ನವದೆಹಲಿ:ಭಾರಿ ಕುತೂಹಲಕ್ಕೆ ಕಾರಣವಾಗಿರುವ ಬಿಹಾರ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ಜೆಡಿಯು ನಾಯಕ, ಸಿಎಂ ನಿತೀಶ್ ಕುಮಾರ್ ಮತ್ತು ಆರ್​ಜೆಡಿ ಯುವ ನಾಯಕ ತೇಜಸ್ವಿ ಯಾದವ್ ಭವಿಷ್ಯ ನಿರ್ಧಾರವಾಗಲಿದೆ.
ಕರೊನೋತ್ತರ ಕಾಲದಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆ ಇದಾಗಿದ್ದು, ಕರೊನಾ ಕೇಸುಗಳ ನಿರ್ವಹಣೆ, ವಲಸೆ ಕಾರ್ವಿುಕರ ಬಿಕ್ಕಟ್ಟು, ಪ್ರವಾಹ ನಿರ್ವಹಣೆ ವೈಫಲ್ಯ ಮತ್ತು ಮುಖ್ಯವಾಗಿ ನಿರುದ್ಯೋಗಿ ಯುವಕರ ಆಕ್ರೋಶ ರಾಜ್ಯಾದ್ಯಂತ ನಿತೀಶ್ ಕುಮಾರ್ ವಿರೋಧಿ ಅಲೆ ಸೃಷ್ಟಿಸಿರುವುದು ಸುಳ್ಳೇನಲ್ಲ. ಮೂರು ಅವಧಿಗಳಿಗೆ ನಿತೀಶ್​ಗೆ ಅವಕಾಶ ನೀಡಿದ್ದೇವೆ, ಈ ಬಾರಿ ಯುವ ನಾಯಕ ತೇಜಸ್ವಿಗೆ ಅಧಿಕಾರ ನೀಡೋಣ ಎಂಬ ಚರ್ಚೆ ಮತದಾರರ ಮಧ್ಯೆ ವ್ಯಾಪಕವಾಗಿ ಕೇಳಿಬಂದಿದ್ದವು. ಜನರು ತೇಜಸ್ವಿಯನ್ನು ಆಯ್ಕೆ ಮಾಡಿದ್ದೇ ಆದಲ್ಲಿ, ಕಿರಿಯ ವಯಸ್ಸಿನಲ್ಲಿ (31 ವರ್ಷ) ಸಿಎಂ ಗದ್ದುಗೆ ಏರಿದ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ಲಾಲು ಯಾದವ್ ಗೈರಿನಲ್ಲಿ ಆರ್​ಜೆಡಿ ಎದುರಿಸಿದ ಮೊದಲ ಚುನಾವಣೆಯೂ ಇದಾಗಿರುವುದರಿಂದ ತೇಜಸ್ವಿ ಗೆಲುವು ರಾಷ್ಟ್ರವ್ಯಾಪಿ ಗಮನಸೆಳೆಯಲಿದೆ.
ಎನ್​ಡಿಎಗೆ ಭಯ:ಪ್ರಧಾನಿ ಮೋದಿ ಜನಪ್ರಿಯತೆಯನ್ನೇ ಅವಲಂಬಿಸಿದ್ದ ಬಿಜೆಪಿ ಮತ್ತು ಜೆಡಿಯು ಮುಖಂಡರು, ಅಲ್ಪ ಬಹುಮತದಲ್ಲಿ ದಡ ಸೇರುವ ವಿಶ್ವಾಸ ಹೊಂದಿದ್ದರು. ಆದರೆ, ಚುನಾವಣೋತ್ತರ ಕೆಲ ಸಮೀಕ್ಷೆಗಳು ಅಸ್ಪಷ್ಟ ಜನಾದೇಶದ ಸಾಧ್ಯತೆಯ ವರದಿ ನೀಡಿದ್ದರೆ, ಮತ್ತೆ ಕೆಲವು ಮಹಾಘಟಬಂಧನ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.
ಎಲ್​ಜೆಪಿ ಲಾಭ – ನಷ್ಟ ಲೆಕ್ಕಾಚಾರ:ಎಲ್​ಜೆಪಿಯ ಚಿರಾಗ್ ಪಾಸ್ವಾನ್ ಮತ್ತು ನಿತೀಶ್ ಮುನಿಸಿನ ಪರಿಣಾಮ, ಎನ್​ಡಿಎ ಮೈತ್ರಿಕೂಟದಲ್ಲಿದ್ದರೂ ಎಲ್​ಜೆಪಿ 143 ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಬಿಜೆಪಿಯ ದೆಹಲಿ ನಾಯಕರು ಎರಡೂ ಪಕ್ಷಗಳ ಮುಖಂಡರನ್ನು ಕರೆಸಿ ಒಮ್ಮತ ಮೂಡಿಸಿದ್ದರೆ, ಜೆಡಿಯುಗೆ ಸುಮಾರು 70 ಸೀಟುಗಳಲ್ಲಿ ಆರ್​ಜೆಡಿ ವಿರುದ್ಧ ನೇರಾನೇರ ಹಣಾಹಣಿ ಸಾಧ್ಯವಾಗುತ್ತಿತ್ತು. ಆದರೆ, ಎಲ್​ಜೆಪಿ ಪ್ರತ್ಯೇಕ ಸ್ಪರ್ಧೆಯಿಂದಾಗಿ ಮತಗಳ ವಿಭಜನೆಯಾಗಿರುವ ಸಾಧ್ಯತೆಗಳಿವೆ. ಇದರ ಲಾಭ ಆರ್​ಜೆಡಿಗೆ ಆಗಿರಬಹುದೇ ಎಂಬುದು ಫಲಿತಾಂಶದಲ್ಲಿ ಗೊತ್ತಾಗಲಿದೆ. ರಾಜ್ಯದಲ್ಲಿ ನಿತೀಶ್​ರನ್ನು ಮೂಲೆಗುಂಪು ಮಾಡಲೆಂದೇ ಬಿಜೆಪಿ-ಎಲ್​ಜೆಪಿ ಈ ರೀತಿ ಒಳಒಪ್ಪಂದ ಮಾಡಿಕೊಂಡಿದ್ದವೇ ಎಂಬ ಅನುಮಾನ ಅನೇಕರದ್ದು.
ಜನ್ಮದಿನ ಸರಳ ಆಚರಣೆ:31ನೇ ವಯಸ್ಸಿಗೆ ಕಾಲಿಟ್ಟ ಲಾಲು ಪುತ್ರ ತೇಜಸ್ವಿ ಯಾದವ್ ತಮ್ಮ ನಿವಾಸದಲ್ಲಿ ನಿರಾಡಂಬರವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತೇಜಸ್ವಿಗೆ ರಾಹುಲ್ ಗಾಂಧಿ ಟ್ವೀಟ್ ಮೂಲಕ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
ಒಂದುವೇಳೆ ಬಿಹಾರದಲ್ಲಿ ಮಹಾಘಟಬಂಧನ ಗೆಲುವು ಸಾಧಿಸಿದಲ್ಲಿ ರಾಷ್ಟ್ರ ರಾಜಕಾರಣದ ಚಹರೆ ಬದಲಾಗಬಹುದು. ಎನ್​ಡಿಎ ವಿರೋಧಿ ಒಕ್ಕೂಟಕ್ಕೆ ಅದು ಬಲ ತುಂಬಲಿದೆ. ಮುಖ್ಯವಾಗಿ ಉತ್ತರ ಭಾರತದಲ್ಲಿ ಬಿಜೆಪಿ ವಿರೋಧಿ ಬಣಗಳ ರಾಜಕೀಯ ಪ್ರಾಬಲ್ಯಕ್ಕೆ ಕಾರಣ ಆಗಬಹುದು. ಈಚಿಗೆ ಜಾರಿಗೆ ಬಂದ ಕೃಷಿ ಮಸೂದೆಗಳು ಪಂಜಾಬ್, ರಾಜಸ್ಥಾನ, ಹರಿಯಾಣ ರಾಜ್ಯಗಳಲ್ಲಿ ಬಿಜೆಪಿಗೆ ವ್ಯಾಪಕ ಸಮಸ್ಯೆ ತಂದೊಡ್ಡಿದೆ. ಪಂಜಾಬ್​ನ ಶಿರೋಮಣಿ ಅಕಾಲಿದಳ ಎನ್​ಡಿಎ ಮೈತ್ರಿ ತೊರೆದಿದೆ. ಈ ಸಮಸ್ಯೆಗಳ ನಡುವೆ ಬಿಹಾರದ ಹಿನ್ನಡೆ ಪಕ್ಷಕ್ಕೆ ಮತ್ತಷ್ಟು ತಲೆನೋವಾಗಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + thirteen =
Remember me
