ಗ್ಲಾಸ್ಗೋವ್:ಭಾರತದಲ್ಲಿ ಹವಾಮಾನ ವೈಪರೀತ್ಯವು ಕೃಷಿ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪರಿಶುದ್ಧ ಕುಡಿಯುವ ನೀರಿನ ಜಲಸಂಪನ್ಮೂಲದಿಂದ ಹಿಡಿದು ಕೈಗೆಟಕುವ ವೆಚ್ಚದಲ್ಲಿ ವಸತಿ ಒದಗಿಸುವ ತನಕ ಎಲ್ಲದರಲ್ಲೂ ಹವಾಮಾನ ವೈಪರೀತ್ಯದ ವಿರುದ್ಧ ಹೋರಾಟದ ಛಾಯೆ ಮೂಡಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸ್ಕಾಟ್ಲೆಂಡ್​ನ ಗ್ಲಾಸ್ಗೋವ್​ನಲ್ಲಿ ಸೋಮವಾರ ಸಿಒಪಿ-26 ಶೃಂಗವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ಈಗಾಗಲೇ ಅನೇಕ ಪರಿಸರ ಸ್ನೇಹಿ ಯೋಜನೆ, ಉಪಕ್ರಮಗಳಿಗೆ ಚಾಲನೆ ನೀಡಿದ್ದೇವೆ. ಪ್ರತಿ ಮನೆಗೂ ನಳದ ಮೂಲಕ ನೀರು ಒದಗಿಸುವುದು, ಕ್ಲೀನ್ ಇಂಡಿಯಾ ಮಿಷನ್, ಪ್ರತಿ ಮನೆಗೂ ಸ್ವಚ್ಛ ಅಡುಗೆ ಅನಿಲ ಪೂರೈಕೆ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ಮೂಲಕ ಜನರ ಬದುಕಿನ ಗುಣಮಟ್ಟ ಸುಧಾರಿಸುವ ಪ್ರಯತ್ನವನ್ನೂ ಸರ್ಕಾರ ಮಾಡಿದೆ. ನಮ್ಮ ಅಭಿವೃದ್ಧಿ ನೀತಿ ಮತ್ತು ಯೋಜನೆಗಳ ಅನುಷ್ಠಾನದ ಪ್ರಯತ್ನ ಇನ್ನೂ ಪ್ರಗತಿಯಲ್ಲಿದೆ. ಜಾಗತಿಕ ಮಟ್ಟದಲ್ಲಿ ಗಮನಿಸಿದರೆ ಯೋಜನೆಗಳು, ಉಪಕ್ರಮಗಳ ಘೋಷಣೆಯಾಗಿದೆಯೇ ಹೊರತು ಅವುಗಳ ಅನುಷ್ಠಾನಕ್ಕೆ ಆದ್ಯತೆ ಸಿಕ್ಕಿಲ್ಲ ಎಂದು ಪ್ರಧಾನಮಂತ್ರಿ ಮೋದಿ ಕಳವಳ ವ್ಯಕ್ತಪಡಿಸಿದರು.
ಪ್ರಕೃತಿಗೆ ಹತ್ತಿರ ಭಾರತೀಯರ ಬದುಕು:ಭಾರತದಲ್ಲಿ ಸಾಂಪ್ರ ದಾಯಿಕ ಸಮುದಾಯಗಳ ತಿಳಿವಳಿಕೆ, ಬದುಕು ಎಲ್ಲವೂ ಪ್ರಕೃತಿಗೆ ಬಹಳ ಸಾಮೀಪ್ಯವಾಗಿದೆ. ಶಾಲಾ ಪಠ್ಯಕ್ರಮದಲ್ಲಿ ಪ್ರಕೃತಿ, ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸಣ್ಣ ರೈತರು ಅಳವಡಿಸುತ್ತಿರುವ ಕೃಷಿ ವಿಧಾನಗಳು ಪರಿಸರಸ್ನೇಹಿ ಆಗಿದ್ದರೂ, ಹವಾಮಾನ ವೈಪರೀತ್ಯದ ಕಾರಣ ಅದನ್ನು ಬದಲಾಯಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಜಾಗತಿಕ ಅಳವಡಿಕೆಗೆ ಸ್ಥಳೀಯ ನೆರವು ಕೂಡಬೇಕು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
ಶೃಂಗಕ್ಕೆ ಗೈರು ಯಾರು?:ಚೀನಾ, ರಷ್ಯಾ, ಟರ್ಕಿ, ಇತರೆ ಕೆಲವು ರಾಷ್ಟ್ರಗಳ ನಾಯಕರು ಸಿಒಪಿ-26 ಶೃಂಗಕ್ಕೆ ಗೈರಾಗುತ್ತಿದ್ದಾರೆ. ಸಿಒಪಿ ವಿಚಾರಗಳ ಪೈಕಿ ಕೆಲವು ಅಂಶಗಳನ್ನು ಈ ನಾಯಕರು ಗಂಭೀರವಾಗಿ ಪರಿಗಣಿಸದಿರುವುದೇ ಗೈರಿಗೆ ಕಾರಣ ಎಂಬ ಟೀಕೆ ವ್ಯಕ್ತವಾಗಿದೆ.
ಭಾರತದ ಪ್ರಾಜೆಕ್ಟ್​ಗೆ ಬ್ರಿಟನ್ ಖಾತರಿ:ಹವಾಮಾನ ವೈಪರೀತ್ಯ ನಿಯಂತ್ರಣಕ್ಕೆ ಸಂಬಂಧಿಸಿ ಭಾರತ ಕೈಗೊಳ್ಳುತ್ತಿ ರುವ ‘ಗ್ರೀನ್ ಪ್ರಾಜೆಕ್ಟ್’ಗಳಿಗೆ ವಿಶ್ವಬ್ಯಾಂಕ್ 750 ದಶಲಕ್ಷ ಪೌಂಡ್ ಹಣಕಾಸು ನೆರವು ನೀಡಲಿದೆ. ಇದಕ್ಕೆ ವಿಶ್ವಬ್ಯಾಂಕ್​ನಲ್ಲಿ ‘ಇಂಡಿಯಾ ಗ್ರೀನ್ ಗ್ಯಾರೆಂಟಿ’ ತಾನು ನೀಡುವುದಾಗಿ ಬ್ರಿಟನ್ ಸೋಮವಾರ ಘೋಷಿಸಿದೆ. ಗ್ರೀನ್ ಗ್ಯಾರೆಂಟಿ ಫೈನಾನ್ಸಿಂಗ್ ಮೂಲಕ ಪರಿಸರ ಸ್ನೇಹಿ ಇಂಧನ, ಸಾರಿಗೆ ಮತ್ತು ನಗರಾಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ನೆರವು ಸಿಗಲಿದೆ.
ಕ್ಷಮೆಯಾಚಿಸಿದ ಬೈಡೆನ್:ಪ್ಯಾರಿಸ್ ಒಪ್ಪಂದದಿಂದ ಹಿಂದಕ್ಕೆ ಸರಿಯುವ ಆತುರದ ನಿರ್ಣಯವನ್ನು ಅಮೆರಿಕದ ಹಿಂದಿನ ಸರ್ಕಾರ ತೆಗೆದುಕೊಂಡಿತು. ಈ ತಪು್ಪ ನಿರ್ಣಯದ ಬಗ್ಗೆ ವಿಷಾದವಿದೆ ಎಂದು ಅಮರಿಕದ ಅಧ್ಯಕ್ಷ ಜೋ ಬೈಡೆನ್ ಕ್ಷಮೆಯಾಚಿಸಿದರು.
ಬ್ರಿಟನ್, ಇಸ್ರೇಲ್ ಪ್ರಧಾನಿಗಳ ಜತೆಗೆ ಮೋದಿ ದ್ವಿಪಕ್ಷೀಯ ಮಾತುಕತೆ:ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಭಾನುವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಹವಾಮಾನ ವೈಪರೀತ್ಯ ತಡೆಗೆ ಸದ್ಧಪಡಿಸಿರುವ 2030 ಮಾರ್ಗಸೂಚಿ ಪ್ರಕಾರ ಮುನ್ನಡೆಯಲಾಗುತ್ತಿದೆ. ಸಿಒಪಿ 26 ಅನ್ನು ಯಶಸ್ವಿ ಯಾಗಿ ಆಯೋಜಿಸಿದ್ದಕ್ಕೆ ಬ್ರಿಟನ್ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದರು. ಗ್ರೀನ್ ಹೈಡ್ರೋಜನ್, ನವೀಕರಿಸಬಹುದಾದ ಇಂಧನ, ಸ್ವಚ್ಛ ತಂತ್ರಜ್ಞಾನ ಮುಂತಾದ ವಿಚಾರಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು. ಅರ್ಥ ವ್ಯವಸ್ಥೆ, ರಕ್ಷಣೆ, ಪಿ2ಪಿ ಪಾಲುದಾರಿಕೆಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡರು. ಇದೇ ರೀತಿ ಇಸ್ರೇಲ್ ಪ್ರಧಾನಮಂತ್ರಿ ನಫ್ತಾಲಿ ಬೆನ್ನೆಟ್ ಅವರೊಂದಿಗೂ ಪ್ರಧಾನಿ ಮೋದಿ ಮಾತುಕತೆ ನಡೆಸಿದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪ್ಯಾರಿಸ್ ಒಪ್ಪಂದಕ್ಕೂ ಮೊದಲೇ 2009ರಲ್ಲಿ ನೀಡಿದ ಭರವಸೆ ಪ್ರಕಾರ ವರ್ಷಕ್ಕೆ 100 ಶತಕೋಟಿ ಡಾಲರ್ ನೆರವು ನೀಡುವಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ವಿಫಲವಾಗಿವೆ. 2025ರ ಹೊತ್ತಿಗೆ ಮಾಲಿನ್ಯ ಪ್ರಮಾಣ ನಿಯಂತ್ರಿಸುವ ಗುರಿ ಈಡೇರಿಕೆಯಲ್ಲಿ ಹಿನ್ನಡೆಯಾಗಿದೆ.
|ಭೂಪೇಂದರ್ ಯಾದವ್ಭಾರತದ ಪರಿಸರ ಸಚಿವ
ಪ್ಯಾರಿಸ್ ಹವಾಮಾನ ಒಪ್ಪಂದ ಏರ್ಪಟ್ಟು ಆರು ವರ್ಷ ಆಗಿದೆ. ಈ ಆರು ವರ್ಷಗಳು ಕೂಡ ತಾಪಮಾನದಲ್ಲಿ ದಾಖಲೆಯನ್ನು ಬರೆದಿವೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ನಮ್ಮ ಅವಲಂಬನೆ ಹೆಚ್ಚಾಗುತ್ತಿರುವುದರ ದ್ಯೋತಕ ಇದು. ಪರ್ಯಾಯ, ನವೀಕರಿಸಬಹುದಾದ ಇಂಧನಗಳ ಕಡೆಗೆ ಗಮನಹರಿಸಬೇಕಾದ ತುರ್ತು ಈಗ ನಮ್ಮ ಎದುರಿಗಿದೆ. ಕಾರ್ಬನ್, ಹಸಿರು ಅನಿಲ ಹೊರಸೂಸುವಿಕೆ ಇತ್ಯಾದಿಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.
|ಆಂಟನಿಯೋ ಗುಟೆರ್ರೆಸ್ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬ್ರಿಟನ್ ಪ್ರವಾಸದ ಕೊನೆಯ ದಿನವಾದ ಇಂದು ಸ್ವಿಜರ್ಲೆಂಡ್, ಫಿನ್ಲೆಂಡ್, ಇಸ್ರೇಲ್, ನೇಪಾಳ, ಮಾಲ್ವಿ, ಉಕ್ರೇನ್, ಜಪಾನ್ ಮತ್ತು ಅರ್ಜೆಂಟೀನಾ ನಾಯಕರೊಂದಿಗೆ ಸರಣಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ನಡುವೆ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರೊಂದಿಗೂ ಸಭೆ ನಡೆಸಲಿದ್ದಾರೆ. ಭಾರತದ ನೇತೃತ್ವದ ಇಂಟರ್​ನ್ಯಾಷನಲ್ ಸೋಲಾರ್ ಅಲಯನ್ಸ್, ಬ್ರಿಟನ್ ಜತೆಗಿನ ತನ್ನ ಹೊಸ ಗ್ರೀನ್ ಗ್ರಿಡ್ಸ್ ಉಪಕ್ರಮಕ್ಕೆ ಇಂದು ಚಾಲನೆ ನೀಡಲಿದೆ. ಜಗತ್ತಿನ ವಿವಿಧ ಪ್ರದೇಶಗಳನ್ನು ಒಂದು ಸೋಲಾರ್ ಗ್ರಿಡ್ ಮೂಲಕ ಜೋಡಿಸುವ ಮಹತ್ತರವಾದ ಉದ್ದೇಶ ಈ ಉಪಕ್ರಮದ್ದು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಸಂಜೆ ಪ್ರಧಾನಿ ಮೋದಿ ನವದೆಹಲಿಗೆ ಹಿಂದಿರುಗಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
