ನವದೆಹಲಿ:ಪ್ರತಿಪಕ್ಷಗಳು ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ಮಹಾಮೈತ್ರಿಕೂಟಕ್ಕೆ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (ಇಂಡಿಯಾ) ಎಂದು ನಾಮಕರಣದ ಸಲಹೆ ನೀಡಿದ ನಾಯಕರು ಯಾರು ಇರಬಹುದು ಎಂಬ ಬಗ್ಗೆ ಹಲವು ರೀತಿಯ ಚರ್ಚೆಗಳು ಶುರುವಾಗಿದ್ದು, ಕುತೂಹಲಕಾರ ಸಂಗತಿಗಳು ಕೇಳಿಬರುತ್ತಿವೆ.ದೇಶಭಕ್ತಿ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡುವ ಬಿಜೆಪಿಗೆ ತಿರುಗೇಟು ನೀಡುವುದೂ ಇಂಡಿಯಾ ನಾಮಕರಣದ ಹಿಂದಿನ ಉದ್ದೇಶ ಎನ್ನಲಾಗಿದೆ.
ಈ ಮೊದಲು ಕಾಂಗ್ರೆಸ್ ನೇತೃತ್ವದಲ್ಲಿ ಅಸ್ತಿತ್ವದಲ್ಲಿದ್ದ ಸಂಯುಕ್ತ ಪ್ರಗತಿಪರ ರಂಗ (ಯುಪಿಎ) ಈಗ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (ಇಂಡಿಯಾ) ಎಂಬ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ, ಯುಪಿಎ ಅಧಿಕಾರದಲ್ಲಿದ್ದಾಗ ಹಲವು ಭ್ರಷ್ಟಾಚಾರದ ಆರೋಪ ಹೊತ್ತಿದೆ. ನಂತರದ ಚುನಾವಣೆಯಲ್ಲೂ ಸೋಲು ಕಂಡಿದೆ. ಬರಲಿರುವ ಲೋಕಸಭೆ ಚುನಾವಣೆಗೂ ಮುನ್ನ ವರ್ಚಸ್ಸನ್ನು ಮತ್ತೆ ಹೆಚ್ಚಿಸಲು ಈಗ ಕಸರತ್ತು ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿ ನಾಯಕರು ಯುಪಿಎ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ಯುಪಿಎ ಹೆಸರಲ್ಲೇ ಮುಂದಿನ ಚುನಾವಣೆಗೆ ಸ್ಪರ್ಧಿಸಿದರೆ ಬಿಜೆಪಿ ಮತ್ತೆ ಭ್ರಷ್ಟಾಚಾರ ಅಸ್ತ್ರ ಪ್ರಯೋಗ ಮಾಡುತ್ತದೆ. ಇದರಿಂದ ಸಾಧ್ಯವಾದಷ್ಟು ಬಚಾವಾಗಲು ಮೈತ್ರಿಕೂಟವನ್ನು ಪುನರ್​ನಿರ್ವಣ ಮಾಡಲು ನಾಯಕರು ಉದ್ದೇಶಿಸಿದ್ದಾರೆ ಎನ್ನಲಾಗಿದೆ.
2004ರ ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ನೇತೃತ್ವದಲ್ಲಿ 14 ಪಕ್ಷಗಳನ್ನು ಒಳಗೊಂಡ ಯುಪಿಎ ಒಕ್ಕೂಟ ರಚಿಸಲಾಯಿತು. ಆದರೆ ಮೈತ್ರಿಯಲ್ಲಿನ ಒಗ್ಗಟ್ಟು ಹೆಚ್ಚು ಕಾಲ ಉಳಿಯಲಿಲ್ಲ. ಕೆಲವು ಮಿತ್ರಪಕ್ಷಗಳು ಯುಪಿಎ ತೊರೆಯಲು ಪ್ರಾರಂಭಿಸಿದವು. 2008ರಲ್ಲಿ ನಾಲ್ಕು ಎಡಪಂಥೀಯ ಪಕ್ಷಗಳು ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡವು. 2009ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಮರಳಿತು. ಆಗ ಕಾಂಗ್ರೆಸ್ ಜೊತೆಗೆ ಟಿಎಂಸಿ, ಎನ್​ಸಿಪಿ, ಡಿಎಂಕೆ, ನ್ಯಾಷನಲ್ ಕಾನ್ಪರೆನ್ಸ್ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷಗಳು ಮಾತ್ರ ಸರ್ಕಾರದಲ್ಲಿ ಭಾಗವಹಿಸಿದ್ದವು. ಕೆಲ ಚಿಕ್ಕ ಪಕ್ಷಗಳು ಒಕ್ಕೂಟದ ಭಾಗವಾಗಿದ್ದರೂ ಕೇಂದ್ರ ಸಂಪುಟದಲ್ಲಿ ಅವರಿಗೆ ಯಾವುದೇ ಸಚಿವ ಸ್ಥಾನ ಸಿಗಲಿಲ್ಲ. ಹೀಗಾಗಿ ಜಾರ್ಖಂಡ್​ನ ಟಿಎಂಸಿ, ಡಿಎಂಕೆ, ಎಐಎಂಐಎಂ, ಜೆವಿಎಂ-ಪಿ ಇನ್ನಿತರ ಪಕ್ಷಗಳು ಒಂದೊಂದಾಗಿ ಯುಪಿಎಯಿಂದ ದೂರವಾದವು. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿ ಕೇವಲ 44 ಸ್ಥಾನಗಳನ್ನು ಪಡೆದಿತ್ತು.
ಎರಡು ದಿನಗಳ ಚರ್ಚೆ, ಹಲವು ಸಲಹೆಗಳನ್ನು ಪರಾಮರ್ಶೆ ಮಾಡಿದ ನಂತರ ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ ಎಂಬ ಹೆಸರಿಗೆ 26 ಪಕ್ಷಗಳು ಸಹಮತ ವ್ಯಕ್ತಪಡಿಸಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಭೆಗೂ ಮುನ್ನ ಹಲವು ಮಿತ್ರಪಕ್ಷಗಳ ಜತೆ ಚರ್ಚೆ ನಡೆಸಿದ್ದರು. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್​ನ ನಾಯಕ ಡೆರೆಕ್ ಒಬ್ರಿಯಾನ್ ಸೇರಿ ಹಲವರ ಜತೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಪ್ರತಿಪಕ್ಷಗಳ ಮೈತ್ರಿಕೂಟದ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರು ‘ಇಂಡಿಯಾ’ ಎಂಬ ಹೆಸರನ್ನು ಮೊದಲು ಪ್ರಸ್ತಾಪಿಸಿದರು. ನಂತರ ಚರ್ಚೆ ನಡೆದು ಇದಕ್ಕೆ ಸಹಮತ ವ್ಯಕ್ತವಾಯಿತು. ಸಭೆಯಲ್ಲಿ ಹಾಜರಿದ್ದ ಇತರ ನಾಯಕರು ಕೂಡ ವಿವಿಧ ಹೆಸರನ್ನು ಸೂಚಿಸಿದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂಡಿಯಾ ಮೇನ್ ಅಲಯನ್ಸ್ (ಐಎಂಎ) ಅಥವಾ ಇಂಡಿಯಾ ಮೇನ್ ಫ್ರಂಟ್ (ಐಎಂಎಫ್) ಎಂಬ ಹೆಸರು ಸೂಚಿಸಿದ್ದರು. ಕಾಂಗ್ರೆಸ್​ನ ತಮಿಳುನಾಡು ಮಿತ್ರಪಕ್ಷವಾದ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ‘ಭಾರತ ಉಳಿಸಿ ಒಕ್ಕೂಟ’ ಹೆಸರಿನ ಸಲಹೆ ನೀಡಿತ್ತು. ಎಡಪಕ್ಷಗಳು ‘ಭಾರತ ಮೈತ್ರಿಕೂಟ’ ಎಂಬ ಹೆಸರು ಸೂಚಿಸಿದ್ದವು.
ನನ್ನ ಅಮ್ಮ ‘ನಮ್ಯತೆಯ ಸಾಕಾರಮೂರ್ತಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾವುಕರಾಗಿ ವರ್ಣಿಸಿದ್ದಾರೆ. ಸೋನಿಯಾ ಮತ್ತು ರಾಹುಲ್ ಮಂಗಳವಾರ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದಾಗ ಅವರಿದ್ದ ವಿಮಾನ ಭೋಪಾಲ್​ನಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಸಂದರ್ಭದಲ್ಲಿ ವಿಮಾನದಲ್ಲಿ ಸೋನಿಯಾ ಕುಳಿತಿದ್ದ ಚಿತ್ರವನ್ನು ರಾಹುಲ್ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಆಮ್ಲಜನಕದ ಮಾಸ್ಕ್ ಧರಿಸಿರುವ ಸೋನಿಯಾ ಚಿತ್ರಕ್ಕೆ ‘ಅಮ್ಮ, ಒತ್ತಡದಲ್ಲಿರುವ ಸಾಕಾರಮೂರ್ತಿ’ ಎಂಬ ಶೀರ್ಷಿಕೆ ನೀಡಿದ್ದಾರೆ.
ವಿರೋಧ ಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಎಂದು ನಾಮಕರಣ ಮಾಡಿರುವ ವಿರುದ್ಧ ಬಿಜೆಪಿ ನಾಯಕ ಅಶುತೋಷ್ ದುಬೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ವಿರೋಧ ಪಕ್ಷಗಳು ರಾಷ್ಟ್ರದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಭಾರತದ ಹೆಸರಿನಲ್ಲಿ ರಾಜಕೀಯ ಮಾಡುತ್ತಿವೆ. ವಿರೋಧ ಪಕ್ಷಗಳ ಹೆಸರಿನ ನಿರ್ಧಾರ ಸ್ವಂತಿಕೆಯ ಕೊರತೆಯನ್ನು ತೋರಿಸುತ್ತದೆ. ರಾಷ್ಟ್ರದ ಹೆಸರನ್ನು ಅಧಿಕಾರ ಪಡೆಯಲು ಸಾಧನವಾಗಿ ಬಳಸಲಾಗುತ್ತಿದೆ. ಇದು ದೇಶ ಮತ್ತು ನಾಗರಿಕರಿಗೆ ಆದ ಅಗೌರವ ಎಂದು ಅವರು ಆರೋಪ ಮಾಡಿದ್ದಾರೆ.
ಪ್ರತಿಪಕ್ಷಗಳ ಮೈತ್ರಿಗೆ ಇಂಡಿಯಾ ಎಂದು ನಾಮಕರಣ ಮಾಡಲು ಬಿಹಾರ ಸಿಎಂ ನಿತೀಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇಂಡಿಯಾ ಮತ್ತು ಎನ್​ಡಿಎ ನಡುವೆ ಸಾಕಷ್ಟು ಸಾಮ್ಯತೆ ಇದೆ. ಹೀಗಾಗಿ ಈ ಹೆಸರು ಸರಿಯಲ್ಲ ಎಂದು ಅವರು ಸಭೆಯಲ್ಲಿ ವಾದಿಸಿದರು. ಇಂಡಿಯಾದಲ್ಲಿ ಎರಡು ‘ಐ’ ಇರುವ ಕಾರಣ ವ್ಯತ್ಯಾಸ ಗೋಚರಿಸುತ್ತದೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದರು. ಹೆಚ್ಚಿನ ಪಕ್ಷಗಳು ‘ಇಂಡಿಯಾ’ ಹೆಸರನ್ನು ಅನುಮೋದಿಸಿದ ಕಾರಣ ನಿತೀಶ್ ಕುಮಾರ್ ಕೂಡ ಅನಿವಾರ್ಯವಾಗಿ ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ.
ವಿರೋಧ ಪಕ್ಷಗಳ ಸಭೆಯಲ್ಲಿ ಪಾಲ್ಗೊಂಡಿದ್ದ 10 ಪಕ್ಷಗಳು ಸಂಸತ್ತಿನ ಉಭಯ ಸದನಗಳಲ್ಲಿ ಯಾವುದೇ ಪ್ರಾತಿನಿಧ್ಯ ಹೊಂದಿಲ್ಲ. ಪಿಡಿಪಿ, ಸಿಪಿಐಎಂಎಲ್, ಎಂಎಂಕೆ, ಎಂಡಿಎಂಕೆ, ವಿಸಿಕೆ, ಆರ್​ಎಸ್​ಪಿ, ಕೇರಳ ಕಾಂಗ್ರೆಸ್, ಕೆಎಂಡಿಕೆ, ಅಪ್ನಾ ದಳ ಕಾಮೆರವಾಡಿ ಇದರಲ್ಲಿ ಸೇರಿವೆ. ಲೋಕಸಭೆಯಲ್ಲಿ ಆರ್​ಜೆಡಿ, ಆರ್​ಎಲ್​ಡಿಗೆ ಯಾವುದೇ ಪ್ರಾತಿನಿಧ್ಯವಿಲ್ಲ. ಎನ್​ಡಿಎ ಸಭೆಯಲ್ಲಿ ಭಾಗವಹಿಸಿದ್ದ 24 ಪಕ್ಷಗಳಲ್ಲಿ ಒಬ್ಬ ಸಂಸದನೂ ಇಲ್ಲ. ಆರ್​ಪಿಐ ಅಠಾವಳೆ ಮತ್ತು ತಮಿಳು ಮನಿಲ ಕಾಂಗ್ರೆಸ್​ನ ಪ್ರಾತಿನಿಧ್ಯ ರಾಜ್ಯಸಭೆಗೆ ಸೀಮಿತವಾಗಿದೆ. ಜೆಜೆಪಿ, ಐಪಿಎಫ್​ಟಿ, ಬಿಪಿಪಿ, ಪಿಎಂಕೆ, ಎಂಜಿಪಿ, ನಿಶಾದ್ ಪಾರ್ಟಿ, ಯುಪಿಪಿಎಲ್, ಎಐಆರ್​ಎನ್​ಸಿ, ಅಕಾಲಿದಳ ದಿಂಡಾ, ಜನಸೇನಾ, ಎಚ್​ಎಎಂ, ಆರ್​ಎಲ್​ಎಸ್​ಪಿ, ಬಿಡಿಜೆಎಸ್, ಕೇರಳ ಕಾಂಗ್ರೆಸ್ ಥಾಮಸ್, ಜಿಎನ್​ಎಲ್​ಎಫ್, ಜೆಆರ್​ಎಸ್, ಯುಡಿಪಿ, ಎಚ್​ಎಸ್​ಡಿಪಿ, ಜನಾಸುರಾಜ್ ಪಕ್ಷ, ರಾಷ್ಟ್ರೀಯ ಸಮಾಜ ಪಕ್ಷ, ಹರಿಯಾಣ ಲೋಕಿತ್ ಪಕ್ಷ, ಕೀಪುತ್ಯ ತಮಿಳಗಂ ಮತ್ತು ಪ್ರಹಾರ್ ಜನಶಕ್ತಿ ಪಕ್ಷ ಸಭೆಯಲ್ಲಿ ಭಾಗಿಯಾಗಿದ್ದರೂ ಇವರ ಬಳಿ ಒಬ್ಬ ಸಂಸದನೂ ಇಲ್ಲ.
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ತಂತ್ರಗಾರಿಗೆ ರೂಪಿಸುತ್ತಿರುವ ಪ್ರತಿಪಕ್ಷಗಳು ಒಕ್ಕೂಟದ ಘೋಷವಾಕ್ಯವನ್ನು ಬುಧವಾರ ಅಂತಿಮಗೊಳಿಸಿವೆ. ಜೀತೇಗಾ ಭಾರತ (ಭಾರತ ಗೆಲ್ಲುತ್ತದೆ) ಎಂಬ ಘೋಷ ವಾಕ್ಯದೊಂದಿಗೆ ಚುನಾವಣೆಗೆ ವ್ಯಾಪಕ ಪ್ರಚಾರ ನಡೆಸುವ ಬಗ್ಗೆ ನಿರ್ಧಾರ ಮಾಡಲಾಗಿದೆ.
ಜಾತಿವಾದಿ ಪಕ್ಷಗಳ ಜತೆ ಕಾಂಗ್ರೆಸ್ ಕೈಜೋಡಿಸಿದೆ. ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಿಎಸ್​ಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ಬಡವರು, ಹಿಂದುಳಿದವರು ನಮ್ಮ ಪಕ್ಷವನ್ನು ಬೆಂಬಲಿಸಲಿದ್ದಾರೆ.
| ಮಾಯಾವತಿ, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ
ಮಡಿಕೇರಿ:ಭ್ರಷ್ಟಾಚಾರದಿಂದಲೇ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದು, ಕೇಂದ್ರದಲ್ಲಿಯೂ ಇದೇ ಸ್ಥಿತಿ ಬರಲಿದೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳ ಮಹಾಘಟಬಂಧನ್ ಕಂಡು ಬಿಜೆಪಿ ಹೆದರಿದೆ. ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ ನಡೆದ ದಿನದಂದೇ ತನ್ನ ಮಿತ್ರ ಪಕ್ಷಗಳ ಸಭೆ ನಡೆಸಿರುವುದೇ ಬಿಜೆಪಿ ಆತಂಕಕ್ಕೊಳಗಾಗಿರುವುದಕ್ಕೆ ಸಾಕ್ಷಿ. ಸೋಲಿನ ಭಯದಿಂದ ದಿಕ್ಕುತಪ್ಪಿದೆ ಎಂದು ಕುಟುಕಿದರು. ಜಗತ್ತಿನಲ್ಲೆ ಅತಿ ಹೆಚ್ಚು ಭ್ರಷ್ಟಾ ಚಾರ ಭಾರತದಲ್ಲಿದೆ. ನೋಟ್ ಅಮಾನ್ಯದಿಂದ ಭ್ರಷ್ಟಾಚಾರ ಸ್ವಲ್ಪವೂ ಕಡಿಮೆಯಾಗಿಲ್ಲ, ಬದಲಿಗೆ ಮತ್ತಷ್ಟು ಏರಿಕೆ ಆಗಿತ್ತು ಎಂದರು. ಪ್ರತಿಪಕ್ಷಗಳ ಮೈತ್ರಿ ಪರಿಣಾಮ ‘ಇಂಡಿಯಾ’ ಹೊರ ಹೊಮ್ಮಿದೆ. ಮುಂದಿನ ದಿನಗಳಲ್ಲಿ ‘ಇಂಡಿಯಾ’ವನ್ನು ಪ್ರಬಲಗೊಳಿಸುತ್ತಾ ಭಾರತೀಯರ ಆಶೋತ್ತರಕ್ಕೆ ತಕ್ಕಂತೆ ದೇಶವನ್ನು ಬಿಜೆಪಿ ಹಿಡಿತದಿಂದ ದೂರ ಮಾಡಲಿದ್ದೇವೆ ಎಂದರು.
ಉಡುಪಿ:ದೇಶವನ್ನು 60 ವರ್ಷ ಲೂಟಿ ಮಾಡಿದವರು ಈಗ ಒಂದಾಗಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಭಾಗಿಯಾದವರೆಲ್ಲರೂ ಪ್ರಧಾನಿ ಕನಸು ಕಾಣುತ್ತಿದ್ದಾರೆ. ಕಳೆದ ಬಾರಿಯೂ ಇದೇ ರೀತಿ ಒಟ್ಟಾಗಿದ್ದರು. ಆದರೆ ಯಾವುದೇ ಫಲ ಸಿಗಲಿಲ್ಲ. ಇಂಡಿಯಾ ಎಂಬ ಹೆಸರು ಇಟ್ಟುಕೊಂಡು ಹೊಸ ಈಸ್ಟ್ ಇಂಡಿಯಾ ಕಂಪನಿ ಶುರು ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದ್ದಾರೆ. ಭಾರತದ ಸಾರ್ವಭೌಮತೆ ಇಡೀ ವಿಶ್ವಕ್ಕೆ ಪಸರಿಸುತ್ತಿರುವ ಪ್ರಧಾನಿ ಮೋದಿ ವಿರುದ್ಧ ಒಟ್ಟಾಗಿದ್ದು, ಸಂವಿಧಾನ ವಿರೋಧಿ ಹೆಸರು ಇಟ್ಟುಕೊಂಡಿದ್ದಾರೆ.
ದ ಎಂಬ್ಲಮ್್ಸ ಆಂಡ್ ನೇಮ್್ಸ ಆಕ್ಟ್ ಪ್ರಕಾರ ಇಂಡಿಯಾ ಎನ್ನುವ ಹೆಸರನ್ನು ಯಾವುದೇ ಪಾರ್ಟಿ, ಸಂಘಟನೆ, ಸಂಸ್ಥೆಗೆ ಇಡುವಂತಿಲ್ಲ. ಇದು ಎನ್​ಡಿಎ ವರ್ಸಸ್ ಇಂಡಿಯಾ ಅಲ್ಲ, ಇದು ಭಾರತ ವರ್ಸಸ್ ಇಂಡಿಯಾ ಆಗಿದೆ ಎಂದರು.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × two =
Remember me
