| ರಾಘವ ಶರ್ಮ ನಿಡ್ಲೆ, ನವದೆಹಲಿ
ಚುನಾವಣೆಗೆ 2-3 ದಿನಕ್ಕೆ ಮುನ್ನ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನಡುವಿನ ಆಪ್ತ ಉಭಯಕುಶಲೋಪರಿ ಮಾತುಕತೆಯ ವಿಡಿಯೋವೊಂದನ್ನು ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಇಬ್ಬರ ಮಧ್ಯೆ ಯಾವುದೇ ಬಿಕ್ಕಟ್ಟು, ವೈಮನಸ್ಯ ಇಲ್ಲ ಎನ್ನುವುದನ್ನು ಬಿಂಬಿಸುವುದು ಈ ವಿಡಿಯೋ ಉದ್ದೇಶ. ಈಗ ಫಲಿತಾಂಶ ಹೊರಬಿದ್ದಿದೆ. ಅಧಿಕಾರದ ವಿಷಯ ಬಂದಾಗ ಸಿದ್ದರಾಮಯ್ಯ ಮತ್ತು ಡಿಕೆಶಿ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಹೈಕಮಾಂಡ್ ಕರೆ ಮೇರೆಗೆ ಸಿದ್ದರಾಮಯ್ಯ ದೆಹಲಿಗೆ ಬಂದಿದ್ದರೆ, ಸಿಎಂ ಹುದ್ದೆ ನೀಡುವುದಿಲ್ಲ ತಾವು ದೆಹಲಿಗೆ ಬಂದು ಮಾಡುವುದೇನಿದೇ ಎಂದು ಶಿವಕುಮಾರ್ ರಾಜ್ಯದಲ್ಲೇ ಉಳಿದಿದ್ದಾರೆ.
ತಮ್ಮನ್ನು ಈಗಿನಿಂದಲೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕು ಎನ್ನುವುದು ಶಿವಕುಮಾರ್ ಬಿಗಿಪಟ್ಟು. ಆದರೆ, ಬಹುಪಾಲು ಶಾಸಕರು ಸಿದ್ದರಾಮಯ್ಯರಿಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಅವರನ್ನೇ ಸಿಎಂ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಏತನ್ಮಧ್ಯೆ, ಎರಡೂವರೆ ವರ್ಷ ಸಿದ್ದರಾಮಯ್ಯ ಸಿಎಂ, ಉಳಿದೆರಡೂವರೆ ವರ್ಷ ನಾನು ಸಿಎಂ ಎಂದು ಭರವಸೆ ನೀಡುವುದಾದರೆ, ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡುತ್ತಾರೆ ಎನ್ನುವುದಕ್ಕೆ ಏನು ಗ್ಯಾರಂಟಿ ಎಂಬ ಪ್ರಶ್ನೆ ಡಿಕೆಶಿ ಆಪ್ತ ವಲಯದ್ದು. ಎರಡೂವರೆ ವರ್ಷ ಬಳಿಕ ಮತ್ತೆ ಶಾಸಕರ ಅಭಿಪ್ರಾಯ ಕೇಳಿ ಎಂದರೆ ಆಗ ಹೈಕಮಾಂಡ್ ನಿಲುವು ಏನಿರುತ್ತದೆ ಎನ್ನುವುದು ಅವರ ಪ್ರಶ್ನೆ. ಛತ್ತೀಸ್​ಗಢ ಮತ್ತು ರಾಜಸ್ಥಾನ ಕಾಂಗ್ರೆಸ್​ನ ಬಿಕ್ಕಟ್ಟಿನ ಉದಾಹರಣೆಗಳು ಕಣ್ಣ ಮುಂದಿದ್ದು, ಕರ್ನಾಟಕದಲ್ಲೂ ಅದರ ಪುನರಾವರ್ತನೆಯಾಗಲಿದೆ. ಸಿದ್ದರಾಮಯ್ಯ ಮತ್ತು ಅವರ ಆಪ್ತ ಬಣ ಯಾವ ಕಾರಣಕ್ಕೂ ಶಿವಕುಮಾರ್​ಗೆ ಅಧಿಕಾರ ಬಿಟ್ಟುಕೊಡುವುದಿಲ್ಲ ಎಂದು ಡಿಕೆಶಿ ಆಪ್ತರೊಬ್ಬರು ವಿಜಯವಾಣಿ ಜತೆ ಆಕ್ರೋಶ ಹಂಚಿಕೊಂಡಿದ್ದಾರೆ.
ಛತ್ತೀಸ್​ಗಢದಲ್ಲಿ ಪಿಸಿಸಿ ಅಧ್ಯಕ್ಷ ಆಗಿದ್ದ ಭೂಪೇಶ್ ಭಗೇಲ್​ರನ್ನು 4 ವರ್ಷಗಳ ಹಿಂದೆ ಸಿಎಂ ಹುದ್ದೆಗೆ ಆಯ್ಕೆ ಮಾಡಿದಾಗ, ಎರಡೂವರೆ ವರ್ಷಗಳ ಬಳಿಕ ಮತ್ತೋರ್ವ ಹಿರಿಯ ನಾಯಕ ಟಿಎಸ್ ಸಿಂಗ್​ದೇವ್ ಅವರಿಗೆ ಸಿಎಂ ಹುದ್ದೆ ಹಸ್ತಾಂತರಿಸಬೇಕು ಎಂದು ಮಾತುಕತೆಯಾಗಿತ್ತು. ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದ ಸಿಂಗ್ ದೇವ್ ಅವರಿಗೆ 4 ವರ್ಷಗಳ ಬಳಿಕವೂ ಭೂಪೇಶ್ ಭಗೇಲ್ ಅಧಿಕಾರ ಬಿಟ್ಟುಕೊಟ್ಟಿಲ್ಲ. ಈಗಲೂ ಅವರಿಬ್ಬರ ಮಧ್ಯೆ ಅಧಿಕಾರಕ್ಕಾಗಿ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಖರ್ಗೆ ಅಧ್ಯಕ್ಷರಾದ ಬಳಿಕವೂ ಈ ಬಿಕ್ಕಟ್ಟನ್ನು ಬಗೆಹರಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ:ಜೆಡಿಎಸ್ ಬಿಜೆಪಿ ಜೊತೆ ವಿಲೀನ ಆದ್ರೆ ಒಳಿತು, ಆಗ ರಾಜ್ಯದಲ್ಲಿ ಎರಡೇ ಪಕ್ಷ: ಸೋಲಿನ ಪರಾಮರ್ಶೆಯಲ್ಲಿ ಡಾ.ಸುಧಾಕರ್
ಅದೇ ರೀತಿ ರಾಜಸ್ಥಾನದಲ್ಲೂ ಸಿಎಂ ಹುದ್ದೆಗಾಗಿ ಹಾಲಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಪಿಸಿಸಿ ಅಧ್ಯಕ್ಷ ಸಚಿನ್ ಪೈಲಟ್ ಮಧ್ಯೆ ನಿತ್ಯವೂ ಕಾದಾಟ ನಡೆಯುತ್ತಿದೆ. ಅಶೋಕ್ ಗೆಹ್ಲೋಟ್ ಹಠ ಬಿಡದ ಕಾರಣ ಪೈಲಟ್ ಈಗ ಸರ್ಕಾರದ ವಿರುದ್ಧವೇ ಪ್ರತಿಭಟನೆಗಳನ್ನು ನಡೆಸುತ್ತಾ ತಮ್ಮ ಬೆಂಬಲಿಗ ಪಡೆಯನ್ನು ಬಿಗಿಗೊಳಿಸುತ್ತಿದ್ದಾರೆ. ಆದರೆ ಪಕ್ಷದ ಹಿತದೃಷ್ಟಿಯಿಂದ ಈ ಘಟನಾವಳಿಗಳು ಒಳ್ಳೆಯ ಲಕ್ಷಣವೇನಲ್ಲ. 4 ವರ್ಷಗಳ ಹಿಂದೆ ರಾಜಸ್ಥಾನದಲ್ಲಿ ಶಾಸಕರ ಬೆಂಬಲ ಪಡೆದು ಗೆಹ್ಲೋಟ್ ಸಿಎಂ ಆಗಿದ್ದರೂ, ಸಿಎಂ ಸ್ಥಾನ ನಿಮಗೂ ನೀಡುತ್ತೇವೆ ಎಂಬ ಭರವಸೆಯನ್ನು ಈಡೇರಿಸುವಲ್ಲಿ ಹೈಕಮಾಂಡ್ ವಿಫಲವಾಗಿದೆ ಎನ್ನುವುದು ಪೈಲಟ್ ದೂರು. ಈ ಘಟನಾವಳಿಗಳ ಬಗ್ಗೆ ಡಿ.ಕೆ. ಶಿವಕುಮಾರ್​ಗೂ ಅರಿವಿದ್ದು, ಮುಂದೆ ತಾವೂ ಇಂಥ ಪರಿಸ್ಥಿತಿ ಎದುರಿಸಬೇಕಾದೀತು ಎಂಬ ಚಿಂತೆಯಲ್ಲಿದ್ದಾರೆ. ಹಾಗಾಗಿಯೇ, ಶಾಸಕರ ಅಭಿಪ್ರಾಯ ಕೇಳದೆ ತಮ್ಮನ್ನು ಸಿಎಂ ಮಾಡಬೇಕೆಂದು ಶಿವಕುಮಾರ್ ಒತ್ತಡ ಹೇರುತ್ತಿದ್ದಾರೆ. ಕಷ್ಟಕಾಲದಲ್ಲಿ ನೆರವಾಗಿದ್ದೇನೆ
ಪಕ್ಷಕ್ಕೆ ನಾನು ಕಷ್ಟಕಾಲದಲ್ಲಿ ನೆರವಾಗಿದ್ದೇನೆ ಮತ್ತು ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಕೇಸು ಹಾಕಿಸಿಕೊಂಡು ಜೈಲಿಗೆ ಹೋಗಿ ಬಂದೆ. ಈಗಲೂ ಕೇಸುಗಳನ್ನು ಎದುರಿಸಿಕೊಂಡು, ಎಷ್ಟೋ ದಿನ ನಿದ್ದೆ ಮಾಡದಂತೆ ಮಾಡಿದ್ದರು. ಜೈಲಿನಿಂದ ಹೊರಬಂದ ಸಂದರ್ಭದಲ್ಲಿ ಪಕ್ಷದ ಸಂಘಟನೆಯೂ ದುರ್ಬಲವಾಗಿತ್ತು. ಎರಡೂವರೆ ವರ್ಷದಿಂದ ಪಕ್ಷವನ್ನು ಶೂನ್ಯದಿಂದ ಇಷ್ಟೆತ್ತರಕ್ಕೆ ಸಂಘಟಿಸಿ, ಕಾಂಗ್ರೆಸ್ ಪರ ವಾತಾವರಣ ರೂಪಿಸುವಲ್ಲಿ ಹೆಚ್ಚು ಕೊಡುಗೆ ನೀಡಿದ್ದೇನೆ. ಹಳೇ ಮೈಸೂರಿನಲ್ಲಿ ಪಕ್ಷ ಬಲವರ್ಧನೆಯಾಗಿ ಹೆಚ್ಚು ಸೀಟುಗಳು ಬಂದಿವೆ. ಚುನಾವಣಾ ತಂತ್ರಗಾರ ಸುನೀಲ್ ಕಾನಗೋಲ್ ತಂಡದೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಬಿಜೆಪಿ ವಿರುದ್ಧ ತಂತ್ರಗಾರಿಕೆ ರೂಪಿಸಿದೆವು. ಇವೆಲ್ಲವನ್ನ ಬದಿಗೆ ಸರಿಸಿ, ಮತ್ತೆ ಸಿದ್ದರಾಮಯ್ಯ ಅವರಿಗೆ ಉನ್ನತ ಹುದ್ದೆ ನೀಡಿದರೆ ಹೇಗೆ ಎಂದು ಶಿವಕುಮಾರ್ ತಮ್ಮ ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ.
ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳು ಪೀಡಿಸಿದರೂ, ಆ ಎಲ್ಲ ಸವಾಲುಗಳ ಮಧ್ಯೆ ಪಕ್ಷವನ್ನು ಅಧಿಕಾರಕ್ಕೆ ತರಲು ಪೂರ್ತಿ ಶ್ರಮ ಹಾಕಿದ್ದಾರೆ. ಹೀಗಾಗಿ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನ ಕೇಳುತ್ತಿರುವುದು ನ್ಯಾಯಯುತವಾಗಿಯೇ ಇದೆ. ಸಿದ್ದರಾಮಯ್ಯ ಈ ಹಿಂದೆ 5 ವರ್ಷಗಳ ಪೂರ್ಣಾವಧಿಗೆ ಸಿಎಂ ಆಗಿದ್ದರು. ಈಗ ಮೂಲ ಕಾಂಗ್ರೆಸ್ ನಾಯಕನಿಗೆ ನೀಡಬೇಕು ಎಂಬ ಬೇಡಿಕೆ ತಪ್ಪೆನಲ್ಲ’ ಎಂದು ರಾಜ್ಯ ಕಾಂಗ್ರೆಸ್ ಸಂಸದರೊಬ್ಬರು ಅಭಿಪ್ರಾಯಪಡುತ್ತಾರೆ.
ಶಿವಕುಮಾರ್ ಕಷ್ಟಕಾಲದಲ್ಲಿ ಕೈ ಹಿಡಿದಿದ್ದಾರೆ ಮತ್ತು ಬಿಜೆಪಿ ಒತ್ತಡದ ನಡುವೆಯೂ ಕಾಂಗ್ರೆಸ್ ಬಿಡಲಿಲ್ಲ ಎಂಬ ಸದಭಿಪ್ರಾಯ ಸೋನಿಯಾ ಗಾಂಧಿ ಮತ್ತು ಕುಟುಂಬದಲ್ಲಿದೆ. ಈ ಕಾರಣಕ್ಕಾಗಿಯೇ ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದಾಗ ಖುದ್ದು ಸೋನಿಯಾ ಜೈಲಿಗೆ ಹೋಗಿ ಸಾಂತ್ವನ ಹೇಳಿ ಬಂದಿದ್ದರು. ಆದರೆ ಸಿದ್ದರಾಮಯ್ಯಗೆ ಶಾಸಕರ ಬೆಂಬಲ ಇರುವುದರಿಂದ ಅವರನ್ನು ಕಡೆಗಣಿಸಲಾಗುವುದಿಲ್ಲ ಎನ್ನುವುದೂ ವಾಸ್ತವ. ಒಂದುವೇಳೆ ಸಿದ್ದರಾಮಯ್ಯ ಆಶಯದ ವಿರುದ್ಧ ತೀರ್ಮಾನ ಮಾಡಿದಲ್ಲಿ ಅದು 2024ರ ಲೋಕಸಭೆ ಚುನಾವಣೆ ವೇಳೆ ಪಕ್ಷಕ್ಕೆ ತೀವ್ರ ಹಾನಿ ಮಾಡುವ ಸಾಧ್ಯತೆ ಇದೆ. ಸದ್ಯ ಒಂದು ಸಂಸದ ಸೀಟು ಹೊಂದಿರುವ ಕಾಂಗ್ರೆಸ್, 20ಕ್ಕಿಂತಲೂ ಹೆಚ್ಚು ಸೀಟುಗಳನ್ನು ಗೆಲ್ಲಬೇಕು ಎಂಬ ಲೆಕ್ಕಾಚಾರದಲ್ಲಿರುವಾಗ, ಸಿದ್ದರಾಮಯ್ಯರನ್ನು ಎದುರು ಹಾಕಿಕೊಂಡರೆ ಅವರ ಬೆಂಬಲಿಗ ಮತಗಳು ವಿಭಜನೆಯಾಗಬಹುದು ಎಂಬ ಗಂಭೀರ ಚರ್ಚೆಗಳು ವರಿಷ್ಠ ನಾಯಕರ ಮಧ್ಯೆ ನಡೆದಿದೆ. ಹೀಗಾಗಿ, ಶಿವಕುಮಾರ್ ಮನವೊಲಿಸುವ ಯತ್ನ ಮುಂದುವರಿದಿದೆ.
ಬಗೆಹರಿಯದ ಸಿಎಂ ಆಯ್ಕೆ: ಡಿ.ಕೆ.ಶಿವಕುಮಾರ್ ಮುಂದಿನ ನಡೆ?

ಲಿಂಗಾಯತರನ್ನು ಸಿಎಂ ಮಾಡಲಿ ನೋಡೋಣ: ಕಾಂಗ್ರೆಸ್​ಗೆ ಮಾಜಿ ಸಚಿವ ನಿರಾಣಿ ಸವಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 2 =
Remember me
