾಕಿಕೊಳ್ಳಲಾಯಿತು. ಈ ಮೊದಲು ಪೆಟ್ರೋಲ್ ವಾಹನಗಳಲ್ಲಿ ಶುದ್ಧ ಪೆಟ್ರೋಲ್ ಅಂದರೆ ಗ್ಯಾಸೋಲಿನ್ ಬಳಸಲಾಗುತ್ತಿತ್ತು. ದೇಶಿಯ ಎಥೆನಾಲ್ ಬಳಕೆಯಿಂದ ವಿದೇಶಿ ವಿನಿಮಯ ಉಳಿತಾಯವಾಗುವುದಲ್ಲದೆ, ರೈತರ ಆದಾಯ ವರ್ಧನೆಗೂ ನೆರವಾಗುತ್ತದೆ. ಅಲ್ಲದೆ, ಗ್ಯಾಸೋಲಿನ್​ಗಿಂತ ಕಡಿಮೆ ದರದಲ್ಲಿ ಲಭಿಸುತ್ತದೆ. ಈ ಹಿನ್ನೆಲೆಯಲ್ಲಿ, 2025ರ ಹೊತ್ತಿಗೆ ಇ 10 ಇಂಧನ ಅಂದರೆ ಶೇ. 10ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ಜಾರಿಯ ಗುರಿ ಹಾಕಿಕೊಳ್ಳಲಾಯಿತು. ಇ10 ಗುರಿ ಸಾಧಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2022ರ ಜೂನ್ 5ರಂದು ಘೋಷಿಸಿದರು. ನಿಗದಿತ ಸಮಯಕ್ಕಿಂತ ಐದು ತಿಂಗಳ ಮೊದಲೇ ಈ ಗುರಿ ತಲುಪಿರುವುದು ವಿಶೇಷ. ಕಳೆದ ಸೋಮವಾರ ಬೆಂಗಳೂರಿನಲ್ಲಿ ನಡೆದ ‘ಇಂಡಿಯಾ ಎನರ್ಜಿ ವೀಕ್’ನಲ್ಲಿ ಇ20 ಕಾರ್ಯಕ್ರಮಕ್ಕೆ ಮೋದಿ ಚಾಲನೆ ನೀಡಿದ್ದಾರೆ. ಪೆಟ್ರೋಲ್​ನಲ್ಲಿ ಶೇ. 10ರಷ್ಟಿದ್ದ ಎಥೆನಾಲ್ ಪ್ರಮಾಣವನ್ನು ಶೇ. 20ಕ್ಕೆ ಏರಿಸುವುದು ಈ ಕಾರ್ಯಕ್ರಮದ ಉದ್ದೇಶ. ದೇಶದ 15 ನಗರಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಲಾಗುತ್ತಿದ್ದು, ಹಂತ ಹಂತವಾಗಿ ದೇಶಾದ್ಯಂತ ವಿಸ್ತರಿಸಲು ಉದ್ದೇಶಿಸಲಾಗಿದೆ.
ವಾರ್ಷಿಕ 33 ಸಾವಿರ ಕೋಟಿ ರೂ. ಉಳಿತಾಯ:ಕೇಂದ್ರ ಸರ್ಕಾರವು ರಚಿಸಿದ ವಿಶೇಷ ತಜ್ಞರ ಸಮಿತಿ ನೀಡಿದ ‘ಭಾರತದಲ್ಲಿ ಎಥೆನಾಲ್ ಮಿಶ್ರಣಕ್ಕಾಗಿ ಮಾರ್ಗಸೂಚಿ: 2020- 2025’ ವರದಿಯ ಪ್ರಕಾರ, ಇ20 ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸಿದರೆ ದೇಶಕ್ಕೆ ವಾರ್ಷಿಕವಾಗಿ ಅಂದಾಜು 33 ಸಾವಿರ ಕೋಟಿ ರೂಪಾಯಿ ಉಳಿಸಬಹುದಾಗಿದೆ. ಇದಲ್ಲದೆ, ಎಥೆನಾಲ್ ಕಡಿಮೆ ಮಾಲಿನ್ಯಕಾರಕ ಇಂಧನ. ಪೆಟ್ರೋಲ್​ಗಿಂತ ಕಡಿಮೆ ವೆಚ್ಚದಲ್ಲಿ ಸಮಾನ ಕಾರ್ಯನಿರ್ವಹಣೆ ಮಾಡುತ್ತದೆ. ಭಾರತದಲ್ಲಿ ಆಹಾರಧಾನ್ಯ ಮತ್ತು ಕಬ್ಬಿನ ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತಿದೆ. ಸಸ್ಯ ಆಧಾರಿತ ಮೂಲಗಳಿಂದ ಎಥೆನಾಲ್ ಉತ್ಪಾದಿಸುವ ತಂತ್ರಜ್ಞಾನದ ಲಭ್ಯತೆ ಇದೆ. ಅಲ್ಲದೆ, ಎಥೆನಾಲ್ ಮಿಶ್ರಿತ ಪೆಟ್ರೋಲ್​ಗೆ ಅನುಗುಣವಾಗಿ ವಾಹನಗಳನ್ನು ತಯಾರಿಸಬಹುದಾಗಿದೆ. ವಾಹನ ತಯಾರಕರು ಈ ನಿಟ್ಟಿನಲ್ಲಿ ಉತ್ಪಾದನೆ ಮಾಡುವ ಭರವಸೆ ನೀಡಿದ್ದಾರೆ ಎಂದೂ ವರದಿ ಹೇಳಿದೆ.
ದಕ್ಷತೆ, ಮೈಲೇಜ್ ಹೆಚ್ಚಳ:ಮ್ಯಾಸಚೂಸೆಟ್ಸ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಹೋಂಡಾ ಕೈಗೊಂಡ ಜಂಟಿ ಸಂಶೋಧನೆ ಮತ್ತು ಅಧ್ಯಯನ ವರದಿಗಳ ಪ್ರಕಾರ ಇಂಜಿನ್ ಅನ್ನು ಸರಿಯಾಗಿ ಟ್ಯೂನ್ ಮಾಡಿದಾಗ ಸಾಮಾನ್ಯ ಗ್ಯಾಸೊಲಿನ್​ಗೆ ಹೋಲಿಸಿದರೆ ಇ20 ಇಂಧನ ಬಳಕೆ ಮೂಲಕ ಶೇ. 20ರಷ್ಟವರೆಗೆ ದಕ್ಷತೆ ಸುಧಾರಣೆ ಸಾಧಿಸಬಹುದಾಗಿದೆ. ಫೋರ್ಡ್ ಮೋಟಾರ್ ಕಂಪನಿಯು ಕೈಗೊಂಡ ಪ್ರಯೋಗಗಳು ಸಾಮಾನ್ಯ ಗ್ಯಾಸೋಲಿನ್​ಗೆ ಹೋಲಿಸಿದರೆ ಇ20 ಇಂಧನ ಬಳಕೆಯಿಂದ ಶೇ. 5ರಷ್ಟು ಅಧಿಕ ಮೈಲೇಜ್ ಪಡೆದುಕೊಳ್ಳಬಹುದು ಎಂಬುದನ್ನು ತೋರಿಸಿವೆ.
ಉತ್ಪಾದನೆ ಹೆಚ್ಚಳಕ್ಕೆ ನೆರವು:2017-18 ರಲ್ಲಿ ಮೊಲಾಸಸ್ (ಕಾಕಂಬಿ) ಆಧಾರಿತ ಡಿಸ್ಟಿಲರಿಗಳ ಸಾಮರ್ಥ್ಯ ವಾರ್ಷಿಕವಾಗಿ 278 ಕೋಟಿ ಲೀಟರ್ ಆಗಿತ್ತು. 2022ರಲ್ಲಿ 923 ಕೋಟಿ ಲೀಟರ್​ಗೆ ಏರಿಕೆಯಾಗಿದೆ. ದೇಶದಲ್ಲಿ ಎಥೆನಾಲ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2018ರ ಜುಲೈ ಮತ್ತು 2019ರ ಮಾರ್ಚ್​ನಲ್ಲಿ ಕಾಕಂಬಿ ಆಧಾರಿತ ಡಿಸ್ಟಿಲರಿಗಳಿಗೆ ಬಡ್ಡಿ ಸಹಾಯಧನ ಯೋಜನೆಗಳನ್ನು ರೂಪಿಸಿತು. ಮಿಶ್ರಣ ಗುರಿಗಳನ್ನು ಸಾಧಿಸುವ ದೃಷ್ಟಿಯಿಂದ, ದೇಶದಲ್ಲಿ ಎಥೆನಾಲ್ ಭಟ್ಟಿ ಇಳಿಸುವ ಸಾಮರ್ಥ್ಯ ಹೆಚ್ಚಿಸಲು ಸಂಘಟಿತ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಪರೀಕ್ಷೆಯಲ್ಲಿ ಉತ್ತೀರ್ಣ:ಶೇ. 20ರಷ್ಟು ಎಥೆನಾಲ್-ಗ್ಯಾಸೋಲಿನ್ ಮಿಶ್ರಣದ ಪೆಟ್ರೋಲ್ ಬಳಕೆ ಕುರಿತ ಅಧ್ಯಯನ ಮಾಡುವ ಯೋಜನೆಯನ್ನು 2014ರಲ್ಲಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ, ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ಮತ್ತು ಇಂಡಿಯನ್ ಆಯಿಲ್ ಕಾರ್ಪೆರೇಷನ್ ಕೈಗೊಂಡಿವೆ. ಈ ಅಧ್ಯಯನದ ಪ್ರಕಾರ, ಇ20 ಬಳಕೆಯಿಂದಾಗಿ ವಾಹನಗಳ ಲೋಹ ಮತ್ತು ಲೋಹದ ಲೇಪನ ವಸ್ತುಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಆದರೆ, ಸಂಪೂರ್ಣ ಗ್ಯಾಸೋಲಿನ್​ಗೆ ಹೋಲಿಸಿದರೆ ಇ20 ಬಳಕೆಯು ರಬ್ಬರ್ ಮತ್ತು ಪಾಲಿಮರ್ ಮಿಶ್ರಣದ ಉತ್ಪನ್ನಗಳಾದ ಎಲಾಸ್ಟೊಮರ್​ಗಳ ಕಾರ್ಯನಿರ್ವಹಣೆಯಲ್ಲಿ ಅಲ್ಪಮಟ್ಟಿನ ದಕ್ಷತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇಂಧನ ಮೈಲೇಜ್ ಪ್ರಮಾಣ ಶೇ. 6ರವರೆಗೆ ತಗ್ಗಿದೆ. ಒಟ್ಟಾರೆಯಾಗಿ ವಾಹನ ಕಾರ್ಯಾಚರಣೆಗೆ ತೀವ್ರ ಅಸಮರ್ಪಕತೆ ಅಥವಾ ಅಡಚಣೆ ಕಂಡುಬಂದಿಲ್ಲ. ಒಟ್ಟಾರೆ ಪರೀಕ್ಷೆಯಲ್ಲಿ ಇ20 ಇಂಧನ ಉತ್ತೀರ್ಣವಾಗಿದೆ.
ಮಾಲಿನ್ಯ ಕಡಿಮೆ:ಇ20 ಇಂಧನ ಬಳಕೆಯಿಂದ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ ಎಂದು ವರದಿಗಳು ಹೇಳಿವೆ. ಇ20 ಇಂಧನದೊಂದಿಗೆ ಕಾರ್ಬನ್ ಮೊನಾಕ್ಸೈಡ್ ಹೊರಸೂಸುವಿಕೆಯಲ್ಲಿ ಹೆಚ್ಚಿನ ಕಡಿತ ಗಮನಿಸಲಾಗಿದೆ. ಇದು ದ್ವಿಚಕ್ರ ವಾಹನಗಳಲ್ಲಿ ಶೇ. 50 ಮತ್ತು ನಾಲ್ಕು ಚಕ್ರಗಳ ವಾಹನಗಳಲ್ಲಿ ಶೇ. 30 ಕಡಿಮೆ ಇದೆ. ಸಾಮಾನ್ಯ ಗ್ಯಾಸೋಲಿನ್​ಗೆ ಹೋಲಿಸಿದರೆ ಎಥೆನಾಲ್ ಮಿಶ್ರಣಗಳೊಂದಿಗೆ ಹೈಡ್ರೋಕಾರ್ಬನ್ ಹೊರಸೂಸುವಿಕೆ ಶೇ. 20ರಷ್ಟು ಕಡಿಮೆಯಾಗಿದೆ. ಕಾರ್ಬೆನಿಲ್ ಹೊರ ಸೂಸುವಿಕೆಯು ಎಥೆನಾಲ್​ನಲ್ಲಿ ಹೈಡ್ರಾಕ್ಸಿಲ್ ಗುಂಪುಗಳ ಉಪಸ್ಥಿತಿಯಿಂದಾಗಿ ಸಾಮಾನ್ಯ ಗ್ಯಾಸೋಲಿನ್​ಗೆ ಹೋಲಿಸಿದರೆ ಇ 20 ಇಂಧನದಲ್ಲಿ ಹೆಚ್ಚಾಗಿರುತ್ತದೆ. ಆದರೂ, ಒಟ್ಟಾರೆ ಪ್ರಮಾಣ ತೀರ ಕಡಿಮೆ ಇದೆ.
ಸಕ್ಕರೆ ಕಾರ್ಖಾನೆ ಆದಾಯ, 18 ಸಾವಿರ ಕೋಟಿ ರೂ. ಹೆಚ್ಚಳ:ಎಥೆನಾಲ್ ಅನ್ನು ಪ್ರಸ್ತುತ ಭಾರತದಲ್ಲಿ ಸಕ್ಕರೆ ಕಾರ್ಖಾನೆಗಳ ಮೂಲಕ ತಯಾರಿಸಲಾಗುತ್ತದೆ. ಇದು ಸಕ್ಕರೆ ಕಾರ್ಖಾನೆಗಳ ಆದಾಯ ಹೆಚ್ಚಳಕ್ಕೂ ಕೊಡುಗೆ ನೀಡಿದೆ. ಇ10 ಇಂಧನ ಬಳಕೆಯಿಂದಾಗಿ ಈಗ ಸಕ್ಕರೆ ಕಾರ್ಖಾನೆಗಳ ಆದಾಯ ವಾರ್ಷಿಕವಾಗಿ 18 ಸಾವಿರ ಕೋಟಿ ರೂಪಾಯಿ ಹೆಚ್ಚಳ ಕಂಡಿದೆ. 2025ರ ಹೊತ್ತಿಗೆ ಇದು 35 ಸಾವಿರ ಕೋಟಿ ರೂ. ದಾಟುವ ನಿರೀಕ್ಷೆ ಇದೆ. ಕಬ್ಬು ಬೆಳೆಗಾರರಿಗೂ ಇದು ಲಾಭ ತಂದುಕೊಡುತ್ತಿದೆ. ಈಥೈಲ್ ಆಲ್ಕೋಹಾಲ್ ಅಥವಾ ಎಥೆನಾಲ್ (C2H5OH) ಎಂಬುದು ಕಿಣ್ವದ ಮೂಲಕ ಸಕ್ಕರೆಯ ರಾಸಾಯನಿಕ ಬದಲಾವಣೆ ಮೂಲಕ ನೈಸರ್ಗಿಕವಾಗಿ ತಯಾರಿಸುವ ಜೈವಿಕ ಇಂಧನ. ಕಬ್ಬಿನಿಂದ ಸಕ್ಕರೆ ಉತ್ಪಾದಿಸುವ ಸಂದರ್ಭದಲ್ಲಿ ಎಥೆನಾಲ್ ತಯಾರಿಸಲಾಗುತ್ತದೆ. ಆಹಾರಧಾನ್ಯಗಳಂತಹ ಇತರ ಸಾವಯವ ಪದಾರ್ಥಗಳಿಂದಲೂ ಇದನ್ನು ಉತ್ಪಾದಿಸಬಹುದಾಗಿದೆ.
ಕಬಡ್ಡಿ ಆಡುತ್ತಿದ್ದ ವಿದ್ಯಾರ್ಥಿನಿಗೆ ಹೃದಯಾಘಾತ; ಕುಸಿದು ಬಿದ್ದು ಸಾವು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 13 =
Remember me
