ಕಾಲಚಕ್ರದಲ್ಲಿ 2021ಮರೆಯಾಗಿ 2022 ಶುರುವಾಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕರೊನಾ ಸಂಕಷ್ಟ ಅರ್ಥವ್ಯವಸ್ಥೆಯನ್ನು ಬಾಧಿಸಿದ್ದು ಅಷ್ಟಿಷ್ಟಲ್ಲ. ಇವೆಲ್ಲದರ ನಡುವೆ ಜಾಗತಿಕ ಆರ್ಥಿಕತೆ ಮಿಶ್ರಫಲ ತೋರಿಸುತ್ತಿದ್ದರೆ, ಭಾರತದ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ. ಇಂತಹ ಸನ್ನಿವೇಶದಲ್ಲಿ ಹೂಡಿಕೆಗಳು ಹಣದುಬ್ಬರ ಪ್ರಮಾಣ, ಬಡ್ಡಿದರದ ಏರಿಳಿತ, ಸಾಲದ ಬೆಳವಣಿಗೆ, ವಿದೇಶಿ ಪೋರ್ಟ್ ಫೋಲಿಯೊ ಹೂಡಿಕೆ ಮತ್ತು ಕಚ್ಚಾ ತೈಲ ದರವನ್ನು ಅವಲಂಬಿಸಿವೆ. ಈ ಕುರಿತಾದ ಸಂಕ್ಷಿಪ್ತ ಅವಲೋಕನ ಇಲ್ಲಿದೆ.
ಜಗತ್ತಿನಾದ್ಯಂತ ಒಮಿಕ್ರಾನ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಇದು ಕ್ಷಿಪ್ರಗತಿಯ ಆರ್ಥಿಕ ಬೆಳವಣಿಗೆ ಮತ್ತು ಚೇತರಿಕೆಯ ಆಸೆಯ ಮೇಲೆ ತಣ್ಣೀರೆರಚಿದೆ. ಹೂಡಿಕೆದಾರರ ವಿಶ್ವಾಸದ ಮೇಲೆ ಕೂಡ ಹೊಡೆತ ನೀಡಿದೆ. ಎಲ್ಲವೂ ಸಹಜವಾಯಿತು, ಕಚೇರಿ ಕೆಲಸ, ಶಿಕ್ಷಣ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂಬುವಷ್ಟರಲ್ಲಿ ಮತ್ತೆ ನಿರ್ಬಂಧ, ರಾತ್ರಿ ಕರ್ಫ್ಯೂ, ವೀಕೆಂಡ್ ಕರ್ಫ್ಯೂಗಳು ಜಾರಿಯಾಗಿವೆ. ಉದ್ಯೋಗನಷ್ಟ, ಸಂಬಳ ಕಡಿತದ ಪರಿಣಾಮ ಕೆಳಹಂತದ ಉದ್ಯೋಗಿಗಳ ಮೇಲೆ ಕಳೆದ ಎರಡು ವರ್ಷದ ಕೋವಿಡ್ ಅಲೆ ಕೆಡುಕನ್ನೇ ಉಂಟುಮಾಡಿದವು. ಈಗ ಒಂದಿಷ್ಟು ಉದ್ಯೋಗ ಸೃಜನತೆ ಮತ್ತು ಕೆಳಹಂತದ ಉದ್ಯೋಗಿಗಳ ಆದಾಯದಲ್ಲಿ ಕೊಂಚ ಸ್ಥಿರತೆ ಕಾಣತೊಡಗಿರುವಾಗಲೇ ಹೊಸ ಸವಾಲು ಎದುರಾಗಿದೆ. ಹಾಗಾಗಿ, ಮುಂದಿನ ದಿನಗಳು ಹೇಗೆ ಎಂಬ ಪ್ರಶ್ನೆಯೂ ಉದ್ಭವವಾಗಿದೆ.
ಆತಂಕ ಪಡಬೇಕಿಲ್ಲ:ಕೋವಿಡ್ 19 ಸೋಂಕಿನ ಹೊಸ ಮಾದರಿ ಒಮಿಕ್ರಾನ್ ಕ್ಷಿಪ್ರಗತಿಯಲ್ಲಿ ಹರಡಲಾರಂಭಿಸಿದೆ. ಭಾರತದಲ್ಲಿ ಜನವರಿ ಆರಂಭದಿಂದಲೇ ಸೋಂಕು ಹರಡುವಿಕೆಯಲ್ಲಿ ಏರಿಕೆ ಕಾಣಿಸಿಕೊಂಡಿದೆ. ಸದ್ಯ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದ್ದರೂ, ಇತರ ಆರೋಗ್ಯ ಸಮಸ್ಯೆ ಇರುವವರನ್ನು ಆಸ್ಪತ್ರೆಗೆ ಸೇರುವಂತೆ ಇದು ಮಾಡುತ್ತಿದೆ. ಈಗಿನ ಲೆಕ್ಕಾಚಾರದ ಪ್ರಕಾರ ಏಪ್ರಿಲ್, ಮೇ ವೇಳೆಗೆ ಸೋಂಕು ಪ್ರಸರಣ ಗರಿಷ್ಠ ಪ್ರಮಾಣಕ್ಕೆ ತಲುಪಲಿದೆ. ಇದಕ್ಕಾಗಿ ಆಸ್ಪತ್ರೆಗಳ ಮೂಲಸೌಕರ್ಯಗಳ ವೃದ್ಧಿಯ ಕಡೆಗೆ ಸರ್ಕಾರಗಳು ಗಮನಹರಿಸಿವೆ. ಆದಾಗ್ಯೂ, ಪರಿಣತರ ಪ್ರಕಾರ ಒಮಿಕ್ರಾನ್ ಆರಂಭವು ಕರೊನಾ ಸೋಂಕಿನ ಕೊನೆಗಾಲ. ಇದರೊಂದಿಗೆ ವೈರಸ್ ಕಾಟ ಮುಗಿಯಲಿದೆ. ಹೀಗಾಗಿ ಕರ್ಫ್ಯೂ ಮತ್ತು ಇತರ ಮುಂಜಾಗ್ರತಾ ಕ್ರಮಗಳು ಹಿಂದಿನ ವರ್ಷದಷ್ಟು ಕಠಿಣವಾಗಿ ಇರಲ್ಲ.
ಹಣದುಬ್ಬರ ಮತ್ತು ಬಡ್ಡಿದರ:ಕೋವಿಡ್ ಸೋಂಕು ಹೆಚ್ಚಾಗುವುದೋ ಬಿಡುವುದೋ ಗೊತ್ತಿಲ್ಲ. ಆದರೆ, ಈ ವರ್ಷ ಜನರ ಆತಂಕ ಆದಾಯನಷ್ಟ ಮತ್ತು ಉದ್ಯೋಗನಷ್ಟದ ಬಗ್ಗೆಯೇ ಇದೆ. ಇದಲ್ಲದೆ ಹಣದುಬ್ಬರ ಮತ್ತು ಬಡ್ಡಿದರಗಳು ಜನರನ್ನು ಚಿಂತೆಗೀಡು ಮಾಡಿವೆ. ಇದೇ ರೀತಿ, ಡೆಟ್ ಮತ್ತು ಈಕ್ವಿಟ್ ಮಾರುಕಟ್ಟೆ ವಹಿವಾಟುಗಳ ಮೇಲೂ ಕರೊನಾ ಸಂಕಷ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಅಲ್ಲಗಳೆಯುವಂತೆ ಇಲ್ಲ. ಆರ್ಥಿಕ ಸಂಕಷ್ಟ ಎದುರಾಗಿದ್ದ 2020 ಮತ್ತು 2021ರಲ್ಲಿ ಸರ್ಕಾರಗಳು ಆರ್ಥಿಕ ಉತ್ತೇಜನ ಉಪಕ್ರಮಗಳನ್ನು ಕೈಗೊಂಡಿದ್ದವು. ಅರ್ಥವ್ಯವಸ್ಥೆ ಚೇತರಿಕೆಗೆ ಪ್ಯಾಕೇಜ್ ಗಳನ್ನು ಘೋಷಿಸಿದವು. ಭಾರತದಲ್ಲಿ ಹಣದುಬ್ಬರ ಪ್ರಮಾಣ ಈಗಲೂ ಆರಾಮದಾಯಕ ವಲಯದಲ್ಲಿದೆ. ಅಮೆರಿಕದಲ್ಲಿ ಇದು 40 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಮಾಸಿಕ ಅಸೆಟ್ ಖರೀದಿಯನ್ನು ಹೆಚ್ಚಿಸಲು ಫೆಡರಲ್ ರಿಸರ್ವ್ ತೀರ್ವನಿಸಿದೆ. ಅದೇ ರೀತಿ ಬಡ್ಡಿದರವನ್ನು ಎರಡುಪಟ್ಟು ಹೆಚ್ಚಿಸಿದ್ದು, ಇದು ಈ ವರ್ಷ ಇನ್ನೂ ಹೆಚ್ಚಾಗಲಿದೆ.
ಹಣದುಬ್ಬರ ಚಿಂತೆಗೀಡು ಮಾಡಲ್ಲ:ಭಾರತದಲ್ಲಿ ಈ ವರ್ಷ ಹಣದುಬ್ಬರ ಚಿಂತೆಗೀಡು ಮಾಡುವ ಸಂಭವನೀಯತೆ ಕಡಿಮೆ. ಮಾರುಕಟ್ಟೆ ತಜ್ಞರ ಪ್ರಕಾರ, ಈ ವರ್ಷ ಬಡ್ಡಿದರ ಏರಲಿದೆ. ಒಮಿಕ್ರಾನ್ ಸೋಂಕು ವಾಣಿಜ್ಯ ವಹಿವಾಟುಗಳ ಮೇಲೆ ಹೆಚ್ಚಿನ ಪರಿಣಾಮ ಬೀರದು. ದೇಶೀಯವಾಗಿ ಪ್ರತಿವರ್ಷ ಚಿಲ್ಲರೆ ಹೂಡಿಕೆದಾರರ ಸಂಖ್ಯೆ ಮತ್ತು ಹೂಡಿಕೆ ಎರಡೂ ಹೆಚ್ಚಾಗುತ್ತಿದೆ. ಇದು ಭಾರತದ ಷೇರುಪೇಟೆಗೆ ವಿದೇಶಿ ಹೂಡಿಕೆ ಹಿಂಪಡೆತದ ವೇಳೆ ಬಲ ತುಂಬಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಕೂಡ ಬಡ್ಡಿದರ ಏರಿಸುವ ಕೆಲಸಕ್ಕೆ ಮುಂದಾಗಿದೆ. ಇದಕ್ಕೆ ಪೂರಕವಾಗಿ ಭಾರತದ ಮುಂಚೂಣಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ (ಎಸ್ ಬಿಐ) ಬಡ್ಡಿದರಕ್ಕೆ ಸಂಬಂಧಿಸಿದ ಮೂಲಾಂಶ ದರವನ್ನು ಏರಿಸಿದ್ದು, ಶೇಕಡ 7.55ಕ್ಕೆ ತಲುಪಿದೆ.
ಭೌಗೋಳಿಕ ರಾಜಕೀಯ ಸಾಧ್ಯತೆ:ಚೀನಾ ಜತೆಗಿನ ಪಾಶ್ಚಿಮಾತ್ಯ ರಾಷ್ಟ್ರಗಳ ಸಂಘರ್ಷದ ಕಾರಣ ವಿದೇಶಿ ಹೂಡಿಕೆಗೆ ಭಾರತ ಅತ್ಯುತ್ತಮ ಆಯ್ಕೆ ಎಂಬಂತೆ ಮುನ್ನೆಲೆ ಬಂದಿದೆ. ಪರಿಣಾಮ ಭಾರತದಲ್ಲಿ ಅಮೆರಿಕ, ಯುರೋಪ್ ಗಳು ನೇರ ಹೂಡಿಕೆ ಆರಂಭಿಸಿವೆ ಎಂಬುದು ಮಾರುಕಟ್ಟೆ ಪರಿಣತರ ಅಭಿಪ್ರಾಯ. ಅಂತಾರಾಷ್ಟ್ರೀಯ ಉತ್ಪಾದಕ ಕಂಪನಿಗಳು ಭಾರತದ ಕಡೆಗೆ ನೋಡತೊಡಗಿವೆ. ಚೀನಾದಿಂದ ಹೂಡಿಕೆ ಹಿಂಪಡೆದು ಬೇರೆ ಬೇರೆ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿ ಉತ್ಪಾದನೆಯನ್ನು ಆರಂಭಿಸಲು ಮುಂದಾಗುತ್ತಿವೆ. ಈಗಾಗಲೇ ಅನೇಕ ಖಾಸಗಿ ಷೇರು ಪಾಲುದಾರರು ಮತ್ತು ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡತೊಡಗಿದ್ದಾರೆ. ಬಂಡವಾಳ ಹೂಡಿಕೆದಾರರು ಕೂಡ ಭಾರತದಲ್ಲಿ ವಿವಿಧ ಯೋಜನೆ, ಕಂಪನಿಗಳಲ್ಲಿ ಹೂಡಿಕೆ ಮಾಡತೊಡಗಿದ್ದಾರೆ.
ಕೌಶಲ ಅಭಿವೃದ್ಧಿಗೆ ಆದ್ಯತೆ:ಬದಲಾದ ಸನ್ನಿವೇಶದಲ್ಲಿ ಭಾರತದಲ್ಲಿರುವ ಮಾನವ ಸಂಪನ್ಮೂಲವನ್ನು ಕೌಶಲಯುಕ್ತವನ್ನಾಗಿಸುವ ಕೆಲಸ ಶುರುವಾಗಿದೆ. ಅದೇ ರೀತಿ ಜಾಗತಿಕ ಮಾನದಂಡಗಳಿಗೆ ಪೂರಕವಾಗಿ ಹೂಡಿಕೆಯನ್ನು ಆಕರ್ಷಿಸುವುದಕ್ಕೆ ಭಾರತದ ವಾಣಿಜ್ಯ ವಹಿವಾಟು, ನೀತಿ ನಿಬಂಧನೆಗಳನ್ನು ಪರಿಷ್ಕರಿಸಬೇಕಾದ ಅವಶ್ಯಕತೆಗಳಿವೆ. ಈ ನಿಟ್ಟಿನಲ್ಲಿ ಸರ್ಕಾರಗಳು ಕಾಲಾನುಕ್ರಮದಲ್ಲಿ ಕ್ರಮಗಳನ್ನು ತೆಗೆದುಕೊಳ್ಳತೊಡಗಿವೆ. ಇದು ವಿದೇಶಿ ಹೂಡಿಕೆ ಪ್ರಮಾಣ ಹೆಚ್ಚಿಸುವಲ್ಲಿ ನೆರವಾಗಲಿದೆ ಎಂಬುದು ಪರಿಣತರ ಅಭಿಪ್ರಾಯ. ಟ್ರೆಂಡಿಂಗ್ ಎಕನಾಮಿಕ್ಸ್ ಮುನ್ನೋಟದ ಪ್ರಕಾರ, ಭಾರತದಲ್ಲಿ ಎಫ್ ಡಿಐ ಪ್ರಮಾಣ 2022ರಲ್ಲಿ 3600 ದಶಲಕ್ಷ ಡಾಲರ್, 2023ರಲ್ಲಿ 4200 ದಶಲಕ್ಷ ಡಾಲರ್ ಆಗಿರಲಿದೆ.
ದೇಶೀಯ ಹೂಡಿಕೆ ಹೆಚ್ಚಳಫೆಡರಲ್ ರಿಸರ್ವ್ ನಿಯಮ ಬಿಗಿಗೊಳಿಸುತ್ತಿರುವಂತೆ, ಭಾರತದ ಮಾರುಕಟ್ಟೆಗಳಿಂದ ನ.22ರ ನಂತರದಲ್ಲಿ ಇತ್ತೀಚಿನವರೆಗೆ ಒಟ್ಟು 40,000 ಕೋಟಿ ರೂಪಾಯಿ ಫಾರಿನ್ ಪೋರ್ಟ್ ಫೋಲಿಯೋ (ಎಫ್ ಪಿಐ) ಹಿಂಪಡೆದಿವೆ. ಇದು ಭಾರತದ ಷೇರುಪೇಟೆ ಮೇಲೆ ಒತ್ತಡ ಸೃಷ್ಟಿಸಿದೆ. ಇದೇ ಅವಧಿಯಲ್ಲಿ ಭಾರತದ ಪ್ರಾದೇಶಿಕ ಸಾಂಸ್ಥಿಕೆ ಹೂಡಿಕೆದಾರರು (ಡಿಐಐ) 48,900 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಎಫ್ ಪಿಐ ಹೂಡಿಕೆ ಹಿಂಪಡೆತದ ಕಾರಣ ಭಾರತದ ಷೇರುಪೇಟೆ ಒತ್ತಡಕ್ಕೆ ಒಳಗಾಗದಂತೆ ಚಿಲ್ಲರೆ ಹೂಡಿಕೆದಾರರು ತಡೆದಿದ್ದಾರೆ.
ಡೆಟ್ ಮಾರ್ಕೆಟ್ ನಲ್ಲಿ ಸರ್ಕಾರದ ಸಾಲಪತ್ರಗಳ ಲಾಭಾಂಶ ಏರತೊಡಗಿದೆ. ಕಳೆದ ವರ್ಷ ಸೆಪ್ಟೆಂಬರ್ ಅಂತ್ಯದಲ್ಲಿ ಶೇಕಡ 6.1 ಇದ್ದದ್ದು ಇತ್ತೀಚೆಗೆ ಶೇಕಡ 6.4ಕ್ಕೆ ಏರಿದೆ. ಇದೇ ರೀತಿ ಕಳೆದ ವರ್ಷ ಜನಸಾಮಾನ್ಯರೂ ನೇರವಾಗಿ ಡೆಟ್ ಮಾರ್ಕೆಟ್ ನಲ್ಲಿ ವಹಿವಾಟು ನಡೆಸಲು ಜಿ-ಸೆಕ್ಯುರಿಟೀಸ್ ಮಾರುಕಟ್ಟೆಯ ಹೂಡಿಕೆಗೆ ಚಿಲ್ಲರೆ ಹೂಡಿಕೆದಾರರ ಪಾಲಿಗೆ ಆರ್ ಬಿಐ- ಆರ್ ಡಿಯನ್ನು ಆರ್ ಬಿಐ ಪರಿಚಯಿಸಿದೆ. ನಿಶ್ಚಿತ ಆದಾಯ ಮಾರುಕಟ್ಟೆ (ಫಿಕ್ಸೆಡ್ ಇನ್ ಕಂ ಮಾರ್ಕೆಟ್)ಯಲ್ಲಿ ಸರ್ಕಾರಿ ಸಾಲ ಪತ್ರಗಳು ಗರಿಷ್ಠ ಪ್ರಮಾಣದಲ್ಲಿದ್ದು, ಅಪಾಯ ರಹಿತ ಲಾಭಾಂಶ (ರಿಸ್ಕ್ ಫ್ರೀ ರೇಟ್) ಒದಗಿಸುತ್ತಿರುವೆ. ಹೀಗಾಗಿ ಇಲ್ಲಿ ಬೇರೆ ಅಪಾಯಗಳಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 7 =
Remember me
