ನವದೆಹಲಿ:ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಸರ್ಕಾರ ಆರ್ಥಿಕ ದುರಾಡಳಿತ ನಡೆಸಿದ್ದು, ‘ಕುಟುಂಬ ಮೊದಲು’ ಎಂಬ ನೀತಿಯನ್ನು ಅನುಸರಿಸಿತ್ತು. 2014ರಲ್ಲಿ ದೇಶವನ್ನು ಸಂಕಷ್ಟದಲ್ಲಿ ಬಿಟ್ಟುಹೋಯಿತು. ಆದರೆ ಈಗ ಆರ್ಥಿಕತೆಯನ್ನು ನಿಭಾಯಿಸುವ ಬಗ್ಗೆ ನರೇಂದ್ರ ಮೋದಿ ಸರ್ಕಾರಕ್ಕೆ ಪಾಠ ಮಾಡುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ಮಂಡಿಸಿರುವ ಶ್ವೇತಪತ್ರದ ಮೇಲಿನ ಚರ್ಚೆ ಮೇಲೆ ಅವರು ಲೋಕಸಭೆಯಲ್ಲಿ ಮಾತನಾಡಿ, ಮೋದಿ ಸರ್ಕಾರ ‘ರಾಷ್ಟ್ರ ಮೊದಲು’ ನೀತಿ ಅನುಸರಿಸುತ್ತಿದೆ. ಭಾರತದ ಆರ್ಥಿಕತೆಯನ್ನು ದುರ್ಬಲ ಐದರ ಪಟ್ಟಿಯಿಂದ ಟಾಪ್ ಐದರ ಪಟ್ಟಿಗೆ ತೆಗೆದುಕೊಂಡು ಬಂದಿದೆ. ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ ಎಂದು ಹೇಳಿದರು.
ಶ್ವೇತಪತ್ರವು ಮುಂದಿನ ಪೀಳಿಗೆಯ ಜನರಿಗೆ ದಾಖಲೆಯಾಗಿದೆ. ಭಾರತದ ಗತವೈಭವವನ್ನು ಪುನಃಸ್ಥಾಪಿಸಲು ಪ್ರಧಾನಿ ಮೋದಿ ಯಾವ ಪ್ರಯತ್ನಗಳನ್ನು ಮಾಡಿದ್ದಾರೆ ಎಂಬುದನ್ನು ಯುವಜನತೆ ತಿಳಿದುಕೊಳ್ಳಬೇಕು. 2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾದಾಗ ಏನಾಯಿತು? ಕೋವಿಡ್ ನಂತರ ಏನಾಯಿತು? ಎಂಬುದನ್ನು ನೋಡಿದಾಗ ಅಂತರ ಸ್ಪಷ್ಟವಾಗಿ ತೋರುತ್ತದೆ. ಸರ್ಕಾರದ ಉದ್ದೇಶ ಪ್ರಾಮಾಣಿಕವಾಗಿದ್ದರೆ ಫಲಿತಾಂಶ ಉತ್ತಮವಾಗಿರುತ್ತದೆ. 2008ರ ಜಾಗತಿಕ ಹಣಕಾಸು ಬಿಕ್ಕಟ್ಟಿಗೆ ಹೋಲಿಸಿದರೆ ಕೋವಿಡ್ ಬಿಕ್ಕಟ್ಟು ತುಂಬಾ ಗಂಭೀರವಾಗಿತ್ತು. ಆದರೆ, ಮೋದಿ ಸರ್ಕಾರ ಅದನ್ನು ಸಮರ್ಥವಾಗಿ ನಿಭಾಯಿಸಿದೆ. ಜನರಿಗೆ ಉಚಿತ ಲಸಿಕೆಗಳನ್ನು ಒದಗಿಸಿದೆ. 2008ರಲ್ಲಿ ಯುಪಿಎ ಸರ್ಕಾರ ಬಿಕ್ಕಟ್ಟನ್ನು ನಿಭಾಯಿಸುವ ಪ್ರಾಮಾಣಿಕ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಸಚಿವೆ ನಿರ್ಮಲಾ ವಾಗ್ದಾಳಿ ನಡೆಸಿದರು.
ಬಿಕ್ಕಟ್ಟಿನ ಸಂದರ್ಭದಲ್ಲೂ ಹಗರಣ!:ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಮಯದಲ್ಲೂ ಕಾಂಗ್ರೆಸ್ ರಾಷ್ಟ್ರದ ಹಿತಾಸಕ್ತಿಯ ರಕ್ಷಣೆ ಮಾಡದೇ ಹಗರಣಗಳನ್ನೇ ಮುಂದುವರಿಸಿತು. 2014ರಲ್ಲೂ ಅವರು ಅಧಿಕಾರದಲ್ಲಿ ಮುಂದುವರಿದಿದ್ದರೆ ದೇಶ ಏನಾಗುತ್ತಿತ್ತು ಎಂಬುದು ದೇವರಿಗೇ ಗೊತ್ತು. ಕಲ್ಲಿದ್ದಲು ಹಗರಣದಲ್ಲಿ ಸಿಎಜಿ ವರದಿ ಪ್ರಕಾರ ದೇಶಕ್ಕೆ 1.86 ಲಕ್ಷ ಕೋಟಿ ರೂ. ನಷ್ಟವಾಗಿದೆ. 214 ಕಲ್ಲಿದ್ದಲು ಬ್ಲಾಕ್ ಪರವಾನಗಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಕಲ್ಲಿದ್ದಲು ಹಗರಣವು ಉದ್ಯೋಗ ನಷ್ಟಕ್ಕೆ ಕಾರಣವಾಯಿತು. ಕಲ್ಲಿದ್ದಲು ಕೊರತೆ ಮತ್ತು ವಿದ್ಯುತ್ ವ್ಯತ್ಯಯವನ್ನು ಸೃಷ್ಟಿಸಿತು. ಹೂಡಿಕೆಗಳು ನಷ್ಟವನ್ನು ಅನುಭವಿಸಿದವು. ಮತ್ತೊಂದೆಡೆ ಮೋದಿ ಸರ್ಕಾರ ಕಲ್ಲಿದ್ದಲು ಹರಾಜು ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಿತು. 2014ರಲ್ಲಿ 567 ಮೆಟ್ರಿಕ್ ಟನ್ ಇದ್ದ ಕಲ್ಲಿದ್ದಲು ಉತ್ಪಾದನೆ ಈಗ 900 ಮೆಟ್ರಿಕ್ ಟನ್​ಗೆ ಏರಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪರೀಕ್ಷಾ ಅಕ್ರಮ ತಡೆ ಮಸೂದೆ ಅಂಗೀಕಾರ:ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅವ್ಯವಹಾರ ಮತ್ತು ಅಕ್ರಮಗಳನ್ನು ತಡೆಗಟ್ಟುವ ಉದ್ದೇಶ ದಿಂದ ಸಂಸತ್ತಿನಲ್ಲಿ ಶುಕ್ರವಾರ ಮಹತ್ವದ ಮಸೂದೆಯನ್ನು ಅಂಗೀಕರಿಸಲಾಗಿದೆ. ವಿರೋಧ ಪಕ್ಷಗಳ ಕೆಲ ಸದಸ್ಯರು ಪ್ರಸ್ತಾಪಿಸಿದ ತಿದ್ದುಪಡಿಗಳು ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯಸಭೆಯಲ್ಲಿ ಮಸೂದೆಯನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಫೆ 6ರಂದು ಇದು ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು. ಅಭ್ಯರ್ಥಿಗಳ ಭವಿಷ್ಯದೊಂದಿಗೆ ಆಟವಾಡುವುದನ್ನು ತಡೆಯಲು ಈ ಮಸೂದೆಯನ್ನು ರೂಪಿಸಲಾಗಿದೆ. ದೇಶದ ಯುವಶಕ್ತಿಯನ್ನು ಬೆರಳೆಣಿಕೆಯಷ್ಟು ಮಂದಿಯ ಕೈಗೆ ಒಪ್ಪಿಸಲು ಅಥವಾ ಬಲಿಕೊಡಲು ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಹೇಳಿದೆ. ಹೊಸ ಮಸೂದೆಯಲ್ಲಿ ತಪ್ಪಿತಸ್ಥರಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂ. ದಂಡ ವಿಧಿಸಲು ಅವಕಾಶ ಇದೆ.
ಕಾಮನ್​ವೆಲ್ತ್, ಫೋನ್ ಬ್ಯಾಂಕಿಂಗ್:ಕಾಂಗ್ರೆಸ್ ನಾಯಕರು ಈಗ ಕ್ರೋನಿ ಬಂಡವಾಳಶಾಹಿಯ ಬಗ್ಗೆ ನಮಗೆ ಉಪನ್ಯಾಸ ನೀಡುತ್ತಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಕಾಮನ್​ವೆಲ್ತ್ ಕ್ರೀಡಾಕೂಟ ಹಗರಣವು ದೇಶಕ್ಕೆ ಕೆಟ್ಟ ಹೆಸರನ್ನು ತಂದಿತ್ತು. ಯುಪಿಎ ಅವಧಿಯಲ್ಲಿ ಫೋನ್ ಬ್ಯಾಂಕಿಂಗ್ ಪದ್ಧತಿಯು ಅನುತ್ಪಾದಕ ಸಾಲಗಳ ಹೆಚ್ಚಳಕ್ಕೆ ಕಾರಣವಾಯಿತು. ಈಗ ಮೋದಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ಕಾರಣ ಸಾರ್ವಜನಿಕ ವಲಯದ ಬ್ಯಾಂಕುಗಳ ಅನುತ್ಪಾದಕ ಆಸ್ತಿ ಪ್ರಮಾಣ ಶೇ. 3.2ಕ್ಕೆ ಕುಸಿದಿವೆ. ಬ್ಯಾಂಕ್​ಗಳ ಲಾಭದಾಯಕತೆ 1.08 ಲಕ್ಷ ಕೋಟಿ ರೂ.ಗಳಿಗೆ ಏರಿದೆ.
ಶ್ವೇತಪತ್ರವಲ್ಲ, ಸುಳ್ಳುಪತ್ರ ಎಂದ ಕಾಂಗ್ರೆಸ್:ದೇಶದ ಆರ್ಥಿಕತೆಯ ಬಗ್ಗೆ ಮೋದಿ ಸರ್ಕಾರ ಪ್ರಕಟಿಸಿರುವ ಶ್ವೇತಪತ್ರ ‘ಬಿಳಿ ಸುಳ್ಳುಪತ್ರ’ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ. ನಿರುದ್ಯೋಗದಂತಹ ಸಮಸ್ಯೆಗಳ ಬಗ್ಗೆ ಇಂತಹ ದಾಖಲೆಯನ್ನು ಹೊರತರಬೇಕಿತ್ತು. ನೋಟು ರದ್ದತಿ, ಗಡಿ ಉದ್ವಿಗ್ನತೆ ಮತ್ತು ಮಣಿಪುರ ಹಿಂಸಾಚಾರ ಬಗ್ಗೆ ಶ್ವೇತಪತ್ರ ತನ್ನಿ ಎಂದು ಕಾಂಗ್ರೆಸ್ ನಾಯಕರು ಪ್ರತಿಪಾದಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ಇದು ಶ್ವೇತಪತ್ರವಲ್ಲ, ಸುಳ್ಳು ಪತ್ರ. ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಪ್ಪುಪತ್ರವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಸರ್ಕಾರದ ಶ್ವೇತಪತ್ರಕ್ಕೆ ಉತ್ತರ ಕಾಂಗ್ರೆಸ್​ನ ಕಪ್ಪುಪತ್ರದಲ್ಲಿದೆ. ಶ್ವೇತಪತ್ರದಲ್ಲಿ ಸರ್ಕಾರ ನೋಟು ಅಮಾನ್ಯೀಕರಣ, ನಿರುದ್ಯೋಗ, ಹಣದುಬ್ಬರ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಚೀನಾದೊಂದಿಗಿನ ಗಡಿ ಪರಿಸ್ಥಿತಿ, ಉದ್ವಿಗ್ನತೆ ಬಗ್ಗೆ ಶ್ವೇತಪತ್ರ ತರುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಆದರೆ ಸರ್ಕಾರ ಇದರ ಬಗ್ಗೆ ಮೌನವಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಮೋದಿ ಈವೆಂಟ್ ಮ್ಯಾನೇಜರ್ ಆಗಿದ್ದಾರೆ ಎಂದು ಸ್ವತಃ ಆಡ್ವಾಣಿ ಈ ಹಿಂದೆ ಹೇಳಿದ್ದರು. ದೇಶದಲ್ಲಿ 45 ವರ್ಷಗಳ ಗರಿಷ್ಠ ಮಟ್ಟದಲ್ಲಿ ನಿರುದ್ಯೋಗ ಇದೆ. ಭ್ರಷ್ಟಾಚಾರ, ರೈತರು-ಮಹಿಳೆಯರಿಗೆ ಮತ್ತು ಯುವಕರಿಗೆ ಆಗುತ್ತಿರುವ ಅನ್ಯಾಯದಂತಹ ನೈಜ ಸಮಸ್ಯೆಗಳ ಬಗ್ಗೆ ಸರ್ಕಾರ ಮೌನವಾಗಿದೆ. ಬಂದರುಗಳು, ವಿಮಾನ ನಿಲ್ದಾಣಗಳು, ರೈಲ್ವೆ, ಕಾರ್ಖಾನೆಗಳು, ತೈಲ ಸಂಸ್ಕರಣಾ ಘಟಕಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಯುಪಿಎ ಆಡಳಿತದಲ್ಲಿ ದೇಶದ ಆರ್ಥಿಕತೆಯ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಿರುವುದು ಕರಾಳ ಸತ್ಯವನ್ನು ಮರೆಮಾಚಲು ಮಾಡಿದ ಯತ್ನ ಎಂದು ಅವರು ಆರೋಪಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 7 =
Remember me
