|ರಾಘವ ಶರ್ಮ ನಿಡ್ಲೆ, ನವದೆಹಲಿ
ಈ ಬಾರಿ ದೆಹಲಿಯ ಇಂಡಿಯಾ ಗೇಟ್ ಮತ್ತು ರಾಷ್ಟ್ರಪತಿ ಭವನದ ನಡುವಿನ ಕರ್ತವ್ಯಪಥದಲ್ಲಿ ಕರ್ನಾಟಕ ಸೇರಿ ದಕ್ಷಿಣ ಭಾರತದ ಮೂರು ರಾಜ್ಯಗಳು ನಾರಿಶಕ್ತಿ ಅಥವಾ ಮಹಿಳಾ ಸಬಲೀಕರಣ ವಿಷಯಗಳ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಗಣರಾಜ್ಯೋತ್ಸವ ಸಂಭ್ರಮಕ್ಕೆ ಹೊಸ ಮೆರುಗನ್ನು ತುಂಬುತ್ತಿವೆ. ಮೊದಲ ಬಾರಿಗೆ ಮೂರು ರಾಜ್ಯಗಳು ಒಂದೇ ವಿಷಯಕ್ಕೆ ಸಂಬಂಧಿಸಿ ಸ್ತಬ್ದಚಿತ್ರಗಳನ್ನು ತಯಾರು ಮಾಡಿರುವುದು ವಿಶೇಷ.
ಹಳ್ಳಿ ಪರಿಸರದಲ್ಲಿ ಬೆಳೆದು ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡಿ, ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದ ಸೂಲಗಿತ್ತಿ ನರಸಮ್ಮ, ಹಾಲಕ್ಕಿ ತುಳಸೀಗೌಡ ಮತ್ತು ಸಾಲು ಮರದ ತಿಮ್ಮಕರ ಸಾಧನೆಗಳನ್ನು ಕರ್ನಾಟಕದ ಸ್ತಬ್ಧಚಿತ್ರ ಬಿಂಬಿಸುತ್ತಿದ್ದರೆ, ಕೇರಳದ ಸ್ತಬ್ಧಚಿತ್ರದಲ್ಲಿ 96ನೇ ವಯಸ್ಸಿನಲ್ಲಿ ಸಾಕ್ಷರತೆ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿ, ನಂತರ ಕೇಂದ್ರ ಸರ್ಕಾರದಿಂದಲೂ ನಾರಿಶಕ್ತಿ ಪ್ರಶಸ್ತಿಗೆ ಭಾಜನರಾಗಿದ್ದ ಕಾರ್ತಯ ಅಮ್ಮನವರ ಪ್ರತಿಮೆಯನ್ನು ಎದುರು ಭಾಗದಲ್ಲಿ ನಿಲ್ಲಿಸಲಾಗಿದೆ.
ಸಾಧಕಿಯರ ಸ್ತಬ್ಧಚಿತ್ರ:ತಮಿಳುನಾಡು ಕೂಡ ರಾಜ್ಯದ ಮಹಿಳಾ ಸಾಧಕರನ್ನು ದೇಶದ ಮುಂದಿಡುತ್ತಿದೆ. ತಂಜಾ ವೂರು ಬಾಲಸರಸ್ವತಿ ನೃತ್ಯ ಚಿತ್ರಿಸುವ ವಿಗ್ರಹಗಳು, ಸಂಗೀತ ವಾದ್ಯದೊಂದಿಗೆ ಎಂ.ಎಸ್. ಸುಬ್ಬುಲಕ್ಷ್ಮಿ ಮತ್ತು ವೈದ್ಯರ ಬ್ಯಾಗ್ ಹೊತ್ತ ಡಾ.ಮುತ್ತುಲಕ್ಷ್ಮಿ ರೆಡ್ಡಿ ಅಮ್ಮಯ್ಯರ್ ಪ್ರತಿಮೆಗಳು ಗಮನಸೆಳೆದಿವೆ. ಮುವಲೂರಿನ ರಾಮಾಮೃತಮ್ಮನ ಪ್ರತಿಮೆಯೂ ಸ್ತಬ್ದಚಿತ್ರದಲ್ಲಿದೆ. ವಾಹನದ ಮುಂಭಾಗದಲ್ಲಿ, ಅವ್ವೈಯಾರ್ ಪ್ರತಿಮೆಯಿದ್ದು, ನಾಲ್ಕು ಬದಿಗಳಲ್ಲಿ ಶಿಲ್ಪಗಳಿವೆ. ರಾಜ್ಯದ ಸಾಂಪ್ರದಾಯಿಕ ಕಲೆಗಳಾದ ಕರಕಟ್ಟಂ, ಸಿಲಂಬಂ ಮತ್ತು ಇತರ ಸಂಗೀತ ಕಲಾವಿದರು ತಮಿಳುನಾಡಿನ ಶೌರ್ಯ ಮತ್ತು ಹೆಮ್ಮೆಯನ್ನು ಪ್ರತಿನಿಧಿಸುತ್ತಿದ್ದಾರೆ.
ಸ್ವದೇಶಿ ನಿರ್ವಿುತ ಶಸ್ತ್ರಾಸ್ತ್ರ ಪ್ರದರ್ಶನ:ಗಣತಂತ್ರದ ಪರೇಡ್​ನಲ್ಲಿ ಭಾರತೀಯ ಸೇನೆ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ತಯಾರಿಸದ ಶಸ್ತ್ರಾಸ್ತ್ರ ಮತ್ತು ಸಲಕರಣೆಗಳನ್ನು ಮಾತ್ರ ಪ್ರದರ್ಶಿಸಲಿದೆ. ಈಜಿಪ್ಟ್​ನ ಸೇನಾ ತುಕಡಿ ಮತ್ತು ಹೊಸದಾಗಿ ನೇಮಕಗೊಂಡ ಅಗ್ನಿವೀರರು, ಬಿಎಸ್​ಎಫ್ ಒಂಟೆ ತುಕಡಿಯ ಭಾಗವಾಗಿ ಮಹಿಳಾ ಸೈನಿಕರ ಜತೆಗೆ 144 ನಾವಿಕರ ನೌಕಾದಳದ ನಾಯಕಿಯಾಗಿ ಮಹಿಳಾ ಅಧಿಕಾರಿ, ಮಂಗಳೂರು ಮೂಲದ ದಿಶಾ ಅಮೃತ್ ಅವರು ‘ನಾರಿ ಶಕ್ತಿ’ಯನ್ನು ಪ್ರತಿಬಿಂಬಿಸಲಿದ್ದಾರೆ. ಹಾಗೆಯೇ, ನಾಲ್ಕು ದಶಕಗಳಿಂದ ಸೇವೆ ಸಲ್ಲಿಸಿದ ನೌಕಾಪಡೆಯ ಐಔ-38 ವಿಮಾನವು ಪರೇಡ್ ನಲ್ಲಿ ವೈಮಾನಿಕ ಸಾಹಸ ಪ್ರದರ್ಶನ ನಡೆಸಿದ ಬಳಿಕ ಇತಿಹಾಸದ ಪುಟ ಸೇರಲಿದೆ.
ರಾಜ್ಯದ ಸ್ತಬ್ಧಚಿತ್ರದಲ್ಲಿ ಏನಿದೆ?:ಗಿಡ-ಮರ, ಬೆಟ್ಟ-ಗುಡ್ಡ, ಪಕ್ಷಿಗಳಿಂದ ಕಂಗೊಳಿಸುತ್ತಿರುವ ಸ್ತಬ್ಧಚಿತ್ರದ ಮುಂಭಾಗದಲ್ಲಿ ತೊಟ್ಟಿಲು ತೂಗುತ್ತಾ, ಕೈನಲ್ಲಿ ಮಗು ಆಡಿಸುತ್ತಿರುವ ಸಾಂಪ್ರದಾಯಿಕವಾಗಿ ಹೆರಿಗೆಗಳನ್ನು ಮಾಡಿಸುವಲ್ಲಿ ಅವರು ಸಿದ್ಧಹಸ್ತರಾಗಿದ್ದ ಸೂಲಗಿತ್ತಿ ನರಸಮ್ಮ, ಮಧ್ಯಭಾಗದಲ್ಲಿ ಗಿಡ ಮರಗಳನ್ನು ಪೋಷಿಸುತ್ತಿರುವ ಹಾಲಕ್ಕಿ ತುಳಸಿ ಗೌಡ , ಕೊನೆಯ ಭಾಗದಲ್ಲಿ ರಾಜ್ಯ ಹೆದ್ದಾರಿಯ ಆಜುಬಾಜಿನಲ್ಲಿ 8000 ಮರಗಳನ್ನು ನೆಟ್ಟು ನೀರೆರೆದು ಬೆಳೆಸಿದ ಸಾಲುಮರದ ತಿಮ್ಮಕ್ಕ ಅವರನ್ನು ತೋರಿಸಲಾಗುತ್ತಿದೆ. ಕರ್ನಾಟಕಕ್ಕೆ ಕೊನೆಕ್ಷಣದಲ್ಲಿ ಅನುಮತಿ ಸಿಕ್ಕಿದ್ದರಿಂದ 8 ದಿನಗಳಲ್ಲಿ ಸ್ತಬ್ದಚಿತ್ರ ನಿರ್ಮಾಣ ಮಾಡಬೇಕಾದ ಅನಿವಾರ್ಯತೆಯಿತ್ತು. ಹೀಗಿದ್ದರೂ, ಈ ಸವಾಲುಗಳನ್ನು ಹಿಮ್ಮೆಟ್ಟಿ ನಿಂತ ರಾಜ್ಯದ ಕಲಾವಿದರು, ಇತರೆ ರಾಜ್ಯಗಳ ಸ್ತಬ್ದಚಿತ್ರ ಪೂರ್ಣಪ್ರಮಾಣದಲ್ಲಿ ಸಿದ್ಧಗೊಳ್ಳುವ ಮುನ್ನವೇ ರಾಜ್ಯದ ಸ್ತಬ್ಧಚಿತ್ರವನ್ನು ಸಜ್ಜುಗೊಳಿಸಿದ್ದಾರೆ. ವಾರ್ತಾ ಇಲಾಖೆಯ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಹಿರಿಯ ಕಲಾವಿದ ಶಶಿಧರ ಅಡಪ ಸಂತಸ ವ್ಯಕ್ತಪಡಿಸಿದ್ದಾರೆ.
ಕಾರ್ತಯ ಅಮ್ಮನ ಟ್ಯಾಬ್ಲೊ:ಕೇರಳದ ಮನೆ-ಮನಗಳಲ್ಲಿ ಕಾರ್ತಯ ಅಮ್ಮ ಸ್ಥಾನ ಪಡೆದಿದ್ದಾರೆ. 1922ರಲ್ಲಿ ಜನಿಸಿದ್ದ ಅವರು, ಬಾಲ್ಯದಲ್ಲಿ ಶಿಕ್ಷಣ ಪಡೆಯಲಿಲ್ಲ. ಬದಲಿಗೆ ಕೆಲಸದಲ್ಲಿ ತೊಡಗುವುದು ಅನಿವಾರ್ಯವಾಗಿತ್ತು. ಬೀದಿಗಳನ್ನು ಗುಡಿಸುವ ಕಾರ್ಯದಲ್ಲಿ ತೊಡಗಿದ್ದ ಕಾರ್ತಯ ಅಮ್ಮ, ತಮ್ಮ ಪುತ್ರಿ 60ನೇ ವಯಸ್ಸಲ್ಲಿ ಪರೀಕ್ಷೆ ಬರೆದದ್ದನ್ನೇ ಸ್ಪೂರ್ತಿಯಾಗಿ ಪಡೆದು 96ನೇ ವಯಸ್ಸಲ್ಲಿ ಮೊಮ್ಮಕ್ಕಳ ಮಕ್ಕಳ ನೆರವಿನಿಂದ ಪರೀಕ್ಷೆ ಬರೆದು 100ರಲ್ಲಿ 98 ಅಂಕ ಗಳಿಸಿದರು. ಈ ಘಟನೆ ಕೇರಳದಲ್ಲಿ ಸಂಚಲನ ಸೃಷ್ಟಿಸಿದ್ದಲ್ಲದೆ, ರಾಜ್ಯದ ಗಣ್ಯ ವ್ಯಕ್ತಿಯಾಗಿ ಬದಲಾಗಿದ್ದರು. ಈ ಸಾಧನೆಗಳನ್ನು ಬಿಂಬಿಸುವ ಜತೆಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕಿ ನಂಚಮ್ಮ ನೇತೃತ್ವದ ಅಟ್ಟಪ್ಪಾಡಿಯ ಬುಡಕಟ್ಟು ಕಲಾಮಂಡಲದ ಕಲಾವಿದರಿಂದ ಇರುಳ ನೃತ್ಯಂ (ಇರುಳ ಸಮುದಾಯದ ಸಾಂಪ್ರದಾಯಿಕ ನೃತ್ಯ ಪ್ರಕಾರ) ಪ್ರಾತ್ಯಕ್ಷಿಕೆಯನ್ನೂ ಸ್ತಬ್ದಚಿತ್ರದಲ್ಲಿ ಪ್ರದರ್ಶಿಸಲಾಗುತ್ತಿದೆ. ಕೇರಳದಲ್ಲಿ ಬೇಪೋರ್ ಉರು ಎಂಬ ಸಾಂಪ್ರದಾಯಿಕವಾದ ದೋಣಿಯ ಸ್ತಬ್ದಚಿತ್ರದಲ್ಲಿ ಇವರೆಲ್ಲರೂ ಸಾಗಲಿದ್ದಾರೆ. ತೆಂಗಿನ ನಾರು ಮತ್ತು ಮರದಿಂದ ಈ ದೋಣಿ ತಯಾರು ಮಾಡಲಾಗುತ್ತದೆ.
ಕಾರವಾರ:ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​ನಲ್ಲಿ ಜಿಲ್ಲೆಯ ಜಾನಪದ ಕಲಾವಿದರಿಗೆ ಹಾಗೂ ಸಾಧಕಿಯರಿಗೆ ಇದೇ ಮೊದಲ ಬಾರಿಗೆ ಅವಕಾಶ ಸಿಕ್ಕಿದೆ. ಕರ್ನಾಟಕದ ‘ನಾರಿಶಕ್ತಿ’ ಟ್ಯಾಬ್ಲೊ ಪಕ್ಕದಲ್ಲಿ ಜಿಲ್ಲೆಯ ಹಾಲಕ್ಕಿ ಸುಗ್ಗಿ ಕುಣಿತ ತಂಡ ನೃತ್ಯ ಕೂಡ ಇರಲಿದೆ.ಹೋಳಿ ಹಬ್ಬದ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಹಾಲಕ್ಕಿ ಒಕ್ಕಲಿಗರು ತಲೆಗೆ ಬಣ್ಣದ ಬ್ಯಾಗಡೆ ಇರುವ ತುರಾಯಿ ಕಟ್ಟಿ, ಗುಮಟೆ ಪಾಂಗ್ ಎಂಬ ಚರ್ಮವಾದ್ಯ ಹಾಗೂ ಜಾಗಟೆಯ ಸದ್ದಿಗೆ ಮಾಡುವ ನೃತ್ಯವನ್ನು ಸುಗ್ಗಿ ಕುಣಿತ ಎನ್ನಲಾಗುತ್ತದೆ. ಅಮದಳ್ಳಿಯ ಬಂಟದೇವ ಯುವಕ ಸಂಘದ ಪುರುಷೋತ್ತಮ ಪಾಂಡುರಂಗ ಗೌಡ ನೇತೃತ್ವದಲ್ಲಿ 12 ಹೆಣ್ಣು, 13 ಗಂಡು ಮಕ್ಕಳ ತಂಡ ಪಾಲ್ಗೊಳ್ಳಲಿದೆ. ತಂಡದಲ್ಲಿ ಮಂಜುನಾಥ, ಸುದೀಪ, ನವೀನ, ಅಭಿಷೇಕ, ನಾಗೇಂದ್ರ, ವೈರಮುಡಿ, ಪ್ರಶಾಂತ, ಜಿತೇಶ, ಶೈಲೇಶ, ಬಸವರಾಜ, ಲೋಕೇಶ, ಶಿವರಾಜ, ಸವಿತಾ, ವಿನುತಾ, ನಾಗರತ್ನಾ, ಬೇಬಿ, ಸುಧಾ, ಚೇತನಾ, ಜಯಶ್ರೀ, ನಾಗರತ್ನಾ, ಚಿಂತನಾ, ಸಿಂಧುಜಾ, ಸೋನಿಯಾ, ಧನ್ಯಾ, ಪೂಜಾ ಭಾಗವಹಿಸಿದ್ದಾರೆ.
ಬಿಟ್ಟಿ ಪ್ರಚಾರಕ್ಕಾಗಿ ಚಿಲ್ರೆ ಕೆಲಸ: ತನ್ನ ಸಂಸ್ಥೆಯ ಮಾರ್ಕೆಟಿಂಗ್​ಗಾಗಿ ಫ್ಲೈಓವರ್​ ಮೇಲಿಂದ ಹಣ ಎಸೆದೆ ಎಂದು ತಪ್ಪೊಪ್ಪಿಕೊಂಡ

ನಾಲ್ಕು ದಿನಗಳ ಕಾಲ ಮೆಟ್ರೋ ರೈಲು ಸಂಚಾರ ಸ್ಥಗಿತ; ಯಾವ ಮಾರ್ಗದಲ್ಲಿ, ಯಾವ್ಯಾವ ದಿನ? ಇಲ್ಲಿದೆ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + eight =
Remember me
