ವಿಶ್ವಸಂಸ್ಥೆ:ಜಾಗತಿಕ ವೇದಿಕೆಯಾದ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆದ ಯೋಗ ದಿನಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮುನ್ನಡೆಸಿದರು. ಭಾರತ ಮೂಲದ ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರೆತ 9 ವರ್ಷದ ತರುವಾಯ ಯೋಗಕ್ಕೆ ಈ ಮನ್ನಣೆ ಸಿಗಲು ಕಾರಣೀಕರ್ತರಾದ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಭಾಗಿಯಾಗಿ ಐತಿಹಾಸಿಕ ದಾಖಲೆ ಬರೆದರು.
ನ್ಯೂಯಾರ್ಕ್ ನಗರದಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಗೆ ಆಗಮಿಸುತ್ತಿದ್ದಂತೆ ಉತ್ತರ ಹುಲ್ಲುಹಾಸಿನಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿಗೆ ಮೋದಿ ನಮಿಸಿದರು. ಇದೇ ವೇಳೆಗೆ ಭಾರತ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ವಿಡಿಯೊ ಎಲ್​ಇಡಿ ಪರದೆಯಲ್ಲಿ ಪ್ರದರ್ಶನ ಗೊಂಡಿತು. ಸುಮಾರು ಒಂದು ತಾಸು ನಡೆದ ಯೋಗ ಕಾರ್ಯಕ್ರಮದಲ್ಲಿ ಬಿಳಿ ಟಿ-ಶರ್ಟ್, ಪ್ಯಾಂಟ್, ಕುತ್ತಿಗೆಯಲ್ಲೊಂದು ಅಂಗವಸ್ತ್ರ ಧರಿಸಿ ಭಾಗಿಯಾದ ಮೋದಿ, ಹಳದಿ ಚಾಪೆ (ಮ್ಯಾಟ್) ಮೇಲೆ ವಿವಿಧ ಆಸನಗಳನ್ನು ಹಾಕಿದರು. ’ನಮಸ್ತೆ’ ಎನ್ನುವ ಮೂಲಕ ಮಾತು ಆರಂಭಿಸಿದ ಪ್ರಧಾನಿ, ‘ನಿಮ್ಮನ್ನೆಲ್ಲ ಎಲ್ಲಿ ನೋಡಿ ಬಹಳ ಖುಷಿ ಆಗಿದೆ. ವಿಶ್ವದ ಎಲ್ಲ ದೇಶಗಳ ಜನರ ಪ್ರಾತಿನಿಧ್ಯ ಇಲ್ಲಿದೆ. ನಿಮಗೆಲ್ಲರಿಗೂ ಧನ್ಯವಾದ ಎಂದರು.
‘ಯೋಗದ ಹುಟ್ಟು ಭಾರತದಲ್ಲಾದರೂ ಅದು ನೈಜವಾಗಿ ಸಾರ್ವತ್ರಿಕವಾಗಿದ್ದು, ಯಾವುದೇ ಹಕ್ಕುಸ್ವಾಮ್ಯ, ಪೇಟೆಂಟ್, ರಾಯಧನದಿಂದ ಮುಕ್ತವಾಗಿದೆ. ಹಾಗೆಯೇ ಯೋಗವನ್ನು ಯಾವುದೇ ವಯೋಮಾನದವರು ಲಿಂಗಭೇದವಿಲ್ಲದೆ ಇಲ್ಲಿ ಬೇಕಾದರೂ ಆಚರಿಸಬಹುದು. ಆಧುನಿಕ ಬದುಕಿನ ಭಾಗವಾದ ಫಿಟ್​ನೆಸ್​ಗೂ ಇದು ಪರಿಣಾಮಕಾರಿಯಾದ ಮಾರ್ಗ ಆಗಿದೆ’ ಎಂದರು.
ವಿಶ್ವಸಂಸ್ಥೆಯ ಉಪಮಹಾಪ್ರಧಾನ ಕಾರ್ಯದರ್ಶಿ ಅಮೀನಾ ಜೆ. ಮೊಹಮ್ಮದ್, ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಸೇರಿ ವಿಶ್ವಸಂಸ್ಥೆಯಲ್ಲಿರುವ ವಿವಿಧ ದೇಶಗಳ ರಾಯಭಾರಿಗಳು, ರಾಜತಾಂತ್ರಿಕ ಅಧಿಕಾರಿಗಳು ಯೋಗ ದಿನಕ್ಕೆಂದೇ ಆಹ್ವಾನಿತರಾದ ವಿವಿಧ ರಂಗದ ಗಣ್ಯರು, ಭಾರತೀಯ ಸಮುದಾಯದ ಪ್ರಮುಖರು, ನ್ಯೂಯಾರ್ಕ್ ರಾಜ್ಯದ ಕೆಲವು ಜನಪ್ರತಿನಿಧಿಗಳು ಭಾಗಿಯಾಗಿದ್ದರು. ಬೆಳಗ್ಗೆ 8ಕ್ಕೆ (ಸ್ಥಳೀಯ ಕಾಲಮಾನ) ಆರಂಭವಾದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲೆಂದು ನೂರಾರು ಜನರು ಮುಂಜಾನೆಯಿಂದಲೇ ವಿಶ್ವಸಂಸ್ಥೆ ಪ್ರಧಾನ ಕಚೇರಿ ಮುಂದೆ ಸಾಲುಗಟ್ಟಿದ್ದರು. ವಿಶ್ವದ ಬಹುತೇಕ ಜನರ ಪ್ರಾತಿನಿಧ್ಯ ಇದ್ದ ಯೋಗ ಕಾರ್ಯಕ್ರಮ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.
ಯೋಗ ಜನರನ್ನು ಒಗ್ಗೂಡಿಸುತ್ತದೆ. ಹಾಗೆಯೇ ಆಂತರಿಕವಾಗಿ ದೇಹ ಮತ್ತು ಮನಸ್ಸನ್ನು ಬೆಸೆಯುತ್ತದೆ.ಶಿಸ್ತು- ಶಾಂತಿಯನ್ನು ಕಾಪಾಡಿಕೊಳ್ಳಲು ಹೇತುವಾಗಿದೆ. ಮಾನವೀಯತೆ ಮತ್ತು ಪ್ರಕೃತಿಯನ್ನು ಸಂಗಮಿಸುವ ಯೋಗ ಬಲ, ಸೌಹಾರ್ದ ಮತ್ತು ಶಾಂತಿಗೆ ಮೂಲವಾಗಿದೆ. ವಿಶ್ವ ವಿಘಟನೆಯಾಗುತ್ತಿರುವ ಈ ಸಂದರ್ಭಕ್ಕೆ ಪ್ರಾಚೀನ ಅಭ್ಯಾಸವಾದ ಯೋಗ ಮದ್ದಾಗಿದೆ.
| ಆಂಟೋನಿಯೊ ಗುಟರೆಸ್ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ (ಯೋಗದಿನದ ಸಂದೇಶ)
ಭಾರತೀಯರು ಹೊಸ ಹೊಸ ಪರಿಕಲ್ಪನೆಗಳನ್ನು ಆಳವಡಿಸಿಕೊಳ್ಳುತಾರೆ. ಅವುಗಳನ್ನು ಸಂರಕ್ಷಿಸಿ ದೇಶದ ಶ್ರೀಮಂತ ವೈವಿಧ್ಯದಲ್ಲಿ ಒಗ್ಗೂಡಿಸಿ ಆಚರಿಸುತ್ತಾರೆ. ಇದು ಭಾರತದ ಸಹಜ ಪ್ರವೃತ್ತಿಯೇ ಆಗಿದೆ. ಯೋಗದ ಮೂಲಕ ವಿರೋಧಾಭಾಸದ ಆಚರಣೆಗಳನ್ನು ತೊಡೆದುಹಾಕಿ ಆರೋಗ್ಯ ಪೂರ್ಣ ಮತ್ತು ಸಬಲ ಸಮಾಜ ನಿರ್ಮಾಣ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ನೀಡಿರುವ ವಿಡಿಯೋ ಸಂದೇಶದಲ್ಲಿ ಮನವಿ ಮಾಡಿದ್ದಾರೆ.
ಭಾವನೆಗಳನ್ನು ಬಲಗೊಳಿಸುವ ಯೋಗ, ಅಂತರ್​ದೃಷ್ಟಿಯನ್ನು ವಿಸ್ತರಿಸಿ ಆ ಪ್ರಜ್ಞೆಯೊಂದಿಗೆ ನಮ್ಮನ್ನು ಜೋಡಿಸುತ್ತದೆ. ಜೀವಿಗಳ ಏಕತೆಯಿಂದ ಬಾಳುವುದನ್ನು ಕಲಿಸುವ ಯೋಗ, ಪ್ರೀತಿಯನ್ನು ಧಾರೆ ಎರೆಯುತ್ತದೆ. ಯೋಗದ ಮೂಲಕ ವೈರುಧ್ಯ, ಅಡೆತಡೆಗಳನ್ನು ದೂರ ಮಾಡಬಹುದು. ಯೋಗದ ಮೂಲಕ ‘ಏಕ ಭಾರತ, ಶ್ರೇಷ್ಠ ಭಾರತ’ ಎಂಬುದನ್ನು ಜಗತ್ತಿನ ಮುಂದೆ ನಾವು ಸಾದರಪಡಿಸಬಹುದು ಎಂದಿದ್ದಾರೆ. ಯೋಗದ ಕಲ್ಪನೆ ಮತ್ತು ಸಾಗರ ಅಗಾಧತೆ ಸಂಬಂಧ ಆಧಾರದಲ್ಲಿ ‘ಓಷನ್ ರಿಂಗ್ ಯೋಗ’ವು ಈ ದಿನವನ್ನು ಇನ್ನಷ್ಟು ವಿಶೇಷ ಮಾಡಿದೆ ಎಂದು ಮೋದಿ ಹೇಳಿದ್ದಾರೆ. ಯೋಗ ದಿನದಲ್ಲಿ ವಿಶ್ವದಾದ್ಯಂತ ಜನರು ಸ್ವಪ್ರೇರಣೆಯಿಂದ ಭಾಗಿಯಾಗಿರುವುದು ಯೋಗ ಶಕ್ತಿ, ವಿಸ್ತರಣಶೀಲತೆಯನ್ನು ತೋರುತ್ತದೆ. ಹೀಗಾಗಿಯೇ ‘ವಸುಧೈವ ಕುಟುಂಬಕಂಗಾಗಿ ಯೋಗ’ ಅವಶ್ಯವಾಗಿದೆ ಎಂದಿದ್ದಾರೆ.
ಸುಪ್ರೀಂಕೋರ್ಟ್​ನಲ್ಲೂ ಯೋಗ:ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್​ನ ರಿಕ್ರಿಯೇಷನ್ ಹಾಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿಗಳು ಹಾಗೂ ಸಿಬ್ಬಂದಿ ವರ್ಗ ಭಾಗಿಯಾಗಿದ್ದರು.
ರಾಷ್ಟ್ರ ರಾಜಧಾನಿಯಲ್ಲಿ..:ದೆಹಲಿಯ ವಿಜ್ಞಾನ ಭವನದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ನೇತೃತ್ವದಲ್ಲಿ ಯೋಗ ದಿನವನ್ನು ಆಚರಿಸಲಾಯಿತು. ಕೇಂದ್ರ ಸಚಿವರಾದ ಹರದೀಪ್ ಸಿಂಗ್ ಪುರಿ, ಮುನ್ಸುಖ್ ಮಾಂಡವೀಯ, ಪಿಯೂಷ್ ಗೋಯಲ್ ಭಾಗಿಯಾಗಿದ್ದರು. ಯೋಗ ದಿನದ ನಿಮಿತ್ತ ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ ನೀಡಿರುವ ವಿಡಿಯೊ ಸಂದೇಶವನ್ನು ಕಾರ್ಯಕ್ರಮದಲ್ಲಿ ಬಿತ್ತರಿಸಲಾಯಿತು. ಜಾಗತಿಕವಾಗಿ ಇಂದು ನಡೆಯುತ್ತಿರುವ ಯೋಗ ದಿನಾಚರಣೆಯು ವಸುಧೈವ ಕುಟುಂಬಕಂ ಉಕ್ತಿಗೆ ಪೂರಕವಾಗಿದೆ ಎಂದು ಪುರಿ ಟ್ವೀಟ್ ಮಾಡಿದ್ದಾರೆ. ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆಯಡಿ ನಿರ್ವಿುಸಲಾಗಿರುವ ಕರ್ತವ್ಯಪಥದಲ್ಲಿ ಇದೇ ಮೊದಲ ಬಾರಿಗೆ ಯೋಗ ಕಾರ್ಯಕ್ರಮಗಳು ನಡೆದವು. ಸಂಸತ್ ಭವನದಲ್ಲಿ ನಡೆದ ಕಾರ್ಯಕ್ರಮದ ನೇತೃತ್ವವನ್ನು ಸ್ಪೀಕರ್ ಓಂ ಬಿರ್ಲಾ ವಹಿಸಿದ್ದರು. ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಗಿಯಾಗಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 3 =
Remember me
