ಭಾರತೀಯ ನಾಗರಿಕ ಸೇವೆ (ಐಎಎಸ್) ಅಧಿಕಾರಿಗಳ ಕೇಂದ್ರೀಯ ನಿಯೋಜನೆಗೆ ಸಂಬಂಧಿಸಿದ ನಿಯಮ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಸ್ತಾವಿತ ಕರಡು ನಿಯಮಗಳ ಪ್ರತಿಯನ್ನು ಕೇಂದ್ರ ಸರ್ಕಾರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ರವಾನಿಸಿದೆ. ಈ ವಿದ್ಯಮಾನವು ಸಹಜವಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಭಿನ್ನಮತಕ್ಕೆ ವೇದಿಕೆಯನ್ನು ಒದಗಿಸಿದೆ.
ಐಎಎಸ್ ಅಧಿಕಾರಿಗಳ ಕೇಂದ್ರೀಯ ನಿಯೋಜನೆಯ ನಿಯಮದಲ್ಲಿ ತಿದ್ದುಪಡಿ ಮಾಡುವ ಪ್ರಸ್ತಾವನೆ ಈಗ ವಿವಾದದ ಕೇಂದ್ರಬಿಂದು. ಐಎಎಸ್ ಅಧಿಕಾರಿಗಳ ಕೇಂದ್ರೀಯ ನಿಯೋಜನೆಯಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸುವುದು ಸರ್ಕಾರದ ಉದ್ದೇಶ. ಇದೇ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಭಿನ್ನಮತ, ಬಿಕ್ಕಟ್ಟು ಏರ್ಪಡುತ್ತಲೇ ಇರುವುದು ಗಮನಾರ್ಹ.
ಹಾಲಿ ನಿಯಮ ಹೇಳುವುದೇನು?:ಭಾರತೀಯ ಆಡಳಿತ ಸೇವೆಯ ಕೇಂದ್ರೀಯ ನಿಯೋಜನೆಗೆ ಸಂಬಂಧಿಸಿ ಐಎಎಸ್ (ಕೆಡರ್) ರೂಲ್ಸ್ 1954ರ ರೂಲ್-6(1) 1969ರ ಮೇ ತಿಂಗಳಲ್ಲಿ ಸೇರ್ಪಡೆಗೊಂಡಿದೆ. ಇದರ ಪ್ರಕಾರ, ‘ಸಂಬಂಧಿತ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ಒಪ್ಪಿಗೆಯೊಂದಿಗೆ ಒಬ್ಬ ಕೆಡರ್ ಅಧಿಕಾರಿಯನ್ನು ಕೇಂದ್ರ ಸರ್ಕಾರ ಅಥವಾ ಇನ್ನೊಂದು ರಾಜ್ಯ ಸರ್ಕಾರದ ಅಧೀನದಲ್ಲಿ ಅಥವಾ ಕಂಪನಿ, ಸಂಘ ಅಥವಾ ವ್ಯಕ್ತಿಗಳ ಸಂಸ್ಥೆ ಅಧೀನದಲ್ಲಿ ಸೇವೆಗೆ ನಿಯೋಜಿಸಬಹುದು, ಅದು ಸಂಘಟಿತವಾಗಿರಲಿ ಅಥವಾ ಇಲ್ಲದಿರಲಿ, ಅಥವಾ ಕೇಂದ್ರ ಸರ್ಕಾರದಿಂದ ಅಥವಾ ಇನ್ನೊಂದು ರಾಜ್ಯ ಸರ್ಕಾರದಿಂದ ನಿಯಂತ್ರಿಸಲ್ಪಡುತ್ತದೆ. ಆದಾಗ್ಯೂ, ಯಾವುದೇ ಭಿನ್ನಾಭಿಪ್ರಾಯವಿದ್ದಲ್ಲಿ, ಈ ವಿಷಯವನ್ನು ಕೇಂದ್ರ ಸರ್ಕಾರವೇ ನಿರ್ಧರಿಸುತ್ತದೆ ಮತ್ತು ಸಂಬಂಧಪಟ್ಟ ರಾಜ್ಯ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ನಿರ್ಧಾರವನ್ನು ಜಾರಿಗೆ ತರುತ್ತವೆ’ಎಂಬ ಒಕ್ಕಣೆ ಇದರಲ್ಲಿದೆ.
ತಿದ್ದುಪಡಿ ಏನು?:ಡಿಪಾರ್ಟ್​ವೆುಂಟ್ ಆಫ್ ಪರ್ಸೆನೆಲ್ ಆಂಡ್ ಟ್ರೇನಿಂಗ್ ಡಿ.20ರಂದು ರಾಜ್ಯ ಸರ್ಕಾರಗಳಿಗೆ ಬರೆದ ಪತ್ರದ ಪ್ರಕಾರ, ವಿವಿಧ ರಾಜ್ಯ/ಜಂಟಿ ಕೆಡರ್​ಗಳು ಕೇಂದ್ರೀಯ ನಿಯೋಜನೆ ಮೀಸಲಿನ ಭಾಗವಾಗಿ ಕೇಂದ್ರ ಸರ್ಕಾರದ ಕೆಲಸಗಳಿಗೆ ಸಾಕಷ್ಟು ಸಂಖ್ಯೆಯ ಅಧಿಕಾರಿಗಳನ್ನು ನೀಡುತ್ತಿಲ್ಲ. ಪರಿಣಾಮವಾಗಿ, ಕೇಂದ್ರದ ಡೆಪ್ಯುಟೇಶನ್​ಗೆ ಲಭ್ಯವಿರುವ ಅಧಿಕಾರಿಗಳ ಸಂಖ್ಯೆ ಕೇಂದ್ರದಲ್ಲಿನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುವುದಿಲ್ಲ. ಹೀಗಾಗಿ, ನಿಯಮ 6(1) ರಲ್ಲಿ ಹೆಚ್ಚುವರಿ ಷರತ್ತನ್ನು ಸೇರಿಸುವ ಪಸ್ತಾಪವಿದೆ. ಇದರಲ್ಲಿ, ನಿಯಮ 4(1)ರಲ್ಲಿ ಕೇಂದ್ರ ಸರ್ಕಾರಕ್ಕೆ ನಿಯೋಜನೆಗಾಗಿ ಪ್ರತಿ ರಾಜ್ಯ ಸರ್ಕಾರವು ಒದಗಿಸಬೇಕಾದ ಅರ್ಹ ಅಧಿಕಾರಿಗಳು ಯಾವ ಸ್ತರದವರು ಎಂಬುದನ್ನು ಉಲ್ಲೇಖಿಸಲಾಗಿದೆ. ನಿರ್ದಿಷ್ಟ ಸಮಯದಲ್ಲಿ ರಾಜ್ಯ ಕೆಡರ್​ನ ಒಟ್ಟು ಅಧಿಕೃತ ಸಾಮರ್ಥ್ಯಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದಲ್ಲಿ ಲಭ್ಯವಿರುವ ಅಧಿಕಾರಿಗಳ ಸಂಖ್ಯೆಗೆ ಅನುಗುಣವಾಗಿ ಸರಿಹೊಂದಿಸಲಾಗುತ್ತದೆ. ಕೇಂದ್ರ ಸರ್ಕಾರಕ್ಕೆ ನಿಯೋಜಿಸಬೇಕಾದ ಅಧಿಕಾರಿಗಳ ನೈಜ ಸಂಖ್ಯೆಯನ್ನು ಕೇಂದ್ರ ಸರ್ಕಾರ ಸಂಬಂಧಪಟ್ಟ ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ನಿರ್ಧರಿಸುತ್ತದೆ. ಅಲ್ಲದೆ, ಕೇಂದ್ರದ ಸೇವೆಗೆ ಅವರ ಸೇವೆಯ ಅಗತ್ಯ ಇದ್ದಾಗ ಅವರನ್ನು ನಿಯೋಜಿಸುವ ಪೂರ್ಣ ಅಧಿಕಾರ ಕೇಂದ್ರಕ್ಕೆ ಇರುತ್ತದೆ ಎಂಬ ಅಂಶವಿದೆ. ಐಎಎಸ್ ಅಧಿಕಾರಿಗಳನ್ನು ಕೇಂದ್ರೀಯ ಸೇವೆಗೆ ನಿಶ್ಚಿತದ ಗಡುವಿನೊಳಗೆ ಕಳುಹಿಸದೇ ಇದ್ದರೆ ಅವರನ್ನು ಕರೆಯಿಸಿಕೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುತ್ತದೆ.
ಸಹಕಾರಿ ಫೆಡರಲಿಸಮ್ ಆಶಯಕ್ಕೆ ವಿರುದ್ಧವಾದ ಪ್ರಸ್ತಾವನೆ ಇದು. ಪ್ರಸ್ತಾವಿತ ತಿದ್ದುಪಡಿ ಮೂಲಕ ಅಧಿಕಾರಿಗಳನ್ನು ಬಲವಂತವಾಗಿ ಕೇಂದ್ರೀಯ ನಿಯೋಜನೆಗೆ ಒಳಪಡಿಸಿದರೆ ರಾಜ್ಯಗಳ ಆಡಳಿತದ ಮೇಲೆ ಪರಿಣಾಮ ಉಂಟಾಗಲಿದೆ. ಅಂತಹ ಅಧಿಕಾರಿಗಳನ್ನು ಇಟ್ಟುಕೊಂಡು ರಾಜ್ಯದ ಆಡಳಿತ ನಡೆಸುವುದು ಕಷ್ಟಸಾಧ್ಯ. ಈ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಯಾವಾಗ ವಾಪಸ್ ಕರೆಯಿಸಿಕೊಳ್ಳುತ್ತದೆ ಎಂಬ ಸುಳಿವೂ ರಾಜ್ಯಗಳಿಗೆ ಇರಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿಗೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಭಾರತೀಯ ಆಡಳಿತ ಸೇವೆಯ (ಸಿಬ್ಬಂದಿ) ನಿಯಮ 1954ಕ್ಕೆ ತಿದ್ದುಪಡಿ ತರುವುದರ ಮೂಲಕ ರಾಜ್ಯಗಳ ಆಡಳಿತಗಳ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿದ್ದು, ಇದನ್ನು ಒಪ್ಪಿ ಸಾಮಂತರಾಗಬೇಡಿ, ವಿರೋಧಿಸಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ್ದಾರೆ. ರಾಜ್ಯಗಳಿಗೆ ಇರುವ ಅಧಿಕಾರ ಕಿತ್ತುಕೊಳ್ಳುವ ಕೇಂದ್ರದ ಪ್ರಯತ್ನಕ್ಕೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಬೇಕಾಗಿದೆ. ಅದಕ್ಕೂ ಮೊದಲು ಪ್ರತಿಪಕ್ಷಗಳ ಜತೆ ಚರ್ಚೆ ನಡೆಸಿ ಎಂದು ಪತ್ರ ಬರೆದು ಒತ್ತಾಯಿಸಿದ್ದಾರೆ. ಉದ್ದೇಶಿತ ತಿದ್ದುಪಡಿಯ ಪ್ರಕಾರ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಬೇಕೆಂದಾಗ ಕೇಂದ್ರಕ್ಕೆ ಕರೆಸಿಕೊಳ್ಳುವ, ಬೇಡವೆಂದಾಗ ರಾಜ್ಯಗಳಿಗೆ ವಾಪಸು ಕಳಿಸುವ ಪ್ರಸ್ತಾಪ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − two =
Remember me
