ನವದೆಹಲಿ:ಮಹಿಳಾ ಸಬಲೀಕರಣವು ಬಿಜೆಪಿಗೆ ಒಂದು ತಾತ್ವಿಕ ಪ್ರಶ್ನೆಯಾಗಿದೆ. ಆದರೆ ಇತರ ಪಕ್ಷಗಳು ಅದನ್ನು ‘ರಾಜಕೀಯ ಲಾಭ ಹಾಗೂ ಮತ ಬ್ಯಾಂಕ್ ರಾಜಕೀಯ’ ದೃಷ್ಟಿಯಿಂದ ನೋಡುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಬುಧವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಹಿಳಾ ಸಬಲೀಕರಣವು ‘ತತ್ವಗಳು ಹಾಗೂ ನಂಬಿಕೆಗಳ’ ಪ್ರಶ್ನೆಯಾಗಿದೆ ಎಂದು ಪ್ರತಿಪಾದಿಸಿದರು. ಮಂಗಳವಾರ ಮಂಡಿಸಲಾದ ಮಹಿಳಾ ಮೀಸಲಾತಿ ಮಸೂದೆಯು ಗೌರವದ ಪ್ರತೀಕವಾಗಿದೆ ಹಾಗೂ ಹೊಸ ಯುಗದ ಆರಂಭವಾಗಿದೆ ಎಂದು ಷಾ ಹೇಳಿದರು. ಈಚೆಗೆ ನಡೆದ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮಹಿಳಾ-ನೇತೃತ್ವದ ಪ್ರಗತಿಯ ಚಿಂತನೆಯನ್ನು ಮಂಡಿಸಿದ್ದರು ಎಂದು ನೆನಪಿಸಿದರು. ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನ ವಿಶೇಷ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಹೊಸ ಸಂಸತ್ ಭವನದಲ್ಲಿ ಲೋಕಸಭೆಯ ಮೊದಲ ಬೈಠಕ್​ನಲ್ಲಿ ಮಂಡಿಸಿದ್ದರು.
ಅನುಮಾನ ನಿವಾರಣೆ:ಮಹಿಳಾ ಮೀಸಲಾತಿ ಮಸೂದೆಯ ಅನುಷ್ಠಾನ ವಿಳಂಬ ಗೊಳ್ಳಬಹುದೆಂಬ ಅನುಮಾನವನ್ನು ಗೃಹ ಸಚಿವರು ನಿವಾರಿಸಿದರು. ಮುಂದಿನ ಸಾರ್ವತ್ರಿಕ ಚುನಾವಣೆಗಳು ನಡೆದ ನಂತರ ಹೊಸ ಸರ್ಕಾರ ಜನಗಣತಿ ಹಾಗೂ ಕ್ಷೇತ್ರ ಪುನರ್​ವಿಂಗಡಣೆ ಕಾರ್ಯ ನಡೆಸಲಿವೆ. ಅದಾದ ಮೇಲೆ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 3ನೇ ಒಂದರಷ್ಟು ಮೀಸಲಾತಿ ಒದಗಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದರು. 128ನೇ ಸಂವಿಧಾನ ತಿದ್ದುಪಡಿ ಮೇಲಿನ ಚರ್ಚೆಯಲ್ಲಿ ಮಾತನಾಡಿ, 2029ರ ನಂತರ ಮಹಿಳಾ ಮೀಸಲಾತಿ ವಾಸ್ತವಿಕ ರೂಪಕ್ಕೆ ಬರಲಿದೆ ಎಂದರು.
ಮೀಸಲಾತಿ ಮಸೂದೆ ಸ್ವಾಗತಾರ್ಹ ನಿರ್ಧಾರ. ಆದರೆ, ಹಿಂದುಳಿದ ಜಾತಿಯ ಮಹಿಳೆಯರಿಗೆ ಒಳಮೀಸಲಾತಿ ನೀಡದೆ ಇದ್ದರೆ ಮೀಸಲಾತಿಯ ಉದ್ದೇಶವೇ ವಿಫಲವಾಗಲಿದೆ. ಈ ಮಸೂದೆ ಮೂಲತಃ ಕಾಂಗ್ರೆಸ್ ಪಕ್ಷದ ಕನಸಿನ ಕೂಸು.
| ಸಿದ್ದರಾಮಯ್ಯ, ಮುಖ್ಯಮಂತ್ರಿ
27 ಸಂಸದೆಯರು ಭಾಗಿ:ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆ ಯಲ್ಲಿ 27 ಮಹಿಳಾ ಸಂಸದರು ಮಾತನಾಡಿದರು. ಎಲ್ಲ ಮಹಿಳಾ ಸಂಸದರು ಮಸೂದೆಗೆ ಬೆಂಬಲ ಸೂಚಿಸಿದರು. ಪ್ರಸ್ತುತ ಲೋಕಸಭೆಯಲ್ಲಿ 543 ಸಂಸದರ ಪೈಕಿ 82 ಮಹಿಳಾ ಸಂಸದರಿದ್ದಾರೆ. ಪ್ರತಿಪಕ್ಷಗಳ ಕಡೆಯಿಂದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಚರ್ಚೆ ಆರಂಭಿಸಿದರು.
ಮಹಿಳಾ ಮೀಸಲಾತಿ ಮಸೂದೆ ಮೇಲೆ ಬುಧವಾರ ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಯಶಸ್ಸಿಗೆ ಅಪ್ಪಂದಿರು ಬಹಳ, ಆದರೆ ವೈಫಲ್ಯ ಅನಾಥ ಎಂದು ಒಂದು ಹಂತದಲ್ಲಿ ಸಚಿವೆ ಸ್ಮೃತಿ ಇರಾನಿ ಪರೋಕ್ಷವಾಗಿ ಸೋನಿಯಾ ಅವರನ್ನುದ್ದೇಶಿಸಿ ಟೀಕೆ ಮಾಡಿದರು.
ಮಸೂದೆ ಮೇಲಿನ ಚರ್ಚೆಯಲ್ಲಿ ಪ್ರತಿ ಪಕ್ಷದಿಂದ ಮೊದಲಿಗರಾಗಿ ಮಾತನಾಡಿದ ಸೋನಿಯಾ, ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಕಲ್ಪಿಸಬೇಕು ಹಾಗೂ ಮಸೂದೆಯನ್ನು ತಕ್ಷಣವೇ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು. ತಕ್ಷಣ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ, ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಹೊಸ ವಿಚಾರಗಳನ್ನು ಹೇಳುತ್ತಿದೆ. ಮಹಿಳಾ ಶಾಸಕರ ಮೀಸಲಾತಿ ವಿಚಾರದಲ್ಲಿ ಪಕ್ಷ ಯಾವತ್ತೂ ಒಬಿಸಿ ಕೋಟಾ ಕುರಿತು ಪ್ರಸ್ತಾಪಿಸಿರಲಿಲ್ಲ ಎಂದರು. ಚರ್ಚೆ ಮುಂದುವರಿಸಿದ ಸೋನಿಯಾ, ಮಸೂದೆಗೆ ತಮ್ಮ ಪಕ್ಷದ ಬೆಂಬಲವಿದೆ. ಆದರೆ, ಮಹಿಳೆಯರ ಶೇಕಡಾ 33 ಮೀಸಲಾತಿಯಲ್ಲಿ ಒಬಿಸಿ ಕೋಟಾ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಭಾವುಕರಾದ ಸೋನಿಯಾ:ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯ ರಿಗೆ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಪತಿ ರಾಜೀವ್ ಗಾಂಧಿ ಪ್ರಥಮ ಬಾರಿಗೆ ಮಂಡಿಸಿದ್ದರಿಂದ ಈ ಮಸೂದೆ ಮೇಲೆ ಮಾತನಾಡುವುದು ನನಗೆ ಒಂದು ಭಾವನಾತ್ಮಕ ಕ್ಷಣವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಂಗೀಕರಿಸಿತ್ತು. ರಾಜೀವ್ ಕನಸು ಇದುವರೆಗೆ ಅರ್ಧ ಮಾತ್ರವೇ ಈಡೇರಿದ್ದು ಪ್ರಸ್ತುತ ಮಸೂದೆ ಯನ್ನು ಅಂಗೀಕರಿಸಿದರೆ ಅದು ಪೂರ್ಣ ಸಾಕಾರಗೊಳ್ಳಲಿದೆ ಎಂದು ಸೋನಿಯಾ ಹೇಳಿದರು. ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಕಾಂಗ್ರೆಸ್ ಬೆಂಬಲಿಸಲಿದೆ ಎಂದ ಸೋನಿಯಾ, ‘ಹೊಗೆ ತುಂಬಿದ ಅಡುಗೆ ಮನೆಗಳಿಂದ ಹೊನಲು-ಬೆಳಕಿನ ಸ್ಟೇಡಿಯಂಗಳವರೆಗೆ ಭಾರತೀಯ ಮಹಿಳೆಯರ ಪಯಣ ತುಂಬಾ ದೀರ್ಘವಾಗಿದೆ. ಆಕೆ ಅಂತಿಮ ವಾಗಿ ತನ್ನ ಗುರಿ ತಲುಪಿದ್ದಾಳೆ’. ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ನವ ಭಾರತ ನಿರ್ವಣದಲ್ಲಿ ಮಹಿಳೆಯರೂ ಪುರುಷರ ಹೆಗಲಿಗೆ ಹೆಗಲಾಗಿ ಸೆಣಸಿದ್ದಾರೆ ಎಂದು ವರ್ಣಿಸಿದರು.
ಎಸ್​ಸಿ ಮತ್ತು ಎಸ್​ಟಿ ಮಹಿಳೆಯರಿಗೆ ಮೀಸಲಾತಿ ಮಸೂದೆ ಯಲ್ಲಿ ಈಗಾಗಲೇ ನಿಯಮವಿದೆ ಎಂಬ ಸೋನಿಯಾ ವಾದಕ್ಕೆ ತಿರುಗೇಟು ನೀಡಿದ ನಿಶಿಕಾಂತ್ ದುಬೆ, ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಇಷ್ಟು ವರ್ಷ ಕಾಲ ಮಹಿಳಾ ಮೀಸಲು ಮಸೂದೆ ಮಂಡನೆ ಸಾಹಸ ಮಾಡಿರಲಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮಂಡನೆಯ ಧೈರ್ಯ ತೋರಿದ್ದರಿಂದ ಪ್ರತಿಪಕ್ಷಗಳು ಹತಾಶಗೊಂಡಿವೆ ಎಂದು ಟೀಕಿಸಿದರು.
ಮಹಿಳಾ ಮೀಸಲು ಮಸೂದೆ ಅತ್ಯಂತ ಮಹತ್ವದ್ದು. ಈ ಮಸೂದೆಯನ್ನು ಕೂಡಲೇ ಜಾರಿಗೊಳಿಸಬೇಕು. ಮಸೂದೆ ಮಂಡಿಸಿರುವ ಕೇಂದ್ರ ಸರ್ಕಾರಕ್ಕೆ ಇದನ್ನು ಅನುಷ್ಠಾನಗೊಳಿಸುವ ಉದ್ದೇಶ ಇಲ್ಲ, ಅದಾನಿ ಸಮಸ್ಯೆ ಮತ್ತು ಜಾತಿ ಗಣತಿ ವಿಷಯದಿಂದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಇದು ಎಂದು ರಾಹುಲ್ ಗಾಂಧಿ ಆರೋಪ ಮಾಡಿದರು. ಈ ಮಸೂದೆ ಅಪೂರ್ಣವಾಗಿದ್ದು, ಒಬಿಸಿ ಮೀಸಲಾತಿಯನ್ನೂ ಸೇರಿಸಬೇಕು. ಭಾರತದ ಮಹಿಳೆಯರಿಗೆ ಅಧಿಕಾರ ವರ್ಗಾಯಿಸುವ ದೊಡ್ಡ ಹೆಜ್ಜೆ ಪಂಚಾಯತ್ ರಾಜ್ ವ್ಯವಸ್ಥೆಯಿಂದ ಆರಂಭವಾಗಿದೆ. ಅಲ್ಲಿ ಮೊದಲು ಮಹಿಳೆಯರಿಗೆ ಮೀಸಲಾತಿ ನೀಡಲಾಯಿತು. ಮಹಿಳೆಯರು ರಾಜಕೀಯ ವ್ಯವಸ್ಥೆಗೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಯಿತು. ಇದು ನಮ್ಮ ದೇಶದ ಮಹಿಳೆಯರ ಪಾಲಿಗೆ ಬಹುದೊಡ್ಡ ಹೆಜ್ಜೆ ಎಂದು ಹೇಳಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯರೂ ಭಾಗವಹಿಸಿದ್ದರು. ಪ್ರಸ್ತುತ ಮಸೂದೆಯಲ್ಲಿ ಒಬಿಸಿ ಮೀಸಲಾತಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಈ ಮಸೂದೆ ಜಾರಿಗೆ ಹೊಸ ಜನಗಣತಿ ಮತ್ತು ಕ್ಷೇತ್ರ ವಿಂಗಡಣೆ ಮಾಡಬೇಕಾಗುತ್ತದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮೂಲಕ ಈ ಮಸೂದೆಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.
ಕಹಿ ಪ್ರಕರಣದ ನೆನಪು:2012ರಲ್ಲಿ ಬಡ್ತಿ ಮೀಸಲಾತಿ ವಿಚಾರದ ಚರ್ಚೆ ವೇಳೆ ಸೋನಿಯಾ ಗಾಂಧಿ ಸಮಾಜವಾದಿ ಪಕ್ಷದ ಸದಸ್ಯರೊಬ್ಬರ ಕೊರಳಪಟ್ಟಿ ಹಿಡಿದು ಜಗ್ಗಾಡಲು ಯತ್ನಿಸಿದ ಪ್ರಸಂಗವನ್ನು ಮಹಿಳಾ ಮೀಸಲಾತಿ ಮಸೂದೆ ಮೇಲಿನ ಬಿಸಿ ಚರ್ಚೆ ನಡುವೆ ಬಿಜೆಪಿ ಸಂಸದ ದುಬೆ ನೆನಪಿಸಿದರು. ಅಲ್ಲದೆ, 2011ರಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಎಂಪಿಗಳು ಮಿತ್ರಪಕ್ಷಗಳ ಸದಸ್ಯರ ಕೆನ್ನೆಗೆ ಬಾರಿಸಿದ್ದನ್ನು ಕೂಡ ಪ್ರಸ್ತಾಪಿಸಿದರು.
ಸಿಂಧುತ್ವ ವಿಚಾರಣೆ ನವೆಂಬರ್ 21ಕ್ಕೆ: ಸಂವಿಧಾನದಲ್ಲಿ ನಮೂದಿಸಿರುವ 10 ವರ್ಷದ ನಂತರವೂ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಎಸ್​ಸಿ ಮತ್ತು ಎಸ್​ಟಿಗಳಿಗೆ ಮೀಸಲಾತಿ ಕಲ್ಪಿಸುವುದರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನವೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ದಿನಾಂಕ ನಿಗದಿಪಡಿಸಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಎಸ್​ಸಿ/ಎಸ್​ಟಿ ಮೀಸಲಾತಿಯನ್ನು ಇನ್ನೂ 10 ವರ್ಷ ವಿಸ್ತರಿಸುವ ಸಂವಿಧಾನದ 104ನೇ ತಿದ್ದುಪಡಿಯ ಸಿಂಧುತ್ವವನ್ನು ಪರಿಶೀಲಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠ ಹೇಳಿದೆ. ಈ ಹಿಂದಿನ ವಿಸ್ತರಣೆಗಳ ಸಿಂಧುತ್ವವನ್ನು ತಾನು ಪರಿಶೀಲಿಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಮಹಿಳಾ ಮೀಸಲಾತಿ ಮಸೂದೆಯ ಶ್ರೇಯಸ್ಸನ್ನು ಪಡೆಯಲು ಪ್ರತಿಯೊಬ್ಬರೂ ಯತ್ನಿಸುತ್ತಿದ್ದಾರೆ ಎಂದು ಸಚಿವೆ ಸ್ಮೃತಿ ಇರಾನಿ ಪರೋಕ್ಷವಾಗಿ ಸೋನಿಯಾರನ್ನು ಕುಟುಕಿದರು. ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಯಶಸ್ಸಿಗೆ ಹಲವರು ಅಪ್ಪಂದಿರು ಇರುತ್ತಾರೆ. ವೈಫಲ್ಯಕ್ಕೆ ಯಾರೂ ಇರುವುದಿಲ್ಲ. ಇದೀಗ ಮಸೂದೆಯನ್ನು ಮಂಡಿಸಿದಾಗ ‘ಇದು ನಮ್ಮದೇ ಮಸೂದೆ’ ಎಂದು ಹೇಳಿಕೊಳ್ಳುತ್ತಾರೆ’ ಎಂದು ಸೋನಿಯಾ ಹೆಸರನ್ನು ಪ್ರಸ್ತಾಪಿಸದೇ ಇರಾನಿ ಟೀಕಿಸಿದರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ನರಸಿಂಹ ರಾವ್ ಸರ್ಕಾರ ಅನುಷ್ಠಾನಗೊಳಿಸಿತ್ತು ಎಂದು ಸೋನಿಯಾ ಹೇಳಿದ್ದನ್ನು ಇರಾನಿ ಸ್ವಾಗತಿಸಿದರು. ಅದೇ ನರಸಿಂಹ ರಾವ್ ಮೃತ ಪಟ್ಟಾಗ ಅವರ ಪಾರ್ಥೀವ ಶರೀರವನ್ನು ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯೊಳಗೆ ತಂದಿರಲಿಲ್ಲ ಎಂದೂ ಸಚಿವೆ ಕೆಣಕಿದರು.
ಮೀನು ಮಾರ್ಕೆಟ್​ನಲ್ಲಿ ಮಾತೃವಾತ್ಸಲ್ಯ ಅನಾವರಣ; ವಿದೇಶದಿಂದ ಮಗ ಮುಖಮುಚ್ಚಿಕೊಂಡು ಬಂದರೂ ಗುರುತು ಹಿಡಿದ ಅಮ್ಮ!

ಸಿದ್ದರಾಮಯ್ಯಗೆ ಅಡುಗೆ ಮಾಡಲು ಬರುತ್ತಾ? ಹೆಂಡ್ತಿ ಹತ್ರ ಸಿಎಂ ಯಾವತ್ತಾದ್ರೂ ಬೈಸಿಕೊಂಡಿದ್ರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
