ಮುಂಬೈ:ಸರ್ಕಾರ ವಶಪಡಿಸಿಕೊಂಡಿರುವ ತನ್ನ ಪೂರ್ವಕರ ಆಸ್ತಿಗೆ 2,600 ಕೋಟಿ ರೂ. ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ಆ ಮಹಿಳೆ ತನ್ನ ಪುತ್ರ ಹಾಗೂ ಪತಿಯ ಜತೆ ಮುಂಬೈನ ಆಜಾದ್​ ಮೈದಾನದಲ್ಲಿ ಆರು ವರ್ಷಗಳಿಂದ ಪ್ರತಿಭಟಿಸುತ್ತಿದ್ದರು. ಆದರೆ ಇದೀಗ ತಮ್ಮ 70 ವರ್ಷ ವಯಸ್ಸಿನಲ್ಲೂ ಹೋರಾಡುತ್ತಲೇ ಬೃಹನ್ಮುಂಬೈ ಮಹಾನಗರಪಾಲಿಕೆ ಎದುರಿನ ಪಾದಚಾರಿ ಮಾರ್ಗದಲ್ಲೇ ಮರಣಿಸಿದ್ದಾರೆ.
ವಿಮಲಾ ಪೇಥಕರ್​ (70) ಮೃತ ಮಹಿಳೆ. ಪ್ರತಿಭಟನೆ ನಡೆಸುತ್ತಿರುವಾಗಲೇ ಇವರ ಪತಿ ಮೋಹನ್​ ಪೇಥಕರ್​ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಸಾಂಗ್ಲಿಯ ಟಾಸ್ಗಾಂವ್​ ನಿವಾಸಿ ವಿಮಲಾ ಅವರಿಗೆ ಪಿತ್ರಾರ್ಜಿತವಾಗಿ ಬಂದಿದ್ದು ಎನ್ನಲಾದ ಸಾಂಗ್ಲಿಯಲ್ಲಿನ 3.5 ಎಕರೆ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಇದಕ್ಕೆ ಮಾರುಕಟ್ಟೆ ಬೆಲೆ 2,600 ಕೋಟಿ ರೂ. ಪರಿಹಾರ ನೀಡುವಂತೆ ಒತ್ತಾಯಿಸಿ ವಿಮಲಾ ಅವರು ತಮ್ಮ ಪತಿ ಹಾಗೂ ಪುತ್ರನ ಜತೆ ಮುಂಬೈನ ಆಜಾದ್​ ಮೈದಾನದಲ್ಲಿ 2014ರಿಂದ ಪ್ರತಿಭಟನೆ ನಡೆಸುತ್ತಿದ್ದರು. 2018ರಲ್ಲಿ ತಮ್ಮ ಪತಿ ಮೋಹನ್​ ಮೃತಪಟ್ಟರೂ ಪುತ್ರ ದತ್ತಾತ್ರೇಯನ ಜತೆ ವಿಮಲಾ ಹೋರಾಟ ಮುಂದುವರಿಸಿದ್ದರು.
ಆದರೆ, ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಪ್ರತಿಭಟನಾನಿರತ ವಿಮಲಾ ಮತ್ತು ದತ್ತಾತ್ರೇಯ ಅವರನ್ನು ಪೊಲೀಸರು ಬಲವಂತವಾಗಿ ಸ್ಥಳಾಂತರಿಸಲು ಯತ್ನಿಸಿದ್ದರು. ಆದರೂ ಆಕೆ ಪಾದಚಾರಿ ಮಾರ್ಗದಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಿದ್ದರು. ಆದರೆ, ಸೋಮವಾರ ಬೆಳಗ್ಗೆ ವಿಮಲಾ ಅವರು ಪ್ರತಿಕ್ರಿಯೆ ಇಲ್ಲದಂತೆ ಬಿದ್ದಿದ್ದನ್ನು ದತ್ತಾತ್ರೇಯ ಗಮನಿಸಿದರು. ತಕ್ಷಣವೇ ತಮ್ಮ ತಾಯಿಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಆದರೆ, ವಿಮಲಾ ಅವರ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ಮಾಡಿದ್ದು, ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:‘ರಬ್ಬರ್ ಸ್ಟ್ಯಾಂಪ್ ಸಿಎಂ’ ಆಗಿದ್ದೆ ಕಾಂಗ್ರೆಸ್ ಜತೆಗಿನ ಮೈತ್ರಿ ಸರ್ಕಾರದಲ್ಲಿ: ಎಚ್​.ಡಿ.ಕುಮಾರಸ್ವಾಮಿ ಹೇಳಿಕೆ!
ವಿಮಲಾ ಅವರು ತಮ್ಮ ಪತಿ ಮತ್ತು ಪುತ್ರನ ಜತೆ 2014ರಲ್ಲಿ ಮೊದಲ ಬಾರಿಗೆ ಮುಂಬೈಗೆ ಬಂದಿದ್ದರು. ಆದ ಸಿವಿಲ್​ ಇಂಜಿನಿಯರ್​ ಆಗಿದ್ದ ದತ್ತಾತ್ರೇಯ ಅವರು ಸಾಂಗ್ಲಿ-ಮೀರಜ್​ ರಸ್ತೆಯಲ್ಲಿರುವ ತಮ್ಮ ಮುತ್ತಾತನಿಂದ ಬಂದಿರುವ 3.5 ಎಕರೆ ಭೂಮಿಗೆ ನ್ಯಾಯಯುತವಾಗಿ 2,600 ಕೋಟಿ ರೂ. ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಈ ಭೂಮಿಯ ಒಂದು ಭಾಗವನ್ನು ಅಂದಿನ ಬ್ರಿಟಿಷ್​ ಆಡಳಿತಗಾರರು 1881ರಲ್ಲಿ ಮೀಟರ್​ ಗೇಜ್​ ರೈಲು ಮಾರ್ಗ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿದ್ದರು. ಬಳಿಕ ಸರ್ಕಾರ ರಸ್ತೆ ವಿಸ್ತರಣೆಗಾಗಿ ಉಳಿದ ಭಾಗವನ್ನು ವಶಪಡಿಸಿಕೊಂಡಿದ್ದಾಗಿ ದತ್ತಾತ್ರೇಯ ತಿಳಿಸಿದ್ದಾರೆ. ತಮ್ಮ ಹಕ್ಕನ್ನು ಪ್ರತಿಪಾದಿಸಲು ದತ್ತಾತ್ರೇಯ ಅವರು ದಪ್ಪ ದಪ್ಪ ಇರುವ ಹಲವು ಕಡತಗಳನ್ನು ತಮ್ಮೊಂದಿಗೆ ಇರಿಸಿಕೊಂಡಿದ್ದಾರೆ.
ಭಾರಿ ಮೊತ್ತದ ಪರಿಹಾರ ನೀಡುವಂತೆ ವಿಮಲಾ ಅವರ ಕುಟುಂಬದ ಮನವಿಯನ್ನು ಜಿಲ್ಲಾಡಳಿತ ತಿರಸ್ಕರಿಸಿತ್ತು. ಆನಂತರದಲ್ಲಿ ಪೇಥಕರ್​ ಕುಟುಂಬದವರು ಮುಂಬೈನ ಆಜಾದ್​ ಮೈದಾನದಲ್ಲಿ ಸರ್ಕಾರದ ಅನ್ಯಾಯವನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದ್ದರು. ಬೆಳಗ್ಗೆಯಿಂದ ಸಂಜೆ 6 ಗಂಟೆಯವರೆಗೆ ಮೈದಾನದಲ್ಲಿ ಪ್ರತಿಭಟಿಸುತ್ತಿದ್ದರು. ಸಂಜೆ 6 ಗಂಟೆಯ ನಂತರದ ಆಜಾದ್​ ಮೈದಾನದಲ್ಲಿ ಯಾರು ಇರುವಂತಿಲ್ಲವಾದ್ದರಿಂದ, ಮುಂಬೈನ ಸಿಎಸ್​ಟಿ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿ ಮಲಗಿಕೊಳ್ಳುತ್ತಿದ್ದರು. ಮರುದಿನ ಬೆಳಗ್ಗೆ ಎದ್ದವರೇ ಆಜಾದ್​ ಮೈದಾನಕ್ಕೆ ಮರಳಿ ಪ್ರತಿಭಟನೆ ಆರಂಭಿಸುತ್ತಿದ್ದರು ಎನ್ನಲಾಗಿದೆ. ಸಿಎಸ್​ಟಿ ರೈಲು ನಿಲ್ದಾಣದಲ್ಲಿ ಮಲಗಲು ದತ್ತಾತ್ರೇಯ ರೈಲ್ವೆ ಅಧಿಕಾರಿಗಳ ಅನುಮತಿ ಪಡೆದುಕೊಂಡಿದ್ದರು ಎನ್ನಲಾಗಿದೆ. ಆಜಾದ್​ ಮೈದಾನದ ಸುತ್ತಮುತ್ತಲಿರುವ ಮಸೀದಿಗಳವರು ಹಾಗೂ ಇತರ ಪ್ರತಿಭಟನಾಕಾರರು ಪೇಥಕರ್​ ಕುಟುಂಬದವರಿಗೆ ಊಟ-ತಿಂಡಿ ಕೊಡುತ್ತಿದ್ದರು. ಸಾಂಗ್ಲಿಯಲ್ಲಿ ಟ್ರಕ್​ ಚಾಲಕನಾಗಿದ್ದು, ಮುಂಬೈಗೆ ಬರುವಾಗ ನನ್ನ ಸ್ನೇಹಿತನ ಕೈಯಲ್ಲಿ ನನ್ನ ಸಹೋದರಿ ಊಟ-ತಿಂಡಿ ಕೊಟ್ಟು ಕಳುಹಿಸುತ್ತಿದ್ದರು ಎಂದು ದತ್ತಾತ್ರೇಯ ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಡ್​ ಸೋಂಕು ತಗುಲಿತೆಂದು ಗರ್ಭಿಣಿ ಸೇರಿ ಕುಟುಂಬದ ಮೇಲೆ ಹಲ್ಲೆ
ದತ್ತಾತ್ರೇಯ ಅವರ ತಂದೆ ಮೋಹನ್​ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ 2018ರ ಆಗಸ್ಟ್​ನಲ್ಲಿ ಆಜಾದ್​ ಮೈದಾನದಲ್ಲೇ ಮೃತಪಟ್ಟಿದ್ದರು. ಅಗ ಕುಟುಂಬ ಶವದೊಂದಿಗೆ ಮನೆಗೆ ಮರಳಿ, ಅಂತ್ಯಸಂಸ್ಕಾರ ನೆರವೇರಿಸಿದ್ದಲ್ಲದೆ, 15 ದಿನಗಳ ಪುಣ್ಯಕಾರ್ಯಗಳ ಬಳಿಕ ಮತ್ತೆ ಆಜಾದ್​ ಮೈದಾನಕ್ಕೆ ಮರಳಿ ಪ್ರತಿಭಟನೆ ಪುನರಾರಂಭಿಸಿತ್ತು.
ಮಾರ್ಚ್​ನಲ್ಲಿ ಲಾಕ್​ಡೌನ್​ ಘೋಷಿಸಿದ ನಂತರದಲ್ಲಿ ಪೊಲೀಸರು ತಾಯಿ ಮತ್ತು ಪುತ್ರನನ್ನು ಬಲವಂತವಾಗಿ ಆಜಾದ್​ ಮೈದಾನದಿಂದ ಒಕ್ಕಲೆಬ್ಬಿಸಿದ್ದರು. ಆದರೆ, ಊರಿಗೆ ಹೋಗಲು ರೈಲು ಇಲ್ಲದ ಕಾರಣ ಸಿಎಸ್​ಟಿ ರೈಲು ನಿಲ್ದಾಣದಲ್ಲೇ ಇಬ್ಬರೂ ಉಳಿದುಕೊಂಡಿದ್ದರು. ಪರಿಹಾರ ಕೊಡುವಂತೆ ಆಗ್ರಹಿಸಿ ದತ್ತಾತ್ರೇಯ ಮಹಾರಾಷ್ಟ್ರ ಸರ್ಕಾರದ ಸಚಿವಾಲಯಕ್ಕೆ ಅಲೆಯುವುದನ್ನು ನಿಲ್ಲಿಸಿರಲಿಲ್ಲ. ಶ್ರಮಿಕ್ ರೈಲುಗಳ ಸಂಚಾರ ಆರಂಭವಾದ ಬಳಿಕ ಸಾಂಗ್ಲಿಗೆ ಮರಳಲು ನಿರ್ಧರಿಸಿದ್ದರು. ಆದರೆ, ನಿಮ್ಮ 10 ವರ್ಷಗಳ ಹೋರಾಟ ವ್ಯರ್ಥವಾಗಲು ಬಿಡುವುದಿಲ್ಲ. ಸೂಕ್ತ ಪರಿಹಾರ ಕೊಡಿಸುತ್ತೇನೆ. ಕೆಲವೇ ದಿನಗಳಲ್ಲಿ ಪರಿಹಾರ ಸಿಗುತ್ತದೆ ಎಂದು ಅಧಿಕಾರಿಯೊಬ್ಬರು ಆಸೆ ಹುಟ್ಟಿಸಿದ್ದರಿಂದ, ತಾಯಿ ಮತ್ತು ಮಗ ಮುಂಬೈನಲ್ಲೇ ಉಳಿದಿದ್ದರು.
ಬೃಹನ್ಮುಂಬೈ ಮಹಾನಗರಪಾಲಿಕೆ ಎದುರಿನ ಪಾದಚಾರಿ ಮಾರ್ಗದಲ್ಲಿ ತಾತ್ಕಾಲಿಕ ಟೆಂಟ್​ ಹಾಕಿಕೊಂಡು ಪ್ರತಿಭಟನೆ ಮುಂದುವರಿಸಿದ್ದರು. ಆದರೆ, ಸೋಮವಾರ ಬೆಳಗ್ಗೆ ವಿಮಲಾ ಅವರು ಉಸಿರಾಟ ನಿಲ್ಲಿಸಿದ್ದರು. ತಕ್ಷಣವೇ ಆಜಾದ್​ ಮೈದಾನ್​ ಪೊಲೀಸ್​ ಠಾಣೆಗೆ ಹೋದ ದತ್ತಾತ್ರೇಯ, ಸಿಬ್ಬಂದಿಯ ನೆರವಿನಿಂದ ತಾಯಿಯನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಆ ವೇಳಗಾಗಲೆ ಅವರು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರು ಎನ್ನಲಾಗಿದೆ. ಇದೀಗ ಅವರ ಶವವನ್ನು ಸಾಂಗ್ಲಿಗೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ವ್ಯತ್ಯಯ ತುಟ್ಟಿ ಭತ್ಯೆ 1 ವರ್ಷ ಮುಂದೂಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 18 =
Remember me
