ರಾಘವ ಶರ್ಮ ನಿಡ್ಲೆ,ನವದೆಹಲಿ:ಜನಸಂಖ್ಯೆಯಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿರುವ ಭಾರತ (ಚೀನಾ ನಂ.1) ಮುಂದಿನ ಏಳೆಂಟು ವರ್ಷಗಳಲ್ಲಿ ಅಗ್ರಸ್ಥಾನಕ್ಕೇರಲಿದೆ ಎನ್ನುತ್ತದೆ ವಿಶ್ವ ಜನಸಂಖ್ಯೆಯ ಡೇಟಾ ಶೀಟ್. ಸೀಮಿತ ನೈಸರ್ಗಿಕ ಸಂಪನ್ಮೂಲದ ಮಧ್ಯೆ ಮಿತಿ ಮೀರಿದ ಜನಸಂಖ್ಯೆ ಭಾರತಕ್ಕೆ ಎಲ್ಲ ರೀತಿಯಲ್ಲೂ ಆತಂಕಕಾರಿ.
ಹಾಗಿದ್ದರೂ, ಸರ್ಕಾರಗಳು ವೋಟ್​ಬ್ಯಾಂಕ್ ರಕ್ಷಣೆಗಾಗಿಯೋ ಅಥವಾ ಮತ್ಯಾವುದೋ ಕಾರಣಕ್ಕಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಪರಿಣಾಮಕಾರಿ ಕಾನೂನುಗಳನ್ನು ಜಾರಿಗೊಳಿಸಲಿಲ್ಲ. ಕೆಲ ಕುಟುಂಬಗಳು ಸ್ವಯಂಪ್ರೇರಣೆಯಿಂದ ಮಕ್ಕಳ ಸಂಖ್ಯೆಯನ್ನು ಒಂದೆರಡಕ್ಕೆ ಸೀಮಿತಗೊಳಿಸಿದರೂ, ಸರ್ಕಾರದ ಜನ-ಜಾಗೃತಿ ಕಾರ್ಯಕ್ರಮಗಳನ್ನು ಬಹುಪಾಲು ಜನವರ್ಗ ಗಂಭೀರವಾಗಿ ಪರಿಗಣಿಸಿಲ್ಲ. ಇದರ ಪರಿಣಾಮವಾಗಿಯೇ, ಬಡತನ, ಶೋಷಣೆ, ತಾರತಮ್ಯ, ಸಾಂಕ್ರಾಮಿಕ ರೋಗಗಳು, ನಿರುದ್ಯೋಗ, ಭ್ರಷ್ಟಾಚಾರ ಸೇರಿ ಹತ್ತಾರು ಸಾಮಾಜಿಕ ಪಿಡುಗುಗಳು ಬಾಧಿಸುತ್ತಿವೆ. ಪ್ರತಿ ವರ್ಷ ವಿಶ್ವ ಜನಸಂಖ್ಯಾ ದಿನ ಬಂದು ಹೋದರೂ, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ನಮ್ಮ ಮಾನಸಿಕತೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿದೆಯೇ?
ಈ ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ನಾಯಕ, ರಾಜ್ಯಸಭೆ ಸದಸ್ಯ ಅಭಿಷೇಕ್ ಮನುಸಿಂಘ್ವಿ ‘ಜನಸಂಖ್ಯೆ ನಿಯಂತ್ರಣ ಮಸೂದೆ 2020’ ಎಂಬ ಖಾಸಗಿ ವಿಧೇಯಕವೊಂದನ್ನು ಪ್ರಸ್ತಾಪಿಸಿದ್ದು ಇಲ್ಲಿ ಉಲ್ಲೇಖಾರ್ಹ. ‘ವಿವಾಹಿತ ಓರ್ವ ದಂಪತಿಗೆ 2 ಮಕ್ಕಳಿರಬೇಕು. ಈ ನಿಯಮ ಪಾಲಿಸಿದವರಿಗೆ ಪ್ರೋತ್ಸಾಹಧನ ನೀಡುವ ಜತೆಗೆ, ಉಲ್ಲಂಘಿಸಿದವರಿಗೆ ಸರ್ಕಾರದ ಕೆಲವು ಪ್ರಯೋಜನಗಳು ಇರಬಾರದು’ ಎಂಬುದು ಈ ಮಸೂದೆಯಲ್ಲಿರುವ ಪ್ರಮುಖಾಂಶ. ಚುನಾವಣೆ ಸ್ಪರ್ಧೆಗೆ ಅವಕಾಶ ನಿರಾಕರಣೆ, ಸರ್ಕಾರಿ ಸೇವೆಯಲ್ಲಿ ಬಡ್ತಿ ಇಲ್ಲದಿರುವುದು, ಬಿಪಿಎಲ್ ಕೆಟಗರಿ ಹೊರತುಪಡಿಸಿ ಉಳಿದವರಿಗೆ ಸರ್ಕಾರಿ ಸಬ್ಸಿಡಿ ಕಡಿತಗೊಳಿಸುವುದು, ಸರ್ಕಾರದ ಎ ಗ್ರೂಪ್ ನೌಕರಿಗೆ ಅರ್ಜಿ ಸಲ್ಲಿಸಲು ಅವಕಾಶ ನಿರಾಕರಿಸುವುದು… ಕೆಲವು ಕಠಿಣ ನಿಯಮಗಳನ್ನು ಸಿಂಘ್ವಿ ಮಸೂದೆಯಲ್ಲಿ ರ್ಚಚಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್​ನ ಇತರೆ ನಾಯಕರು ಮತ್ತು ಮುಖ್ಯವಾಗಿ ಕೇಂದ್ರ ಸರ್ಕಾರದ ಮನಸ್ಸಿನಲ್ಲೇನಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.
‘ದೇಶಹಿತ ಹಾಗೂ ಸಾಮಾಜಿಕ ಬದಲಾವಣೆ ಉದ್ದೇಶದಿಂದ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ವಿಪಕ್ಷಗಳ ವಿರೋಧಗಳ ಮಧ್ಯೆಯೂ ಹಲವು ಮಸೂದೆಗಳನ್ನು ಅನುಮೋದನೆಗೊಳಿಸಿದೆ. ಈಗ ರಾಜ್ಯಸಭೆಯಲ್ಲೂ ಎನ್​ಡಿಎ ಬಲ ಹೆಚ್ಚುತ್ತಿರುವುದರಿಂದ ಜನಸಂಖ್ಯೆ ನಿಯಂತ್ರಣ ಮಸೂದೆ ಬಗ್ಗೆ ಯೋಚಿಸಬೇಕು. ಭಾರತದಂಥ ದೇಶದಲ್ಲಿ ಕೆಲವೊಂದು ಅನಾಹುತಗಳನ್ನು ಕಾನೂನಿನ ಮೂಲಕವಷ್ಟೇ ತಹಬದಿಗೆ ತರಲು ಸಾಧ್ಯ. ಇಲ್ಲದಿದ್ದಲ್ಲಿ, ಮುಂದಿನ 10 ವರ್ಷಗಳಲ್ಲಿ ದೇಶದ ಸ್ಥಿತಿ ಊಹಿಸಲೂ ಸಾಧ್ಯವಿಲ್ಲ’ ಎನ್ನುವುದು ಕಾಂಗ್ರೆಸ್​ನ ಮಾಜಿ ಸಂಸದರೊಬ್ಬರ ಅಭಿಪ್ರಾಯ.
ಸ್ವಯಂಜಾಗೃತಿ ಉತ್ತಮ: ‘ಗುಣಮಟ್ಟದ ಶಿಕ್ಷಣ ಮತ್ತು ಜನಸಂಖ್ಯೆ ಕುರಿತ ಸ್ವಯಂಜಾಗೃತಿಯಿಂದ ದೇಶದ ಕೆಲ ಭಾಗಗಳಲ್ಲಿ ಪರಿವರ್ತನೆಯಾಗಿದೆ. ಕರೊನಾ ನಿಯಂತ್ರಣಕ್ಕೆಂದು ಸರ್ಕಾರ ಮೊದಲಿಗೆ ಲಾಕ್​ಡೌನ್ ಘೋಷಣೆ ಮಾಡಿತು, ನಂತರ ತೆರವುಗೊಳಿಸಿತು. ಇದಾದ ಬಳಿಕ, ಕೆಲವು ಪಟ್ಟಣಗಳಲ್ಲಿ ಜನರೇ ಸ್ವಯಂ ಲಾಕ್​ಡೌನ್​ಗೆ ಮುಂದಾದರು. ಅಂದರೆ, ಅವರಲ್ಲಿ ಜಾಗೃತಿ ಇದೆ ಎಂದಲ್ಲವೇ. ಹಾಗೆಯೇ ಜನಸಂಖ್ಯೆ ಕೂಡ. ಸರ್ಕಾರ ಹೇರಿದ ಜನಸಂಖ್ಯಾ ನಿಯಂತ್ರಣ ಕ್ರಮದಿಂದ ಏನಾಯ್ತು ಎನ್ನುವುದನ್ನು ತುರ್ತು ಪರಿಸ್ಥಿತಿಯಲ್ಲಿ ನೋಡಿದ್ದೇವೆ. ಸರ್ಕಾರಿ ಪ್ರೇರಿತ ಕಾನೂನು ಬೇಕೋ ಅಥವಾ ಸ್ವಯಂಪ್ರೇರಿತ ನಿಯಂತ್ರಣ ಒಳ್ಳೆಯದೋ ಎಂಬ ಬಗ್ಗೆ ಮೊದಲು ರಾಷ್ಟ್ರೀಯ ಚರ್ಚೆಯಾಗಬೇಕು’ ಎಂಬುದು ಹಾವೇರಿ ಸಂಸದ ಶಿವಕುಮಾರ್ ಉದಾಸಿ ಸಲಹೆ.
ಒಂದು ಮಗುವಿರುವ ದಂಪತಿ ಸ್ವಯಂಪ್ರೇರಣೆಯಿಂದ ಗರ್ಭತಡೆ ಶಸ್ತ್ರಚಿಕಿತ್ಸೆಗೆ ಮುಂದಾದರೆ ಅವರಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅಥವಾ ಸರ್ಕಾರಿ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ಬಡತನ ರೇಖೆಗಿಂತ ಕೆಳಗಿರುವ ದಂಪತಿ ‘ಒಂದು ಮಗು’ವಿಗೆ ಸೀಮಿತಗೊಳಿಸಿದರೆ, ಗಂಡುಮಗುವಾಗಿದ್ದರೆ 60 ಸಾವಿರ ರೂಪಾಯಿ ಮತ್ತು ಹೆಣ್ಣುಮಗುವಾಗಿದ್ದರೆ 1 ಲಕ್ಷ ರೂಪಾಯಿ ನೆರವನ್ನೂ ನೀಡಬೇಕು ಎಂದು ಸಿಂಘ್ವಿ ಖಾಸಗಿ ಮಸೂದೆಯಲ್ಲಿ ಹೇಳಿದ್ದಾರೆ. ಹೀಗೆ, ಹಲವು ಚರ್ಚಾಯೋಗ್ಯ ಅಂಶಗಳು ಅದರಲ್ಲಿದೆ.
ಕಾಣದ ಕರೊನಾ ವೈರಾಣು ಸಮಾಜಕ್ಕೆ ಹತ್ತು ಹಲವು ಪಾಠ ಕಲಿಸಿದೆ/ಕಲಿಸುತ್ತಿದೆ. ಆತ್ಮನಿರ್ಭರತೆ ಬಗ್ಗೆ ಹತ್ತಾರು ಬಾರಿ ಪಾಠ ಮಾಡಿರುವ ಕೇಂದ್ರ ಸರ್ಕಾರ, ದೇಶದ ಸರ್ವತೋಮುಖ ಬೆಳವಣಿಗೆ ದೃಷ್ಟಿಯಿಂದ ಕರೊನಾ ಹಾವಳಿ ಕಡಿಮೆಯಾದ ಬಳಿಕವಾದರೂ ಈ ಗಂಭೀರ ವಿಷಯವನ್ನು ಸಂಸತ್ತಿನಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕಿರುವುದು ಅನಿವಾರ್ಯ.
ಸ್ವಪ್ನಾ ಸುರೇಶ್ ವಿರುದ್ಧ ಉಗ್ರ ಚಟುವಟಿಕೆಗೆ ನಿಧಿ ಸಂಗ್ರಹದ ಆರೋಪ: ಎನ್​ಐಎ ಹೊಸ ಎಫ್​ಐಆರ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen + 2 =
Remember me
