| ರಾಘವ ಶರ್ಮ ನಿಡ್ಲೆ, ನವದೆಹಲಿಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವ ಮಧ್ಯೆ ಕೇಂದ್ರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನ ಕರೆದಿರುವುದು ಸಹಜವಾಗಿಯೇ ರಾಜಕೀಯ ವಲಯದಲ್ಲಿ ಮಾತ್ರವಲ್ಲ, ಸಾರ್ವಜನಿಕರಲ್ಲೂ ವ್ಯಾಪಕ ಕುತೂಹಲ ಕೆರಳಿಸಿದೆ. ಒಂದಲ್ಲಾ ಒಂದು ಅಚ್ಚರಿಗಳಿಂದಲೇ ಮೋದಿ ಸರ್ಕಾರ ಸದ್ದು ಮಾಡಿರುವುದರಿಂದ ವಿಶೇಷ ಅಧಿವೇಶನದ ಮೂಲಕ ಮತ್ತೊಂದು ಐತಿಹಾಸಿಕ ನಿರ್ಧಾರವನ್ನೇನಾದರೂ ತೆಗೆದುಕೊಳ್ಳಲು ಕೇಂದ್ರ ಮುಂದಾಗಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಆಗಸ್ಟ್ 31ಕ್ಕೆ ವಿಶೇಷ ಅಧಿವೇಶನದ ಮಾಹಿತಿ ನೀಡಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಅಜೆಂಡಾ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಸೆ.13ರಂದು ಅಜೆಂಡಾ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯ, ಸಂಸತ್ತಿನ 75 ವರ್ಷಗಳ ಪಯಣ, ಸಾಧನೆ, ಅನುಭವ, ನೆನಪು ಹಾಗೂ ಕಲಿಕೆಗಳ ಬಗ್ಗೆ ಚರ್ಚೆ ನಡೆಸಲಿದೆ. ಜತೆಗೆ, ವಕೀಲರ ತಿದ್ದುಪಡಿ ಮಸೂದೆ-2023, ಪ್ರೆಸ್ ಮತ್ತು ನಿಯತಕಾಲಿಕೆಗಳ ನೋಂದಣಿ ಮಸೂದೆ-2023, ಪೋಸ್ಟ್ ಆಫೀಸ್ ವಿಧೇಯಕ-2023ರ ಅನುಮೋದನೆಗಳಿಗಾಗಿ ಮಂಡನೆಯಾಗಲಿದೆ. ಕಲಾಪಕ್ಕೆ ಅಂದಾಜಿನ ವಿಷಯಗಳ ಪಟ್ಟಿ ನೀಡಲಾಗಿದ್ದು, ಹೆಚ್ಚಿನ ವಿಚಾರಗಳನ್ನು ಸೇರಿಸಲಾಗುವುದು ಎಂದೂ ಕೇಂದ್ರ ದಾಖಲು ಮಾಡಿರುವುದರಿಂದ ಇವೆಲ್ಲವನ್ನೂ ಹೊರತುಪಡಿಸಿ ಹೊಸ ವಿಷಯವೊಂದು ಸಂಸತ್ತಿನಲ್ಲಿ ಚರ್ಚೆಗೆ ಬರಲಿದೆ ಎಂದು ಅನುಮಾನಿಸಲಾಗಿದೆ. ವಿಪಕ್ಷಗಳಲ್ಲೂ ಈ ವಿಚಾರ ಚರ್ಚೆಯಾಗಿದೆ.
ಮೊದಲ ಬಾರಿಗೆ ಸಂಸತ್ತಿನ ವಿಶೇಷ ಅಧಿವೇಶನ ನಡೆದದ್ದು 1947ರ ಆಗಸ್ಟ್ 14 ಮತ್ತು 15ರಂದು. ಬ್ರಿಟಿಷ್ ಆಡಳಿತದಿಂದ ಮುಕ್ತಿ ಸಿಕ್ಕು, ಭಾರತ ಸ್ವತಂತ್ರಗೊಂಡಿದ್ದನ್ನು ಸಂಭ್ರಮಿಸಲು ಹಾಗೂ ಬ್ರಿಟಿಷರಿಂದ ಅಧಿಕಾರದ ಹಸ್ತಾಂತರವನ್ನು ಅಧಿಕೃತಗೊಳಿಸುವ ಸಲುವಾಗಿಯೇ ಈ ಅಧಿವೇಶನ ಕರೆಯಲಾಗಿತ್ತು. 1962ರಲ್ಲಿ ಭಾರತ-ಚೀನಾ ಯುದ್ಧ ನಡೆಯುತ್ತಿದ್ದ ವೇಳೆ ಅಂದಿನ ಜನಸಂಘದ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ನಿಯೋಗ ವಿಶೇಷ ಅಧಿವೇಶನ ಕರೆದು ಯುದ್ಧದ ಬಗ್ಗೆ ಚರ್ಚೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿತ್ತು. ಇದಕ್ಕೆ ಸಮ್ಮತಿಸಿದ್ದ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ, ನವೆಂಬರ್ 8ರಂದು ಅಧಿವೇಶನಕ್ಕೆ ದಿನಾಂಕ ಗೊತ್ತು ಮಾಡಿದ್ದರು. ಯುದ್ಧ ಎನ್ನುವುದು ಸೂಕ್ಷ್ಮ ವಿಚಾರವಾಗಿರುವುದರಿಂದ ಅಧಿವೇಶನವನ್ನು ರಹಸ್ಯವಾಗಿ ನಡೆಸಬೇಕು ಎಂಬ ಸಲಹೆಗಳು ಬಂದರೂ ನೆಹರೂ ಅದನ್ನು ಪರಿಗಣಿಸಿರಲಿಲ್ಲ. ಸಂಸತ್ತಿನಲ್ಲಿ ಚರ್ಚೆಯಾಗುವುದು ದೇಶದ ಹಿತಕ್ಕೆ ಸಂಬಂಧಿಸಿದ್ದು ಮತ್ತು ಎಲ್ಲರೂ ಅದನ್ನು ಎದುರು ನೋಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದರು. ಚೀನಾ ಅತಿಕ್ರಮಿಸಿದ್ದ ಭಾರತದ ಎಲ್ಲಾ ಭೂಭಾಗಗಳನ್ನು ವಾಪಸ್ ಪಡೆದುಕೊಳ್ಳುವುದರ ಕುರಿತು ಸಂಸತ್ತು ಚರ್ಚೆ ಮಾಡಿತು. ನಂತರ ನಡೆದ ಚಳಿಗಾಲದ ಅಧಿವೇಶನದಲ್ಲಿ ಈ ನಿರ್ಣಯ ಅಂಗೀಕಾರಗೊಂಡಿತ್ತು.
ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಧಾನಿ ಕಾರ್ಯಾಲಯ ವಿಶೇಷ ಅಧಿವೇಶನದ ಮೂಲ ಅಜೆಂಡಾ ಏನೆಂಬುದನ್ನು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೂ ಬಿಟ್ಟು ಕೊಟ್ಟಿಲ್ಲ. ಅಜೆಂಡಾ ಕುರಿತ ಚರ್ಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಶನಿವಾರ ಸಂಜೆ ತಮ್ಮ ನಿವಾಸಕ್ಕೆ ಬರುವಂತೆ ಪ್ರಧಾನಿ ಮೋದಿ ಆಹ್ವಾನಿಸಿದ್ದಾರೆ. ಹೀಗಾಗಿ, ಶನಿವಾರ ರಾತ್ರಿ ವೇಳೆ ಅಥವಾ ಭಾನುವಾರ ಬೆಳಗ್ಗೆ ಅಜೆಂಡಾ ಬಗ್ಗೆ ಸ್ಪಷ್ಟತೆ ಸಿಗಬಹುದು. ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಭಾನುವಾರ (ಸೆ.17) ಸರ್ವಪಕ್ಷಗಳ ಸಭೆಯನ್ನೂ ಕರೆಯ ಲಾಗಿದೆ.
ವಿಶೇಷ ಅಧಿವೇಶನ ಕರೆಯುವುದು ಅತ್ಯಂತ ವಿರಳ. ಹೀಗಾಗಿಯೇ, ಮೋದಿ ನಡೆ ಕೌತುಕ ಸೃಷ್ಟಿಸಿದೆ. ಈ ಸರ್ಕಾರ ಈ ಹಿಂದೆ 2017ರ ಜೂನ್ 30 ತಡರಾತ್ರಿ ವಿಶೇಷ ಅಧಿವೇಶನ ಕರೆದು, ಹೊಸ ಮಾದರಿಯ ಸರಕು ಸೇವಾ ತೆರಿಗೆ ಕಾಯ್ದೆಯನ್ನು (ಜಿಎಸ್ಟಿ) ದೇಶದಲ್ಲಿ ಜಾರಿಗೊಳಿಸಿತ್ತು. ವಿಧೇಯಕ ಕುರಿತು ಚರ್ಚೆ ನಡೆದ ಮೊದಲ ವಿಶೇಷ ಅಧಿವೇಶನ ಇದಾಗಿತ್ತು. ಆದರೆ, ಮಾಜಿ ಪಿಎಂ ಡಾ. ಮನಮೋಹನ್ ಸಿಂಗ್, ಎಚ್.ಡಿ. ದೇವೇಗೌಡ ಈ ಅಧಿವೇಶನದಿಂದ ದೂರವುಳಿದಿದ್ದರು. ಜಿಎಸ್ಟಿ ವಿಷಯದಲ್ಲಿ ಕೇಂದ್ರ ಪ್ರಚಾರ ನಾಟಕ ಮಾಡಲು ಈ ಅಧಿವೇಶನ ಕರೆದಿದೆ ಎಂದು ವಿಪಕ್ಷಗಳು ಟೀಕಿಸಿದ್ದವು.
ಆರಂಭದಲ್ಲಿ ಏಕರೂಪ ನಾಗರಿಕ ಸಂಹಿತೆ, ಒಂದು ದೇಶ ಒಂದು ಚುನಾವಣೆ ಬಗ್ಗೆ ಚರ್ಚೆಯಾಗಬಹುದೇನೋ ಎಂಬ ಮಾತುಗಳು ಕೇಳಿಬಂದರೂ, ಕೇಂದ್ರ ಸರ್ಕಾರದ ಮೂಲಗಳು ಈ ಸಾಧ್ಯತೆ ತಳ್ಳಿಹಾಕಿವೆ. ಆದರೆ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಪ್ರಸ್ತಾವಕ್ಕೆ ಕಾನೂನಾತ್ಮಕ ರೂಪ ನೀಡಲು ಮೋದಿ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದ್ದರೂ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮಹಿಳಾ ಮೀಸಲಾತಿ ಮಸೂದೆ ಜಾರಿ ಮಾಡಲು ಕೇಂದ್ರದ ಬಳಿ ಲೋಕಸಭೆಯಲ್ಲಿ ಅಗತ್ಯ ಸಂಖ್ಯಾಬಲವಿದ್ದು, ರಾಜ್ಯಸಭೆಯಲ್ಲಿ ಮಿತ್ರಪಕ್ಷಗಳನ್ನು ಅವಲಂಬಿಸಬೇಕಿದೆ. ಹಿಂದೆ ಡಾ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಈ ವಿಧೇಯಕ ಮಂಡಿಸಿದ್ದರೂ, ಉತ್ತರ ಪ್ರದೇಶದ ಸಮಾಜವಾದಿ ಮತ್ತು ಬಿಹಾರ ರಾಷ್ಟ್ರೀಯ ಲೋಕದಳ ಪಾರ್ಟಿಗಳು ಮಹಿಳಾ ಮಿಸಲಾತಿಗೆ ತೀವ್ರ ವಿರೋಧ ಹೊರಹಾಕಿದ್ದವು. ಮಹಿಳೆಯರ ಬಗ್ಗೆ ಪ್ರಧಾನಿ ಮೋದಿ ವಿಶೇಷ ಕಾಳಜಿ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ಈ ಬೇಡಿಕೆಯನ್ನು ನಿಜಗೊಳಿಸಲು ಅವರು ಮನಸ್ಸು ಮಾಡಿರಬಹುದೇ ಎಂದು ನಿರೀಕ್ಷೆಗಳೆದ್ದಿವೆ.
1972ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನದ ರಜತ ಮಹೋತ್ಸವದ ಗುರುತಿಗಾಗಿ ವಿಶೇಷ ಅಧಿವೇಶನ ನಡೆದಿತ್ತು. 1977ರಲ್ಲಿ ತಮಿಳುನಾಡು ಮತ್ತು ನಾಗಾಲ್ಯಾಂಡ್​ನಲ್ಲಿ ರಾಷ್ಟ್ರಪತಿ ಆಳ್ವಿಕೆ ವಿಸ್ತರಿಸುವ ಸಂಬಂಧ 2 ದಿನಗಳ ವಿಶೇಷ ಅಧಿವೇಶನ ಏರ್ಪಟ್ಟಿತ್ತು. ಅದೇ ರೀತಿ, 1991ರ ಜೂನ್​ನಲ್ಲಿ ಹರ್ಯಾಣದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಸಂಸತ್ತಿನ ಅನುಮೋದನೆಗಾಗಿ, 1992ರ ಆಗಸ್ಟ್ 9ರಂದು ಕ್ವಿಟ್ ಇಂಡಿಯಾ ಚಳವಳಿಯ 50ನೇ ವಾರ್ಷಿಕೋತ್ಸವ, 1997ರ ಆಗಸ್ಟ್ 15ರಂದು ಸ್ವಾತಂತ್ರೊ್ಯೕತ್ಸವದ 50ನೇ ವರ್ಷಾಚರಣೆಗೆ ವಿಶೇಷ ಅಧಿವೇಶನ ನಡೆಸಲಾಗಿತ್ತು.
2008ರಲ್ಲಿ ಯುಪಿಎ ಸರ್ಕಾರದ ಇಂಡೋ-ಅಮೆರಿಕ ನಾಗರಿಕ ಪರಮಾಣು ಒಪ್ಪಂದವನ್ನು ವಿರೋಧಿಸಿ ಎಡಪಕ್ಷಗಳ 60 ಸಂಸದರು ಡಾ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದರು. ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದರಿಂದ ಎನ್​ಡಿಎ ಮೈತ್ರಿಕೂಟ ವಿಶ್ವಾಸಮತ ಸಾಬೀತಿಗೆ ಒತ್ತಾಯಿಸಿತ್ತು. ಈ ಸವಾಲನ್ನು ಸ್ವೀಕರಿಸಿದ್ದ ಯುಪಿಎ, 2008ರ ಜುಲೈ 22ರಂದು ವಿಶೇಷ ಅಧಿವೇಶನವನ್ನು ಕರೆದಿತ್ತು. ಸಂಸತ್ತಿನಲ್ಲಿ ಗೆಲ್ಲುವುದರೊಂದಿಗೆ ಪರಮಾಣು ಒಪ್ಪಂದದೊಂದಿಗೆ ಮುಂದುವರೆಯುವುದು ಯುಪಿಎ ಉದ್ದೇಶವಾಗಿತ್ತು. ಯುಪಿಎ ವಿರೋಧಿಸುವ ವಿಷಯದಲ್ಲಿ ಅಂದು ಸಾಂಪ್ರದಾಯಿಕ ವಿರೋಧಿಗಳಾದ ಬಿಜೆಪಿ-ಎಡಪಕ್ಷಗಳು ಒಂದೇ ವೇದಿಕೆಯಡಿ ಸೇರಿಕೊಂಡ ವಿಶೇಷ ಸನ್ನಿವೇಶಕ್ಕೆ ಸಂಸತ್ತು ಸಾಕ್ಷಿಯಾಗಿತ್ತು. ಎರಡು ದಿನಗಳ ಪ್ರಖರ ಚರ್ಚೆಗಳ ಬಳಿಕ ಮತದಾನ ನಡೆದು, ಯುಪಿಎ 275 ಮತಗಳನ್ನು ಗಳಿಸಿ, ವಿಶ್ವಾಸ ಮತ ಗೆದ್ದಿತು. ಯುಪಿಎ ವಿರುದ್ಧ 256 ಸಂಸದರಷ್ಟೇ ಮತ ಹಾಕಿದರು. ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಯುಪಿಎ ಬೆಂಬಲಕ್ಕೆ ನಿಂತಿದ್ದರಿಂದ ಎಸ್ಪಿಯ 39 ಸಂಸದರು ಯುಪಿಎ ಬೆಂಬಲಕ್ಕೆ ನಿಂತು ಸರ್ಕಾರ ಉಳಿಸಿದರು. ನಂತರ, ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ ಯುಪಿಎ ಹೊಸ ಇತಿಹಾಸ ಸೃಷ್ಟಿಸಿತು. ಯುಪಿಎ ಸರ್ಕಾರದಿಂದ ದೂರ ಸರಿದ ನಂತರದಿಂದ ದೇಶದಲ್ಲಿ ಎಡಪಕ್ಷಗಳ ರಾಜಕೀಯ ಪ್ರಭಾವವೂ ಕಡಿಮೆಯಾಗುತ್ತಾ ಬಂತು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
