ನವದೆಹಲಿ:ದೇಶದಲ್ಲಿ ಕರೊನಾ ದೈನಿಕ ಪ್ರಕರಣದ ಸಂಖ್ಯೆ ಒಂದು ಲಕ್ಷದ ಸಮೀಪ ತಲುಪಿದೆ. ಗುರುವಾರ 90,928 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ 200 ದಿನಗಳಲ್ಲೇ ಅತ್ಯಧಿಕ ನಿತ್ಯದ ಕೇಸ್ ಆಗಿದೆ. ಇದೇ ಅವಧಿಯಲ್ಲಿ ಒಮಿಕ್ರಾನ್ ಕೂಡ ಅಬ್ಬರಿಸಿದ್ದು ಒಂದೇ ದಿನ 495 ಕೇಸ್ ದೃಢಪಟ್ಟಿದೆ. ದೇಶದಲ್ಲಿ ಅದರ ಸಂಖ್ಯೆ 2,630ಕ್ಕೆ ಏರಿದೆ. ಇದು ಈ ವರೆಗಿನ ಒಮಿಕ್ರಾನ್​ನ ಅತ್ಯಧಿಕ ದೈನಿಕ ಏರಿಕೆಯಾಗಿದೆ.
ಒಂದು ದಿನದಲ್ಲಿ 325 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆ 4,82,876ಕ್ಕೆ ಏರಿದೆ. ಸೋಂಕಿತರ ಒಟ್ಟು ಸಂಖ್ಯೆ 3,51,09,286ಕ್ಕೆ ತಲುಪಿದೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 2,85,401 ಆಗಿದೆ. ದೈನಿಕ ಪಾಸಿಟಿವಿಟಿ ದರ ಶೇಕಡ 6.43 ಹಾಗೂ ಸಾಪ್ತಾಹಿಕ ದರ ಶೇ. 3.47 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೆಹಲಿ, ಮುಂಬೈ ಮತ್ತಿತರ ದೊಡ್ಡ ನಗರಗಳಲ್ಲಿ ಕೋವಿಡ್-19 ಪ್ರಕರಣಗಳು ಅಬ್ಬರಿಸುತ್ತಿದ್ದು ಒಮಿಕ್ರಾನ್ ತಳಿ ಇದಕ್ಕೆ ಕಾರಣ ಎಂದು ಹೇಳಲಾಗಿದೆ.
ಅಮೆರಿಕದಲ್ಲಿ ಒಮಿಕ್ರಾನ್ ತೀವ್ರ:ಅಮೆರಿಕದಲ್ಲಿ ಒಮಿಕ್ರಾನ್ ರೂಪಾಂತರಿಯ ಸೋಂಕು ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮುಂಬರುವ ದಿನದಲ್ಲಿ ಆಸ್ಪತ್ರೆಗಳಲ್ಲಿ ಕೋವಿಡ್ ಸಂಬಂಧಿತ ಬೆಡ್​ಗಳು ಹೆಚ್ಚಾಗಿ ಬೇಕಾಗುವ ಸನ್ನಿವೇಶ ನಿರ್ವಣವಾಗಲಿದೆ. ಒಮಿಕ್ರಾನ್ ತೀವ್ರತೆ ಅಲ್ಪವಾದರೂ ಅದು ಹರಡುವ ಪ್ರಮಾಣ ಕಳವಳಕಾರಿಯಾಗಿದೆ. ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಹಿಂದಿನ ದಾಖಲೆಗಳನ್ನು ಮುರಿಯಬಹುದೆಂಬ ಆತಂಕ ಉಂಟಾಗಿದೆ. ಬೆಡ್​ಗಳಿಗೆ ಬೇಡಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕೆಲವು ತುರ್ತು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
11 ಡೋಸ್ ಪಡೆದ ವೃದ್ಧ?:ಬಿಹಾರದ ಮಹಾದೇವಪುರದ ಚೌಸಾದ 84 ವರ್ಷದ ವ್ಯಕ್ತಿಯೊಬ್ಬ ತಾನು 11 ಡೋಸ್ ಕರೊನಾ ಲಸಿಕೆ ಹಾಕಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ. ಲಸಿಕೆ ಪ್ರಕ್ರಿಯೆಯ ಮೇಲೆ ನಿಗಾ ಇಡುವ ವ್ಯವಸ್ಥೆಯ ದಕ್ಷತೆಯ ಬಗ್ಗೆಯೇ ಇದು ಅನುಮಾನ ಹುಟ್ಟಿಸುವಂತೆ ಮಾಡಿದೆ. ತಾನು 11 ಡೋಸ್ ವ್ಯಾಕ್ಸಿನ್ ಪಡೆದಿದ್ದು ಅದರಿಂದ ತನಗೆ ಅಪಾರ ಉಪಯೋಗವಾಗಿದೆ ಎಂದು ಬ್ರಹ್ಮದೇವ್ ಎಂಬಾತ ಹೇಳಿಕೊಂಡಿದ್ದು ಗಾಬರಿಗೊಂಡಿರುವ ಅಧಿಕಾರಿಗಳು ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ.
ಚುನಾವಣಾ ರ‍್ಯಾಲಿ ಬೇಡ:ದೇಶದಲ್ಲಿನ ಪ್ರಸ್ತುತ ಕರೊನಾ ಪರಿಸ್ಥಿತಿ ದೊಡ್ಡ ಚುನಾವಣಾ ರ್ಯಾಲಿಗಳು ಹಾಗೂ ರೋಡ್ ಶೋಗಳನ್ನು ನಡೆಸಲು ಪ್ರಶಸ್ತವಾಗಿಲ್ಲ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಚುನಾವಣೆ ಆಯೋಗಕ್ಕೆ ತಿಳಿಸಿದ್ದಾರೆ. ದೊಡ್ಡ ರ‍್ಯಾಲಿ ಹಾಗೂ ರೊಡ್ ಶೋ ನಡೆಸದಿರಲು ರಾಜಕೀಯ ಪಕ್ಷಗಳೇ ನಿರ್ಧರಿಸಬೇಕು ಎಂದು ಆಯೋಗ ಅಭಿಪ್ರಾಯ ಪಟ್ಟಿದೆ.
ಚುನಾವಣೆಗಳಿಗೆ ಸೂಕ್ತ ತಯಾರಿ ನಡೆಸಿಕೊಳ್ಳುವಂತೆ ಹಾಗೂ ಲಸಿಕೆ ವೇಗ ಹೆಚ್ಚಿಸುವಂತೆ ಚುನಾವಣೆ ನಡೆಯಲಿರುವ ಪಂಚ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರಕ್ಕೆ ಆಯೋಗ ಇದಕ್ಕೂ ಮುನ್ನ ಸೂಚನೆ ನೀಡಿತ್ತು.
ನಿರ್ಲಕ್ಷ್ಯ ಅಪಾಯಕರ:ಒಮಿಕ್ರಾನ್​ನ ತೀವ್ರತೆ ಲಘುವಾಗಿರುತ್ತದೆ ಎಂದು ಹೇಳುವುದು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಅಭಿಪ್ರಾಯಪಟ್ಟಿದೆ. ‘ತೀರಾ ಸರಳೀಕೃತ ವಿವರಣೆಗಳು ಅಪಾಯಕಾರಿ ಆಗಬಲ್ಲವು. ಡೆಲ್ಟಾಕ್ಕೆ ಹೋಲಿಸಿದರೆ ಒಮಿಕ್ರಾನ್ ಸೋಂಕಿನಿಂದ ಆಸ್ಪತ್ರೆ ಸೇರುವವರ ಸಂಖ್ಯೆ ಕಡಿಮೆಯಿದೆ. ಹಾಗೆಂದ ಮಾತ್ರಕ್ಕೆ ಹೊಸ ರೂಪಾಂತರಿ ಲಘು ಸ್ವರೂಪದ್ದು ಎನ್ನುವುದು ಸರಿಯಲ್ಲ’ ಎಂದು ಸೋಂಕು ರೋಗಗಳ ತಜ್ಞೆ ಹಾಗೂ ಡಬ್ಲ್ಯುಎಚ್​ಒ ಕೋವಿಡ್-19 ತಾಂತ್ರಿಕ ಸಮಿತಿ ಮುಖ್ಯಸ್ಥೆ ಮಾರಿಯಾ ವಾನ್ ಕೆರ್​ಖೋವ್ ಹೇಳಿದ್ದಾರೆ. ಕೋವಿಡ್ ಸುನಾಮಿ ಎದುರಾಗಲಿದ್ದು ದೊಡ್ಡ ಸಮಾರಂಭಗಳು ಹಾಗೂ ಸಭೆಗಳನ್ನು ರದ್ದುಪಡಿಸುವಂತೆಯೂ ಸಲಹೆ ಮಾಡಿದೆ.
ಮೊಲ್ನುಪಿರಾವಿರ್ ಬಗ್ಗೆ ಆತಂಕ:ಕೋವಿಡ್ ತಡೆ ಮಾತ್ರೆ ಬಗ್ಗೆ ಮಹತ್ವದ ಸುರಕ್ಷತಾ ಆತಂಕ ವ್ಯಕ್ತವಾಗಿದೆ ಎಂದು ಭಾರತೀಯ ಸಂಶೋಧನಾ ಮಂಡಳಿಯ ಮುಖ್ಯಸ್ಥ ಬಲರಾಂ ಭಾರ್ಗವ ಹೇಳಿದ್ದಾರೆ. 2021ರ ಡಿಸೆಂಬರ್ ಕೊನೆ ವಾರದಲ್ಲಿ ಈ ಮಾತ್ರೆಯ ಬಳಕೆಗೆ ಭಾರತ ಔಷಧಗಳ ಮಹಾ ನಿಯಂತ್ರಕರು (ಡಿಸಿಜಿಐ) ಅನುಮೋದನೆ ನೀಡಿದ್ದರು. ಮೊಲ್ನುಪಿರಾವಿರ್ ಸೇವನೆಯಿಂದ ಟೆರಾಟೊಜೆನಿಸಿಟಿ ಮತ್ತು ಮ್ಯುಟಾಜೆನಿಸಿಟಿ ಉಂಟಾಗಬಹುದು ಎಂದು ಭಾರ್ಗವ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
