ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಉತ್ತರಮೇರೂರ ಪಟ್ಟಣವು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದೆ. ಪ್ರಜಾಪ್ರಭುತ್ವ ಕುರಿತಂತೆ ಮಾತನಾಡುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಉತ್ತರಮೇರೂರ ಶಾಸನವನ್ನು ಪ್ರಸ್ತಾಪಿಸಿದ್ದರು. ಗ್ರಾಮಸಭೆಗೆ ಸ್ಥಳೀಯ ಸಂವಿಧಾನದಂತಿರುವ ಈ ಶಾಸನದಲ್ಲಿ ಶಾಸನಸಭೆಗೆ ಸದಸ್ಯರ ಆಯ್ಕೆ, ಅರ್ಹತೆ, ಅನರ್ಹತೆ ಮುಂತಾದವುಗಳ ಕುರಿತು ವಿವರಿಸಲಾಗಿದೆ. ಇದು ಪ್ರಜಾಪ್ರಭುತ್ವ ಆಡಳಿತದ ಮಾದರಿಯೇ ಎಂಬ ಚರ್ಚೆಗಳನ್ನೂ ಶಾಸನವು ಹುಟ್ಟುಹಾಕಿದೆ.
ಭಾರತದ ಪ್ರಜಾಪ್ರಭುತ್ವದ ಇತಿಹಾಸ ಕುರಿತು ಈಚೆಗೆ ಮಾತನಾಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಕಾಂಚೀಪುರಂ ಬಳಿ ಇರುವ ಉತ್ತರಮೇರೂರ ಶಾಸನವನ್ನು ಉಲ್ಲೇಖಿಸಿದರು.
‘ಭಾರತವು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವವಾಗಿದ್ದು, ಇದು ಪ್ರಜಾಪ್ರಭುತ್ವದ ತಾಯಿಯಾಗಿದೆ. ಇದಕ್ಕೆ ಹಲವಾರು ಐತಿಹಾಸಿಕ ಉಲ್ಲೇಖಗಳಿವೆ. ಇದರಲ್ಲಿ ತಮಿಳುನಾಡು ಪ್ರಮುಖ ಉಲ್ಲೇಖವಾಗಿದೆ. ಇಲ್ಲಿ ದೊರೆತ ಶಾಸನವು ಗ್ರಾಮಸಭೆಗೆ ಸ್ಥಳೀಯ ಸಂವಿಧಾನದಂತಿದೆ. ಶಾಸನ ಸಭೆಯನ್ನು ಹೇಗೆ ನಡೆಸಬೇಕು? ಸದಸ್ಯರ ಅರ್ಹತೆ ಹೇಗಿರಬೇಕು? ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಹೇಗಿರಬೇಕು? ಮತ್ತು ಒಬ್ಬ ಸದಸ್ಯನನ್ನು ಅನರ್ಹಗೊಳಿಸುವುದು ಹೇಗೆ? ಎಂದು ಅದು ಹೇಳುತ್ತದೆ’ ಎಂದು ಮೋದಿ ವಿವರಿಸಿದರು.
ಶತಮಾನಗಳಿಂದ ವ್ಯಾಪಿಸಿರುವ ಹಲವು ಶಾಸನಗಳನ್ನು ಉತ್ತರಮೇರೂರ ಹೊಂದಿದೆ. ಇದರಲ್ಲಿ ಅತ್ಯಂತ ಪ್ರಸಿದ್ಧವಾದುದು ಮೋದಿ ಅವರು ಉಲ್ಲೇಖಿಸಿದ ‘ಪರಾಂತಕ 1’ (ಕ್ರಿ.ಶ. 907-953) (ಪರಾಂತಕ ಚೋಳ-1 ಎಂಬ ಚೋಳ ವಂಶಕ್ಕೆ ಸೇರಿದ ರಾಜ) ಆಳ್ವಿಕೆಯದ್ದಾಗಿದೆ. ಇವು ಗ್ರಾಮದ ಸ್ವಯಂ ಆಡಳಿತದ ಬಗ್ಗೆ ವಿವರಣೆಯನ್ನು ನೀಡುತ್ತವೆ. ಅಲ್ಲದೆ, ಇತಿಹಾಸಕಾರರು ಮತ್ತು ರಾಜಕೀಯ ನಾಯಕರು ಭಾರತದ ಪ್ರಜಾಪ್ರಭುತ್ವದ ಕಾರ್ಯಚಟುವಟಿಕೆಗಳ ಇತಿಹಾಸಕ್ಕೆ ಸಾಕ್ಷಿಯಾಗಿ ಇವುಗಳನ್ನು ಉಲ್ಲೇಖಿಸಿದ್ದಾರೆ. ವೈಕುಂಡ ಪೆರುಮಾಳ್ ದೇವಾಲಯದ ಗೋಡೆಗಳ ಮೇಲೆ ಪರಾಂತಕ 1ರ ಆಳ್ವಿಕೆಯ ಪ್ರಸಿದ್ಧ ಶಾಸನವು ಕಂಡುಬರುತ್ತದೆ.
ಶಾಸನವು ಸ್ಥಳೀಯ ಸಭೆ, ಅಂದರೆ ಗ್ರಾಮ ಸಭೆ ಕುರಿತ ಕಾರ್ಯನಿರ್ವಹಣೆಯ ವಿವರಗಳನ್ನು ನೀಡುತ್ತದೆ. ಈ ಸಭೆಯು ಬ್ರಾಹ್ಮಣರಿಂದ ಕೂಡಿದ ಒಂದು ಸಭೆಯಾಗಿತ್ತು. ಅಲ್ಲದೆ, ವಿವಿಧ ವಿಷಯಗಳಿಗೆ ವಿಶೇಷವಾದ ಸಮಿತಿಗಳನ್ನೂ ಹೊಂದಿತ್ತು. ಸದಸ್ಯರನ್ನು ಹೇಗೆ ಆಯ್ಕೆ ಮಾಡಲಾಗುತ್ತಿತ್ತು, ಅಗತ್ಯವಿರುವ ಅರ್ಹತೆಗಳು, ಅವರ ಕರ್ತವ್ಯಗಳು, ಜವಾಬ್ದಾರಿಗಳು ಮತ್ತು ಅವರನ್ನು ತೆಗೆದುಹಾಕಬಹುದಾದ ಸಂದರ್ಭಗಳನ್ನು ಉತ್ತರಮೇರೂರಿನ ಶಾಸನವು ವಿವರಿಸುತ್ತದೆ.
ಸಭೆಯನ್ನು ಹೇಗೆ ರಚಿಸಬೇಕು ಎಂಬುದನ್ನು ಈ ಶಾಸನದಲ್ಲಿ ವಿವರಿಸಲಾಗಿದೆ. 30 ವಾರ್ಡ್​ಗಳು ಇರುತ್ತವೆ. ಈ 30 ವಾರ್ಡ್​ಗಳಲ್ಲಿ ವಾಸಿಸುವ ಪ್ರತಿಯೊಬ್ಬರೂ ಒಟ್ಟುಗೂಡಿ ಗ್ರಾಮ ಸಭೆಗೆ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ ಎಂದು ಶಾಸನದಲ್ಲಿ ಹೇಳಲಾಗಿದೆ. ಇಂತಹ ಪ್ರತಿನಿಧಿಗೆ ಅರ್ಹತೆಗಳು ಏನಾಗಿರಬೇಕು ಎಂಬುದನ್ನು ಕೂಡ ಅದು ವಿವರಿಸುತ್ತದೆ. ನಿರ್ದಿಷ್ಟ ಪ್ರಮಾಣದ ಜಮೀನಿನ ಮಾಲೀಕತ್ವ ಮತ್ತು ಮನೆ ಹೊಂದುವುದು, 35 ರಿಂದ 70 ವರ್ಷ ವಯಸ್ಸಿನವರಾಗಿರುವುದು ಹಾಗೂ ಮಂತ್ರಗಳು- ಬ್ರಾಹ್ಮಣಗಳನ್ನು ತಿಳಿದುಕೊಳ್ಳುವುದು (ವೈದಿಕ ಆಚರಣೆಗಳ ಸಂಗ್ರಹ) ಸೇರಿವೆ. ವ್ಯಕ್ತಿಯು ಕನಿಷ್ಠ ಒಂದು ವೇದ ಮತ್ತು ನಾಲ್ಕು ಭಾಷ್ಯಗಳನ್ನು ಕಲಿತಿದ್ದರೆ ಭೂಮಿಯ ಮಾಲೀಕತ್ವದ ಅರ್ಹತೆ ಕುರಿತು ವಿನಾಯಿತಿ ನೀಡುವುದನ್ನು ಕೂಡ ಇದರಲ್ಲಿ ಉಲ್ಲೇಖಿಸಲಾಗಿದೆ. ಪ್ರತಿನಿಧಿಗಳು ವ್ಯವಹಾರದಲ್ಲಿ ಚೆನ್ನಾಗಿ ಪರಿಣತರು ಮತ್ತು ಸದ್ಗುಣಶೀಲರು ಆಗಿರಬೇಕು ಎಂಬುದು ಕೂಡ ಅರ್ಹತೆಗಳಲ್ಲಿ ಸೇರಿದೆ.
ನಂತರ ಶಾಸನವು ಯಾರನ್ನಾದರೂ ಮತ್ತು ಅವರ ಕುಟುಂಬವನ್ನು (ಎಲ್ಲಾ ಸಂಬಂಧಗಳನ್ನು ವ್ಯವಸ್ಥಿತವಾಗಿ ಪಟ್ಟಿ ಮಾಡಲಾಗಿದೆ) ಪರಿಗಣನೆಯಿಂದ ಅನರ್ಹಗೊಳಿಸುವ ಹಲವಾರು ಅಂಶಗಳನ್ನು ಪಟ್ಟಿ ಮಾಡುತ್ತದೆ. ಈ ಹಿಂದೆ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಲೆಕ್ಕವನ್ನು ಸಲ್ಲಿಸದಿರುವುದು; ಐದು ’ಮಹಾ ಪಾಪಗಳಲ್ಲಿ’ ಮೊದಲ ನಾಲ್ಕರಲ್ಲಿ (ಬ್ರಾಹ್ಮಣನನ್ನು ಕೊಲ್ಲುವುದು, ಮದ್ಯಪಾನ, ಕಳ್ಳತನ ಮತ್ತು ವ್ಯಭಿಚಾರ) ಯಾವುದಾದರೂ ಒಂದನ್ನು ಎಸಗುವುದು; ಬಹಿಷ್ಕೃತರೊಂದಿಗೆ ಸಂಬಂಧ ಹೊಂದುವುದು ಮತ್ತು ನಿಷೇಧಿತ ಭಕ್ಷ್ಯಗಳನ್ನು ತಿನ್ನುವುದು ಇದರಲ್ಲಿ ಸೇರಿವೆ. ಈ ಎಲ್ಲ ಅರ್ಹತೆಗಳನ್ನು ಹೊಂದಿರುವವರು ಮತ್ತು ಇಚ್ಛೆಯುಳ್ಳ ಎಲ್ಲರೂ ತಮ್ಮ ಹೆಸರನ್ನು ತಾಳೆ ಎಲೆಯ ಗರಿಗಳಲ್ಲಿ ಬರೆಯಬೇಕು. ತದನಂತರದಲ್ಲಿ ಸಭಾಂಗಣದಲ್ಲಿ ಪುರೋಹಿತರು ನಡೆಸುವ ಲಾಟರಿ ಡ್ರಾದ ಆಧಾರದ ಮೇಲೆ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದು ಶಾಸನ ಹೇಳುತ್ತದೆ.
ಉತ್ತರಮೇರೂರ ಶಾಸನವು ಸ್ಥಳೀಯ ಸ್ವಯಂ ಆಡಳಿತದ ವಿವರಗಳನ್ನು ನೀಡುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಸಾಕಷ್ಟು ದೂರವಿದೆ. ಇದು ಕೇವಲ ಭೂಮಾಲೀಕ ಬ್ರಾಹ್ಮಣರ ಒಂದು ಸಣ್ಣ ಉಪವಿಭಾಗಕ್ಕೆ ಸಭಾ ಸದಸ್ಯತ್ವವನ್ನು ನಿರ್ಬಂಧಿಸುತ್ತದೆ. ಚುನಾವಣೆ ನಡೆಯುವುದಿಲ್ಲ. ಲಾಟರಿ ಡ್ರಾ ಮಾದರಿ ಸದಸ್ಯರನ್ನು ಆಯ್ಕೆ ಮಾಡುತ್ತದೆ ಎಂಬುದು ತಜ್ಞರ ಅಭಿಮತವಾಗಿದೆ. ಹೀಗಿದ್ದರೂ, ಈ ಶಾಸನವನ್ನು ಪ್ರಜಾಸತ್ತಾತ್ಮಕ ಕಾರ್ಯಚಟುವಟಿಕೆಗೆ ನಿದರ್ಶನವಾಗಿ ಉಲ್ಲೇಖಿಸಬಾರದು ಎನ್ನಲಾಗದು. ಉತ್ತರಮೇರೂರಿನ ಶಾಸನವು ರಾಜನ ನೇರ ಅಧಿಕಾರದ ಹೊರಗಿನ ಸ್ಥಳೀಯ ಸ್ವಯಂ ಸರ್ಕಾರದ ವ್ಯವಸ್ಥೆಯಾಗಿದೆ. ಎಲ್ಲ ದೃಷ್ಟಿಕೋನಗಳಿಂದ ಈ ಶಾಸನವು ಸಂವಿಧಾನದಂತಿದ್ದು, ಇದು ಸಭೆಯ ಸದಸ್ಯರ ಜವಾಬ್ದಾರಿಗಳನ್ನು ಮತ್ತು ಈ ಸದಸ್ಯರ ಅಧಿಕಾರದ ಮಿತಿಗಳನ್ನು ವಿವರಿಸುತ್ತದೆ. ಕಾನೂನಿನ ಆಳ್ವಿಕೆಯು (ವೈಯಕ್ತಿಕ ಆದೇಶದ ಬದಲಿಗೆ) ಪ್ರಜಾಪ್ರಭುತ್ವದ ಅತ್ಯಗತ್ಯ ಅಂಶವಾಗಿದ್ದು, ಉತ್ತರಮೇರೂರಿನ ಶಾಸನವು ಇದನ್ನು ಅನುಸರಿಸುವ ಆಡಳಿತ ವ್ಯವಸ್ಥೆಯನ್ನು ವಿವರಿಸುತ್ತದೆ ಎಂಬುದು ಪರಿಣತರ ಅಭಿಪ್ರಾಯವಾಗಿದೆ.
ಉತ್ತರಮೇರೂರ ಇಂದಿನ ಕಾಂಚೀಪುರಂ ಜಿಲ್ಲೆಯಲ್ಲಿದೆ. 2011ರ ಜನಗಣತಿ ಪ್ರಕಾರ ಸರಿಸುಮಾರು 25,000 ಜನಸಂಖ್ಯೆ ಹೊಂದಿದೆ. ಇದು ಪಲ್ಲವ ಮತ್ತು ಚೋಳರ ಆಳ್ವಿಕೆಯಲ್ಲಿ ನಿರ್ವಿುಸಲಾದ ಐತಿಹಾಸಿಕ ದೇವಾಲಯಗಳಿಗೆ ಹೆಸರುವಾಸಿಯಾಗಿದೆ.
ಸಭಾದೊಳಗಿನ ಹಲವಾರು ಪ್ರಮುಖ ಸಮಿತಿಗಳು ಮತ್ತು ಅವುಗಳ ವಿಶಿಷ್ಟ ಕಾರ್ಯಗಳನ್ನು ಶಾಸನವು ವಿವರಿಸುತ್ತದೆ. ಇವುಗಳಲ್ಲಿ ಉದ್ಯಾನ ಸಮಿತಿ, ಕೆರೆ ಸಮಿತಿ, ವಾರ್ಷಿಕ ಸಮಿತಿ (ಪೂರ್ವಾನುಭವ ಮತ್ತು ಸಾಕಷ್ಟು ಜ್ಞಾನವುಳ್ಳವರ ಕಾರ್ಯಕಾರಿ ಸಮಿತಿ), ನ್ಯಾಯದ ಮೇಲ್ವಿಚಾರಣೆಯ ಸಮಿತಿ (ನೇಮಕಾತಿಗಳು ಮತ್ತು ತಪ್ಪುಒಪು್ಪಗಳ ಮೇಲ್ವಿಚಾರಣೆ ಮಾಡಲು), ಚಿನ್ನದ ಸಮಿತಿ (ಗ್ರಾಮದ ದೇವಸ್ಥಾನದಲ್ಲಿನ ಎಲ್ಲಾ ಚಿನ್ನದ ಉಸ್ತುವಾರಿ) ಮತ್ತು ಐದು ಪಟ್ಟು ಸಮಿತಿ (ಇದರ ಪಾತ್ರವು ಶಾಸನದಲ್ಲಿ ಅಸ್ಪಷ್ಟವಾಗಿದೆ) ಸೇರಿವೆ. ಈ ಸಮಿತಿಯ ಕಾರ್ಯಯೋಜನೆಯು 360 ದಿನಗಳವರೆಗೆ ಇರುತ್ತದೆ. ನಂತರ ಸದಸ್ಯರು ನಿವೃತ್ತರಾಗಬೇಕಾಗುತ್ತದೆ. ನಕಲು ದುಷ್ಕೃತ್ಯ ಅಥವಾ ಕತ್ತೆಯ ಮೇಲೆ ಸವಾರಿ ರೀತಿಯ ಯಾವುದೇ ತಪ್ಪು ಎಸಗಿರುವ ಸಮಿತಿಯ ಸದಸ್ಯರನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಶಾಸನ ಹೇಳುತ್ತದೆ. ಅಲ್ಲದೆ, ಲೆಕ್ಕಪತ್ರ ನಿರ್ವಹಣೆಗೆ ಶಾಸನವು ಒತ್ತು ನೀಡುತ್ತದೆ. ಯಾವುದೇ ಹೇರಾಪೇರಿ ಕಂಡುಬಂದರೆ ಸಭಾ ಸದಸ್ಯರನ್ನು ಅನರ್ಹಗೊಳಿಸಬೇಕು ಎಂದೂ ಹೇಳಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + nine =
Remember me
