| ರಾಘವ ಶರ್ಮ ನಿಡ್ಲೆ, ನವದೆಹಲಿಮಹಿಳಾ ಸಬಲೀಕರಣದ ಕ್ರಾಂತಿಕಾರಿ ನಡೆ ಲೋಕಮತ ಪಡೆದಿದೆ. ಪ್ರಜಾಪ್ರಭುತ್ವದ ಪರಮೋಚ್ಚ ಸಂಸ್ಥೆಯಾದ ಸಂಸತ್​ನ ಕೆಳಮನೆಯಲ್ಲಿ ಧ್ವನಿಮತದ ಅಂಗೀಕಾರ ಗಿಟ್ಟಿಸಿಕೊಂಡಿದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಐತಿಹಾಸಿಕ ಮಹಿಳಾ ಮೀಸಲಾತಿ ವಿಧೇಯಕ ಮಂಡನೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆದಿದ್ದ ಕೇಂದ್ರ ಸರ್ಕಾರ, ನಿರೀಕ್ಷೆಯಂತೆ ಲೋಕಸಭೆಯ ಅನುಮೋದನೆ ಪಡೆದುಕೊಳ್ಳುವ ಮೂಲಕ ಮೊದಲ ಪರೀಕ್ಷೆಯಲ್ಲಿ ಪಾಸಾಗಿದೆ. ಈ ಮೂಲಕ ಹೊಸ ಸಂಸತ್ ಭವನದ ಲೋಕಸಭೆಯಲ್ಲಿ ಮಂಡಿಸಲಾದ ಪ್ರಥಮ ವಿಧೇಯಕಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದ್ದು, ಇಡೀ ದೇಶ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.
ಮಹಿಳಾ ಮೀಸಲು ತಿದ್ದುಪಡಿ ವಿಧೇಯಕ-2023ಕ್ಕೆ ಕೇಂದ್ರ ಸರ್ಕಾರ ನಾರಿಶಕ್ತಿ ವಂದನಾ ಅಧಿನಿಯಮ ಎಂದು ಹೆಸರಿಟ್ಟಿದೆ. ರಾಜ್ಯಸಭೆಯಲ್ಲಿ ಅಂಗೀಕಾರದ ಬಳಿಕ ರಾಷ್ಟ್ರಪತಿಗಳ ಅಂಕಿತ ಬೀಳಲಿದೆ. ರಾಜ್ಯಸಭೆಯಲ್ಲಿ ಗುರುವಾರ ಮಸೂದೆಯನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘ್ವಾಲ್ ಮಂಡಿಸಲಿದ್ದಾರೆ. ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರ ಸಂಖ್ಯೆ ಕಡಿಮೆಯಿದ್ದರೂ, ವಿಧೇಯಕದ ಅನುಮೋದನೆಗೆ ಹೆಚ್ಚಿನ ಅಡೆತಡೆ ಉಂಟಾಗುವ ಸಾಧ್ಯತೆ ಕಡಿಮೆ. ಒಂದೆರಡು ಸಣ್ಣ ಪಕ್ಷಗಳು ಬಿಟ್ಟರೆ ಉಳಿದವರು ವಿಧೇಯಕದ ಜಾರಿಗೆ ವಿರೋಧ ವ್ಯಕ್ತಪಡಿಸಿಲ್ಲ. ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2010ರಲ್ಲಿ ಮಹಿಳಾ ಮೀಸಲು ವಿಧೇಯಕಕ್ಕೆ ರಾಜ್ಯಸಭೆ ಅನುಮೋದನೆ ನೀಡಿತ್ತಾದರೂ, ಲೋಕಸಭೆಯಲ್ಲಿ ಸಮಾಜವಾದಿ ಮತ್ತು ರಾಷ್ಟ್ರೀಯ ಜನತಾದಳ ಪಕ್ಷದ ವಿರೋಧದಿಂದಾಗಿ ವಿಧೇಯಕ ಬಿದ್ದು ಹೋಗಿತ್ತು. ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ಮಸೂದೆ ಪರವಿದ್ದು, ಒಬಿಸಿ ಮೀಸಲಾತಿ ಅನ್ವಯವಾಗದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ರಾಜ್ಯಸಭೆಯಲ್ಲಿ ಚರ್ಚೆಗಳಾಗಿ, ಅನುಮೋದನೆ ಸಿಗುವ ಸಾಧ್ಯತೆ ದಟ್ಟವಾಗಿವೆ. ಅಲ್ಲಿಗೆ, ಗಣೇಶ ಚತುರ್ಥಿ ವೇಳೆ ವಿಶೇಷ ಅಧಿವೇಶನ ಕರೆದ ಕೇಂದ್ರದ ಉದ್ದೇಶವೂ ಈಡೇರಿದಂತಾಗಲಿದೆ.
ತಿದ್ದುಪಡಿ ಪ್ರಸ್ತಾವ:33 ಪ್ರತಿಶತ ಮಹಿಳೆಯರಿಗೆ ಮೀಸಲಿಡುವ ಸ್ಥಾನಗಳಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮಹಿಳೆಯರಿಗೂ ಒಳಮೀಸಲಾತಿ ಕಲ್ಪಿಸಬೇಕು ಎಂದು ವಿರೋಧ ಪಕ್ಷಗಳನ್ನೊಳಗೊಂಡ ಇಂಡಿಯಾ ಮೈತ್ರಿಕೂಟದ ಸಂಸದರು ವಿಧೇಯಕಕ್ಕೆ ತಿದ್ದುಪಡಿ ಮಾಡುವ ಸಲಹೆ ನೀಡಿದ್ದು, ಈ ಸಂಬಂಧ ಪ್ರಸ್ತಾವವೊಂದನ್ನು ಕೂಡ ಸಲ್ಲಿಸಿದ್ದಾರೆ. ಈ ಮೀಸಲಾತಿ ರಾಜ್ಯಸಭೆ ಮತ್ತು ವಿಧಾನಪರಿಷತ್​ಗೂ ವಿಸ್ತರಣೆಯಾಗಬೇಕು ಎಂದು ತಿದ್ದುಪಡಿ ಪ್ರಸ್ತಾವ ಸಲ್ಲಿಸಿದ ಜೆಡಿಯು ಸಂಸದ ಅಲೋಕ್ ಕುಮಾರ್ ಸುಮನ್ ಒತ್ತಾಯಿಸಿದ್ದಾರೆ. ಪರಿಶಿಷ್ಟ ಜಾತಿ/ಪಂಗಡ ಮತ್ತು ಒಬಿಸಿ ಮಹಿಳೆಯರಿಗೆ ಮೀಸಲಾತಿ ಖಚಿತಪಡಿಸಿಕೊಳ್ಳಲು ಜಾತಿ ಗಣತಿ ನಡೆಸಬೇಕು ಎಂದು ಚರ್ಚೆಯಲ್ಲಿ ಪಾಲ್ಗೊಂಡ ಸೋನಿಯಾ ಗಾಂಧಿ ಪ್ರತಿಪಾದಿಸಿದರೆ, ಒಬಿಸಿ ಮಹಿಳೆಯರಿಗೆ ಮೀಸಲಾತಿ ಇಲ್ಲದ ಇದೊಂದು ಅಪೂರ್ಣ ಮಸೂದೆ. ಇಂಥದ್ದೊಂದು ಮಹತ್ವದ ಮಸೂದೆ ಮಂಡಿಸುವಾಗ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುಮು ಅವರನ್ನು ಕರೆಯುವ ಸೌಜನ್ಯವೂ ಸರ್ಕಾರಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇಬ್ಬರಷ್ಟೇ ವಿರೋಧ:ಮೀಸಲು ವಿಧೇಯಕಕ್ಕೆ ಲೋಕಸಭೆಯ 454 ಸಂಸದರು ಧ್ವನಿಮತದ ಮೂಲಕ ಬೆಂಬಲ ಸೂಚಿಸಿದರು. ಎಐಎಂಐಎಂ ಪಕ್ಷದ ಸಂಸದ ಅಸಾದುದ್ದಿನ್ ಓವೈಸಿ ಸೇರಿ ಪಕ್ಷದ ಇಬ್ಬರು ಸಂಸದರು ವಿಧೇಯಕದ ವಿರುದ್ಧ ಮತಹಾಕಿದ್ದಾರೆ. ಈ ವಿಧೇಯಕ ಸಂಸತ್ತಿನಲ್ಲಿ ಕಡಿಮೆ ಪ್ರಾತಿನಿಧ್ಯ ಹೊಂದಿರುವ ಒಬಿಸಿ ಮತ್ತು ಮುಸ್ಲಿಂ ಮಹಿಳೆಯರಿಗೆ ಏಕೆ ಕೋಟಾ ನೀಡುತ್ತಿಲ್ಲ ಎಂದು ಪ್ರಶ್ನಿಸಿದ ಓವೈಸಿ, ನಾನು ಈ ಕಾನೂನನ್ನು ವಿರೋಧಿಸುತ್ತೇನೆ ಎಂದಿದ್ದಾರೆ. ದೇಶದಲ್ಲಿ ಶೇಕಡ ಏಳರಷ್ಟು ಮುಸ್ಲಿಂ ಮಹಿಳೆಯರಿದ್ದಾರೆ. ಆದರೆ, ಈ ಲೋಕಸಭೆಯಲ್ಲಿ ಅವರ ಪ್ರಾತಿನಿಧ್ಯ ಕೇವಲ ಶೇ.0.7 ಮಾತ್ರ ಎಂದು ಅಸಮಾಧಾನ ಹೊರಹಾಕಿದ್ದಾರೆ.
ರಾಹುಲ್​ಗೆ ಷಾ ತಿರುಗೇಟು:ದೇಶವನ್ನು ಕಾರ್ಯದರ್ಶಿಗಳು ನಡೆಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಭಾವಿಸಿದ್ದಾರೆ. ಆದರೆ, ಸರ್ಕಾರ ದೇಶವನ್ನು ನಡೆಸುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ. ದೇಶಕ್ಕೆ 85 ಒಬಿಸಿ ಸಂಸದರು, 29 ಒಬಿಸಿ ಸಚಿವರು ಮತ್ತು ಒಬಿಸಿ ಪ್ರಧಾನಿಯನ್ನು ನೀಡಿದ್ದು ಬಿಜೆಪಿ ಎಂದು ಅಮಿತ್ ಷಾ ಸಮರ್ಥಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸರ್ಕಾರದಲ್ಲಿ 90 ಕಾರ್ಯದರ್ಶಿಗಳಿದ್ದಾರೆ. ಆ ಪೈಕಿ ಒಬಿಸಿ ಸಮುದಾಯದ ಕೇವಲ ಮೂವರು ಕಾರ್ಯದರ್ಶಿಗಳು ಮಾತ್ರ ಸರ್ಕಾರದಲ್ಲಿದ್ದಾರೆ ಎಂದು ರಾಹುಲ್ ಟೀಕಿಸಿದ್ದರು.
ಪ್ರಲ್ಹಾದ ಜೋಶಿ ಹೆಮ್ಮೆಯ ಕ್ಷಣ:ಐತಿಹಾಸಿಕ ತ್ರಿವಳಿ ತಲಾಖ್, ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ಧತಿ ಹಾಗೂ ಈಗ ಮಹಿಳಾ ಮೀಸಲಾತಿ ಮಸೂದೆಗೆ ಸಂಸತ್ತಿನ ಅನುಮೋದನೆ… ಇವೆಲ್ಲವೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಜತೆಗೆ ರಾಜ್ಯದಿಂದ ಸಂಸದರಾಗಿ ಆಯ್ಕೆಯಾದ ಮತ್ತು ಹಾಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿಯವರ ಉಪಸ್ಥಿತಿಯಲ್ಲೇ ನಡೆದಿರುವುದು ರಾಜ್ಯದ ಮಟ್ಟಿಗೆ ವಿಶೇಷ. ಮೇಲಾಗಿ, ಹೊಸ ಸಂಸತ್ತಿನ ಕಟ್ಟಡಕ್ಕೆ ತೆರಳಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಸಂಸದರನ್ನು ಉದ್ದೇಶಿಸಿ ಭಾಷಣ ಮಾಡಿದಾಗ, ಇಬ್ಬರು ಕನ್ನಡಿಗರು (ಸಚಿವ ಪ್ರಲ್ಹಾದ ಜೋಶಿ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ) ವೇದಿಕೆಯಲ್ಲಿ ಉಪಸ್ಥಿತರಿದ್ದುದು ರಾಜ್ಯದ ಮಟ್ಟಿಗೆ ಹೆಮ್ಮೆಯ ಕ್ಷಣ.
ಮತದಾನಕ್ಕೆ ಸೋನಿಯಾ ಗಾಂಧಿ ರಾಹುಲ್ ಗೈರು:ಧ್ವನಿಮತದ ಮೂಲಕ ವಿಧೇಯಕ ಅಂಗೀಕೃತಗೊಂಡರೂ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಪುತ್ರ ರಾಹುಲ್ ಗಾಂಧಿ ಆ ಸಂದರ್ಭದಲ್ಲಿ ಸದನದಲ್ಲಿ ಹಾಜರಿರಲಿಲ್ಲ. ಯಾವ ಉದ್ದೇಶಕ್ಕೆ ಗೈರಾಗಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ. ಇದು ನಾವು ತಂದಿದ್ದ ವಿಧೇಯಕ ಎಂದು ಸೋನಿಯಾ ಗಾಂಧಿ ಹೇಳಿದ್ದರೂ, ಮತದಾನದ ವೇಳೆ ತಾಯಿ-ಮಗನ ಗೈರು ಹಲವರಲ್ಲಿ ಅಚ್ಚರಿ ಮೂಡಿಸಿತು.
ಯಾವಾಗ ಜಾರಿ?:ಮಹಿಳಾ ಮೀಸಲು ಅನುಷ್ಠಾನ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ನಂತರ ನಡೆಯಲಿದೆ. ಅಂದರೆ, ಕನಿಷ್ಠ ಆರು ವರ್ಷಗಳ ನಂತರ ಜಾರಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಇದಕ್ಕೆ ಉತ್ತರ ನೀಡಿರುವ ಗೃಹ ಸಚಿವ ಅಮಿತ್ ಷಾ, ಮುಂದಿನ ವರ್ಷದ ಲೋಕಸಭೆ ಚುನಾವಣೆ ಬಳಿಕ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡನೆಯ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. ಈ ವಿಧೇಯಕದ ಅನುಷ್ಠಾನದ ಅಗತ್ಯತೆಗೆ ಒತ್ತು ನೀಡಿದ್ದೇ ನಾವು ಎಂದು ತಮ್ಮ ಭಾಷಣದಲ್ಲಿ ಸೋನಿಯಾ ಗಾಂಧಿ ಸಮರ್ಥಿಸಿಕೊಂಡಿದ್ದರು. ಆದರೆ, ಎಚ್ .ಡಿ.
ದೇವೇಗೌಡರು ಪ್ರಧಾನಿಯಾದಲ್ಲಿಂದ ಇಲ್ಲಿವರೆಗೆ ಐದು ಬಾರಿ ಮಹಿಳಾ ಮೀಸಲು ವಿಧೇಯಕ ಮಂಡನೆ ಆಗಿದೆ. 4 ಬಾರಿ ನಿಮಗೆ ಅದನ್ನು ಪಾಸ್ ಮಾಡಲು ಸಾಧ್ಯ ಆಗಲಿಲ್ಲ. ಈಗ ನಾವು ದೇಶದ ಮಹಿಳೆಯರ ಕನಸು ನನಸು ಮಾಡುತ್ತಿದ್ದೇವೆ ಅಮಿತ್ ಷಾ ಪ್ರತಿಕ್ರಿಯಿಸಿದರು.
ಮೀನು ಮಾರ್ಕೆಟ್​ನಲ್ಲಿ ಮಾತೃವಾತ್ಸಲ್ಯ ಅನಾವರಣ; ವಿದೇಶದಿಂದ ಮಗ ಮುಖಮುಚ್ಚಿಕೊಂಡು ಬಂದರೂ ಗುರುತು ಹಿಡಿದ ಅಮ್ಮ!

ಸಿದ್ದರಾಮಯ್ಯಗೆ ಅಡುಗೆ ಮಾಡಲು ಬರುತ್ತಾ? ಹೆಂಡ್ತಿ ಹತ್ರ ಸಿಎಂ ಯಾವತ್ತಾದ್ರೂ ಬೈಸಿಕೊಂಡಿದ್ರಾ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:11 + 5 =
Remember me
