ನವದೆಹಲಿ:ಕೋವಿಡ್​-19 ಮಹಾಮಾರಿಯ ಎರಡನೇ ಅಲೆ ವೇಳೆ ಭಾರತದಲ್ಲಿ ವೈದ್ಯಕಿಯ ಆಮ್ಲಜನಕಕ್ಕಾಗಿ ಇನ್ನಿಲ್ಲದ ಪರದಾಟ ನಡೆಯುತ್ತಿದೆ. ಪ್ರತಿ ದಿನ ಎರಡು ಸಾವಿರಕ್ಕೂ ಹೆಚ್ಚಿನ ಕರೊನಾ ರೋಗಿಗಳು ಸಾಯುತ್ತಿದ್ದು, ಆಮ್ಲಜನಕದ ಕೊರತೆಯೇ ಹೆಚ್ಚಿನ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಜನರು ಅನಗತ್ಯ ಗಾಬರಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗಳಿಗೆ ದೌಡಾಯಿಸುತ್ತಿರುವುದು ಕೂಡ ಆಕ್ಸಿಜನ್​ ಬಿಕ್ಕಟ್ಟು ಬಿಗಡಾಯಿಸಲು ಕಾರಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಣವಾಯುವಿನ ಕೊರತೆ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.
ಹೊಸ ರೂಪಾಂತರಿ ಕಾರಣ?:ಹೊಸ ರೂಪಾಂತರಿ ಪ್ರಭೇದಗಳಿಂದ ಅಧಿಕ ವೇಗದಲ್ಲಿ ಹೆಚ್ಚು ಜನರಿಗೆ ಸೋಂಕು ವ್ಯಾಪಿಸಿ, ಅಲ್ಲೋಲ ಕಲ್ಲೋಲ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಕರಣಗಳ ಸಂಖ್ಯೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದಿಢೀರ್​ ಏರಿಕೆಯಾದ ಕಾರಣ ಆಕ್ಸಿಜನ್​ ಬಿಕ್ಕಟ್ಟು ಆರಂಭವಾಗಿದೆ. ಮೊದಲ ಅಲೆಯ ಸಂದರ್ಭದಲ್ಲಿ ಆಕ್ಸಿಜನ್​ಗೆ ಇಷ್ಟು ಹಾಹಾಕಾರ ಉಂಟಾಗಿರಲಿಲ್ಲ. ಹೊಸ ರೂಪಾಂತರಿ ಕರೊನಾ ಪೀಡಿತರಿಗೆ ಆಕ್ಸಿಜನ್​ ಅವಶ್ಯಕತೆ ಹೆಚ್ಚಿದೆ ಎಂದೂ ಹೇಳಲಾಗುತ್ತಿದೆ.
ದೆಹಲಿಯಲ್ಲಿ ತೀವ್ರ:ರಾಷ್ಟ್ರ ರಾಜಧಾನಿ ದೆಹಲಿ ಮೆಡಿಕಲ್​ ಆಕ್ಸಿಜನ್​ ಕೊರತೆಯಿಂದ ನಲುಗುತ್ತಿದೆ. ಆಕ್ಸಿಜನ್​ ಮಟ್ಟ ಕುಸಿದು ಅನೇಕ ರೋಗಿಗಳು ಮರಣವಪ್ಪಿದ ಪ್ರಕರಣಗಳೂ ನಡೆದಿವೆ. ಆಮ್ಲಜನಕ ಪೂರೈಕೆಗೆ ನೆರವಾಗುವಂತೆ ಸಿಎಂ ಅರವಿಂದ ಕೇಜ್ರಿವಾಲ್​ ದೊಡ್ಡ ಕೈಗಾರಿಕಾ ಸಮೂಹಗಳಿಗೆ ಮೊರೆಯಿಟ್ಟಿದ್ದಾರೆ. ಕಾಳಸಂತೆಯಲ್ಲಿ ಆಕ್ಸಿಜನ್​ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತಿರುವುದೂ ಬಿಕ್ಕಟ್ಟಿಗೆ ಒಂದು ಕಾರಣ ಎನ್ನಲಾಗಿದೆ.
ಬೇಡಿಕೆ ಹಲವು ಪಟ್ಟು ಏರಿಕೆ:ಮೊದಲ ಅಲೆ ವೇಳೆ ಆಕ್ಸಿಜನ್​ಗೆ ದೈನಿಕ ಬೇಡಿಕೆ 1,500 ಮೆಟ್ರಿಕ್​ ಟನ್​ ಕೂಡ ಇರಲಿಲ್ಲ. ಈಗ ಅದು 6,000 ಮೆಟ್ರಿಕ್​ ಟನ್​ ಮಟ್ಟಕ್ಕೆ ಏರಿದೆ.
ಕೇಂದ್ರದ ವಿರುದ್ಧ ಆರೋಪ:ರಾಜ್ಯಗಳಿಗೆ ಅಗತ್ಯ ಪ್ರಮಾಣ ಆಕ್ಸಿಜನ್​ ಸಿಲಿಂಡರ್​ಗಳನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡುತ್ತಿಲ್ಲ ಎಂದು ಹಲವು ರಾಜ್ಯಗಳು ಆರೋಪ ಮಾಡಿವೆ. ದೆಹಲಿ ಹೈಕೋರ್ಟ್​ ಸಹಿತ ಹಲವು ನ್ಯಾಯಾಲಯಗಳು ಕಳವಳ ವ್ಯಕ್ತಪಡಿಸಿವೆ.
ಸಮರೋಪಾದಿ ಕ್ರಮ:ಆಮ್ಲಜನಕ ಸರಬರಾಜಿಗೆ ಕೇಂದ್ರ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಖುದ್ದಾಗಿ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದು, ಆಕ್ಸಿಜನ್​ ಲಭ್ಯತೆಗೆ ಅಗತ್ಯವಾದ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶಿ ಸಿದ್ದಾರೆ. ದೇಶದಲ್ಲಿ ಆಕ್ಸಿಜನ್​ ಕೊರತೆಯಿಲ್ಲ; ಸಾಗಾಣಿಕೆಯಲ್ಲಿ ಸ್ವಲ್ಪ ತೊಂದರೆ ಎದುರಾಗಿದೆ ಎಂದು ಸರ್ಕಾರ ವಿವರಿಸಿದೆ.
ಕಂಟೇನರ್​ ಆಗಮನ:ಮೆಡಿಕಲ್​ ಆಕ್ಸಿಜನ್​ ಸಾಗಾಟಕ್ಕೆ ಬೇಕಾದ ಅನೇಕ ಕಂಟೇನರ್​ಗಳು ಮಂಗಳವಾರ ಥಾಯ್ಲೆಂಡ್​ನಿಂದ ದೆಹಲಿಗೆ ತಲುಪಿವೆ. ಸಿಂಗಾಪುರದಿಂದಲೂ ಹಲವು ಖಾಲಿ ಕಂಟೇನರ್​ಗಳನ್ನು ಭಾರತೀಯ ವಾಯುಪಡೆಯ ವಿಮಾನಗಳಲ್ಲಿ ತರಿಸಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ತಿಳಿಸಿದೆ. ಆಕ್ಸಿಜನ್​ ಕೊರತೆಯಿಂದ ಬಳಲುತ್ತಿದ್ದ ದೆಹಲಿಯ ಆಸ್ಪತ್ರೆಗಳಲ್ಲಿ ಸದ್ಯ ಕೊಂಚ ಮಟ್ಟಿಗಿನ ಸುಧಾರಣೆಯಾಗಿದೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:four × 1 =
Remember me
