ನವದೆಹಲಿ:ಹಲವು ಮಾಧ್ಯಮಗಳ ಊಹಾಪೋಹಗಳ ನಂತರ, ಕಾಂಗ್ರೆಸ್ ಪಕ್ಷವು ಅಂತಿಮವಾಗಿ ಅಮೆಠಿ ಮತ್ತು ರಾಯಬರೇಲಿ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ನಾಮಪತ್ರದ ಕೊನೆಯ ದಿನದಂದು ಘೋಷಿಸಿದೆ. ಇದು ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಸಿಹಿ ಮತ್ತು ಕಹಿ ಸುದ್ದಿಯಾಗಿ ಪರಿಣಮಿಸಿದೆ.
ರಾಹುಲ್ ಗಾಂಧಿ ರಾಯ್‌ಬರೇಲಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದರೆ, ಗಾಂಧಿ ಕುಟುಂಬದ ಸ್ನೇಹಿತ ಕಿಶೋರಿ ಲಾಲ್ ಶರ್ಮಾ ಅಮೆಠಿ ಕ್ಷೇತ್ರಕ್ಕೆ ಸ್ಪರ್ಧಿಸಲಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಇದರ ಬದಲಿಗೆ ರಾಷ್ಟ್ರವ್ಯಾಪಿ ಪ್ರಚಾರದತ್ತ ಗಮನ ಹರಿಸಿದ್ದಾರೆ.
ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಗಾಂಧಿ ಕುಟುಂಬದವರ ಮೇಲೆ ಸ್ಥಳೀಯ ಉತ್ತರಪ್ರದೇಶ ಕಾಂಗ್ರೆಸ್​ ಘಟಕದಿಂದ ಸಾಕಷ್ಟು ಒತ್ತಡವಿತ್ತು. ಅಮೆಠಿಯಿಂದ ಸ್ಪರ್ಧಿಸದಿದ್ದಲ್ಲಿ ಸ್ಮೃತಿ ಇರಾನಿ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ಭಯ ಹುಟ್ಟಿಕೊಂಡಿತ್ತು.
ಅಮೆಠಿ ಮತ್ತು ರಾಯಬರೇಲಿ ಕ್ಷೇತ್ರಗಳು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಭದ್ರಕೋಟೆಗಳಾಗಿವೆ ಎಂಬ ಭಾವನೆ ಇದೆ. ಈಗ ಗಾಂಧಿ ಕುಟುಂಬದವರು ಸ್ಪರ್ಧಿಸದಿರುವುದು ಅಮೆಠಿ ಸುರಕ್ಷಿತ ಎಂಬ ಭಾವನೆಯನ್ನು ನಿವಾರಿಸಿದಂತಾಗಿದೆ.
ಕಾಂಗ್ರೆಸ್ ಸಮಾಜವಾದಿ ಪಕ್ಷ (ಎಸ್‌ಪಿ) ಜತೆ ಮೈತ್ರಿ ಮಾಡಿಕೊಂಡಿರುವ ಉತ್ತರಪ್ರದೇಶದ 15 ಸ್ಥಾನಗಳಲ್ಲಿ ಬಲ ತುಂಬುವುದಕ್ಕಾಗಿ ಎರಡರಲ್ಲಿ ಗಾಂಧಿ ಕುಟುಂಬದವರು ಸ್ಪರ್ಧಿಸಬೇಕೆಂದು ಎಂದು ಸ್ಥಳೀಯ ಕಾಂಗ್ರೆಸ್​ ಘಟಕ ಆಶಿಸಿತ್ತು. ಆದರೆ, ಒಂದೇ ಕ್ಷೇತ್ರದಿಂದ ಸ್ಪರ್ಧಿಸುವ ಗಾಂಧಿ ಕುಟುಂಬದ ನಿರ್ಧಾರ ಕೆಲವು ಕಾಂಗ್ರೆಸ್ ಕಾರ್ಯಕರ್ತರನ್ನು ನಿರಾಸೆಗೊಳಿಸಿದೆ.
ಮೇಲ್ಜಾತಿಗಳು, ಬುಡಕಟ್ಟುಗಳು, ದಲಿತರು ಮತ್ತು ಮುಸ್ಲಿಮರಿಂದ ಸಾಂಪ್ರದಾಯಿಕ ಬೆಂಬಲವನ್ನು ಮರಳಿ ಪಡೆಯುವ ಪಕ್ಷದ ತಂತ್ರದೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಬ್ರಾಹ್ಮಣರಾಗಿ ಜನಪ್ರಿಯತೆಯನ್ನು ಹೊಂದಿರುವ ಸ್ಥಳೀಯ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಅವರು ಅಮೆಠಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಅಮೆಠಿಯಿಂದ ರಾಹುಲ್​ ಅಥವಾ ಪ್ರಿಯಾಂಕಾ ಸ್ಪರ್ಧಿಸದಿರುವುದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಅನ್ನು ಗುರಿಯಾಗಿಸಲು ಮದ್ದುಗುಂಡುಗಳನ್ನು ಒದಗಿಸಿದೆ. ಕಾಂಗ್ರೆಸ್​ನ ಈ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಟೀಕಿಸಿದ್ದು, ಚುನಾವಣಾ ರ್ಯಾಲಿಗಳ ವೇಳೆ ದಾಳಿಯ ವಸ್ತುವಾಗಿ ಬಳಸಿಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ರಾಹುಲ್ ಗಾಂಧಿಯವರು ಕ್ಷೇತ್ರ ಬದಲಾಯಿಸಿರುವುದನ್ನು ಲೇವಡಿ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರು 2004 ರಿಂದ ಅಮೆಠಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ, 2019 ರಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತರು. ಅವರು ಪ್ರಸ್ತುತ ಕೇರಳದ ವಯನಾಡ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಇದುವರೆಗೆ ಕಾಂಗ್ರೆಸ್ ಅಮೆಠಿಯಲ್ಲಿ 18 ಚುನಾವಣೆಗಳ ಪೈಕಿ 15 ಸಲ ಮತ್ತು ರಾಯ್‌ಬರೇಲಿಯಲ್ಲಿ 20 ಚುನಾವಣೆಗಳ ಪೈಕಿ 17 ಬಾರಿ ಗೆದ್ದಿದೆ. ರಾಯಬರೇಲಿ ಕ್ಷೇತ್ರವು ಸಾಂಪ್ರದಾಯಿಕವಾಗಿ ಸೋನಿಯಾ ಗಾಂಧಿಯವರು ಪ್ರತಿನಿಧಿಸಿದ್ದು, ಗಾಂಧಿ-ನೆಹರೂ ಕುಟುಂಬದ ಪ್ರಾಬಲ್ಯದ ಕ್ಷೇತ್ರ ಎಂದು ಪರಿಗಣಿಸಲಾಗಿದೆ.
ಅಮೆಠಿಗೆ ಹೋಲಿಸಿದರೆ ರಾಯಬರೇಲಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಬಲವಾಗಿದೆ. ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಇಲ್ಲಿ ರಾಹುಲ್ ವಿರುದ್ಧ ಪ್ರಮುಖ ಸ್ಪರ್ಧಿಯಾಗಿ ಕಾಣುತ್ತಿಲ್ಲ.
ರಾಹುಲ್ ಗಾಂಧಿಯವರು 2014 ರಲ್ಲಿ ಅಮೆಠಿಯಲ್ಲಿ 46% ರಷ್ಟು ಮತಗಳನ್ನು ಪಡೆದಿದ್ದರು. ಇದು 2019 ರಲ್ಲಿ 43% ಕ್ಕೆ ಇಳಿದಿದೆ. ರಾಯರೇಲಿಯಲ್ಲಿ, ಸೋನಿಯಾ ಗಾಂಧಿಯವರು ಇತ್ತೀಚಿನ ಚುನಾವಣೆಗಳಲ್ಲಿ ಸತತವಾಗಿ 55-56% ಮತಗಳನ್ನು ಗಳಿಸಿದ್ದಾರೆ.
ರಾಯಬರೇಲಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 2022ರ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಪಿ ಮತ್ತು ಅದರ ಮಿತ್ರಪಕ್ಷಗಳು ಐದರಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದರೆ, ಅಮೆಠಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಮೂರು ಮತ್ತು ಎಸ್‌ಪಿ ಎರಡು ಸ್ಥಾನಗಳನ್ನು ಗಳಿಸಿವೆ. ಈಗ ಎಸ್‌ಪಿ ಜೊತೆಗಿನ ಕಾಂಗ್ರೆಸ್ ಮೈತ್ರಿಯನ್ನು ಗಮನಿಸಿದರೆ, ರಾಯಬರೇಲಿ ಸುರಕ್ಷಿತ ಪಂತ ಎಂದು ಕಾಂಗ್ರೆಸ್ ಭಾವಿಸಿದೆ.
ಒಂದು ವೇಳೆ ರಾಹುಲ್ ಅಮೆಠಿಯಿಂದ ಸ್ಪರ್ಧಿಸಿ ಮತ್ತೊಮ್ಮೆ ಸೋತಿದ್ದರೆ ಅದು ಕಾಂಗ್ರೆಸ್ ಪಕ್ಷದೊಳಗೆ ಅವರ ಸ್ಥಾನವನ್ನು ದುರ್ಬಲಗೊಳಿಸುತ್ತಿತ್ತು. ಈ ಕಾರಣಕ್ಕಾಗಿಯೇ ರಾಹುಲ್ ಭಾವನಾತ್ಮಕ ನಿರ್ಧಾರಕ್ಕಿಂತ ಪ್ರಾಯೋಗಿಕವಾಗಿ ಸುರಕ್ಷಿತ ಸ್ಥಾನವನ್ನು ಆರಿಸಿಕೊಂಡಿದ್ದಾರೆ.
ಆದರೂ, ಸ್ಮೃತಿಗೆ ಸವಾಲು ಹಾಕಲು ಪ್ರಿಯಾಂಕಾ ಗಾಂಧಿ ಅವರು ಅಮೆಠಿಯಿಂದ ಸ್ಪರ್ಧಿಸಬಹುದಿತ್ತು, ಇದು ಪಕ್ಷದ ಕಾರ್ಯಕರ್ತರನ್ನು ಪ್ರೇರೇಪಿಸುತ್ತದೆ. ಅಲ್ಲದೆ, ರಾಜ್ಯ ಮತ್ತು ಹಿಂದಿ ಹೃದಯ ಭಾಗದಲ್ಲಿ ಬಲವಾದ ಸಂದೇಶವನ್ನು ರವಾನಿಸಬಹುದು ಎಂದು ಉತ್ತರ ಪ್ರದೇಶ ಕಾಂಗ್ರೆಸ್​ನ ಅಭಿಲಾಷೆಯಾಗಿತ್ತು.
ಕುಟುಂಬ ರಾಜಕಾರಣದ ಆರೋಪಗಳನ್ನು ತಿರುಗಿಸುವ ಉದ್ದೇಶದಿಂದ ಹಾಗೂ ಪಕ್ಷದ ಕಾರ್ಯಕರ್ತರು ಕೂಡ ಟಿಕೆಟ್ ಪಡೆಯಬಹುದು ಎಂಬ ಸಂದೇಶವನ್ನು ರವಾನಿಸಲು ಕಾಂಗ್ರೆಸ್ ಹೈಕಮಾಂಡ್​ ಬಯಸಿದಂತಿದೆ. ಕೆಲವು ಸುದ್ದಿ ವರದಿಗಳ ಪ್ರಕಾರ, ಮತದಾರರಿಂದ ಆತ್ಮೀಯ ಸ್ವಾಗತ ಮತ್ತು 2019 ರಲ್ಲಿ ಅವರ ಯಶಸ್ವಿ ಚುನಾವಣೆಯಿಂದಾಗಿ ಕೇರಳದ ವಯನಾಡ್ ಸ್ಥಾನವನ್ನು ಉಳಿಸಿಕೊಳ್ಳಲು ರಾಹುಲ್ ಬಯಸುತ್ತಾರೆ ಎನ್ನಲಾಗಿದೆ. ವಯವನಾಡ್ ಮತ್ತು ರಾಯಬರೇಲಿ ಎರಡರಲ್ಲಿಯೂ ಅವರು ಗೆದ್ದರೆ, ರಾಯಬರೇಲಿಯನ್ನು ಅವರು ತೊರೆಯಬಹುದು. ಆಗ, ಪ್ರಿಯಾಂಕಾ ಗಾಂಧಿ ಅವರು ಈ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಆದರೆ, ಉಪಚುನಾವಣೆಯಲ್ಲಿ ರಾಮ್‌ಪುರ ಮತ್ತು ಅಜಂಗಢದಂತಹ ಎಸ್‌ಪಿ ಭದ್ರಕೋಟೆಯ ಸ್ಥಾನಗಳನ್ನು ಬಿಜೆಪಿ ಗೆದ್ದಿದೆ, ಈ ಅಂಶವನ್ನು ಕಾಂಗ್ರೆಸ್ ಎಚ್ಚರಿಕೆಯಿಂದ ಪರಿಗಣಿಸಬೇಕಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 7 =
Remember me
