|ರಾಘವ ಶರ್ಮ ನಿಡ್ಲೆನವದೆಹಲಿ
ಮತದಾನಕ್ಕೆ ಮುನ್ನ ಉತ್ತರ ಪ್ರದೇಶದ ಲಖನೌ ನಗರದ ಹೊರಭಾಗದ ಗ್ರಾಮವೊಂದರಲ್ಲಿ ಮಹಿಳಾ ಗುಂಪೊಂದನ್ನು ಭೇಟಿ ಮಾಡಿದ್ದಾಗ ಬೆಲೆ ಏರಿಕೆ (ಗ್ಯಾಸ್ ಸಿಲಿಂಡರ್ ರಿಫಿಲ್ಲಿಂಗ್ ದರ), ನಿರುದ್ಯೋಗಳ ಬಗ್ಗೆ ಅವರಲ್ಲಿ ಕಳವಳವಿದ್ದದ್ದು ಕಂಡುಬಂತು. ಆದರೆ ಅದೇ ಮಹಿಳೆಯರು, ‘ಸದೃಢ ಕಾನೂನು ಸುವ್ಯವಸ್ಥೆ ಮೂಲಕ ಯೋಗಿ ಸರ್ಕಾರ ನಮ್ಮೆಲ್ಲರಲ್ಲೂ ‘ಸುರಕ್ಷತಾ’ ಭಾವ ಮೂಡಿಸಿದೆ. ರಾತ್ರಿ ವೇಳೆಯೂ ನಾವು ಆತಂಕವಿಲ್ಲದೆ ಓಡಾಡುತ್ತೇವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲೂಟಿಕೋರರು, ವಂಚಕರು, ಮಹಿಳೆಯರನ್ನು ಪೀಡಿಸುವ ಕಿಡಿಗೇಡಿಗಳನ್ನು ಹಿಡಿದು ಜೈಲಿಗೆ ಹಾಕಿರುವ ಪೊಲೀಸರು, ನಗರ-ಪಟ್ಟಣಗಳಲ್ಲಿ ರಾತ್ರಿ ವೇಳೆಯೂ ಗಸ್ತು ತಿರುಗುವ ಮೂಲಕ ಸಾರ್ವಜನಿಕ ರಕ್ಷಣೆಗೆ ಮೊದಲ ಆದ್ಯತೆ ನೀಡಿರುವುದು ಮತದಾರನ ಮೇಲೆ ವಾಪಕ ಪರಿಣಾಮ ಬೀರಿದೆ. ‘ಕಾನೂನು ಸುವ್ಯವಸ್ಥೆ’ ಎನ್ನುವುದು ವ್ಯಕ್ತಿಯೊಬ್ಬನ ವೈಯಕ್ತಿಕ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿರುವುದು ಸಹಜವಾಗಿಯೇ ಆತನನ್ನು ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಮೆಚ್ಚುವಂತೆ ಮಾಡಿದೆ.
ಪಶ್ಚಿಮ ಉತ್ತರ ಪ್ರದೇಶದ ಮುಜಫರನಗರದಲ್ಲಿ ಸಿಕ್ಕ ಗೋವರ್ದನ ಡಾಬಾದ ಮಾಲೀಕ, ಜಾಟ್ ಸಮುದಾಯದ ಸುಬೋದ್ ಬಲ್ಯಾನ್​ಗೆ ಕಾಲೇಜಿಗೆ ಹೋಗುವ ತನ್ನ ಮಗಳ ಸುರಕ್ಷತೆಯೇ ಮುಖ್ಯವಾಗಿದ್ದರಿಂದ ಯೋಗಿಯೇ ವಾಪಸ್ ಬರಬೇಕು ಎಂಬ ಖಚಿತ ನಿಲುವು ಹೊರಹಾಕಿದ್ದರು. ಜಾಟರು ಬಿಜೆಪಿ ಮೇಲೆ ಸಿಟ್ಟಾಗಿರಬಹುದು. ಆದರೆ, ಮಗಳು ಮತ್ತು ಪತ್ನಿ ಬಿಜೆಪಿಗೇ ಹಾಕಬೇಕು ಎನ್ನುತ್ತಿದ್ದಾರೆ. ಅವರು ಹೇಳಿದ್ದು ಸರಿ ಎಂದೂ ನನಗನಿಸಿದೆ ಎಂದಿದ್ದರು ಬಲ್ಯಾನ್.
ರಾಜ್ಯದ ಮಧ್ಯಭಾಗದಲ್ಲಿರುವ ಅವಧ್​ಪ್ರದೇಶದ ಸರೋಜಿನಿ ನಗರ ಕ್ಷೇತ್ರದ ಮಹಿಳೆ ಶಾಂತಿದೇವಿಗೆ ಸರ್ಕಾರ ಇನ್ನೂ ತನ್ನ ಮನೆ ರಿಪೇರಿ ಮಾಡಿಲ್ಲ ಎಂಬ ಬೇಸರವಿದೆ. ಮಳೆ ಬಂದಾಗಲಂತೂ ಗ್ರಾಮದ ಚರಂಡಿ ನೀರೆಲ್ಲವೂ ಆಕೆ ಮನೆ ಮುಂದೆ ಬಂದು ನಿಲ್ಲುತ್ತದೆ. ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿ ಅನಾರೋಗ್ಯಪೀಡಿತ ಅತ್ತೆ, ಮಾವನನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ವಿಜಯವಾಣಿ ಮುಂದೆ ಕಣ್ಣೀರು ಹಾಕಿದ್ದರು ಶಾಂತಿದೇವಿ. ಗ್ರಾಮ ಪ್ರಧಾನ್ ಸಮಾಜವಾದಿ ಪಾರ್ಟಿಯವನು, ನಾನು 2019ರಲ್ಲಿ ಪ್ರಧಾನಿ ಮೋದಿಯವರ ರ್ಯಾಲಿಗೆ ಹೋಗಿದ್ದಕ್ಕೆ ದ್ವೇಷಿಸುತ್ತಾನೆ ಎಂದು ಅಳಲು ತೋಡಿಕೊಂಡರು. ಸಮಾಜವಾದಿ ಪಕ್ಷಕ್ಕೆ ಮತ ಹಾಕಿದರೆ ಈ ಮನೆ ಶಾಶ್ವತವಾಗಿ ರಿಪೇರಿ ಆಗಲಿಕ್ಕಿಲ್ಲ. ಬಿಜೆಪಿಗೆ ಹಾಕಿದರೆ ಈ ಅವಧಿಯಲ್ಲಾದರೂ ಹೊಸ ಮನೆಗೆ ಒಪ್ಪಿಗೆ ಸಿಗಬಹುದು ಎನ್ನುವ ಆಕೆ, ನಮ್ಮ ಗ್ರಾಮದ ಹೆಣ್ಣುಮಕ್ಕಳು ಈ ಸರ್ಕಾರಿಂದ ನೆಮ್ಮದಿಯಾಗಿದ್ದಾರೆ. ಹಾಗಾಗಿ ಯೋಗಿಗೇ ಮತಹಾಕುವೆ ಎಂದು ತಿಳಿಸಿದ್ದಳು. ಮಥುರಾದಲ್ಲಿ ಮತದಾನ ಬಳಿಕ ಸಿಕ್ಕಿದ್ದ ಹಿರಿ ವಯಸ್ಸಿನ ಮೀರಾ ಮಿಶ್ರಾ, ಪರಿವಾರದ ಬದಲು ರಾಜ್ಯ ಹಿತಾಸಕ್ತಿ ಯೋಚಿಸುವ ಯೋಗಿಯನ್ನು ಬೆಂಬಲಿಸದಿದ್ದರೆ ನಾವು ಮತ್ತೆ ಅಭದ್ರ ಭಾವನೆಯಿಂದ ಬದುಕಬೇಕಾದೀತು. ಮತ್ತೆ ಆ ದಿನಗಳು ಬರುವುದು ಬೇಡವೇ ಬೇಡ ಎಂದು ಮಥುರಾ ಶಾಸಕ ಶ್ರೀಕಾಂತ್ ಶರ್ವಗೆ ವೋಟ್ ಹಾಕಿದ್ದೇನೆ ಎಂದರು.
ಗ್ಯಾಂಗ್​ಸ್ಟರ್ ಕಾಯ್ದೆ, ಆಂಟಿ ರೋಮಿಯೋ ಸ್ಕಾ್ವಡ್, ಖಾಸಗಿ ಮತ್ತು ಸಾರ್ವಜನಿಕ ಆಸ್ತಿ ಹಾನಿ ವಸೂಲಾತಿ ಸುಗ್ರೀವಾಜ್ಞೆ ಕಾನೂನುಗಳು ಪ್ರತ್ಯಕ್ಷ/ಪರೋಕ್ಷ ರಾಜ್ಯದ ಜನತೆಯ ನೆರವಿಗೆ ಬಂದಿದೆ. ಉದ್ಯಮಿಗಳು, ವ್ಯಾಪಾರಿಗಳು ಭೂ ಮಾಫಿಯಾಗಳ ಹಾವಳಿಗಳಿಂದ ಮುಕ್ತರಾಗಿದ್ದಾರೆ. ಭಯಮುಕ್ತ ಪರಿಸರದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿದೆ ಎಂದು ಆಗ್ರಾದಲ್ಲಿ ಸಿಕ್ಕ ಕೆಲವು ವ್ಯಾಪಾರಿಗಳು ಹೇಳಿದ್ದರು. ಹೀಗಿದ್ದರೂ, ಅಲ್ಲಲ್ಲಿ ಗುಂಡಿನ ದಾಳಿ, ಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಸುಳ್ಳಲ್ಲ. ಆದರೆ, 2017ರ ಹಿಂದಿದ್ದ ಅಪರಾಧ ಪ್ರಮಾಣ ತಗ್ಗಿದೆ ಎಂಬುದನ್ನು ರಾಜ್ಯದ ನಾಲ್ಕೂ ದಿಕ್ಕುಗಳ ಜನರು ಒಪ್ಪಿಕೊಳ್ಳುತ್ತಾರೆ. ಹಿಂದು-ಮುಸ್ಲಿಂ ರಾಜಕಾರಣದ ಬಗ್ಗೆ ತಲೆಕೆಡಿಸಿಕೊಳ್ಳದೆ, ದೈನಂದಿನ ಬದುಕಿನ ಬಗ್ಗೆ ಕಾಳಜಿ ವಹಿಸುವ ಕೆಲ ಮುಸ್ಲಿಂ ಧರ್ವಿುಯರೊಂದಿಗೆ ಮಾತನಾಡಿಸಿದಾಗ, ಯೋಗಿ ಅವಧಿಯಲ್ಲಿ ಕಾನೂನು ಸುವ್ಯವಸ್ಥೆಯ ಬಲ ಹೆಚ್ಚಿರುವುದನ್ನು ಒಪ್ಪಿಕೊಂಡಿದ್ದರು. ಕಳೆದ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಸೀಟುಗಳು ಕಡಿಮೆಯಾಗಿದ್ದರೂ, ಮಹಿಳೆಯರು ಯೋಗಿಯನ್ನು ನೆಚ್ಚಿಕೊಂಡದ್ದು ಕಾನೂನು ಸುವ್ಯವಸ್ಥೆಗೆ. ಜತೆಗೆ, ಕಷ್ಟಕಾಲದಲ್ಲಿ ಆಹಾರ ಸಾಮಗ್ರಿ ವಿತರಿಸಿ ಸ್ಪಂದಿಸಿದರು ಎಂಬ ಅಭಿಮಾನವೂ ಮನೆ ನಿರ್ವಹಿಸುವ ಮಹಿಳೆಯರನ್ನು ಬಿಜೆಪಿ ಕಡೆ ವಾಲುವಂತೆ ಪ್ರೇರೇಪಿಸಿತು.
ಪಶ್ಚಿಮ ಉ.ಪ್ರ.ದಿಂದ ಆರಂಭಗೊಂಡು ಅವಧ್, ಬುಂದೇಲ್​ಖಂಡ್, ಪೂರ್ವಾಂಚಲದ ಗ್ರಾಮೀಣ ಭಾಗದ ಗ್ರಾಮೀಣ ಮತದಾರರಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭುವಿಗಳು ಬಿಜೆಪಿ ಕೈ ಹಿಡಿದಿದ್ದಾರೆ. ಜಾತಿ-ಧರ್ಮ ಮೀರಿ ಪ್ರಧಾನಿ ಮತ್ತು ಮುಖ್ಯಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡವರಿಗೆ ಮನೆ ನಿರ್ಮಾಣ ಮಾಡಲಾಗಿದೆ. ಅಯೋಧ್ಯೆಯಲ್ಲಿ ಸಿಕ್ಕ ಮುಸ್ಲಿಂ ಮತದಾರ ಷರೀಫುದ್ದೀನ್, ಸ್ವಂತ ಮನೆ ಕಟ್ಟಬೇಕೆಂಬ ತಮ್ಮ ಕುಟುಂಬದ ಹಲವು ದಶಕದ ಕನಸನ್ನು ನನಸು ಮಾಡಿದ ಯೋಗಿ ಸರ್ಕಾರಕ್ಕೇ ನನ್ನ ಮತ ಎಂದು ಸಂತಸ ಹಂಚಿಕೊಂಡಿದ್ದರು. ಗೋರಖ್​ಪುರ ಗ್ರಾಮೀಣ ಕ್ಷೇತ್ರದ ರಜಹಿ ಗ್ರಾಮದ ಸಂಜಯ್ ನಿಷಾದ್​ಗೆ ಆವಾಸ್ ಯೋಜನೆ ಅಡಿಯಲ್ಲಿ ರೂ. 1.75 ಲಕ್ಷ ಸಿಕ್ಕಿದ್ದರಿಂದ ಬಿಜೆಪಿ ಮೈತ್ರಿಕೂಟಕ್ಕೇ ಬೆಂಬಲ ನೀಡುವ ಬಗ್ಗೆ ನಮ್ಮೊಂದಿಗೆ ಮಾಹಿತಿ ಹಂಚಿಕೊಂಡಿದ್ದರು. ಇಂಥಾ ಸಾವಿರಾರು ಮತದಾರರು ಸುತ್ತಮುತ್ತಲಿರುವ ಜನರ ಮೇಲೂ ಪ್ರಭಾವ ಬೀರಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯ ಬಡ ರೈತ ವರ್ಗದ ಫಲಾನುಭವಿಗಳು ವರ್ಷಕ್ಕೆ 10 ಸಾವಿರ ರೂ ಸಿಗುತ್ತದೆ ಎಂದು ಖುಷಿಯಾಗಿದ್ದಾರೆ. ಈ ‘ಲಾಭಾರ್ಥಿ ಮತವರ್ಗ’ವನ್ನೇ ಗುರಿಯಾಗಿಸಿ ಕಾರ್ಯತಂತ್ರ ರೂಪಿಸಿದ ಬಿಜೆಪಿ, ಆ ಮೂಲಕ ಇತರೆ ಜನವರ್ಗವನ್ನೂ ತನ್ನತ್ತ ಸೆಳೆದುಕೊಳ್ಳಲು ಯತ್ನಿಸಿತು. ಹೀಗಾಗಿ, ಗ್ರಾಮೀಣ ವಾಸಿಯ ಜೀವನವನ್ನು ಬದಲಿಸಿದ ಪಾಸಿಟಿವ್ ಅಂಶಗಳು ಬೆಲೆ ಏರಿಕೆ ಹಾಗೂ ಮತ್ತಿತರ ನಕಾರಾತ್ಮಕ ಅಂಶಗಳನ್ನು ಬದಿಗೆ ಸರಿಸಿದವು. ಲಖೀಂಪುರ ಜಿಲ್ಲೆಯ ನಿಘಾಸನ್​ನಲ್ಲಿ ನಾಲ್ವರು ರೈತರು ಮತ್ತು ಪತ್ರಕರ್ತನೋರ್ವನ ಮೇಲೆ ಎಸ್​ಯುುವಿ ಓಡಿಸಿದ ಆರೋಪ ಕೇಂದ್ರ ಸಚಿವ ಅಜಯ್ ಮಿಶ್ರಾ ಟೇನಿ ಪುತ್ರನ ಮೇಲಿದ್ದರೂ, ಜನರು ಯೋಗಿ ಆಡಳಿತ ಶೈಲಿ ಮತ್ತು ಸ್ಥಳೀಯ ಶಾಸಕ ಶಶಾಂಕ್ ವರ್ವರ ಪಾಸಿಟಿವ್ ಇಮೇಜ್​ಗೆ ಮತ ಹಾಕಿದ್ದಾರೆ ಎನ್ನುವುದಕ್ಕೆ ಫಲಿತಾಂಶವೇ ಸಾಕ್ಷಿ. ಲಖೀಂಪುರ ಘಟನೆ ಮತದಾನದ ಮೇಲೆ ಪೂರ್ಣ ಪರಿಣಾಮ ಬೀರುತ್ತಿದ್ದರೆ ಜಿಲ್ಲೆಯ ಎಂಟೂ ಸೀಟುಗಳನ್ನು ಬಿಜೆಪಿ ಕಳೆದುಕೊಳ್ಳಬೇಕಿತ್ತು. ಆದರೆ, ಇಲ್ಲೂ ದೊಡ್ಡ ಸಂಖ್ಯೆಯ ಲಾಭಾರ್ಥಿಗಳು ಹಾಗೂ ರಾಜ್ಯ ಕಾನೂನು ಸುವ್ಯವಸ್ಥೆ ಬೆಂಬಲಿಸಿದ ಮಂದಿ ಬಿಜೆಪಿ ನೆರವಿಗೆ ಬಂದಿದ್ದಾರೆ. ‘10 ಒಳ್ಳೆಯ ಕೆಲಸಗಳ ಮಧ್ಯೆ ಒಂದೆರಡು ಕೆಟ್ಟ ಕೆಲಸಗಳು ಸಂಭವಿಸುವುದು ಸಹಜ’ ಎಂದು ಪತ್ರಿಕೆ ಜತೆಗೆ ಸ್ಥಳೀಯರೇ ಅನಿಸಿಕೆ ವ್ಯಕ್ತಪಡಿಸಿದ್ದುಂಟು.
ನವದೆಹಲಿ:ಕೃಷಿ ಕಾಯ್ದೆಗಳ ವಿರುದ್ಧ ಹೋರಾಟದ ಪರಿಣಾಮ ಜಾಟ್ ಬಾಹುಳ್ಯ ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಿಜೆಪಿ ಸೀಟುಗಳು ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಲಿವೆ ಎಂಬ ವಿಶ್ಲೇಷಣೆಗಳು ಸುಳ್ಳಾಗಿವೆ. ಪಶ್ಚಿಮ ಉತ್ತರ ಪ್ರದೇಶದ ಒಟ್ಟು 136 ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ 109ನ್ನು ಗೆದ್ದುಕೊಂಡಿತ್ತು. ಈ ಬಾರಿ 93 ಸೀಟುಗಳಲ್ಲಿ ಸ್ಥಾನ ಉಳಿಸಿಕೊಂಡಿದ್ದು, 16ನ್ನು ಕಳೆದುಕೊಂಡಿದೆ. ಕೃಷಿ ಕಾಯ್ದೆ ಹೋರಾಟ ಪರಿಣಾಮ ಬೀರಿರುವುದು ನಿಜ. ಆದರೆ, ಅರ್ಧಕ್ಕರ್ಧ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲಿದೆ ಎಂಬ ಲೆಕ್ಕಾಚಾರಗಳೆಲ್ಲಾ ಫಲಿತಾಂಶದಲ್ಲಿ ತಲೆಕೆಳಗಾಗಿದೆ. ಸಮಾಜವಾದಿ 35 ಸೀಟುಗಳ ಮೂಲಕ 14 ಸೀಟುಗಳನ್ನು ಹೆಚ್ಚಿಸಿಕೊಂಡಿದ್ದರೆ 1 ಶಾಸಕ ಸ್ಥಾನ ಹೊಂದಿದ್ದ ರಾಷ್ಟ್ರೀಯ ಲೋಕದಳ 8 ಸ್ಥಾನಗಳಲ್ಲಿ ಗೆದ್ದಿದೆ.
ಪಶ್ಚಿಮ ಉ.ಪ್ರ.ಗಿಂತ ಪೂರ್ವ ಉತ್ತರ ಪ್ರದೇಶದಲ್ಲಿ ಬಿಜೆಪಿ ಸಾಧನೆ ಮತ್ತಷ್ಟು ಸುಧಾರಿಸುವ ಬದಲು ಈ ಭಾಗದಲ್ಲಿ ಸಮಾಜವಾದಿ ಪಕ್ಷ ಹೆಚ್ಚು ಸೀಟುಗಳನ್ನು ಗೆದ್ದುಕೊಂಡಿರುವುದು ವಿಶೇಷ. ಪೂರ್ವದ 166 ಸೀಟುಗಳಲ್ಲಿ ಕಳೆದ ಬಾರಿ 114 ಸೀಟುಗಳನ್ನು ಗೆದ್ದುಕೊಂಡಿದ್ದರೆ ಈ ಬಾರಿ ಅದು 86ಕ್ಕೆ ಇಳಿದಿದೆ. ಕಳೆದ 16 ಸೀಟುಗಳನ್ನು ಹೊಂದಿದ್ದ ಸಮಾಜವಾದಿ ಪಕ್ಷ ಈ ಬಾರಿ ಸಂಖ್ಯೆಯನ್ನು 56ಕ್ಕೇರಿಸಿಕೊಂಡಿದೆ. 2017ರಲ್ಲಿ ಬುಂದೇಲ್​ಖಂಡ್ ಪ್ರಾಂತ್ಯದ ಎಲ್ಲಾ 19 ಸೀಟುಗಳನ್ನು ಬಾಚಿಕೊಂಡಿದ್ದ ಬಿಜೆಪಿ ಈ ಬಾರಿ 14 ಸೀಟುಗಳಿಗೆ ತಗ್ಗಿದ್ದರೆ, ಸಮಾಜವಾದಿ ಪಕ್ಷ ಶೂನ್ಯದಿಂದ 3 ಸ್ಥಾನಕ್ಕೆ ವಿಸ್ತರಿಸಿಕೊಂಡಿದೆ. ಅಪ್ನಾದಳ ಕೂಡ ಇಲ್ಲಿ ಖಾತೆ ತೆರೆದಿದೆ.
ಮುಸ್ಲಿಂ ಶಾಸಕರ ಸಂಖ್ಯೆ ಹೆಚ್ಚಳ:2017ರಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದರಿಂದ ಮುಸ್ಲಿಂ ಶಾಸಕರ ಸಂಖ್ಯೆ 24ಕ್ಕೆ ಕುಸಿದಿತ್ತು. ಉತ್ತರ ಪ್ರದೇಶದ ಮಟ್ಟಿಗೆ ಇದು ಐತಿಹಾಸಿಕ ಕುಸಿತವಾಗಿತ್ತು. ಆದರೆ, ಈ ಭಾರಿ ಸಮಾಜವಾದಿ ಪಕ್ಷದ ಒಟ್ಟಾರೆ ನಿರ್ವಹಣೆ ಸುಧಾರಿಸಿರುವುದರಿಂದ ಮುಸ್ಲಿಂ ಶಾಸಕ ಸ್ಥಾನದ ಸಂಖ್ಯೆ 36ಕ್ಕೆ ಏರಿದೆ. ಮಾಜಿ ಸಚಿವ ಆಜಂ ಖಾನ್, ಪುತ್ರ ಅಬ್ದುಲ್ಲಾ ಆಜಂ ಖಾನ್, ಮವೂ ವಿಧಾನಸಭೆಯಲ್ಲಿ ಮುಖ್ತಾರ್ ಅನ್ಸಾರಿ ಪುತ್ರ ಅಬ್ಬಾಸ್ ಅನ್ಸಾರಿ ಗೆದ್ದ ಪ್ರಮುಖರಾಗಿದ್ದಾರೆ. ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಪಶ್ಚಿಮ ಉತ್ತರ ಪ್ರದೇಶದ ಕೈರಾನಾದಲ್ಲಿ ಬಿಜೆಪಿ ವಿರುದ್ಧ ಸಮಾಜವಾದಿಯ ನಹೀದ್ ಹುಸೇನ್ ಗೆಲುವು ಸಾಧಿಸಿದ್ದಾರೆ.
ಕಾರ್ಮಿಕರಿಗೆ ಬೇಸರದ ಸಂಗತಿ: ಇಪಿಎಫ್​ಗೆ 40 ವರ್ಷಗಳಲ್ಲೇ ಅತಿ ಕಡಿಮೆ ಬಡ್ಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 16 =
Remember me
