| ರಾಘವ ಶರ್ಮ ನಿಡ್ಲೆ ನವದೆಹಲಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2019ರ ಲೋಕಸಭೆ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಲ್ಲಿ ಸೋಲು ಕಂಡರೂ ರಾಯ್ಬರೇಲಿ ಮತ್ತು ಅಮೇಠಿ ಕ್ಷೇತ್ರಗಳು ಗಾಂಧಿ ಪರಿವಾರದ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದವು. ಆದರೆ ಈ ಬಾರಿ ರಾಹುಲ್ ಗಾಂಧಿ ಸ್ಪರ್ಧೆಯಿಂದ ಹಿಂದೆ ಸರಿದಿರುವುದು ಗಾಂಧಿ ಕುಟುಂಬ ಅಮೇಠಿಯನ್ನು ಶಾಶ್ವತವಾಗಿ ಬಿಟ್ಟುಕೊಟ್ಟಿತೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಗಾಂಧಿ ಪರಿವಾರದ ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ನಾಲ್ವರಿಗೆ ರಾಜಕೀಯ ನೆಲೆ ನೀಡಿದ್ದ ಕ್ಷೇತ್ರ ಅಮೇಠಿ. ಆದರೆ, ಜನರನ್ನುದ್ದೇಶಿಸಿ ‘ಡರೋ ಮಥ್’ ಎಂದು ಚುನಾವಣೆ ಉದ್ದಕ್ಕೂ ಭಾಷಣ ಮಾಡುತ್ತಿರುವ ರಾಹುಲ್​ಗೆ, ಗಾಂಧಿಗಳ ಕೋಟೆಯಲ್ಲಿ ಸೋಲಿನ ‘ಡರ್’ ಎದುರಾಗಿದೆ ಎನ್ನುವುದನ್ನು ಅಮೇಠಿ ತೊರೆದ ನಿರ್ಧಾರವೇ ಸಾಕ್ಷೀಕರಿಸಿದೆ.
ಅಮೇಠಿ ಬಗೆಗಿನ ನಿರ್ಲಕ್ಷ್ಯ ಧೋರಣೆಯಿಂದಾಗಿಯೇ 2019ರಲ್ಲಿ ರಾಹುಲ್ ಗಾಂಧಿ ಅಲ್ಲಿ ಸೋತಿದ್ದರು. ಅಭಿವೃದ್ಧಿ ಕೊರತೆ, ಮತದಾರರೊಂದಿಗೆ ಸಂಪರ್ಕ ಕಡಿದುಕೊಂಡದ್ದು ಹಾಗೂ ನಾವೇನೇ ಮಾಡಿದರೂ ಜನ ಗೆಲ್ಲಿಸುತ್ತಾರೆಂಬ ಅಹಂ ಕಾಂಗ್ರೆಸ್​ಗೆ ಮುಳುವಾಗಿತ್ತು.
ಆದರೆ, ಈ ಸೋಲಿನಿಂದ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಪಾಠ ಕಲಿಯಲಿಲ್ಲ. ಕಳೆದೈದು ವರ್ಷಗಳಲ್ಲಿ ಅವರು ಅಮೇಠಿ ಜನರೊಂದಿಗೆ ಬೆರೆಯುವ ಯತ್ನವನ್ನೇ ಮಾಡಲಿಲ್ಲ. ವಯನಾಡ್ ಸಂಸದರಾದ್ದರಿಂದ ಅಮೇಠಿ ಜತೆಗಿನ ನಂಟನ್ನೇ ಕಡಿಮೆ ಮಾಡಿದ್ದರು. ಏಪ್ರಿಲ್ ಆರಂಭದಲ್ಲಿ ಅಮೇಠಿ ಕಾರ್ಯಕರ್ತರು, ಮುಖಂಡರು ದೆಹಲಿಗೆ ಬಂದು, ಮೂರ್ನಾಲ್ಕು ದಿನವುಳಿದು, ನೀವು ಅಮೇಠಿಗೆ ವಾಪಸ್ ಬರಬೇಕು ಎಂದು ವಿನಂತಿಸಿದ್ದರು. ಆದರೆ ರಾಹುಲ್ ಅಂತಿಮವಾಗಿ ರಾಯ್ಬರೇಲಿ ಆಯ್ಕೆ ಮಾಡಿಕೊಳ್ಳುವ ಮೂಲಕ ಅಮೇಠಿಗೆ ಗುಡ್​ಬೈ ಹೇಳಿದ್ದಾರೆ.
ರಾಹುಲ್ ಈ ನಿರ್ಧಾರಿಂದ ಪಕ್ಷ ಸಂಘಟನೆಗೂ ಹಾನಿಯಾಗಿದೆ ಎನ್ನುವುದು ವಾಸ್ತವ. ಏಕೆಂದರೆ, ಕಿಶೋರಿ ಲಾಲ್ ಶರ್ಮ ಇಲ್ಲಿಂದ ತಮಗೆ ಟಿಕೆಟ್ ಸಿಗಲಿದೆ ಎಂದು ನಿರೀಕ್ಷಿಸಿರಲಿಲ್ಲ. ಕಳೆದ ಮೂರು ದಶಕಗಳಿಂದ ರಾಯ್ಬರೇಲಿಯಲ್ಲಿ ಸೋನಿಯಾ ಗಾಂಧಿ ‘ಪೊಲಿಟಿಕಲ್ ಮ್ಯಾನೇಜರ್’ ಆಗಿದ್ದ ಕೆಎಲ್ ಶರ್ಮ, ಬಾಕಿ ಉಳಿದಿರುವ 2 ವಾರಗಳಲ್ಲಿ ಅಮೇಠಿಯಾದ್ಯಂತ ಪ್ರಚಾರ ಕಾರ್ಯ ಪೂರ್ಣಗೊಳಿಸಬೇಕಿದೆ. ರಾಹುಲ್ ಬರುತ್ತಾರೆಂದು ಕಾದುಕುಳಿತಿದ್ದ ಕಾರ್ಯಕರ್ತ ವರ್ಗ ನಿರಾಶೆಯಿಂದ ಕೆಎಲ್ ಶರ್ಮರ ಪರ ಘೋಷಣೆಗಳನ್ನು ಕೂಗಬೇಕಿದೆ.
ರಾಹುಲ್ ತಮ್ಮ ಆಯ್ಕೆಯನ್ನು ಮೊದಲೇ ಖಚಿತ ಪಡಿಸುತ್ತಿದ್ದ್ದೆ ಬಹುಶಃ ಇಂಥದ್ದೊಂದು ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ. ಬದಲಿಗೆ, ಸಂಘಟನೆಯನ್ನೂ ಸಜ್ಜುಗೊಳಿಸಲು ಸ್ಥಳೀಯ ಘಟಕ ಶ್ರಮಿಸಬಹುದಿತ್ತು. ಆದರೆ, ವಯನಾಡ್ ಮತದಾರರಲ್ಲಿ ಗೊಂದಲ ಸೃಷ್ಟಿಯಾಗುವುದು ಬೇಡ ಎಂಬ ಉದ್ದೇಶಕ್ಕಾಗಿ ಅಲ್ಲಿ ಮತದಾನ ಮುಗಿಯುವವರೆಗೂ ರಾಹುಲ್ ಅಮೇಠಿ ಅಥವಾ ರಾಯ್ಬರೇಲಿ ಸ್ಪರ್ಧೆ ಬಗ್ಗೆ ಮೌನದಿಂದಿದ್ದರು ಎನ್ನಲಾಗಿದೆ.
ಈ ನಡುವೆ, ಕಳೆದೊಂದು ತಿಂಗಳಿಂದ ಅಮೇಠಿಯಲ್ಲಿರುವ ಬಿಜೆಪಿ ಸಂಸದೆ, ಸಚಿವೆ ಸ್ಮೃತಿ ಇರಾನಿ ಈಗಾಗಲೇ 200ಕ್ಕಿಂತಲೂ ಹೆಚ್ಚು ಜನಸಭೆಗಳನ್ನು ನಡೆಸಿದ್ದಾರೆ ಮತ್ತು ಬಹುಪಾಲು ಅಮೇಠಿ ಕ್ಷೇತ್ರದೆಲ್ಲೆಡೆ ಪ್ರವಾಸ ಮಾಡಿದ್ದಾರೆ. ಮೇ 18ರ (ಮೇ.20ಕ್ಕೆ ಚುನಾವಣೆ) ಒಳಗಾಗಿ 400ರಷ್ಟು ಸಭೆಗಳನ್ನು ಪೂರ್ಣಗೊಳಿಸುವ ಉದ್ದೇಶ ಬಿಜೆಪಿಯಲ್ಲಿದೆ ಎಂಬ ಮಾಹಿತಿ ಇದೆ. ಅಂದರೆ, ಕಾಂಗ್ರೆಸ್​ಗಿಂತ ಎಷ್ಟೋ ಪಟ್ಟು ಹೆಚ್ಚು ಸಭೆಗಳನ್ನು ಬಿಜೆಪಿ ನಡೆಸಿದೆ/ನಡೆಸಲಿದೆ ಎಂದಾಯಿತು. ಕಳೆದ ಬಾರಿ ಅಮೇಠಿಯಲ್ಲಿ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್, ಈ ಬಾರಿ ಪ್ರಚಾರದ ವಿಷಯದಲ್ಲಿ ಬಿಜೆಪಿಗಿಂತ ಒಂದು ಹೆಜ್ಜೆ ಮುಂದಿರಬೇಕಿತ್ತು. ಆದರೆ, ಕಾಂಗ್ರೆಸ್ಸಿಗರ ವಿಳಂಬ ಧೋರಣೆ ಪಕ್ಷಕ್ಕೆ ಅಮೇಠಿ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.
ಗೆದ್ದರೆ ಆಯ್ಕೆ ಯಾವುದು? :ಏತನ್ಮಧ್ಯೆ, ರಾಯ್ಬರೇಲಿ ಗೆದ್ದರೆ ವಯನಾಡ್ ಮತ್ತು ರಾಯ್ಬರೇಲಿಯಲ್ಲಿ ರಾಹುಲ್ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆಯೆದ್ದಿದೆ. ಬಿಜೆಪಿ ಈಗಾಗಲೇ ತಂತ್ರ ಬಿಗಿಗೊಳಿಸಿದ್ದು, ರಾಹುಲ್ ಗೆದ್ದರೆ ನಿಮ್ಮ ರಾಯ್ಬರೇಲಿ ಬಿಟ್ಟು ವಯನಾಡ್​ಗೆ ತೆರಳುತ್ತಾರೆ ಎಂದು ಪ್ರಚಾರ ಆರಂಭಿಸಿದೆ. ವಯನಾಡನ್ನು ಆಯ್ಕೆ ಮಾಡಿಕೊಂಡಿದ್ದೇ ಆದಲ್ಲಿ, ನಂತರದ ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿ, ಕ್ಷೇತ್ರವನ್ನು ಮತ್ತೆ ತಮ್ಮದಾಗಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವೂ ಗಾಂಧಿ ಪರಿವಾರದಲ್ಲಿ ಇದ್ದಿರಬಹುದು. ಒಂದು ವೇಳೆ ರಾಹುಲ್, ವಯನಾಡು ಗೆದ್ದು ಅಮೇಠಿಯಲ್ಲಿ ಸೋತರೆ, ‘ರಾಹುಲ್ ಗಾಂಧಿ ವಿಫಲ ರಾಜಕಾರಣಿ’ ಎಂದು ಮತ್ತೊಮ್ಮೆ ಬಿಂಬಿಸಲು ಬಿಜೆಪಿಗೆ ಅವಕಾಶ ಸಿಗಲಿದೆ. . ಹೀಗಾಗಿ, ಇಂಥದ್ದೊಂದು ಅವಕಾಶ ನೀಡುವುದು ಬೇಡ ಎಂದೇ ಕಾಂಗ್ರೆಸ್ ರಕ್ಷಣಾತ್ಮಕ ತಂತ್ರದ ಮೊರೆ ಹೋಗಿದೆ ಎಂದೂ ವಿಶ್ಲೇಷಿಸಲಾಗಿದೆ.
. ಸೋಲಿನ ಬಳಿಕ ಅಮೇಠಿಯಿಂದ ಅಂತರ ಕಾಯ್ದುಕೊಂಡ ರಾಹುಲ್
. ಕೇರಳದ ವಯನಾಡಿನತ್ತ ಮುಖಮಾಡಿದ ಕೈನಾಯಕ
. ಅಮೇಠಿ ಕ್ಷೇತ್ರದ ಮತದಾರರೊಂದಿಗೆ ಸಂಪರ್ಕ ಕಡಿತ
. 2019ರ ಸೋಲಿನ ಬಳಿಕ ಮತ್ತೆ ಜನರ ಬಳಿ ಹೋಗಲೇ ಇಲ್ಲ
. ಅಮೇಠಿಯ ಕಾಂಗ್ರೆಸ್ ಕಾರ್ಯಕರ್ತರ ಜತೆ ಬೆರೆಯಲಿಲ್ಲ
. ಕ್ಷೇತ್ರಕ್ಕೆ ಬರಬೇಕೆಂಬ ಆಹ್ವಾನವನ್ನೂ ಪರಿಗಣಿಸಲಿಲ್ಲ
ಹುಬ್ಬಳ್ಳಿ: ಹಿಂದು ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿ ಕೊಲೆ ಬೆದರಿಕೆ, ಆರೋಪಿ ವಶಕ್ಕೆ!

ರೋಹಿತ್‌ ವೆಮುಲಾ ದಲಿತ ವಿದ್ಯಾರ್ಥಿಯಲ್ಲ: ಹೈಕೋರ್ಟ್​ಗೆ ಪೊಲೀಸರ ಅಂತಿಮ ವರದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
