ನವದೆಹಲಿ:ಮೂರೂ ಸೇನಾ ಪಡೆಗಳಿಗೆ ಅಲ್ಪಾವಧಿಯ ನೇಮಕ ಯೋಜನೆ ‘ಅಗ್ನಿಪಥ’ಕ್ಕೆ ದೇಶದ ವಿವಿಧ ಭಾಗಗಳಲ್ಲಿ ಹಿಂಸಾತ್ಮಕ ಪ್ರತಿರೋಧ ಮುಂದುವರಿದಿರುವುದರ ನಡುವೆ, ಈ ಯೋಜನೆ ಮೂಲಕವೇ ಇನ್ನು ಮುಂದೆ ಸೇನೆಗೆ ನೇಮಕಾತಿ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ. ಯೋಜನೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲವೆಂದು ಅದು ಘೋಷಿಸಿದೆ. ಸಿಯಾಚಿನ್ ಮತ್ತಿತರ ಪ್ರದೇಶಗಳಲ್ಲಿ ಹಾಲಿ ಯೋಧರಿಗೆ ಸಿಗುವಂಥದ್ದೇ ಭತ್ಯೆಗಳನ್ನು ಅಗ್ನಿವೀರರಿಗೂ ನೀಡಲಾಗುತ್ತದೆ. ಹುತಾತ್ಮರಾದರೆ ಅಗ್ನಿವೀರ್​ರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದೂ ರಕ್ಷಣಾ ಸಚಿವಾಲಯದ ಅಪರ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅರುಣ್ ಪುರಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಅರಾಜಕವಾದಿಗಳಿಗೆ ಭಾರತೀಯ ಸೇನೆಯಲ್ಲಿ ಸ್ಥಾನವಿಲ್ಲ. ಆದ್ದರಿಂದ ತಾವು ಯಾವತ್ತೂ ಯಾವುದೇ ಪ್ರತಿಭಟನೆಗಳಲ್ಲಿ ಭಾಗವಹಿಸಿರಲಿಲ್ಲ ಎಂದು ಅಭ್ಯರ್ಥಿಗಳು ಪ್ರಮಾಣಪತ್ರ ಸಲ್ಲಿಸೇಕಾಗುತ್ತದೆ ಎಂದು ಸಿಂಗ್ ಹೇಳಿದರು. ಸಶಸ್ತ್ರ ಪಡೆಗಳ ವಯೋಗುಂಪಿನ ಸಮತೋಲನ ಸಾಧಿಸಲು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ. 1999ರ ಕಾರ್ಗಿಲ್ ಯುದ್ಧದ ಕುರಿತು ನೇಮಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯೂ ಇಂಥ ಯೋಜನೆ ಬಗ್ಗೆ ಸಲಹೆ ಮಾಡಿತ್ತು ಎಂದು ಹೇಳಿದರು.
ರಾಜನಾಥ್ ಸಿಂಗ್ ಸಭೆ:ಭೂ ಸೇನೆ, ವಾಯು ಪಡೆ ಮತ್ತು ನೌಕಾ ಪಡೆ ಮುಖ್ಯಸ್ಥರೊಂದಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಭಾನುವಾರ ಸಭೆ ನಡೆಸಿದರು. ಶನಿವಾರವೂ ಇದೇ ವಿಚಾರವಾಗಿ ಸಭೆ ನಡೆಸಿದ್ದರು.
ಮಂತ್ರಿ ಹೇಳಿಕೆಗೆ ಆಕ್ರೋಶ:ಇಡಿಯಾಗಿ ಅಗ್ನಿಪಥ ಯೋಜನೆ ಬಗ್ಗೆಯೇ ಅಸಮಾಧಾನ ಉಂಟಾಗಿ ಚಳವಳಿ ನಡೆಯುತ್ತಿರುವಾಗ, ಅಗ್ನಿವೀರರಿಗೆ ಚಾಲಕ, ಎಲೆಕ್ಟ್ರಿಷಿಯನ್, ಧೋಬಿ, ಕ್ಷೌರಿಕ ಮತ್ತಿತರ ವೃತ್ತಿಗಳಲ್ಲಿ ತರಬೇತಿ ನೀಡಲಾಗುವುದು ಎಂದು ಹೇಳುವ ಮೂಲಕ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಉರಿಯುವ ಬೆಂಕಿಗೆ ಎಣ್ಣೆ ಸುರಿದಿದ್ದಾರೆ. ರೆಡ್ಡಿ ಹೇಳಿಕೆ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಅಲ್ಪಾವಧಿ ಸೇವೆ ಮುಗಿಸಿದ ಯೋಧರಿಗೆ ಬಿಜೆಪಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿ ಕೆಲಸ ನೀಡಲಾಗುವುದು ಎಂದು ಮುಖಂಡ ವಿಜಯವರ್ಗೀಯ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ವೇಳಾಪಟ್ಟಿ ಪ್ರಕಟ:‘ಅಗ್ನಿಪಥ’ ಯೋಜನೆಯ ನೇಮಕ ಪ್ರಕ್ರಿಯೆ ಆರಂಭಿಸಲು ಮೂರೂ ಸಶಸ್ತ್ರ ಪಡೆಗಳು ಸಿದ್ಧತೆ ಮಾಡಿಕೊಂಡಿದ್ದು, ವೇಳಾ ಪಟ್ಟಿ ಪ್ರಕಟಣೆಯನ್ನೂ ಮಾಡಿವೆ. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್​ನಲ್ಲಿ ದೇಶದಾದ್ಯಂತ 83 ರ್ಯಾಲಿಗಳು ನಡೆಯಲಿದ್ದು, ಸುಮಾರು 40 ಸಾವಿರ ಅಗ್ನಿವೀರರ ನೇಮಕಾತಿ ನಡೆಯಲಿದೆ.
ನೌಕಾಪಡೆ ಮಾರ್ಗಸೂಚಿ:ಭಾರತೀಯ ನೌಕಾ ಪಡೆಗೆ (ನೇವಿ) ಅಗ್ನಿವೀರರ ನೇಮಕಾತಿ ಸಂಬಂಧ ಜುಲೈ 15ರೊಳಗೆ ವಿಸ್ತತ ಮಾರ್ಗಸೂಚಿ ಪ್ರಕಟಿಸುವುದಾಗಿ ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ತಿಳಿಸಿದ್ದಾರೆ. ನೇಮಕಗೊಂಡ ಮೊದಲ ಬ್ಯಾಚ್​ನವರು ಒಡಿಶಾದಲ್ಲಿರುವ ‘ಐಎನ್​ಎಸ್ ಚಿಲ್ಕಾ’ದಲ್ಲಿ ತರಬೇತಿ ಕಾರ್ಯಕ್ರಮಕ್ಕೆ ಸೇರಲಿದ್ದಾರೆ.
ಜುಲೈ 24ಕ್ಕೆ ವಾಯುಪಡೆ ಪರೀಕ್ಷೆ:ವಾಯು ಪಡೆಗೆ ಅಗ್ನಿವೀರರ ನೇಮಕಕ್ಕೆ ನೋಂದಣಿ ಪ್ರಕ್ರಿಯೆ ಜೂನ್ 24ರಂದು ಆರಂಭವಾಗಲಿದೆ. ಒಂದನೇ ಹಂತದ ನೇಮಕಕ್ಕೆ ಆನ್​ಲೈನ್ ಪರೀಕ್ಷೆ ಪ್ರಕ್ರಿಯೆ ಜುಲೈ 24ರಂದು ಆರಂಭವಾಗುತ್ತದೆ ಎಂದು ಏರ್ ಮಾರ್ಷಲ್ ಎಸ್.ಕೆ. ಝಾ ತಿಳಿಸಿದ್ದಾರೆ. ಮೊದಲ ಬ್ಯಾಚ್​ನವರಿಗೆ ಡಿಸೆಂಬರ್ 30ರಂದು ತರಬೇತಿ ಆರಂಭವಾಗಲಿದೆ.
ಇಂದೇ ಕರಡು ಅಧಿಸೂಚನೆ:ಅಗ್ನಿವೀರರ ನೇಮಕಾತಿ ಸಂಬಂಧ ಭೂ ಸೇನೆ ಸೋಮವಾರವೇ (ಜೂನ್ 20) ಕರಡು ಅಧಿಸೂಚನೆ ಹೊರಡಿಸಲಿದೆ. ಜು.1ರ ನಂತರ ವಿವಿಧ ನೇಮಕಾತಿ ಘಟಕಗಳು ಅಧಿಸೂಚನೆ ಹೊರಡಿಸಲಿವೆ ಎಂದು ಲೆಫ್ಟಿನೆಂಟ್ ಜನರಲ್ ಬನ್ಸಿ ಪೊನ್ನಪ್ಪ ತಿಳಿಸಿದರು.
ಕಾಂಗ್ರೆಸ್​ನಿಂದ ಸತ್ಯಾಗ್ರಹ:ಅಲ್ಪಾವಧಿಯ ಮಿಲಿಟರಿ ಸೇವಾ ಯೋಜನೆ ವಿರುದ್ಧ ಭುಗಿಲೆದ್ದಿರುವ ಚಳವಳಿ ಭಾನುವಾರವೂ ದೇಶದ ಹಲವು ಭಾಗಗಳಲ್ಲಿ ಮುಂದುವರಿದಿದ್ದು ರಾಜಧಾನಿ ನವದೆಹಲಿಯಲ್ಲಿ ಕಾಂಗ್ರೆಸ್ ಮುಖಂಡರು ಸತ್ಯಾಗ್ರಹ ನಡೆಸಿದರು. ಉತ್ತರ ಪ್ರದೇಶ, ತೆಲಂಗಾಣ ಮತ್ತು ಬಿಹಾರದಲ್ಲಿ ಹೋರಾಟ ಉಗ್ರ ರೂಪ ತಳೆದಿದೆ. ದೆಹಲಿಯಲ್ಲಿ ನಡೆದ ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹಿತ ಹಲವು ನೇತಾರರು ಭಾಗವಹಿಸಿದ್ದರು. ಪಕ್ಷ ಪ್ರತಿಭಟನೆ ನಿರತ ಯುವಜನರ ಬೆಂಬಲಕ್ಕೆ ನಿಲ್ಲಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಹೇಳಿದ್ದರು. ಕೃಷಿ ಕಾನೂನುಗಳ ವಿಚಾರದಲ್ಲಿ ಆಗಿದ್ದು ಪುನರಾವರ್ತನೆ ಆಗುವುದನ್ನು ತಡೆಯಲು ಯೋಜನೆಯನ್ನು ತಕ್ಷಣವೇ ವಾಪಸ್ ಪಡೆಯುವಂತೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಆಗ್ರಹಿಸಿದ್ದಾರೆ. ಯೋಜನೆ ಕುರಿತು ಉಂಟಾಗಿರುವ ಅನುಮಾನಗಳನ್ನು ಪರಿಹರಿಸುವಂತೆ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ನಾಯಕ ತೇಜಸ್ವಿ ಯಾದವ್ ಒತ್ತಾಯಿಸಿದ್ದಾರೆ.
ಪಿಂಚಣಿಗೇ ಹೆಚ್ಚು ಖರ್ಚು:2013-14ರಲ್ಲಿ ಪಿಂಚಣಿ ಮೇಲಿನ ಸೇನೆಯ ವೆಚ್ಚವು ಶೇ. 82.5 ಆಗಿತ್ತು. ಈ ಮೊತ್ತವನ್ನು ಸೇನೆ ಸಂಬಳಕ್ಕಾಗಿ ಖರ್ಚು ಮಾಡುತ್ತಿತ್ತು. 2020-21ರಲ್ಲಿ ಒನ್ ರ್ಯಾಂಕ್ ಒನ್ ಪೆನ್ಷನ್ (ಒಆರ್​ಒಪಿ) ಯೋಜನೆ ಜಾರಿಗೆ ಬಂದ ನಂತರ ಸೇನೆಯು ಸಂಬಳಕ್ಕೆ ಪಾವತಿಸುತ್ತಿದ್ದಕ್ಕಿಂತ ಹೆಚ್ಚಿನ ಹಣವನ್ನು ಪಿಂಚಣಿಗೆ (ಶೇ.125) ನೀಡುತ್ತಿದೆ.
ಪಂಜಾಬ್ ಸಿಎಂ ವಾಹನ ತಡೆದ ಯುವಕ:ವಿವಾದಾತ್ಮಕ ಮಿಲಿಟರಿ ನೇಮಕಾತಿ ಯೋಜನೆ ಬಗ್ಗೆ ರ್ಚಚಿಸುವಂತೆ ಆಗ್ರಹಿಸಿ ಯುವಕನೊಬ್ಬ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ವಾಹನಕ್ಕೆ ಘೇರಾವ್ ಹಾಕಿದ. ರೋಡ್ ಶೋನಲ್ಲಿ ಭಾಗವಹಿಸಿದ್ದ ಮಾನ್ ಜನರತ್ತ ಕೈ ಬೀಸುತ್ತಿದ್ದಾಗ ಹಠಾತ್ತನೆ ಅವರಿದ್ದ ವಾಹನದ ಮುಂದೆ ಬಂದ ಕಪು್ಪ ಟೀಶರ್ಟ್ ಧರಿಸಿದ್ದ ಯುವಕ, ಮಾನ್​ರ ಕೈಕುಲುಕಿದ. ಭದ್ರತಾ ಸಿಬ್ಬಂದಿ ತಡೆದರೂ ಮುನ್ನುಗ್ಗಿದ ಯುವಕ ಸಿಎಂ ಬಳಿ ತೆರಳಿ ಅಗ್ನಿಪಥ ಯೋಜನೆ ಬಗ್ಗೆ ರ್ಚಚಿಸುವಂತೆ ಒತ್ತಾಯಿಸಿದ.
ನಕಲಿ ಆಕಾಂಕ್ಷಿಗಳ ಸೆರೆ:ಸೇನಾಕಾಂಕ್ಷಿಗಳು ಎಂದು ಹೇಳಿಕೊಂಡು ಪ್ರತಿಭಟನೆಯನ್ನು ಪ್ರಚೋದಿಸುತ್ತಿದ್ದ 9 ಜನರನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ. ಆ ಪೈಕಿ ಒಬ್ಬ ಎನ್​ಎಸ್​ಯುುಐ ಸಂಪರ್ಕ ಹೊಂದಿದವನೆಂದು ಹೇಳಲಾಗಿದೆ.
ಒಳ್ಳೇ ವಿಚಾರಗಳಿಗೆ ನೂರೆಂಟು ವಿಘ್ನ:ಅನೇಕ ಒಳ್ಳೆಯ ವಿಚಾರಗಳಿಗೆ ರಾಜಕೀಯ ಬಣ್ಣ ಬಳಿಯುವುದು ನಮ್ಮ ದೇಶದ ದುರಾದೃಷ್ಟ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೇಸರ ವ್ಯಕ್ತಪಡಿಸಿದ್ದಾರೆ. ಅಗ್ನಿಪಥ ಯೋಜನೆ ವಿರುದ್ಧದ ಚಳವಳಿಯನ್ನು ಪ್ರಸ್ತಾಪಿಸದೆ, ಉತ್ತಮ ಉದ್ದೇಶದಿಂದ ಮಾಡಿದ ಕೆಲಸಗಳಿಗೆ ರಾಜಕೀಯ ಬಣ್ಣ ಬಳಿಯಲಾಗುತ್ತದೆ ಎಂದು ಪರೋಕ್ಷವಾಗಿ ಟೀಕಿಸಿದರು.
ಸರ್ಕಾರವನ್ನು ಅಸ್ಥಿರಗೊಳಿಸುವ ಏಕೈಕ ಉದ್ದೇಶದಿಂದ ಪ್ರತಿಪಕ್ಷಗಳು ರಾಷ್ಟ್ರೀಯ ಭದ್ರತೆ ಮತ್ತು ಸಶಸ್ತ್ರ ಪಡೆಗಳ ವಿಚಾರದಲ್ಲಿ ರಾಜಕೀಯ ನಡೆಸುತ್ತಿವೆ. ಅಗ್ನಿಪಥ ವಿರೋಧಿ ಚಳವಳಿ ಬೆಂಬಲಿಸಿ ಕಾಂಗ್ರೆಸ್ ನಡೆಸಿದ ಸತ್ಯಾಗ್ರಹ ಶುದ್ಧ ರಾಜಕೀಯ
|ಸಂಬಿತ್ ಮಹಾಪಾತ್ರಬಿಜೆಪಿ ವಕ್ತಾರ
ಜೆಡಿಯು-ಬಿಜೆಪಿ ಜಗಳಕ್ಕೆ ತರಾಟೆ:ಬಿಹಾರದಲ್ಲಿ ಆಳುವ ಪಕ್ಷಗಳಾದ ಜೆಡಿಯು, ಬಿಜೆಪಿ ಪರಸ್ಪರ ಕಚ್ಚಾಟದಲ್ಲಿ ತೊಡಗಿವೆ. ಬಿಜೆಪಿ ನಾಯಕರ ಮನೆಗಳ ಮೇಲೆ ಚಳವಳಿಕಾರರು ನಡೆಸಿದ ದಾಳಿಗಳನ್ನು ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಆರೋಪಿಸಿದ್ದ ಹಿನ್ನೆಲೆ ಯಲ್ಲಿ ಉಭಯ ಮಿತ್ರ ಪಕ್ಷಗಳು ವಾಕ್ಸಮರದಲ್ಲಿ ಮುಳುಗಿವೆ.
35 ವಾಟ್ಸ್​ಆ್ಯಪ್​ ಗ್ರೂಪ್ ನಿಷೇಧ:ಅಗ್ನಿಪಥ ಯೋಜನೆ ಬಗ್ಗೆ ವದಂತಿ ಹಬ್ಬಿಸುತ್ತಿದ್ದ ಮತ್ತು ಪ್ರತಿಭಟನೆಯನ್ನು ಉತ್ತೇಜಿಸುತ್ತಿದ್ದ 35 ವಾಟ್ಸ್ಆ್ಯಪ್​ ಗ್ರೂಪ್​ಗಳನ್ನು ಸರ್ಕಾರ ಭಾನುವಾರ ನಿಷೇಧಿಸಿದೆ. ಈ ಗುಂಪುಗಳ ಆಡ್ಮಿನ್ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಸದ್ಯ ಮಾಹಿತಿ ಲಭ್ಯವಾಗಿಲ್ಲ.
ಸಿಕಂದರಾಬಾದ್​ನಲ್ಲಿ ಸಂಚುಕೋರನ ಬಂಧನ:ಅಗ್ನಿಪಥದ ವಿರುದ್ಧ ತೆಲಂಗಾಣದ ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ನಡೆದ ಹಿಂಸಾತ್ಮಕ ದೊಂಬಿಯ ಸಂಚುಕೋರ ಎನ್ನಲಾದ ಅವುಲ ಸುಬ್ಬ ರಾವ್​ನನ್ನು ಬಂಧಿಸಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಆರ್ವಿುಯ ಮಾಜಿ ಯೋಧನಾದ ರಾವ್, ಪ್ರತಿಭಟನೆಗಾಗಿ ವಾಟ್ಸ್​ಆಪ್​ನಲ್ಲಿ ಗುಂಪನ್ನು ರಚಿಸಿದ್ದ.
ರಾಜ್ಯದಲ್ಲಿ ಮುಂಗಾರು ಇನ್ನಷ್ಟು ಬಿರುಸು: ನಾಳೆ 14 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಪಂಚತಾರಾ ಹೋಟೆಲ್​ನಲ್ಲಿ ಬಾಲಕನಿಂದ ಅತ್ಯಾಚಾರ; ಪ್ರಕರಣ ಮುಚ್ಚಿ ಹಾಕಲು ಹಣದ ಆಮಿಷವೊಡ್ಡಿದ ಅಪ್ಪ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − sixteen =
Remember me
