ನವದೆಹಲಿ:ಫ್ರಾನ್ಸ್​ನಲ್ಲಿ 2 ಲಕ್ಷ, ಬ್ರಿಟನ್​ನಲ್ಲಿ 1.30 ಲಕ್ಷ ಹೊಸ ಕೇಸ್ ಪತ್ತೆಯಾಗಿದೆ. ಇದರ ಬೆನ್ನಿಗೆ ಎಚ್ಚರಿಕೆಯ ಸಂದೇಶ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ), ಒಮಿಕ್ರಾನ್ ಪ್ರಭೇದದಿಂದ ಒಟ್ಟಾರೆಯಾಗಿ ಅಪಾಯದ ಪ್ರಮಾಣ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಹೊಸ ತಳಿಯ ಪ್ರಕರಣ ಏರುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಜಾಗತಿಕವಾಗಿ ಶೇ. 11ರಷ್ಟು ಹೆಚ್ಚಳ ಕಂಡು ಬಂದಿದೆ. 2-3 ದಿನದಲ್ಲಿ ದುಪ್ಪಟ್ಟುಗೊಳ್ಳುವ ಲಕ್ಷಣ ಇದೆ ಎಂದು ಕೂಡ ಡಬ್ಲ್ಯುಎಚ್​ಒ ಎಚ್ಚರಿಕೆ ನೀಡಿದೆ. ಭಾರತದಲ್ಲೂ ಆತಂಕದ ಅಲೆ ಎದುರಾಗಿದೆ. ಹೊಸ ಪ್ರಭೇದವು ಡೆಲ್ಟಾಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹರಡುವ ಸಾಧ್ಯತೆಯಿದೆ ಎಂದು ಸಾಪ್ತಾಹಿಕ ವರದಿಯಲ್ಲಿ ಡಬ್ಲ್ಯುಎಚ್​ಒ ಹೇಳಿದೆ. ಡಿಸೆಂಬರ್ 20-26 ಅವಧಿಯಲ್ಲಿ ಸುಮಾರು 50 ಲಕ್ಷ ಹೊಸ ಕೇಸ್​ಗಳು ವರದಿಯಾಗಿವೆ. ಅರ್ಧದಷ್ಟು, ಅಂದರೆ 28 ಲಕ್ಷದಷ್ಟು ಪ್ರಕರಣಗಳು ಯುರೋಪ್ ದೇಶಗಳಲ್ಲೇ ದಾಖಲಾಗಿವೆ. ಅಮೆರಿಕದ ಒಂದರಲ್ಲೇ 11.80 ಲಕ್ಷ ಕೇಸ್ ಪತ್ತೆಯಾಗಿವೆ ಎಂದು ಡಬ್ಲ್ಯೂಎಚ್​ಒ ತಿಳಿಸಿದೆ. ಈ ಮಧ್ಯೆ, ಹೊಸ ತಳಿ ನಿಜವಾಗಿಯೂ ಮೂರನೇ ಅಲೆಗೆ ಕಾರಣವಾಗಬಹುದೇ?. ಹೌದೆಂದಾದರೆ ಯಾವಾಗ ಎಂಬ ಪ್ರಶ್ನೆ ಎದುರಾಗಿದ್ದು ತಜ್ಞರು ಹಾಗೂ ರಾಜಕೀಯ ಮುಖಂಡರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ರಾಜ್ಯದಲ್ಲಿ ಕರೊನಾದ 3ನೇ ಅಲೆ ಈಗಾಗಲೇ ಆರಂಭವಾಗಿದ್ದು ಅದರ ಹಿಡಿತದಿಂದ ಜನರನ್ನು ರಕ್ಷಿಸಲು ಎಲ್ಲ ಸಿದ್ಧತೆ ಮಾಡಲಾಗುತ್ತಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಮಂಗಳವಾರ ಹೇಳಿದ್ದಾರೆ.
ಸೋಂಕು ಪೀಡಿತರ ಸಂಖ್ಯೆ ಶೇ.53ಕ್ಕೆ ಏರಿಕೆ:ಇಂಗ್ಲೆಂಡ್, ವೇಲ್ಸ್ ಗಳ್ಳಿ ಕರೊನಾ ಅಬ್ಬರ ಹೆಚ್ಚಾಗಿದ್ದು, ಮಂಗಳವಾರ 1,29,471 ಕೇಸ್​ಗಳು ದೃಢಪಟ್ಟಿವೆ ಎಂದು ಲಂಡನ್ ಮತ್ತು ಕ್ಯಾಡ್ರಿಫ್ ಅಧಿಕಾರಿಗಳು ಪ್ರಕಟಿಸಿದ್ದಾರೆ. ಇದೇ ಮೊದಲ ಬಾರಿಗೆ ಇತ್ತೀಚಿನ ವಾರಗಳಲ್ಲಿ ದೈನಿಕ ಕೇಸ್ ಸಂಖ್ಯೆ 1 ಲಕ್ಷ ದಾಟುತ್ತಿದೆ. ತನ್ನಲ್ಲಿ 9,360 ಕೇಸ್ ಪತ್ತೆಯಾಗಿವೆ ಎಂದು ಸ್ಕಾಟ್ಲೆಂಡ್ ವರದಿ ಮಾಡಿದೆ. ಇದರೊಂದಿಗೆ, ಲಂಡನ್​ನ ಆಸ್ಪತ್ರೆಗಳಿಗೆ ದಾಖಲಾಗುವ ಕರೊನಾ ಪೀಡಿತರ ಸಂಖ್ಯೆ ಶೇಕಡ 53ರಷ್ಟು ಏರಿದೆ. ಬ್ರಿಟನ್​ನಲ್ಲಿ ಇದುವರೆಗೆ 1,50,000ಕ್ಕೂ ಅಧಿಕ ಜನರು ಕೋವಿಡ್​ಗೆ ಬಲಿಯಾಗಿದ್ದಾರೆ.
ಮೋದಿ ಯುಎಇ ಭೇಟಿ ಮುಂದಕ್ಕೆ:ಪ್ರಧಾನಿ ನರೇಂದ್ರ ಮೋದಿ ಜನವರಿಯಲ್ಲಿ ಅರಬ್ ಸಂಯುಕ್ತ ಸಂಸ್ಥಾನ (ಯುಎಇ), ಕುವೇರ್​ಗೆ ಕೈಗೊಳ್ಳಬೇಕಿದ್ದ ಪ್ರವಾಸವನ್ನು ಒಮಿಕ್ರಾನ್ ಭೀತಿಯ ಕಾರಣ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅವರು ಫೆಬ್ರವರಿಯಲ್ಲಿ ಭೇಟಿ ಕೊಡುವ ಸಂಭವವಿದೆ. ಮೋದಿ ಜನವರಿ 6ರಂದು ಈ ದೇಶಗಳಿಗೆ ಪ್ರವಾಸ ಹೊರಡಬೇಕಿತ್ತು.
3 ತಿಂಗಳಲ್ಲಿ ಮಾತ್ರೆ ಪರೀಕ್ಷೆ ವರದಿ:ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ನೀಡಲಾಗಿರುವ ಮೊಲ್ನುಪಿರವಿರ್ ಮಾತ್ರೆಯನ್ನು ಇನ್ನೂ 13,000 ರೋಗಿಗಳ ಮೇಲೆ ಪರೀಕ್ಷೆ ನಡೆಸಲಾಗುತ್ತದೆ. ಅದನ್ನು ತಯಾರಿಸುವ ಕಂಪೆನಿಗಳು ಕ್ಲಿನಿಕಲ್ ಟ್ರಯಲ್ ಫಲಿತಾಂಶವನ್ನು 3 ತಿಂಗಳಲ್ಲಿ ಸಲ್ಲಿಸಬೇಕಿದೆ. ಮೆರ್ಕ್ ಜೊತೆ ಸೇರಿ ಅಮೆರಿಕದ ಬಯೋಟೆಕ್ನಾಲಜಿ ಕಂಪೆನಿ ರಿಡ್ಜ್​ಬ್ಯಾಕ್ ಅಭಿವೃದ್ಧಿಪಡಿಸುತ್ತಿರುವ ಈ ಔಷಧಿಯನ್ನು 13 ಭಾರತೀಯ ಔಷಧ ಸಂಸ್ಥೆಗಳು ಉತ್ಪಾದಿಸುತ್ತಿವೆ.
ಒಮಿಕ್ರಾನ್ ತಡೆಗೆ ಆಂಟಿಬಾಡಿ:ಒಮಿಕ್ರಾನ್ ಮತ್ತು ಕರೊನಾ ವೈರಸ್​ನ ಇತರ ಪ್ರಭೇದಗಳನ್ನು ತಡೆಯುವ ಸಾಮರ್ಥ್ಯವಿರುವ ಪ್ರತಿಕಾಯಗಳನ್ನು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಪತ್ತೆ ಹಚ್ಚಿದೆ. ಈ ಅಂಶ ಪತ್ತೆಯಾಗಿರುವುದನ್ನು ‘ನೇಚರ್’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ವಿಜ್ಞಾನಿಗಳು ವಿವರಿಸಿದ್ದಾರೆ. ವೈರಸ್ ನಿಷ್ಕ್ರಿಯಗೊಳಿಸುವ ಈ ಆಂಟಿಬಾಡಿಗಳನ್ನು ಲಸಿಕೆ ರೂಪಿಸುವಲ್ಲಿ ಹಾಗೂ ಪ್ರತಿಕಾಯ ಚಿಕಿತ್ಸೆಯಲ್ಲಿ ಬಳಸಬಹುದಾಗಿದೆ. 3ನೇ ಡೋಸ್ ಕೂಡ ಇದಕ್ಕೆ ಸಹಕಾರಿ ಎಂದು ಹೇಳಿದ್ದಾರೆ.
ಹೊಸ ವರ್ಷಾಚರಣೆಗೆ ಹಲವೆಡೆ ಬ್ರೇಕ್:ದೇಶದಲ್ಲಿ ಕೋವಿಡ್-19 ಕೇಸ್ ಏರಿಕೆಯಾಗುತ್ತಿರುವುದರಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕರೊನಾ ಕಟ್ಟಿ ಹಾಕಲು ವಿವಿಧ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೆ ತರುತ್ತಿವೆ. ಹೊಸ ವರ್ಷದ ಸಂಭ್ರಮಾಚರಣೆಗೆ ಬಹುತೇಕವಾಗಿ ಬ್ರೇಕ್ ಹಾಕಲಾಗಿದ್ದು ಹಲವೆಡೆ ನಿರ್ಬಂಧಗಳ ನಡುವೆ ಆಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಗೋವಾದಲ್ಲಿ ಪಾರ್ಟಿಗಳಲ್ಲಿ ಭಾಗವಹಿಸುವವರು ಅಥವಾ ರೆಸ್ಟೋರೆಂಟ್ ಪ್ರವೇಶಿಸುವವರು ಎರಡೂ ಡೋಸ್ ಲಸಿಕೆ ಪಡೆದ ಸರ್ಟಿಫಿಕೆಟ್ ಅಥವಾ ನೆಗಟಿವ್ ಸರ್ಟಿಫಿಕೆಟ್ ಸಲ್ಲಿಸುವುದನ್ನು ಗೋವಾ ಸರ್ಕಾರ ಕಡ್ಡಾಯ ಗೊಳಿಸಿದೆ. ಬುಧವಾರದಿಂದಲೇ ಈ ಆದೇಶ ಜಾರಿಗೆ ಬಂದಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾಮಂತ್ ಪ್ರಕಟಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಹೊಸ ಮಾರ್ಗಸೂಚಿಯನ್ನೇ ಬಿಡುಗಡೆ ಮಾಡಲಾಗಿದ್ದು, ಮುಂಬೈಯಲ್ಲಿ ಕರೊನಾ ಪಾಸಿಟಿವಿಟಿ ದರ ಶೇಕಡ 5ಕ್ಕಿಂತ ಹೆಚ್ಚಾದರೆ ಕಠಿಣ ನಿರ್ಬಂಧಗಳನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಸಿಎಂ ಉದ್ಧವ್ ಠಾಕ್ರೆ ಶೀಘ್ರವೇ ಕೋವಿಡ್ ಕಾರ್ಯಪಡೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ. ರಾಜ್ಯದಲ್ಲಿ ಹೊಸ ಕರೊನಾ ಕೇಸ್​ಗಳ ಸಂಖ್ಯೆ ಕಳವಳಕಾರಿಯಾಗಿದ್ದು ಜನರು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ದೈನಿಕ ಕೇಸ್ 2 ಸಾವಿರ ದಾಟಿದೆ. ಬೀಚ್​ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷದ ಸಂಭ್ರಮವನ್ನು ಆಚರಿಸುವ ಮೇಲೆ ತಮಿಳುನಾಡು ಸರ್ಕಾರ ನಿಷೇಧ ವಿಧಿಸಿದೆ. ಪ್ರವಾಸಗಳ ಮೇಲೆಯೂ ನಿರ್ಬಂಧ ವಿಧಿಸುವ ಸಂಭವವಿದೆ. ಸಾರ್ವಜನಿಕ ಸಂಭ್ರಮಾಚರಣೆಗೆ ಅನುಮತಿ ನೀಡುವುದಿಲ್ಲ ಎಂದು ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಗುಜರಾತ್, ತೆಲಂಗಾಣ, ಛತ್ತೀಸ್​ಗಢ, ಬಂಗಾಳ ಮೊದಲಾದ ಕಡೆಗಳಲ್ಲು ರಾತ್ರಿ ಕರ್ಫ್ಯೂ, ಅಂಗಡಿ-ಮಾಲ್ ಸಮಯದ ಮೇಲೆ ನಿರ್ಬಂಧ ಮೊದಲಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.
25 ಸಾವಿರಕ್ಕೂ ಅಧಿಕ ಮಾತ್ರೆ ತಿಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಗುಂಡು ಹೊಡೆದುಕೊಂಡು ಬಿಇಒ ಆತ್ಮಹತ್ಯೆ!

ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..; ಆರ್​ಟಿಐ ಕಾರ್ಯಕರ್ತನನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಮಹಿಳಾ ಅಧಿಕಾರಿ!?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 19 =
Remember me
