ಭಾರತೀಯ ಕ್ರೀಡಾ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ಅಮೋಘ ಸಾಧನೆ ಜಪಾನ್ ರಾಜಧಾನಿ ಟೋಕಿಯೊದಲ್ಲಿ ದಾಖಲಾಯಿತು. 7 ಪದಕ ಜಯಿಸುವ ಮೂಲಕ ಭಾರತ ಒಲಿಂಪಿಕ್ಸ್ ಆವೃತ್ತಿಯೊಂದರಲ್ಲಿ ಗರಿಷ್ಠ ಪದಕ ಗೆದ್ದ ಸಾಧನೆ ಮಾಡಿತು. 13 ವರ್ಷಗಳ ಬಳಿಕ ಭಾರತಕ್ಕೆ ಒಲಿಂಪಿಕ್ಸ್ ಪದಕ, ವೈಯಕ್ತಿಕ ವಿಭಾಗದಲ್ಲಿ 2ನೇ ಸ್ವರ್ಣ ಮತ್ತು ಅಥ್ಲೆಟಿಕ್ಸ್​ನಲ್ಲಿ ಪದಕ ಮತ್ತು ಚಿನ್ನ ಗೆದ್ದ ಮೊದಲ ಭಾರತೀಯನೆಂಬ ಇತಿಹಾಸವನ್ನು ಹರಿಯಾಣದ ಜಾವೆಲಿನ್ ಥ್ರೋಪಟು ನೀರಜ್ ಚೋಪ್ರಾ ಮಾಡಿದರು. ಮೀರಾಬಾಯಿ ಚಾನು ವೇಟ್​ಲಿಫ್ಟಿಂಗ್​ನಲ್ಲಿ ಬೆಳ್ಳಿ ಗೆದ್ದು ಭಾರತದ ಪದಕ ಬೇಟೆಗೆ ಮೊದಲ ದಿನವೇ ಚಾಲನೆ ನೀಡಿದ್ದರು. ಕುಸ್ತಿಯಲ್ಲಿ ರವಿ ಕುಮಾರ್ ದಹಿಯಾ ರಜತ ಗೆದ್ದರು. ಬ್ಯಾಡ್ಮಿಂಟನ್​ನಲ್ಲಿ ಪಿವಿ ಸಿಂಧು, ಕುಸ್ತಿಯಲ್ಲಿ ಭಜರಂಗ್ ಪೂನಿಯಾ, ಬಾಕ್ಸಿಂಗ್​ನಲ್ಲಿ ಲವ್ಲಿನಾ ಬೋಗೋಹೈನ್ ಮತ್ತು ಪುರುಷರ ಹಾಕಿ ತಂಡ ಕಂಚಿನ ಸಾಧನೆ ತೋರಿತು. ಹಾಕಿಯಲ್ಲಿ 41 ವರ್ಷಗಳ ಬಳಿಕ ಪದಕ ಒಲಿಯುವುದರೊಂದಿಗೆ ಗತವೈಭವ ಮರಳಿತು. ಸಿಂಧು 2 ಪದಕ ಗೆದ್ದ ಭಾರತದ ಮೊದಲ ಮಹಿಳೆ ಎನಿಸಿದರು. ಮಹಿಳಾ ಹಾಕಿ ತಂಡ ಸ್ವಲ್ಪದರಲ್ಲಿ ಪದಕವಂಚಿತವಾದರೆ, ಗಾಲ್ಪ್​ನಲ್ಲಿ ಕನ್ನಡತಿ ಅದಿತಿ ಅಶೋಕ್ 4ನೇ ಸ್ಥಾನಕ್ಕೆ ತೃಪ್ತಿಪಟ್ಟರೂ ಹೃದಯ ಗೆದ್ದರು.
ಗಂಗೂಲಿಗೆ ಕೈಕೊಟ್ಟ ಆರೋಗ್ಯ:ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವರ್ಷಾರಂಭದಲ್ಲಿ ಹೃದಯಾಘಾತಕ್ಕೀಡಾಗಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಪಡೆದರು. ವರ್ಷಾಂತ್ಯ ದಲ್ಲಿ ಅವರಿಗೆ ಕರೊನಾ ಸೋಂಕು ಕಾಡಿತು.
ಟೀಮ್ ಇಂಡಿಯಾಗೆ ಹೊಸ ಕೋಚ್, ನಾಯಕ:ಟೀಮ್ ಇಂಡಿಯಾ ಕೋಚ್, ನಾಯಕತ್ವ ಬದಲಾವಣೆ ಕಂಡಿತು. ರವಿಶಾಸ್ತ್ರಿ ಅವಧಿ ಮುಗಿದ ಬೆನ್ನಲ್ಲೇ ದಿಗ್ಗಜ ರಾಹುಲ್ ದ್ರಾವಿಡ್ ಹೊಸ ಕೋಚ್ ಆಗಿ ತಂಡ ಕೂಡಿಕೊಂಡರೆ, ಕೊಹ್ಲಿ ಟಿ20 ವಿಶ್ವಕಪ್ ಬೆನ್ನಲ್ಲೇ ಚುಟುಕು ಕ್ರಿಕೆಟ್ ನಾಯಕತ್ವ ತ್ಯಜಿಸಿದರು. ಹೀಗಾಗಿ ಬಿಸಿಸಿಐ, ಟಿ20 ಜತೆಗೆ ಏಕದಿನ ತಂಡಕ್ಕೂ ರೋಹಿತ್ ಶರ್ಮ ಅವರನ್ನೇ ನಾಯಕರನ್ನಾಗಿ ನೇಮಿಸಿತು. ಕನ್ನಡಿಗ ಕೆಎಲ್ ರಾಹುಲ್ ಉಪನಾಯಕರಾಗಿ ಬಡ್ತಿ ಪಡೆದರು. ಟಿ20 ವಿಶ್ವಕಪ್​ಗೆ ಮಾಜಿ ನಾಯಕ ಎಂಎಸ್ ಧೋನಿ ಮೆಂಟರ್ ಆಗಿ ಬಂದರೂ ಯಶಸ್ಸು ಕಾಣಲಿಲ್ಲ.
ಕೊಹ್ಲಿಗೆ ಕೆಟ್ಟ ವರ್ಷ:ಆಸೀಸ್ ಪ್ರವಾಸದಿಂದ ಪಿತೃತ್ವ ರಜೆ ಮೇರೆಗೆ ವಾಪಸ್ ಆದ ವಿರಾಟ್ ಕೊಹ್ಲಿ ವರ್ಷಾರಂಭದಲ್ಲೇ ಹೆಣ್ಣು ಮಗುವಿನ ತಂದೆಯಾಗಿ ಸಿಹಿ ಸುದ್ದಿ ಪಡೆದರು. ಕ್ರಿಕೆಟ್ ಮೈದಾನದಲ್ಲಿ ಈ ವರ್ಷ ಅವರ ಪಾಲಿಗೆ ಶುಭದಾಯಕವಾಗಲಿಲ್ಲ. ಕಾರ್ಯದೊತ್ತಡ ತಗ್ಗಿಸಲು ಅವರು ಟಿ20 ನಾಯಕತ್ವ ತ್ಯಜಿಸಿದರೆ, ಬಿಸಿಸಿಐ ಏಕದಿನ ನಾಯಕತ್ವ ದಿಂದಲೂ ಕೆಳಗಿಳಿಸಿತು. ಈ ನಡುವೆ ಆರ್​ಸಿಬಿ ನಾಯಕತ್ವಕ್ಕೂ ಗುಡ್​ಬೈ ಹೇಳಿದರು. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್ ಫೈನಲ್, ಟಿ20 ವಿಶ್ವಕಪ್​ನಲ್ಲೂ ನಿರಾಸೆ ಕಂಡರು. ಇನ್ನು ಸತತ 2ನೇ ವರ್ಷವೂ ಶತಕ ಒಲಿಯಲಿಲ್ಲ.
ಕೊಹ್ಲಿ-ಗಂಗೂಲಿ ಜಟಾಪಟಿ:ಸೀಮಿತ ಓವರ್ ನಾಯಕತ್ವ ಬದಲಾವಣೆಯ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಹೇಳಿಕೆ-ಪ್ರತಿಹೇಳಿಕೆಗಳು ವಿವಾದಕ್ಕೀಡಾದವು. ಟಿ20 ನಾಯಕತ್ವ ತ್ಯಜಿಸದಂತೆ ಕೊಹ್ಲಿಗೆ ಕೇಳಿಕೊಂಡಿದ್ದೆವು ಎಂದು ಗಂಗೂಲಿ ಹೇಳಿದರೆ, ನನಗೆ ಯಾರೂ ಮನವಿ ಮಾಡಿರಲಿಲ್ಲ. ಏಕದಿನ ನಾಯಕತ್ವ ವಜಾ ಕೂಡ ಗೊತ್ತಿರಲಿಲ್ಲ ಎಂದು ಕೊಹ್ಲಿ ತಿರುಗೇಟು ನೀಡಿದ್ದರು.
ಅಜಾಜ್ ಪಟೇಲ್ ಪರ್ಫೆಕ್ಟ್ 10:ಭಾರತ ಮೂಲದ ನ್ಯೂಜಿಲೆಂಡ್ ಸ್ಪಿನ್ನರ್ ಅಜಾಜ್ ಪಟೇಲ್ ಟೆಸ್ಟ್ ಇತಿಹಾಸದಲ್ಲಿ ಇನಿಂಗ್ಸ್ ಒಂದರ ಎಲ್ಲ 10 ವಿಕೆಟ್ ಕಬಳಿಸಿದ 3ನೇ ಬೌಲರ್ ಎನಿಸಿದರು. ಭಾರತ ವಿರುದ್ಧದ ಮುಂಬೈ ಟೆಸ್ಟ್​ನ ಮೊದಲ ಇನಿಂಗ್ಸ್ ನಲ್ಲಿ ಅವರು ಈ ಸಾಧನೆ ತೋರಿದರು.
ಸೆರೆಮನೆ ಪಾಲಾದ ಸುಶೀಲ್:ಅವಳಿ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಯುವ ಪೈಲ್ವಾನ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಪಾಲಾದರು.
ಮೆಸ್ಸಿಗೆ ಕೊನೆಗೂ ಕಪ್:ಕೋಪಾ ಅಮೆರಿಕ ಗೆಲುವಿನೊಂದಿಗೆ ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ ಪರ ಚೊಚ್ಚಲ ಪ್ರಶಸ್ತಿ ಗೆಲುವಿನ ಸಂಭ್ರಮ ಆಚರಿಸಿದರು. ಫೈನಲ್​ನಲ್ಲಿ ಬ್ರೆಜಿಲ್ ವಿರುದ್ಧ 1-0ಯಿಂದ ಅರ್ಜೆಂಟೀನಾ ಜಯಿಸಿತು.
ಪ್ಯಾರಾಲಿಂಪಿಕ್ಸ್​ನಲ್ಲಿ ಪರಾಕ್ರಮ:ಒಲಿಂಪಿಕ್ಸ್ ಬೆನ್ನಲ್ಲೇ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲೂ ಭಾರತ ಭರ್ಜರಿ ನಿರ್ವಹಣೆ ತೋರಿತು. ದಾಖಲೆಯ 19 ಪದಕ ಗೆಲ್ಲುವ ಮೂಲಕ ಅಂಗವಿಕಲ ಕ್ರೀಡಾಪಟುಗಳು ಇತಿಹಾಸ ಬರೆದರು. ಐವರು ಚಿನ್ನ ಗೆದ್ದರೆ, ಕನ್ನಡಿಗ ಸುಹಾಸ್ ಯತಿರಾಜ್ ಸಹಿತ 8 ಮಂದಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. 6 ಕಂಚಿನ ಪದಕ ಒಲಿಯಿತು.
ಟೀಮ್ ಇಂಡಿಯಾ ವರ್ಷಾರಂಭದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಸತತ 2ನೇ ಬಾರಿ ಐತಿಹಾಸಿಕ ಟೆಸ್ಟ್ ಸರಣಿ ಜಯ ಸಾಧಿಸಿತು. ಕೊಹ್ಲಿ ಗೈರಿನಲ್ಲಿ ರಹಾನೆ ಸಾರಥ್ಯದ ಯುವ-ಅನುಭವಿ ತಂಡ ತಂಡ ಅಡಿಲೇಡ್ ಸೋಲಿನ ಬಳಿಕ ಪುಟಿದೆದ್ದಿತು. ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ತಿರುಗೇಟು ನೀಡಿ ಸಮಬಲ ಸಾಧಿಸಿದ್ದ ಭಾರತ, ಸಿಡ್ನಿಯಲ್ಲಿ ನಡೆದ ವರ್ಷದ ಮೊದಲ ಹಾಗೂ ಸರಣಿಯ 3ನೇ ಟೆಸ್ಟ್ ನಲ್ಲಿ ಸಾಹಸಿಕ ಡ್ರಾ ಸಾಧಿಸಿತು. ಬ್ರಿಸ್ಬೇನ್​ನಲ್ಲಿ ನಡೆದ 4ನೇ ಹಾಗೂ ನಿಣಾರ್ಯಕ ಟೆಸ್ಟ್​ನಲ್ಲಿ ರಿಷಭ್ ಪಂತ್ ಸಾಹಸದಿಂದ ಗೆದ್ದು, 2-1ರಿಂದ ವಶಪಡಿಸಿಕೊಂಡಿತು. ಬಳಿಕ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಕ್ರಮವಾಗಿ 3-1, 2-1 ಮತ್ತು 3-2ರಿಂದ ಟೆಸ್ಟ್ ಏಕದಿನ, ಟಿ20 ಸರಣಿ ಜಯಿಸಿತು. ಇಂಗ್ಲೆಂಡ್ ಪ್ರವಾಸದಲ್ಲಿ 5 ಪಂದ್ಯಗಳ ಸರಣಿಯ ಕೊನೇ ಟೆಸ್ಟ್ ಕರೊನಾದಿಂದ ಮುಂದೂಡಲ್ಪಟ್ಟಾಗ ಭಾರತ 2-1ರಿಂದ ಮುನ್ನಡೆ ಸಾಧಿಸಿ ಬೀಗಿತ್ತು. ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸೆಂಚುರಿಯನ್ ಟೆಸ್ಟ್ ಜಯಿಸಿತು.
ಐಪಿಎಲ್​ಗೆ ಕರೊನಾ ಕಾಟ:ಐಪಿಎಲ್ 14ನೇ ಆವೃತ್ತಿ ಭಾರತದಲ್ಲೇ ಆರಂಭಗೊಂಡರೂ, ಬಯೋಬಬಲ್​ನಲ್ಲೇ ಕರೊನಾ ಕಾಣಿಸಿಕೊಂಡ ಕಾರಣ ಮೊಟಕು ಗೊಂಡಿತು. 4 ತಿಂಗಳ ಬಳಿಕ ಮತ್ತೆ ಯುಎಇಯಲ್ಲೇ ಆಯೋಜನೆ ಗೊಂಡಿತು. ಧೋನಿ ಸಾರಥ್ಯದ ಚೆನ್ನೈ ಸೂಪರ್ಕಿಂಗ್ಸ್ ಫೈನಲ್​ನಲ್ಲಿ ಕೆಕೆಆರ್ ತಂಡವನ್ನು ಸೋಲಿಸಿ 4ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು.
53 ವರ್ಷ ಬಳಿಕ ಇಟಲಿಗೆ ಯುರೋ ಕಪ್:ಕೋವಿಡ್​ನಿಂದಾಗಿ ಒಂದು ವರ್ಷ ತಡವಾಗಿ ನಡೆದ ಪ್ರತಿಷ್ಠಿತ ಯುರೋ ಕಪ್ ಫುಟ್​ಬಾಲ್ ಟೂರ್ನಿಯ ಫೈನಲ್​ನಲ್ಲಿ ಇಟಲಿ ತಂಡ ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿ 53 ವರ್ಷಗಳ ಬಳಿಕ ಪ್ರಶಸ್ತಿ ಗೆದ್ದುಕೊಂಡಿತು. ಹಾಲಿ ಚಾಂಪಿಯನ್ ಪೋರ್ಚುಗಲ್, ವಿಶ್ವ ಚಾಂಪಿಯನ್ ಫ್ರಾನ್ಸ್ ನಿರಾಸೆ ಕಂಡವು.
ಟೆಸ್ಟ್-ಟಿ20 ವಿಶ್ವಕಪ್ ನಿರಾಸೆ:ಟೆಸ್ಟ್ ವಿಶ್ವಕಪ್ ಖ್ಯಾತಿಯ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ ಫೈನಲ್​ನಲ್ಲಿ ಫೇವರಿಟ್ ಆಗಿ ಕಣಕ್ಕಿಳಿದರೂ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್​ಗಳಿಂದ ಸೋಲುಂಡಿತು. ಕಿವೀಸ್​ಗೆ ಚೊಚ್ಚಲ ಕ್ರಿಕೆಟ್ ವಿಶ್ವ ಕಿರೀಟ ಒಲಿಯಿತು. ಬಳಿಕ ಭಾರತದಿಂದ ಯುಎಇಗೆ ಸ್ಥಳಾಂತರಗೊಂಡಿದ್ದ ಟಿ20 ವಿಶ್ವಕಪ್ ಕೂಡ ಟೀಮ್ ಇಂಡಿಯಾಗೆ ನಿರಾಶಾದಾಯಕವಾಯಿತು. ಪಾಕ್ ವಿರುದ್ಧ ಐಸಿಸಿ ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಸೋಲು ಕಂಡ ಭಾರತ ಸೆಮಿಫೈನಲ್​ಗೇರಲು ವಿಫಲವಾಯಿತು. ಆಸ್ಟ್ರೇಲಿಯಾ ಚೊಚ್ಚಲ ಟಿ20 ವಿಶ್ವಕಪ್ ಜಯಿಸಿತು.
ಅಗಲಿದ ಮಿಲ್ಖಾ, ಯಶ್ಪಾಲ್:ಹಾರುವ ಸಿಖ್ ಖ್ಯಾತಿಯ ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್ 91ನೇ ವಯಸ್ಸಿನಲ್ಲಿ ಕರೊನಾ ಸೋಂಕಿಗೆ ಬಲಿಯಾದರು. ಜೂನ್​ನಲ್ಲಿ ಪತ್ನಿ ನಿರ್ಮಲ್ ಕೌರ್ ತೀರಿಕೊಂಡ ಒಂದೇ ವಾರದಲ್ಲಿ ಮಿಲ್ಖಾ ಕೂಡ ನಿಧನರಾದರು. 1983ರ ವಿಶ್ವಕಪ್ ವಿಜೇತ ಯಶ್ಪಾಲ್ ಶರ್ಮ ಜುಲೈನಲ್ಲಿ ನಿಧನ ಹೊಂದಿದರು.
ಜೋಕೋಗೆ ತಪ್ಪಿದ ಗೋಲ್ಡನ್ ಸ್ಲಾಂ:ವರ್ಷದ ಮೊದಲ 3 ಗ್ರಾಂಡ್ ಸ್ಲಾಂಗಳಾದ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಜಯಿಸಿದ್ದ ವಿಶ್ವ ನಂ. 1 ಆಟಗಾರ ನೊವಾಕ್ ಜೋಕೊವಿಕ್, ಒಲಿಂಪಿಕ್ಸ್ ಸೆಮೀಸ್​ನಲ್ಲಿ ಮುಗ್ಗರಿಸಿ ಗೋಲ್ಡನ್ ಸ್ಲಾಂ ಅವಕಾಶ ತಪ್ಪಿಸಿಕೊಂಡರು. ಬಳಿಕ ವರ್ಷದ ಕಡೇ ಗ್ರಾಂಡ್ ಸ್ಲಾಂ ಯುಎಸ್ ಓಪನ್​ನಲ್ಲಿ ಫೈನಲ್​ನಲ್ಲಿ ಸೋತು ಕ್ಯಾಲೆಂಡರ್ ಸ್ಲಾಂನಿಂದಲೂ ವಂಚಿತರಾದರು.
ಭಜ್ಜಿ, ಎಬಿಡಿ, ಸ್ಟೈನ್ ಮಾಲಿಂಗ ವಿದಾಯ:ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್, ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ, ದಕ್ಷಿಣ ಆಫ್ರಿಕಾದ ಬ್ಯಾಟರ್ ಎಬಿ ಡಿವಿಲಿಯರ್ಸ್, ವೇಗಿ ಡೇಲ್ ಸ್ಟೈನ್ ಈ ವರ್ಷ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ಪ್ರಮುಖರು. ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೊ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಹೊಂದಿದರು. ದೇಶೀಯ ಕ್ರಿಕೆಟ್​ನಲ್ಲಿ ರಾಜ್ಯದ ವೇಗಿಗಳಾದ ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಆಲ್ರೌಂಡರ್ ಯೂಸುಫ್ ಪಠಾಣ್ ವಿದಾಯ ಹೇಳಿದ ಪ್ರಮುಖರು.
ಬರಹ:ಪ್ರಸಾದ್ ಶೆಟ್ಟಿಗಾರ್, ರಘುನಾಥ್ ಡಿ.ಪಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
