| ರಾಘವ ಶರ್ಮ ನಿಡ್ಲೆ, ನವದೆಹಲಿಎರಡು ದಿನಗಳ ಜಿ-20 ಶೃಂಗಸಭೆಗೆ ಭಾರತದ ರಾಜಧಾನಿ ತಯಾರಾಗಿ ನಿಂತಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿ ಅನೇಕ ಜಾಗತಿಕ ನಾಯಕರು ದಿಲ್ಲಿಯಲ್ಲಿದ್ದು, 2 ದಿನಗಳ ಕಾಲ ಜಗತ್ತು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಹಾಗೂ ದೇಶಗಳ ನಡುವಿನ ಪರಸ್ಪರ ಸಹಕಾರ, ಸ್ನೇಹ-ಸಂಬಂಧದ ಬಗ್ಗೆ ಚರ್ಚಿಸಲಿದ್ದಾರೆ.
ಈ ಹಿಂದೆ ಭಾರತ ಹಲವು ಜಾಗತಿಕ ಸಮಾವೇಶಗಳನ್ನು ಆಯೋಜಿಸಿದ್ದರೂ, ಈಗಿನ ಜಿ-20 ಶೃಂಗಸಭೆಯೊಂದಿಗೆ ಅವುಗಳನ್ನು ಹೋಲಿಸಲು ಸಾಧ್ಯವೇ ಇಲ್ಲ. ಜಾಗತಿಕ ಭಯೋತ್ಪಾದನೆ ಸವಾಲು, ಯೂಕ್ರೇನ್-ರಷ್ಯಾ ಯುದ್ಧದಿಂದುಂಟಾಗಿರುವ ಸಮಸ್ಯೆ -ಸವಾಲುಗಳ ಮಧ್ಯೆ, ಪ್ರಧಾನಿ ಮೋದಿ ನೇತೃತ್ವದಲ್ಲಿ ವಿಶ್ವ ಗುರುವಿನ ಸಂದೇಶ ರವಾನಿಸಲು ಯತ್ನಿಸುತ್ತಿರುವ ಭಾರತ, ಬಹುದೊಡ್ಡ, ಬಹುನಿರೀಕ್ಷಿತ ಜಿ-20 ಸಭೆಯನ್ನು ಆಯೋಜಿಸುತ್ತಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೈರಾಗುತ್ತಿದ್ದರೂ, ಅಮೆರಿಕದೊಂದಿಗೆ ಹೆಚ್ಚುತ್ತಿರುವ ಒಡನಾಟದ ಮಧ್ಯೆ ‘ಎಲ್ಲರನ್ನೊಳಗೊಂಡ ಅಭಿವೃದ್ಧಿ’ ಮಂತ್ರ ಜಪಿಸುತ್ತಾ ಸಭೆಗೆ ಸಂಪೂರ್ಣವಾಗಿ ಸಿದ್ಧಗೊಂಡಿದೆ.
ಚೀನಾ ಮತ್ತು ರಷ್ಯಾ ದೇಶಗಳ ಮುಖ್ಯ ನಾಯಕರಿಲ್ಲದಿದ್ದರೂ, ಆ ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿರುವುದರಿಂದ ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಎಲ್ಲಾ ಶಾಶ್ವತ ಪ್ರತಿನಿಧಿಗಳು ಭಾರತಕ್ಕೆ ಬಂದಂತಾಗಿದೆ. 1956ರಲ್ಲಿ ಯುನೆಸ್ಕೋ ಶೃಂಗಸಭೆ, 1982ಲ್ಲಿ ಏಷ್ಯನ್ ಗೇಮ್್ಸ, 1983ರಲ್ಲಿ ನಾಮ್ ಶೃಂಗಸಭೆ, 2010ರಲ್ಲಿ ಕಾಮನ್​ವೆಲ್ತ್ ಗೇಮ್್ಸ, 2015ರಲ್ಲಿ ಇಂಡಿಯಾ-ಆಫ್ರಿಕಾ ಶೃಂಗಸಭೆ ಸೇರಿದಂತೆ ಹಲವು ಜಾಗತಿಕ ಸಮಾವೇಶಗಳಿಗೆ ದೇಶ ಸಾಕ್ಷಿಯಾಗಿದೆ. ಆದರೆ, ಈ ಸಲದ ಜಿ-20 ಶೃಂಗಸಭೆ ಈ ಎಲ್ಲಾ ಸಭೆಗಳನ್ನು ಮೀರಿದ ಮಟ್ಟದಲ್ಲಿ ನಡೆಯುತ್ತಿರುವುದು ಭಾರತದ ಮಟ್ಟಿಗೆ ಹೆಮ್ಮೆಯ ವಿಷಯ ಎನ್ನುವುದು ಅತಿಶಯವೇನಲ್ಲ. ಜಾಗತಿಕ ನಕ್ಷೆಯಲ್ಲಿ ಭಾರತ ಬೆಳೆಯುತ್ತಾ, ಮುನ್ನಡೆಯುತ್ತಿರುವುದರ ಸಂಕೇತವಿದು.
ದೆಹಲಿಯ ಅತ್ಯದ್ಭುತ ಭಾರತ ಮಂಟಪದಲ್ಲಿ ಜಿ-20 ಶೃಂಗಸಭೆ ಆಯೋಜಿಸಲು ಸಂತೋಷವಾಗುತ್ತಿದೆ. ಇದು ಭಾರತ ಆಯೋಜಿಸುತ್ತಿರುವ ಮೊದಲ ಜಿ20 ಶೃಂಗಸಭೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ವಿಶ್ವ ನಾಯಕರೊಂದಿಗಿನ ಚರ್ಚೆಗಳನ್ನು ನಾನು ಎದುರು ನೋಡುತ್ತಿದ್ದೇನೆ.
| ನರೇಂದ್ರ ಮೋದಿ, ಪ್ರಧಾನಮಂತ್ರಿ
ವಸುಧೈವ ಕುಟುಂಬಕಂ ಎಂಬ ಧ್ಯೇಯವಾಕ್ಯದೊಂದಿಗೆ ಶೃಂಗಸಭೆ ನಡೆಸಲು ಭಾರತ ಮುಂದಾಗಿದ್ದು, ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಸಂದೇಶ ರವಾನಿಸಿದೆ. ಅಂದರೆ, ಮಾನವ, ಪ್ರಾಣಿ, ಸಸ್ಯ ಮತ್ತು ಸೂಕ್ಷ್ಮಜೀವಿಗಳು ಸೇರಿದಂತೆ ಜೀವಿಗಳ ಬದುಕಿನ ಮೌಲ್ಯವನ್ನು ತಿಳಿಸುವ ಜತೆಗೆ ಇಡೀ ವಿಶ್ವದಲ್ಲಿ ಅವುಗಳ ಪರಸ್ಪರ ಸಂಬಂಧದ ಮಹತ್ವ ಸಾರುವುದಾಗಿದೆ. ಇದಲ್ಲದೆ, ಪರಿಸರಕ್ಕಾಗಿ ಜೀವನಶೈಲಿ ಎಂಬ ವಸ್ತು-ವಿಷಯದ ಮೇಲೂ ಫೋಕಸ್ ಮಾಡಲಾಗಿದ್ದು, ಈ ಸಂಬಂಧ ವೈಯಕ್ತಿಕ ಜೀವನಶೈಲಿಯಲ್ಲಿನ ಜವಾಬ್ದಾರಿಯುತ ಆಯ್ಕೆಗಳೊಂದಿಗೆ ಮುಂದುವರಿದು, ತನ್ಮೂಲಕ ರಾಷ್ಟ್ರೀಯ ಅಭಿವೃದ್ಧಿಗೂ ಸಹಕಾರ ನೀಡುವ ಸಂದೇಶ ನೀಡಲಾಗಿದೆ. ಇದರಿಂದಾಗಿ ಸ್ವಚ್ಛತೆ, ಹಸಿರು ಪರಿಸರ ಹಾಗೂ ಭರವಸೆಯ ಭದ್ರ ಭವಿಷ್ಯ ಸಾಕಾರಗೊಳಿಸುವ ಮಂತ್ರ ಜಪಿಸಲಾಗಿದೆ.
1999ರಲ್ಲಿ ಪ್ರಾರಂಭಗೊಂಡ ಜಾಗತಿಕ ಅಂತರ್ ಸರ್ಕಾರಿ ವೇದಿಕೆಯಾದ ಜಿ-20 ಸಂಘಟನೆಯು 19 ರಾಷ್ಟ್ರಗಳು ಹಾಗೂ ಐರೋಪ್ಯ ಒಕ್ಕೂಟವನ್ನು ಒಳಗೊಂಡಿದೆ. ಜಾಗತಿಕ ಆರ್ಥಿಕತೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ದಿಕ್ಕಿನಲ್ಲಿ ಕೆಲಸ ಮಾಡುವ ಈ ಗುಂಪು, ಅಂತಾರಾಷ್ಟ್ರೀಯ ಹಣಕಾಸು ಸ್ಥಿರತೆ, ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಜಾಗತಿಕ ಸುಸ್ಥಿರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ವಿಶ್ವದ ಅತಿದೊಡ್ಡ ಅರ್ಥಿಕತೆಗಳನ್ನು ಹೊಂದಿರುವ ಜಿ-20, ಒಟ್ಟು ಜಾಗತಿಕ ಉತ್ಪನ್ನದ (ಜಿಡಬ್ಲ್ಯುಪಿ) ಶೇ. 75, ಎರಡನೇ ಮೂರರಷ್ಟು ಜಾಗತಿಕ ಜನಸಂಖ್ಯೆ ಮತ್ತು ವಿಶ್ವದ ಶೇ. 60ರಷ್ಟು ಭೂಭಾಗದ ಪಾಲನ್ನು ಹೊಂದಿದೆ. 1999ರಲ್ಲಿ ವಿಶ್ವದ ಆರ್ಥಿಕ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ಜಿ-20 ಹುಟ್ಟಿಕೊಂಡಿತು. 2008ರಿಂದ ಪ್ರತಿ ವರ್ಷ ಜಿ-20 ಶೃಂಗಸಭೆಗಳನ್ನು ಅಧ್ಯಕ್ಷ ರಾಷ್ಟ್ರಗಳಲ್ಲಿ ನಡೆಸಲಾಗುತ್ತಿದೆ. ಈ ಬಾರಿ ಭಾರತ ಅಧ್ಯಕ್ಷ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ ರಾಜಧಾನಿ ನವದೆಹಲಿಯಲ್ಲಿ ಇಡೀ ವಿಶ್ವದ ಗಮನಸೆಳೆಯುವ ಮಾದರಿಯಲ್ಲಿ ಶೃಂಗಸಭೆ ಆಯೋಜನೆ ಮಾಡಲಾಗಿದೆ. ಕಳೆದ ಬಾರಿ ಇಂಡೋನೇಷ್ಯಾದ ಬಾಲಿಯಲ್ಲಿ ಸಭೆ ನಡೆದಿತ್ತು. ಶೃಂಗಸಭೆಯಲ್ಲಿ ಸದಸ್ಯ ದೇಶದ ರಾಷ್ಟ್ರಪತಿ/ಪ್ರಧಾನಿ, ಹಣಕಾಸು ಸಚಿವರು ಅಥವಾ ವಿದೇಶಾಂಗ ಸಚಿವರು, ಇತರ ಉನ್ನತ ಶ್ರೇಣಿಯ ಅಧಿಕಾರಿಗಳು ಪಾಲ್ಗೊಳ್ಳುತ್ತಾರೆ. ಐರೋಪ್ಯ ಒಕ್ಕೂಟವನ್ನು ಯುರೋಪಿಯನ್ ಕಮಿಷನ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಪ್ರತಿನಿಧಿಸುತ್ತಾ ಬಂದಿದೆ.
ಸದಸ್ಯ ರಾಷ್ಟ್ರಗಳ ಜತೆಗೆ ಶೃಂಗಸಭೆಯಲ್ಲಿ ಭಾಗವಹಿ ಸಲು ಜಿ-20 ಅಧ್ಯಕ್ಷ ರಾಷ್ಟ್ರಕ್ಕೆ ಅತಿಥಿ ದೇಶಗಳನ್ನು ಆಹ್ವಾನಿಸುವ ಅಧಿಕಾರವಿರುತ್ತದೆ. ಭಾರತ ಈ ಬಾರಿ ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್​ಲೆಂಡ್, ನೈಜೀರಿಯಾ, ಓಮಾನ್, ಸಿಂಗಾಪುರ, ಸ್ಪೇನ್ ಮತ್ತು ಯುಎಇ ದೇಶಗಳನ್ನು ಅತಿಥಿಗಳನ್ನಾಗಿ ಆಹ್ವಾನಿಸಿದೆ. ಇದೇ ರೀತಿ, ಆಫ್ರಿಕನ್ ಯೂನಿಯನ್ , ಆಫ್ರಿಕನ್ ಯೂನಿಯನ್ ಡೆವಲಪ್​ವೆುಂಟ್ ಏಜೆನ್ಸಿ-ಆಫ್ರಿಕಾ ಅಭಿವೃದ್ಧಿಗಾಗಿ ಹೊಸ ಪಾಲುದಾರಿಕೆ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ಆಸಿಯಾನ್) ಅಧ್ಯಕ್ಷರನ್ನು ಕೂಡ ಆಹ್ವಾನಿಸಲಾಗಿದೆ.
ಭಾರತದ ಯುಪಿಐ ಪಾವತಿ ವ್ಯವಸ್ಥೆ, ಟಿಲಿಮೆಡಿಸಿನ್ ವ್ಯವಸ್ಥೆ ಒದಗಿಸುವ ಇ-ಸಂಜೀವಿನಿ, ಭಾಷೆಗಳನ್ನು ಅನಾವರಣಗೊಳಿಸುವ ಕೃತಕ ಬುದ್ಧಿಮತ್ತೆ ಆಧಾರಿತ ಭಾಷಿಣಿ, ಆಧಾರ್, ಡಿಜಿಲಾಕರ್, ದೀಕ್ಷಾ ಪೋರ್ಟಲ್ ಒಳಗೊಂಡು ಭಾರತದ ಡಿಜಿಟಲ್ ಕ್ಷೇತ್ರದ ಸಾಧನೆಗಳನ್ನು ಭಾರತ ಮಂಟಪದಲ್ಲಿ ಪ್ರದರ್ಶಿಸಲಾಗುತ್ತಿದ್ದು, ಜಿ-20 ಗಣ್ಯರಿಗೂ ಇದನ್ನು ಪರಿಚಯಿಸಲಾಗುತ್ತಿದೆ. ಭವನ 4 ಮತ್ತು 14ರಲ್ಲಿ ಈ ಪ್ರದರ್ಶನ ವೇರ್ಪಡಿಸಲಾಗಿದ್ದು, ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಡಿಜಿಟಲೀಕರಣ ಮಾಡಿರುವ ಕ್ರಾಂತಿಯನ್ನು ಇದು ಬಿಂಬಿಸುತ್ತಿದೆ. ಭಾರತದ ಡಿಜಿಟಲ್ ಇಂಡಿಯಾ ಅನುಭವ ನೀಡುವ ಸ್ಥಳ ಶೃಂಗಸಭೆಯ ವಿಶೇಷ ಆಕರ್ಷಣೆ ಕೇಂದ್ರವಾಗಿದ್ದು, ವಿಶ್ವ ನಾಯಕರ ಗಮನಸೆಳೆಯುವ ನಿರೀಕ್ಷೆಯಿದೆ ಎಂದು ಜಿ-20 ಮುಖ್ಯ ಸಂಯೋಜಕ ಹರ್ಷವರ್ಧನ್ ಶೃಂಗ್ಲಾ ಹೇಳಿದ್ದಾರೆ. ಇಲ್ಲಿ ಪ್ರದರ್ಶಿಸಲಾಗಿರುವ ಇ-ಸಂಜೀವನಿ ಪೋರ್ಟಲ್ ಮೂಲಕ ಯಾರು ಬೇಕಾದರೂ ಸರ್ಕಾರಿ ವೈದ್ಯರನ್ನು ಸಂರ್ಪಸಿ, ತಕ್ಷಣದ ಔಷಧಿ ಮತ್ತು ಸಲಹೆಗಳನ್ನು ಪಡೆಯಬಹುದಾಗಿದೆ. ‘2019ರಲ್ಲಿ ಆರಂಭಗೊಂಡ ಇ-ಸಂಜೀವಿನಿಗೆ ಕೋವಿಡ್ ಸಮಯದಲ್ಲಿ ದಿನಕ್ಕೆ 25 ಸಾವಿರ ಕರೆಗಳು ಬರುತ್ತಿದ್ದವು ಮತ್ತು ಅವರನ್ನು ನಾವು ವೈದ್ಯರೊಂದಿಗೆ ಸಂರ್ಪಸುತ್ತಿದ್ದೆವು. ಈಗ ದಿನಕ್ಕೆ ಕಡಿಮೆ ಎಂದರೆ 3000 ಮಂದಿ ಕರೆ ಮಾಡಿ ಆರೋಗ್ಯ ಸಂಬಂಧಿ ಸಲಹೆಗಳನ್ನು ಪಡೆದುಕೊಳ್ಳುತ್ತಾರೆ’ ಎಂದು ಪ್ರದರ್ಶನ ವೇದಿಕೆಯ ಸಿಬ್ಬಂದಿ ರಾಜೇಶ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ಜಿ-20 ಅಧ್ಯಕ್ಷ ರಾಷ್ಟ್ರವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಜಿ-20 ವಿಚಾರವನ್ನು ಕೇವಲ ರಾಜಧಾನಿಗೆ ಸೀಮಿತ ಮಾಡಲಿಲ್ಲ. ದೇಶದ ಪ್ರಮುಖ ನಗರಗಳು ಹಾಗೂ ಪಟ್ಟಣಗಳಲ್ಲಿ ಸಮ್ಮೇಳನಗಳನ್ನು ನಡೆಸುವ ಮೂಲಕ ದೇಶದ ಹಳ್ಳಿಗಾಡಿಗೂ ಜಿ-20 ಮಹತ್ವದ ಕುರಿತು ಸಂದೇಶ ಕಳುಹಿಸಿಕೊಡುವ ಯತ್ನ ನಡೆದಿದೆ. ಬಹುಶಃ ಬೇರೆ ಯಾವ ದೇಶ ಕೂಡ ಜಿ-20ಯ ಉಪಸಭೆಗಳನ್ನು ಇಷ್ಟೊಂದು ಸಂಖ್ಯೆಯಲ್ಲಿ ನಡೆಸಿದ ಉದಾಹರಣೆ ಇಲ್ಲ. ಅಷ್ಟರಮಟ್ಟಿಗೆ ಭಾರತ ವಿಶ್ವದ ಗಮನ ಸೆಳೆಯುವ ರೀತಿಯಲ್ಲಿ ಯಶಸ್ವಿಯಾಗಿದೆ. ಇಂಡೋನೇಷ್ಯಾ ಇದೇ ಮಾದರಿಯಲ್ಲಿ ಸಭೆಗಳನ್ನು ನಡೆಸಲು ಮುಂದಾಗಿ ಅಂದಾಜು 25 ಸಭೆಗಳನ್ನು ನಡೆಸಿತ್ತು. ಆದರೆ, ಭಾರತವು ಇಂಡೋನೇಷ್ಯಾಕ್ಕಿಂತ ಹಲವು ಹೆಜ್ಜೆಗಳಷ್ಟು ಮುಂದೆ ಹೋಗಿ, ದೇಶದ 50 ಸ್ಥಳಗಳಲ್ಲಿ 200ಕ್ಕಿಂತಲೂ ಹೆಚ್ಚು ಸಭೆಗಳನ್ನು ನಡೆಸಿದೆ. ಕರ್ನಾಟಕದ ಹಂಪಿಯಲ್ಲೂ ಜಿ-20 ಸಭೆ ನಡೆದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕೆಲ ವಿಶ್ಲೇಷಕರು ಮೋದಿ ಸರ್ಕಾರದ ಈ ಕ್ರಮವನ್ನು ಲೋಕಸಭೆ ಚುನಾವಣೆ ಮುನ್ನ ರಾಜಕೀಯ ಲಾಭ ಗಳಿಸುವ ತಂತ್ರಗಾರಿಕೆ ಎಂದು ವ್ಯಾಖ್ಯಾನಿಸಿದ್ದರೂ, ಈ ಸಭೆಗಳು ದೇಶದ ನಗರ, ಗ್ರಾಮಗಳಲ್ಲಿ ಜಿ-20 ಅಧ್ಯಕ್ಷತೆ ಬಗ್ಗೆ ಚರ್ಚೆಗಳು ನಡೆಯುವಂತೆ ಮಾಡಿದ್ದಂತೂ ಹೌದು.
ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಶುಕ್ರವಾರ ಭಾರತ ಮತ್ತು ಅಮೆರಿಕ ನಡುವಿನ ನಿಕಟ ಮತ್ತು ನಿರಂತರ ಪಾಲುದಾರಿಕೆಯನ್ನು ಪುನರುಚ್ಚರಿಸಿದ್ದಾರೆ. ನವದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿ ಸಂಜೆ 7 ಗಂಟೆಗೆ ಉಭಯ ನಾಯಕರ ನಡುವಿನ ದ್ವಿಪಕ್ಷೀಯ ಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಬೈಡನ್ ಅವರು, ಪರಸ್ಪರ ನಂಬಿಕೆ ಮತ್ತು ತಿಳಿವಳಿಕೆಯ ಆಧಾರದ ಮೇಲೆ ಬಹುಮುಖಿ ಜಾಗತಿಕ ಕಾರ್ಯಸೂಚಿಯ ಎಲ್ಲಾ ಆಯಾಮಗಳಲ್ಲಿ ಕಾರ್ಯತಂತ್ರದ ಪಾಲುದಾರಿಕೆ ಕೆಲಸವನ್ನು ಮುಂದುರಿಸಲು ತಮ್ಮ ಸರ್ಕಾರಗಳಿಗೆ ಕರೆ ನೀಡಿದರು. ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಬಹುತ್ವ ಮತ್ತು ಎಲ್ಲಾ ನಾಗರಿಕರಿಗೆ ಸಮಾನ ಅವಕಾಶಗಳ ಹಂಚಿಕೆಯ ಮೌಲ್ಯಗಳು ನಮ್ಮ ದೇಶಗಳ ಯಶಸ್ಸಿಗೆ ನಿರ್ಣಾಯಕವಾಗಿವೆ. ಈ ಮೌಲ್ಯಗಳು ನಮ್ಮ ಸಂಬಂಧವನ್ನು ಬಲಪಡಿಸುತ್ತವೆ ಎಂದು ಉಭಯ ನಾಯಕರು ಪ್ರತಿಪಾದಿಸಿದರು.
ನವದೆಹಲಿ:ಮಾನವ ಕೇಂದ್ರಿತ ಮತ್ತು ಎಲ್ಲರನ್ನೊಳಗೊಳ್ಳುವ ಅಭಿವೃದ್ಧಿಗೆ ಸಂಬಂಧಿಸಿ ಜಿ-20 ಶೃಂಗಸಭೆ ಹೊಸ ಮಾರ್ಗವನ್ನು ರೂಪಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಅಧ್ಯಕ್ಷತೆಯು ಎಲ್ಲರನ್ನೊಳಾಗೊಂಡ, ಮಹತ್ವಾಕಾಂಕ್ಷೆಯ, ನಿರ್ಣಾಯಕ ಮತ್ತು ಕಾರ್ಯಾಧರಿತವಾಗಿದ್ದು, ಜಾಗತಿಕ ದಕ್ಷಿಣ ದೇಶಗಳ ಅಭಿವೃದ್ಧಿಯ ಕಾಳಜಿಗಳು ಇಲ್ಲಿ ಸಕ್ರಿಯವಾಗಿ ಧ್ವನಿಸಿವೆ ಎಂದಿರುವ ಪ್ರಧಾನಿ, ಹಿಂದುಳಿದವರ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸುವ ಮಹಾತ್ಮ ಗಾಂಧೀಜಿಯವರ ಧ್ಯೇಯವನ್ನು ಅನುಕರಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದಾರೆ. ಪ್ರಗತಿಯನ್ನು ಹೆಚ್ಚಿಸುವ ಮಾನವ ಕೇಂದ್ರಿತ ಮಾರ್ಗಕ್ಕೆ ಭಾರತ ಹೆಚ್ಚಿನ ಒತ್ತು ನೀಡುತ್ತದೆ ಎಂದು ಹೇಳಿದ್ದಾರೆ. ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ ಕುರಿತ ಅಧಿವೇಶನಗಳ ಅಧ್ಯಕ್ಷತೆ ವಹಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಪ್ರಬಲ, ಸುಸ್ಥಿರ, ಎಲ್ಲರನ್ನೊಳಗೊಂಡ ಸಮತೋಲಿತ ಬೆಳವಣಿಗೆಯನ್ನು ಮುಂದುವರಿಸುವುದು ಸೇರಿ ವಿಶ್ವ ಸಮುದಾಯದ ಮುಂದಿರುವ ಜ್ವಲಂತ ವಿಷಯಗಳ ಬಗ್ಗೆ ಸಭೆಯಲ್ಲಿ ರ್ಚಚಿಸಲಾಗುವುದು. ಸ್ನೇಹ ಮತ್ತು ಸಹಕಾರದ ಬಾಂಧವ್ಯವನ್ನು ಇನ್ನಷ್ಟು ಗಾಢಗೊಳಿಸಲು ಹಲವು ನಾಯಕರು ಮತ್ತು ನಿಯೋಗದ ಮುಖ್ಯಸ್ಥರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ಬಗ್ಗೆ ತಿಳಿಸಿದ್ದಾರೆ. ವಿಶ್ವ ನಾಯಕರು ಸೆಪ್ಟೆಂಬರ್ 10ರಂದು ರಾಜ್​ಘಾಟ್​ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಲಿದ್ದಾರೆ.
ನವದೆಹಲಿ:ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶನಿವಾರ (ಸೆ. 9) ಸಂಜೆ ರಾಷ್ಟ್ರಪತಿ ಕಚೇರಿಯಲ್ಲಿ ಆಯೋಜಿಸಿರುವ ಜಿ20 ರಾಷ್ಟ್ರಗಳ ಮುಖ್ಯಸ್ಥರೊಂದಿಗಿನ ಔತಣಕೂಟಕ್ಕೆ ಆಹ್ವಾನ ನೀಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಸಂಪುಟ ದರ್ಜೆ ಸಚಿವ ಶ್ರೇಣಿ ಹೊಂದಿರುವ ಜತೆಗೆ ದೇಶದ ದೊಡ್ಡ ವಿರೋಧ ಪಕ್ಷದ ಅಧ್ಯಕ್ಷರೂ ಆಗಿದ್ದಾರೆ. ಆದರೆ, ಇತರೆ ರಾಜಕೀಯ ಪಕ್ಷಗಳ ಮುಖಂಡರಿಗೆ ಆಹ್ವಾನ ನೀಡಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡದಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಎಲ್ಲ ಕ್ಯಾಬಿನೆಟ್ ಸಚಿವರು, ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಚಿವರುಗಳಿಗೆ ಡಿನ್ನರ್ ಪಾರ್ಟಿಗೆ ಆಹ್ವಾನ ನೀಡಲಾಗಿದೆ. ಅಲ್ಲದೆ, ಎಲ್ಲ ರಾಜ್ಯ ಸರ್ಕಾರಗಳ ಕಾರ್ಯದರ್ಶಿಗಳಿಗೂ ಆಹ್ವಾನ ನೀಡಿರುವ ಬಗ್ಗೆ ಅತಿಥಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಮಾಜಿ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ ಮತ್ತು ಎಚ್.ಡಿ. ದೇವೇಗೌಡ ಅವರಿಗೂ ಆಹ್ವಾನ ನೀಡಲಾಗಿದೆ. ಬಿಹಾರ ಸಿಎಂ ನಿತೀಶ್ ಕುಮಾರ್, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಾಗವತ್ ಮಾನ್ ಸೇರಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಖಚಿತಪಡಿಸಿದ್ದಾರೆ. ಡಿನ್ನರ್ ಪಾರ್ಟಿಗೆ ಆಗಮಿಸುವ ಗಣ್ಯರನ್ನು ರಾಜಭವನಕ್ಕೆ ಕರೆತರುವ ಸಲುವಾಗಿ ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿದೆ. ನವದೆಹಲಿಯ ಭಾರತ ಮಂಟಪಂನಲ್ಲಿ ಶನಿವಾರ ಮತ್ತು ಭಾನುವಾರ (ಸೆ.9-10) ಅಂತಾರಾಷ್ಟ್ರೀಯ ಮಟ್ಟದ 18ನೇ ಜಿ.20 ಶೃಂಗಸಭೆ ನಡೆಯುತ್ತಿದ್ದು, ಜಿ.20 ರಾಷ್ಟ್ರಗಳ ಮುಖ್ಯಸ್ಥರುಗಳು ಭಾಗವಹಿಸುತ್ತಾರೆ. ಎರಡು ದಿನದ ಸಭೆಯಲ್ಲಿ ಆರ್ಥಿಕತೆ, ವಿಜ್ಞಾನ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಆ ರಾಷ್ಟ್ರಗಳೊಂದಿಗೆ ಭಾರತ ಒಡಂಬಡಿಕೆ ಮಾಡಿಕೊಳ್ಳಲಿದೆ.
ಹೋಗಲ್ಲವೆಂದ ದೇವೇಗೌಡ:ಆರೋಗ್ಯ ಸಮಸ್ಯೆಯಿಂದಾಗಿ ಔತಣಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಹೇಳಿದ್ದಾರೆ. ಈ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದು, ಜಿ.20 ಶೃಂಗಸಭೆ ಯಶಸ್ವಿಯಾಗಲಿ ಎಂದು ಶುಭ ಹಾರೈಸುವುದಾಗಿ ದೇವೇಗೌಡರು ತಮ್ಮ ಟ್ವಿಟರ್ (ಎಕ್ಸ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನವದೆಹಲಿ:ಜಿ20 ಶೃಂಗಸಭೆ ಸಂದರ್ಭದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮತ್ತು ಭಾನುವಾರದ ನಡುವೆ ವಿಶ್ವ ನಾಯಕರೊಂದಿಗೆ 15ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಅವರು ಶುಕ್ರವಾರ ತಮ್ಮ ಅಧಿಕೃತ ನಿವಾಸದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸಿನಾ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮಾರಿಷಸ್ ನಾಯಕನೊಂದಿಗೂ ಅವರು ಸಭೆ ನಡೆಸಲಿದ್ದಾರೆ. ಶನಿವಾರ ಅವರು ಜಿ 20 ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜತೆಗೆ ಬ್ರಿಟನ್ ಪ್ರಧಾನಿ, ಜಪಾನ್, ಜರ್ಮನಿ ಮತ್ತು ಇಟಲಿ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಮೋದಿ ಅವರು ಭಾನುವಾರ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಕಾರ್ಯನಿಮಿತ್ತ ಭೋಜನವನ್ನು ಸವಿಯಲಿದ್ದಾರೆ. ಪ್ರಧಾನ ಮಂತ್ರಿಯವರು ಕೆನಡಾದ ಪ್ರಧಾನಿ ಜತೆಗೂ ಮಾತುಕತೆ ನಡೆಸಲಿದ್ದಾರೆ. ಇದಲ್ಲದೆ, ಕೊಮೊರೊಸ್, ಟರ್ಕಿ, ಯುಎಇ, ದಕ್ಷಿಣ ಕೊರಿಯಾ, ಐರೋಪ್ಯ ಒಕ್ಕೂಟ, ಬ್ರೆಜಿಲ್ ಮತ್ತು ನೈಜೀರಿಯಾ ನಾಯಕರೊಂದಿಗೆ ಕೂಡ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!

ಮಾಂಗಲ್ಯ ಕಟ್ಟಿಸಿಕೊಂಡಿದ್ದ ಕೊರಳಿಗೇ ಬಿತ್ತು ಉರುಳು; ಮದುವೆಯಾದ ಮೂರೇ ತಿಂಗಳಲ್ಲಿ ಬದುಕೇ ಮುಕ್ತಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 7 =
Remember me
