|ಮೃತ್ಯುಂಜಯ ಕಪಗಲ್ಬೆಂಗಳೂರು
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ‘ಕಾಂಪಿಟ್ ವಿತ್ ಚೀನಾ’ ಯೋಜನೆಯನ್ನು ಬಜೆಟ್​ನಲ್ಲಿ ಪ್ರಕಟಿಸಿದ್ದರು. ಇದಕ್ಕಾಗಿ ಒಂಬತ್ತು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡ ಸರ್ಕಾರ, ತಲಾ 2,000 ಕೋಟಿ ರೂ. ಹೂಡಿಕೆಗೆ ನಿರ್ಧರಿಸಿ, ಖಾಸಗಿಯಿಂದ ತಲಾ 3,000 ಕೋಟಿ ರೂ. ಬಂಡವಾಳ ಆಕರ್ಷಣೆ ನಿರೀಕ್ಷೆಯಿಟ್ಟುಕೊಂಡಿತ್ತು. ಈ ಯೋಜನೆಯಡಿ ಉತ್ಪಾದನಾ ಚಟುವಟಿಕೆಗಳನ್ನು ಹಳ್ಳಿಯಿಂದ ಜಿಲ್ಲಾಮಟ್ಟದವರೆ ವಿಸ್ತರಿಸಲು, ಅನುಷ್ಠಾನಕ್ಕೆ ತರಲೆಂದು ಪ್ರತಿ ಕ್ಲಸ್ಟರ್​ಗೆ ವಿಷನ್ ಗ್ರೂಪ್​ಗಳನ್ನು ರಚಿಸಿ, ಇವುಗಳು ಸಲ್ಲಿಸುವ ವರದಿ ಆಧರಿಸಿ ಕ್ರಮವಹಿಸಲು ಸರ್ಕಾರ ಮುಂದಾಗಿ, ನೋಡಲ್ ಅಧಿಕಾರಿಗಳನ್ನು ನೇಮಿಸಿತ್ತು.
ಇದೀಗ ಕೊಪ್ಪಳ ಕ್ಲಸ್ಟರ್ ಹೊರತುಪಡಿಸಿ ಉಳಿದ ವಲಯಗಳು ನಿರೀಕ್ಷಿತ ಒಲವು ಗಿಟ್ಟಿಸಿಕೊಂಡಿಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿ ‘ಮೇಕ್ ಇನ್ ಇಂಡಿಯಾ’ ಮೂಲಕ ಸ್ಥಳೀಯತೆಗೆ ಒತ್ತು ನೀಡಿರುವ ಕಾರಣ ಮುಂದಿನ ದಿನಗಳಲ್ಲಿ ಈ ಪರಿಕಲ್ಪನೆ ಕ್ಲಿಕ್ ಆಗಬಹುದು ಎಂಬ ವಿಶ್ವಾಸವನ್ನು ಇಲಾಖೆ ಮೂಲಗಳು ವ್ಯಕ್ತಪಡಿಸಿವೆ. ಗ್ರಾಮದಿಂದ ರಾಜಧಾನಿವರೆಗೆ ಬಹು ಉದ್ದೇಶಿತ ಉದ್ಯಮ ವಿಸ್ತರಣೆ, ಸ್ಥಳೀಯ ಸಂಪನ್ಮೂಲಗಳ ಬಳಕೆ, ಸ್ವದೇಶಿ ತತ್ವಕ್ಕೆ ಆದ್ಯತೆ, ಕೌಶಲ ವೃದ್ಧಿ ಹತ್ತಾರು ಆಯಾಮಗಳನ್ನು ಪಡೆದಿದ್ದು, ಉದ್ಯಮಸ್ನೇಹಿ ವಾತಾವರಣ ಕ್ರಮೇಣ ನೆರವಿಗೆ ಬರಬಹುದು ಎಂದು ಅಂದಾಜಿಸಲಾಗಿದೆ.
ಬದಲಾವಣೆ ಪ್ರಸ್ತಾವನೆ:ಬಂಡವಾಳ ಆಕರ್ಷಿಸಲು ಬಹುಪಾಲು ವಲಯಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಹಾಸನ ಮತ್ತು ತುಮಕೂರು ಕ್ಲಸ್ಟರ್​ನ್ನು ಸರ್ಕಾರ ಕೈಬಿಟ್ಟಿದೆ. ಧಾರವಾಡ ಮತ್ತು ಶಿವಮೊಗ್ಗವನ್ನು ಆಯ್ಕೆ ಮಾಡಲೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಶಿವಮೊಗ್ಗದಲ್ಲಿ ಆರೋಗ್ಯ, ಬಯೋಫಾರ್ವ ಮತ್ತು ಕ್ಷೇಮ ಕೇಂದ್ರ ಹಾಗೂ ಧಾರವಾಡದಲ್ಲಿ ಗೃಹೋಪಯೋಗಿ ಗ್ರಾಹಕ ಸರಕು ಉತ್ಪಾದನಾ ವಲಯ ಸ್ಥಾಪಿಸುವ ಚಿಂತನೆಯಿದೆ. ಹಾಗೆಯೇ ಬಳ್ಳಾರಿ ಜವಳಿ ಪಾರ್ಕ್​ಗೆ ಹೂಡಿಕೆದಾರರು ಮುಂದೆ ಬಾರದ ಕಾರಣ ಚಾಮರಾಜನಗರಕ್ಕೆ ಶಿಫ್ಟ್ ಮಾಡಲು ಯೋಚಿಸಿದೆ. ಮೈಸೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಕಲಬುರಗಿ ಕ್ಲಸ್ಟರ್​ಗಳನ್ನು ಐಟಿ-ಬಿಟಿ ಇಲಾಖೆ ಸುಪರ್ದಿಗೆ ಒಪ್ಪಿಸಲಾಗಿದೆ. ಕೊಪ್ಪಳ, ಶಿವಮೊಗ್ಗ, ಧಾರವಾಡ ಮತ್ತು ಚಾಮರಾಜನಗರದತ್ತ ಕೆಲ ಉದ್ಯಮಿಗಳು ಮತ್ತು ಹೂಡಿಕೆದಾರರು ಆಸಕ್ತಿ ತೋರಿಸಿದ್ದು, ಮಾತುಕತೆ ನಡೆಯುತ್ತಿದೆ. ಕ್ಲಸ್ಟರ್ ಆಧಾರಿತ ಅಭಿವೃದ್ಧಿಗೆ ಖಾಸಗಿ ಬಂಡವಾಳ ಮಾತ್ರವಲ್ಲ, ಸರ್ಕಾರದಿಂದಲೂ ಸಹಾಯಧನ ಸಿಗಲಿದೆ ಎಂದು ಮೂಲಗಳು ಹೇಳಿವೆ.
ಸಮಗ್ರ ಅಭಿವೃದ್ಧಿಗೆ ಕ್ರಮ:‘ಒಂದು ಜಿಲ್ಲೆ-ಒಂದು ಉತ್ಪನ್ನ’ ಪರಿಕಲ್ಪನೆ ಸಫಲತೆ ಜತೆಗೆ ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪ್ರತಿ ತಾಲೂಕಿನಲ್ಲಿ ಶಾಶ್ವತ ಹೆಲಿಪ್ಯಾಡ್, 100 ಕಿ.ಮೀ.ಗೊಂದು ವಿಮಾನ ನಿಲ್ದಾಣ ನಿರ್ವಿುಸುವ ಚಿಂತನೆಯಿದೆ. ಶಿವಮೊಗ್ಗ, ವಿಜಯಪುರದಲ್ಲಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಹಾಸನಕ್ಕೂ ಚಾಲನೆ ನೀಡಲಾಗಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ಬಳಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣ ಪ್ರಸ್ತಾವನೆ ಸಿದ್ಧವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಹೆಸರು ಬದಲಾವಣೆ, ಚಾಲನೆ:ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವಿದ್ದಾಗ ರಾಜತಾಂತ್ರಿಕ ಅಡಚಣೆ ಉಂಟಾಗಬಹುದು ಎಂಬ ಕಾರಣಕ್ಕೆ ಕಾಂಪಿಟ್ ವಿತ್ ಚೀನಾ ಹೆಸರು ಬದಲಾಯಿಸಿ ಕ್ಲಸ್ಟರ್ ಆಧಾರಿತ ಅಭಿವೃದ್ಧಿ ಯೋಜನೆ ಎಂದು ಮರು ನಾಮಕರಣ ಮಾಡಲಾಗಿದೆ. ಮೋದಿ ಅವರ ‘ವೋಕಲ್ ಫಾರ್ ಲೋಕಲ್’ ಆಶಯಕ್ಕೆ ಇಂಬು ನೀಡಲೆಂದು ಕೊಪ್ಪಳ ಜಿಲ್ಲೆಯಲ್ಲಿ ಆಟಿಕೆ ಕ್ಲಸ್ಟರ್ ಸ್ಥಾಪನೆಗೆ ಚಾಲನೆ ನೀಡಿದ್ದು, ಹೂಡಿಕೆದಾರರಿಂದ ಸ್ವಲ್ಪಮಟ್ಟಿಗೆ ಸ್ಪಂದನೆ ಲಭಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆಧುನಿಕತೆ ಇಲ್ಲದ ಕಾಲದಲ್ಲೇ ಕಿನ್ನಾಳದ ಬೊಂಬೆಗಳು ಜಗತ್ಪ್ರಸಿದ್ಧವಾಗಿದ್ದು, ಆಧುನಿಕತೆ ಅಬ್ಬರದಲ್ಲಿ ಕ್ರಮೇಣ ಮರೆಗೆ ಸರಿದಿದ್ದ ಗೊಂಬೆಗಳು ಮತ್ತು ಕಲಾವಿದರಿಗೆ ಪುನರುಜ್ಜೀವನದ ಆಶಾಭಾವನೆಯನ್ನು ಕ್ಲಸ್ಟರ್ ಹುಟ್ಟಿಹಾಕಿದೆ.
ನಮ್ಮ ಸರ್ಕಾರ ಬೆಂಗಳೂರಿನಾಚೆ ಉದ್ಯಮಗಳಿಗೆ ನೆಲೆ, ಬಂಡವಾಳ ಹೂಡಿಕೆಗೆಂದು ‘ಒಂದು ಜಿಲ್ಲೆ-ಒಂದು ಉತ್ಪನ್ನ’ ಪರಿಕಲ್ಪನೆಯಡಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು, ಪೂರಕ ಸವಲತ್ತುಗಳ ಸೃಜನೆಗೆ ಹೆಚ್ಚಿನ ವೇಗ ನೀಡಿದೆ.
|ಮುರುಗೇಶ್ ನಿರಾಣಿಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ
ಒಂದು ಉತ್ಪನ್ನದತ್ತ ಗಮನ:ಪ್ರಸ್ತಾವನೆ ಯೋಜನೆಯೇ ಟೇಕ್ ಆಫ್ ಆಗಲು ಒದ್ದಾಡುತ್ತಿರುವಾಗ ‘ಒಂದು ಜಿಲ್ಲೆ-ಒಂದು ಉತ್ಪನ್ನ’ ದತ್ತ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಗಮನ ಹರಿಸಿದೆ. ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರದಲ್ಲಿ ಅಳವಡಿಸಿದ ‘ಒಂದು ಜಿಲ್ಲೆ- ಒಂದು ಉತ್ಪನ್ನ’ ಯೋಜನೆಯಿಂದ ಸ್ಪೂರ್ತಿ ಪಡೆದಿದ್ದು, ಬೆಂಗಳೂರಿನಾಚೆ 2 ಮತ್ತು 3ನೇ ಹಂತದ ನಗರ ಗಳಲ್ಲಿ ಉದ್ಯಮ ನೆಲೆಗೊಳಿಸಿ, ಸಂಪನ್ಮೂಲಗಳ ಸಮರ್ಪಕ ಬಳಕೆ ಮತ್ತು ಉದ್ಯೋಗ ಅವಕಾಶ ಎಲ್ಲರಿಗೂ ಹಂಚಿಕೆ ಈ ಯೋಜನೆ ತಿರುಳಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಬಲ್ಕ್ ಡ್ರಗ್ಸ್ ಪಾರ್ಕ್ ಸ್ಥಾಪಿಸಲಿದ್ದು, ಕೇಂದ್ರ ಸರ್ಕಾರ 1,000 ಕೋಟಿ ರೂ. ನೆರವು ನೀಡಲು ತಾತ್ವಿಕ ಒಪ್ಪಿಗೆ ನೀಡಿದೆ.
ತುಮಕೂರಿನಲ್ಲಿ ಮಷಿನ್ ಮತ್ತು ಟೂಲ್ಸ್ ಉದ್ಯಮ ಗಳ ಸ್ಥಾಪನೆಗೆ 3,000 ಎಕರೆ ಜಮೀನು ಗುರುತಿಸಲಾಗಿದೆ. ಧಾರವಾಡ ಜಿಲ್ಲೆ ಬೇಲೂರು ಬಳಿ 5,000 ಎಕರೆ ಜಮೀನು ಗುರುತಿಸಿ, ಐಟಿ ಆಧಾರಿತ ಹಾಗೂ ಸಾಮಾನ್ಯ ಉದ್ಯಮಗಳನ್ನು ಸ್ಥಾಪಿಸಲು ಯೋಚಿಸಿದೆ. ಅಲ್ಲದೆ, ಈ ವಲಯಕ್ಕೂ 1,000 ಕೋಟಿ ರೂ. ನೆರವು ಬಯಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕಲಬುರಗಿಯಲ್ಲಿ ಜವಳಿ ಮತ್ತು ಜ್ಯುವೆಲರಿ ಪಾರ್ಕ್, ಬೀದರ್​ನಲ್ಲಿ ಸೌರಶಕ್ತಿ ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ಬಿಡಿಭಾಗಗಳು ತಯಾರಿಕಾ ಘಟಕ ಸ್ಥಾಪಿಸಲು ಉದ್ದೇಶಿಸಿದ್ದು, ಪರವಾನಗಿ ನಿಯಮಗಳನ್ನು ಸರಳೀಕರಿಸಿ ತ್ವರಿತ ಅನುಷ್ಠಾನಕ್ಕೆ ಒತ್ತು ನೀಡಲಾಗಿದೆ ಎಂದು ಇಲಾಖೆ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 2 =
Remember me
