| ಶ್ರುತಿ ಎಸ್. ಪೂಜಾರಿಸಮಾನತೆ ಎಂಬ ಶಬ್ದ ಎಷ್ಟೇ ಸವೆದು ಹೋದರೂ ಅಗತ್ಯ ಬಿದ್ದಾಗಲೆಲ್ಲಾ ಚಲಾವಣೆಯಲ್ಲಿ ಇರುವುದಂತೂ ಸತ್ಯ. ಇದಕ್ಕೆ ಸ್ತ್ರೀ ಸಮಾನತೆಯೂ ಹೊರತಲ್ಲ. ಭಾರತದಲ್ಲಿ ಪ್ರಾಚೀನ ಕಾಲದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಇದೆ. ವೇದ ಕಾಲದ ದೇವಾನುದೇವತೆಗಳಲ್ಲಿ ಸ್ತ್ರೀ ದೇವತೆ ಆದಳು. ಕುವೆಂಪು, ತೇಜಸ್ವಿ, ಕಾರಂತ, ಬೇಂದ್ರೆ, ಭೈರಪ್ಪನವರಂಥ ಮಹಾನ್ ಬರಹಗಾರರಂತೂ ತಮ್ಮ ಬರಹ ಕಾವ್ಯಗಳಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಿ ಓದುಗ ಲೋಕದ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಮಹಿಳಾ ವೇದಿಕೆಯಲ್ಲಿ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕನಂತೆ ವೀರಾವೇಶದಿಂದ ಸಮಾನತೆಗಾಗಿ ಹೋರಾಟ ಮಾಡಬೇಕು ಎಂದೆಲ್ಲ ಆರ್ಭಟಗಳು ಕೇಳಿ ಬರುತ್ತಿದ್ದುದು ಕಡಿಮೆಯೇನಲ್ಲ. ಅಷ್ಟಾಗಿಯೂ ತಾಯಿ, ತಂಗಿ, ಮಗಳು, ಪತ್ನಿ ಮಾತೆ ಎಂದೆಲ್ಲ ಗೌರವಿಸಿಕೊಂಡು ಮನೆ ಕೆಲಸವನ್ನು ವಂಶಪಾರಂಪರ್ಯವಾಗಿ ಬಳುವಳಿ ತೆಗೆದುಕೊಂಡ ಮಹಿಳೆ ಸಮಾನತೆಯ ಶಬ್ದ ಅಂದಿಗೂ ಇಂದಿಗೂ ಕಡಿಮೆ ಮಾಡಿಕೊಳ್ಳಲಿಲ್ಲ. ನಾವು ಮಹಿಳೆಯರು ಶಕ್ತಿ ಇರಲಿ ಇಲ್ಲದಿರಲಿ ಹಾಗೆಲ್ಲ ಕಡಿಮೆ ಅಂದುಕೊಳ್ಳುವವರೇ ಅಲ್ಲ. ಅದಕ್ಕೆ ಸಾಕಷ್ಟು ಕಾರಣ ಮತ್ತು ಪರಂಪರೆಯಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಾವುದೇ ರಾಜಕೀಯ ಒತ್ತಡವಿಲ್ಲದೆ ಈಚೆಗೆ ಮಹಿಳಾ ಮೀಸಲಾತಿ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿ ರಾಜ್ಯಸಭೆಯಲ್ಲೂ ಅಂಗೀಕಾರ ಪಡೆದು ರಾಷ್ಟ್ರಪತಿಯವರಿಂದ ಅನುಮೋದನೆ ಗಳಿಸಿಕೊಂಡು ಕಾಯ್ದೆ ಮಾಡಿಯೇ ಬಿಡುತ್ತಾರೆ.ದೇಶದ ಸರಿಸುಮಾರು 140 ಕೋಟಿ ಜನಸಂಖ್ಯೆಯ ಪೈಕಿ 50% ಅಥವಾ ಅದಕ್ಕೆ ಸ್ವಲ್ಪ ಕಡಿಮೆ ಎಂದುಕೊಂಡರೂ ಅಂದಾಜು 70 ಕೋಟಿ ಮಹಿಳಾ ಜನಸಂಖ್ಯೆ ಇರುವ ನಾಡಿನಲ್ಲಿ ಸ್ಥಳಿಯಾಡಳಿತದ ಮಹಿಳಾ ಮೀಸಲಾತಿ ಬಿಟ್ಟರೆ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮೋದಿ ಅವರು ಲೋಕಸಭೆ ಮತ್ತು ವಿಧಾನಸಭೆಯಲ್ಲಿ 33% ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು. ಇದರ ಫಲವಾಗಿ ಸ್ವಾಭಾವಿಕವಾಗಿ ಕರ್ನಾಟಕದ ವಿಧಾನಸಭೆಯಲ್ಲಿ 224 ಸದಸ್ಯರ ಪೈಕಿ 75 ಮಂದಿ ಮಹಿಳೆಯರು ಸದನ ಪ್ರವೇಶಿಸಲಿದ್ದಾರೆ. ಈಗಿರುವ ಐದೋ ಆರೋ ಮಹಿಳಾ ಶಾಸಕರನ್ನು ನೆನಪಿಸಿಕೊಂಡರೆ 15ಪಟ್ಟು ಸಂಖ್ಯೆ ಹೆಚ್ಚಾಗಲಿದೆ. ಲೋಕಸಭೆಯಲ್ಲಿ ಇರುವ 544 ಎಂಪಿಗಳ ಪೈಕಿ 182 ಮಂದಿ ಮಹಿಳೆಯರು ಈ ದೇಶದ ಕಾನೂನು ರಚಿಸಲು ಧ್ವನಿಯಾಗುತ್ತಾರೆನ್ನುವುದನ್ನು ಊಹಿಸಿಕೊಂಡರೆ ರೋಮಾಂಚನವಾಗಲಿದೆ. ದೇಶದ ಮಹಿಳೆಯರೆಲ್ಲಾ ಒಮ್ಮೆ ಮಹಿಳಾ ಮಸೂದೆ ಬಗ್ಗೆ ಗಮನ ಹರಿಸಬೇಕು. ಈ ದೇಶದಲ್ಲಿ ಯಾವುದೇ ವಾದ -ವಿವಾದ, ಹೋರಾಟ, ಮೆರವಣಿಗೆ, ಉಪವಾಸ ಏನನ್ನೂ ಮಾಡದೆ ಮಹಿಳೆಯರಿಗೆ ಸಮಾನತೆಯ ನ್ಯಾಯ ಸಿಕ್ಕಿದ್ದರೆ ಅದಕ್ಕೆ ಮುಖ್ಯ ಕಾರಣ ದೇಶದ ಪ್ರದಾನಿ ನರೇಂದ್ರ ಮೋದಿ ಅವರು ಎನ್ನುವುದೇ ಸಂಭ್ರಮದ ಅನುಭವ. ಸ್ವಾತಂತ್ರ್ಯ ಪೂರ್ವದಿಂದ ಆರಂಭವಾಗಿ ಸ್ವಾತಂತ್ರ್ಯದ ನಂತರವೂ ಸಮಾನತೆಯ ಸೊಲ್ಲಿರಲಿ, ಬದುಕಿಗಾಗಿ ಮಹಿಳೆಯರ ಆರ್ತನಾದ ಊಹಿಸಲಸಾಧ್ಯ. ಸಂಸಾರದ ನೆಮ್ಮದಿಗಾಗಿ ಉಂಡವರೆಷ್ಟೋ ಉಪವಾಸ ಮಲಗಿದವರೆಷ್ಟೋ, ಗೌರವ ಮತ್ತು ಮರ್ಯಾದೆಗೆ ಅಂಜಿ ದೌರ್ಜನ್ಯಕ್ಕೆ ತುತ್ತಾದರೂ ಮೌನಿಯಾದವರೆಷ್ಟೋ. ವರದಕ್ಷಿಣೆಯ ಕಾಟಕ್ಕೆ ಬಲಿಯಾದವರೆಷ್ಟೋ. ಇಂದು ಮೋದಿಯವರ ಕೃಪೆಯಿಂದ ಸಂವಿಧಾನದ ಆಶಯದಂತೆ ಸಮಾನತೆಯ ಸಂಕೇತವಾಗಿ ಪಾರ್ಲಿಮೆಂಟಿನಲ್ಲಿ ಪ್ರವೇಶ ಮಾಡುವ ಯೋಗ ಎನ್ನದೆ ವಿಧಿಯಿಲ್ಲ.
ಇತಿಹಾಸದ ಪುಟಗಳನ್ನು ಮಗುಚಿ ಹಾಕಿದರೆ 1999 ರಲ್ಲಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾದಾಗ ಮಹಿಳಾ ಮೀಸಲಾತಿ ಮುನ್ನೆಲೆಗೆ ಬಂದು ಪಾರ್ಲಿಮೆಂಟಿನಲ್ಲಿ ಮಂಡನೆಯಾಗಿತ್ತು. 13ಕ್ಕೂ ಅಧಿಕ ಪಕ್ಷಗಳ ಅಂದರೆ ಹಲವು ಪಕ್ಷಗಳ ಒಕ್ಕೂಟದ ಮೂಲಕ ಆಡಳಿತ ನಡೆಸುವ ಅನಿವಾರ್ಯತೆಯಲ್ಲಿದ್ದ ಅಟಲ್​ಜಿ, ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಹಮತ ಸಿಗದೆ ಮಹಿಳಾ ಮೀಸಲಾತಿ ಮಂಡನೆಯಾಗಿಯೇ ಉಳಿದುಹೋಯಿತು. ಅದಕ್ಕಿಂತಲೂ ಮೊದಲು ಚರ್ಚೆಗೆ ಬಂದಿದ್ದು 1996 ರಲ್ಲಿ ಕರ್ನಾಟಕದ ನೆಲದಲ್ಲಿ ಬೆಳೆದು ನಿಂತ ದೇವೇಗೌಡರು ಪ್ರಧಾನಿಯಾದಾಗ. ಆಗಲೂ ದೇವೇಗೌಡರಿಗೆ ಬಹುಮತದ ಸಹಮತ ಸಿಗಲಿಲ್ಲ. ನಂತರ 2008ರ ಯುಪಿಎ ಸರಕಾರದ ಅವಧಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ಇದ್ದ ಮಹಿಳಾ ಮೀಸಲಾತಿ ಅಂತಿಮ ನಿರ್ಧಾರ ಕಂಡಿಲ್ಲ. ಹಾಗೆಂದು ಮಹಿಳಾ ಮೀಸಲಾತಿ ಕಾಯ್ದೆಯಿಂದ ಸದನದ ಒಳಗೆ ಸಮಾನತೆ ಕಾಣಲಾಗದ ಮಹಿಳಾ ಸಮಸ್ಯೆಗಳ ಬಗ್ಗೆ ಉಚ್ಚ ಮತ್ತು ಸವೋಚ್ಚ ನ್ಯಾಯಾಲಯಗಳು ಹೆಣ್ಣಿನ ಹಕ್ಕಿನ ರಕ್ಷಣೆಗೆ ನಿಂತಿದ್ದವು. 1985 ರಲ್ಲಿ ಶಾ ಬಾನು ಬೇಗಂ ಎಂಬ ಮುಸ್ಲಿಂ ಮಹಿಳೆ ತ್ರಿವಳಿ ತಲಾಕ್​ನಿಂದ ನನ್ನ ಗಂಡ ನನ್ನನ್ನು ತ್ಯಜಿಸಿದ್ದು ನನಗೆ ರಕ್ಷಣೆ ಕೊಡಬೇಕೆಂದು ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು. ಅಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಶಾ ಬಾನು ಬೇಗಂ ವಾದ ಎತ್ತಿ ಹಿಡಿದು ಆಕೆಗೆ ಜೀವನಾಂಶ ಕೊಡಬೇಕೆಂದು ಆದೇಶಿಸಿದ್ದು ಮಾತ್ರವಲ್ಲ. ತ್ರಿವಳಿ ತಲಾಕ್ ಎಂಬ ಕೆಟ್ಟ ಪದ್ಧತಿಯನ್ನು ದೇಶದ ಸವೋಚ್ಚ ನ್ಯಾಯಾಲಯ ರದ್ದು ಪಡಿಸಿತ್ತು. ಆ ನಂತರ ಅಂದಿನ ರಾಜೀವ ಗಾಂಧಿ ಸರಕಾರ ಮತೀಯವಾದಕ್ಕೆ ಮಣಿದು ಭಾರತದ ಸವೋಚ್ಚ ನ್ಯಾಯಾಲಯ ಮಹಿಳೆಯೊಬ್ಬಳಿಗೆ ನೀಡಿದ ನ್ಯಾಯ ನಿರಾಕರಿಸಿ ಕಾಂಗ್ರೆಸ್ ಸರಕಾರ ತಮ್ಮ ಸಂಪೂರ್ಣ ಬಹುಮತದೊಂದಿಗೆ ಮುಸ್ಲಿಂ ಮಹಿಳೆಯರ (ವಿಚ್ಚೇದಿತ ಹಕ್ಕುಗಳ ರಕ್ಷಣೆ) ಕಾಯ್ದೆ 1986 ನ್ನು ಜಾರಿಗೆ ತರುವುದರ ಮೂಲಕ ತಲಾಕ್ ನೀಡುವುದಕ್ಕು ಮತ್ತು ತಲಾಕ್ ನೀಡಿದ ಪತಿಯಿಂದ ಜೀವನಾಂಶ ಪಡೆಯುವುದನ್ನು ನಿರ್ಬಂದಿಸಿತ್ತು. ಆದರೆ ಕಾಲಉರುಳಿ 2014ರಲ್ಲಿ ಭಾರತ ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ಪಡೆದ ನಂತರ 2019ರಲ್ಲಿ ದೇಶದ ಸಂಸತ್ತು ತ್ರಿವಳಿ ತಲಾಕ್ ಮುಸ್ಲಿಂ ಮಹಿಳೆಯೊಬ್ಬಳ ಬದುಕಿಗೆ ಅವಳದಲ್ಲದ ತಪ್ಪಿಗೆ ಸಂಕಷ್ಟ ಕೊಡುತ್ತೆ. ಆ ಕಾರಣಕ್ಕೆ ತ್ರಿವಳಿ ತಲಾಕ್ ರದ್ದುಗೊಳಿಸುವ ಕಾನೂನು ತಂದು ಮುಸ್ಲಿಂ ತಂಗಿಯರಿಗೆ ನರೇಂದ್ರ ಮೋದಿ ನ್ಯಾಯ ಒದಗಿಸಿದರು. ಮತ್ತು 2019 ಆಗಸ್ಟ್ 1 ರಿಂದ ಜಾರಿಗೊಳಿಸಿ ತ್ರಿವಳಿ ತಲಾಕ್ ಶಿಕ್ಷಾರ್ಹ ಅಪರಾಧ ಎಂದು ಕೇಂದ್ರ ಸರಕಾರ ಘೊಷಿಸಿತ್ತು.
ಭಾರತದ ನೆರೆಯ ರಾಷ್ಟ್ರಗಳು ಸೇರಿದಂತೆ ವಿಶ್ವದಾದ್ಯಂತ ಸುಮಾರು 23 ದೇಶಗಳು ತ್ರಿವಳಿ ತಲಾಕ್ ನಿಷೇಧಿಸಿವೆ. ಭಾರತದಲ್ಲಿ ಸರಿಸುಮಾರು 20 ಕೋಟಿ ಜನಸಂಖ್ಯೆ ಹೊಂದಿರುವ ಮುಸ್ಲಿಂ ಸಮುದಾಯದಲ್ಲಿ ಜನಿಸಿರುವ ಮಹಿಳೆಯರಿಗೆ ಈ ತ್ರಿವಳಿ ತಲಾಕ್ ರದ್ದತಿ ಎನ್ನುವುದು ಹೆಣ್ಣೊಬ್ಬಳು ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಟ್ಟಿತು. ಈ ಕಾರಣಕ್ಕಾಗಿಯೇ ಬಹಿರಂಗವಾಗಿ ಅಲ್ಲದಿದ್ದರೂ ಆಂತರಿಕವಾಗಿ ಮೋದಿ ಅವರನ್ನು ಅಣ್ಣ ಎಂದು ಕರೆಯುವ ತಂಗಿಯರು ಈ ಸಮುದಾಯದಲ್ಲಿ ಸಾಕಷ್ಟಿದ್ದಾರೆ . ಸಮಾಜದಲ್ಲಿ ಆರೋಗ್ಯಕರ ವಾತಾವರಣ ಇರಬೇಕಾದರೆ ಶಾಸಕಾಂಗ, ಕಾರ್ಯಾಂಗದ ರಕ್ಷಣೆಯೊಂದಿಗೆ ನ್ಯಾಯಾಂಗದ ರಕ್ಷಣೆಯೂ ಅಗತ್ಯವೆನಿಸಿದೆ. ಈ ಹಿನ್ನಲೆಯಲ್ಲಿ ಸಂವಿಧಾನದ 14ನೇ ವಿಧಿ ಪ್ರತಿಯೊಬ್ಬರೂ ಕೂಡ ಕಾನೂನಿನ ಮುಂದೆ ಸಮಾನರು ಎಂದು ಸಾರುತ್ತದೆ. ಜಾತಿ, ಲಿಂಗ, ಧರ್ಮ, ಬಣ್ಣ , ಶ್ರೀಮಂತಿಕೆ ಇವುಗಳ ಆಧಾರದ ಮೇಲೆ ಯಾವುದೇ ರೀತಿಯ ಬೇಧಭಾವ ಸಲ್ಲದು ಎಂದು ಹೇಳುತ್ತದೆ. ಅಲ್ಲದೆ ದೇಶದ ನ್ಯಾಯಾಂಗ ವ್ಯವಸ್ಥೆ ಅದರಲ್ಲೂ ಸುಪ್ರೀಂ ಕೋರ್ಟ್ ಅವಶ್ಯ ಬಿದ್ದಾಗಲೆಲ್ಲಾ ಮಹಿಳೆಯರ ಹಕ್ಕಿನ ರಕ್ಷಣೆ ನಿಂತ ಉದಾಹರಣೆಗಳು ಸಾಕಷ್ಟು ಗೋಚರಿಸುತ್ತವೆ. 1997ರ ಹೊತ್ತಿನಲ್ಲಿ ಬನ್ವಾರಿ ದೇವಿ ಎಂಬ ಸಾಮಾಜಿಕ ಕಾರ್ಯಕರ್ತೆ ಮೇಲೆ ನಡೆದ ಕಿರುಕುಳದ ವಿರುದ್ಧ ವಿಶಾಕ ಎನ್ನುವ ಎನ್​ಜಿಓ ಸಂತ್ರಸ್ತೆ ಪರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೇವಲ ಬನ್ವಾರಿ ದೇವಿ ಮಾತ್ರವಲ್ಲ ಭಾರತ ದೇಶದಲ್ಲಿ ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ಕಿರುಕುಳವೂ ಸೇರಿದಂತೆ ಯಾವುದೇ ಮಾನಸಿಕ ಹಿಂಸೆ ನೀಡುವುದು ಶಿಕ್ಷಾರ್ಹ ಅಪರಾಧವೆಂದು ಘೊಷಿಸಿದ ಸವೋಚ್ಚ ನ್ಯಾಯಾಲಯ ಮಹಿಳೆಯರ ಮೂಲಭೂತ ಹಕ್ಕಿನ ರಕ್ಷಣೆಗೆ ಅವಕಾಶ ಕಲ್ಪಿಸಿತು. ಅಂತಹುದೇ ಮತ್ತೊಂದು ಪ್ರಕರಣ ಏರ್​ಇಂಡಿಯಾ ಸಂಸ್ಥೆಯಲ್ಲಿ ನರ್ಗೀಶ್ ಮಿರ್ಜಾ ಪ್ರಕರಣದಲ್ಲಿ ಮಹಿಳೆಯರ ವಿವಾಹವಾದ ನಂತರ ಗಗನ ಸಖಿ ಹುದ್ದೆಯಿಂದ ನಿವೃತ್ತಿಯಾಗಬೇಕೆಂಬ ನಿಯಮದ ವಿರುಧ್ದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ 1981ರಲ್ಲಿ ಮಾಡಿದ ಆಜ್ಞೆಯಿಂದ ತಾರತಮ್ಯ ತೊಡೆದು ಹಾಕುವತ್ತ ದೃಢವಾದ ಹೆಜ್ಜೆ ಇಟ್ಟು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿತು.
ಕುತೂಹಲಕಾರಿ ಘಟನೆಗಳೆಂದರೆ ರಾಜಕೀಯ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಮಹಿಳೆ ಕಾಯುತ್ತಿರುವುದು ಹೌದಾದರೆ ಇತರ ಕ್ಷೇತ್ರಗಳಲ್ಲಿ ಸ್ವಂತ ಶ್ರಮದಿಂದ ಸಾಧನೆಯ ಒಂದೊಂದೆ ಮೆಟ್ಟಿಲು ಏರುತ್ತಿದ್ದಾಳೆ. ಮೊದಮೊದಲು ಸರ್ಕಾರಿ ನೌಕರಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಪಾಲ್ಗೊಳ್ಳುತ್ತಿದ್ದ ಹೆಣ್ಣು ಮಕ್ಕಳು ಇದೀಗ ಮೆರಿಟ್ ಮೂಲಕ ಪುರುಷರನ್ನು ಹಿಂದಿಕ್ಕಿ ಸರ್ಕಾರಿ ಹುದ್ದೆ ಪಡೆಯುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ 65% ಮೀರಿ ಅಂಕಗಳ ಆಧಾರದಲ್ಲಿ ಆಯ್ಕೆಯಾಗಿದ್ದರೆ ಪೊಲೀಸ್ ಇಲಾಖೆಯ ಉನ್ನತ ಹುದ್ದೆಗಳು ಮಹಿಳೆಯರ ಪಾಲಾಗುತ್ತಿದೆ. ರಾಜಕಾರಣದ ಪಂಚಾಯತ್ ವ್ಯವಸ್ಥೆಗಳಲ್ಲಿ 50%ರಷ್ಟು ಹೆಚ್ಚು ಪಾಲು ಮಹಿಳೆಯರೇ ಆವರಿಸಿದ್ದಾರೆ. ಇವೆಲ್ಲದರ ಮಧ್ಯೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಮಹಿಳೆಯರ ಪಾತ್ರ ಇಲ್ಲಿಯವರೆಗೆ ಮಹಿಳಾ ವೇದಿಕೆಗಳ ವಿಚಾರ ಸಂಕಿರಣಕ್ಕೆ ಮೀಸಲಾಗಿತ್ತು. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಹಿಳಾ ಮೀಸಲಾತಿ ಶಾಸಕಾಂಗದ ವ್ಯವಸ್ಥೆಯಲ್ಲಿ ಮಹಿಳೆಯರ ಹಿತಾಸಕ್ತಿ ಕಾಪಾಡುವಲ್ಲಿ ಮೋದಿ ಅವರು ಮುಂದಾಗಿದ್ದಾರೆ ಎಂದು ಇತಿಹಾಸದಲ್ಲಿ ದಾಖಲಾದಂತಾಯ್ತು. ಅದರಲ್ಲೂ ಪರಿಶಿಷ್ಠ ಜಾತಿ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಪ್ರಾತಿನಿಧ್ಯ ಕೊಟ್ಟಿರುವುದು ಮಹಿಳಾ ಪ್ರಪಂಚದಲ್ಲಿ ಸಮಾನತೆಗೆ ಸಾಕ್ಷಿಯಾಗಿ ಉಳಿದಿದೆ. ಇಲ್ಲಿಯವರೆಗಿನ ಸಮೀಕ್ಷೆ ಮತ್ತು ಅಂಕೆ ಅಂಶಗಳ ಪ್ರಕಾರ ಯಾವುದೇ ಕ್ಷೇತ್ರದಲ್ಲಿ ಮಹಿಳೆಯ ಅಚ್ಚುಕಟ್ಟಿನ ಜವಾಬ್ದಾರಿಯ ಕೆಲಸ ಪಾರ್ಲಿಮೆಂಟಿನಲ್ಲೂ ಪ್ರತಿಧ್ವನಿಸಲಿದೆ ಎಂಬುವುದು ನಿರ್ವಿವಾದ. ಮುಂದಿನ ದಿನಗಳಲ್ಲಿ ಪಾರ್ಲಿಮೆಂಟ್ ಸದಸ್ಯರಾಗಿ ಆಯ್ಕೆಯಾದ ಮಹಿಳಾ ಪ್ರತಿನಿಧಿ ತನ್ನ ಕ್ಷೇತ್ರದ ಸಮಸ್ಯೆಗಳನ್ನು ಆಲಿಸುವಲ್ಲಿ ಪರಿಹಾರ ನೀಡುವಲ್ಲಿ ಹಾಗೂ ಅಭಿವೃದ್ಧಿಯಲ್ಲಿ ಹೆತ್ತಮ್ಮನ ಮನಸ್ಸು ಹೊಂದಿರುವಳೆಂಬುದು ಸಮಾಜದ ಆಶಯ. ಒಟ್ಟಾರೆ ಮೋದೀಜಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರುವುದರ ಮೂಲಕ ಭಾರತದಂತಹ ಮಹಾನ್ ದೇಶದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ.
ಮಹಿಳೆಯರು ನಡು ರಾತ್ರಿಯಲ್ಲಿ ಭಾರತದ ಬೀದಿಗಳಲ್ಲಿ ನಡೆದಾಡುವುದು ಸುರಕ್ಷಿತ ಎಂದು ಭಾವಿಸಿದಾಗ ಭಾರತದ ಸ್ವಾತಂತ್ರ್ಯಕ್ಕೆ ಅರ್ಥಬರುತ್ತದೆ ಎಂಬ ಗಾಂಧೀಜಿ ಮಾತುಗಳು ಕಾರ್ಯ ರೂಪಕ್ಕೆ ಬರಲು ಮೋದಿಯವರ ಮಹಿಳಾ ಮೀಸಲಾತಿ ಮುನ್ನುಡಿ ಬರೆದಿದೆ.
(ಲೇಖಕರು ಕಾನೂನು ವಿದ್ಯಾರ್ಥಿನಿ)
ಭಾರತದ ವರ್ಕ್​ ಕಲ್ಚರ್ ಬದಲಾಗಬೇಕು ಎಂದ ಇನ್​ಫೊಸಿಸ್​ ನಾರಾಯಣಮೂರ್ತಿ ಹೇಳಿದ್ದೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
